ದೆಹಲಿ ಚುನಾವಣೆ ಘೋಷಣೆ ಆಗಿದ್ದು, ಫೆಬ್ರವರಿ 5ರಂದು ಮತದಾನ ನಡೆಯಲಿದೆ. ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗು ಆಮ್ ಆದ್ಮಿ ಪಾರ್ಟಿ ಪೈಪೋಟಿ ನಡೆಸುತ್ತಿದೆ. ಆದರೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ದೆಹಲಿ ಚುನಾವಣೆ ಬಳಿಕ ಛಿದ್ರಛಿದ್ರ ಆಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಬೆಂಬಲಕ್ಕೆ ಸಮಾಜವಾದಿ ಪಾರ್ಟಿ ಹಾಗು ತೃಣಮೂಲ ಕಾಂಗ್ರೆಸ್, ಶಿವಸೇನೆ ಸೇರಿದಂತೆ ಇಂಡಿಯಾ ಒಕ್ಕೂಟದ ಪಕ್ಷಗಳೇ ನಿಂತಿದ್ದು, ಕಾಂಗ್ರೆಸ್ ಏಕಾಂಗಿ ಆಗುತ್ತಿದೆಯಾ ಅನ್ನೋ ಪ್ರಶ್ನೆ ಎದುರಾಗಿದೆ.
ದೆಹಲಿ ಚುನಾವಣೆಯಲ್ಲಿ ಎಎಪಿಗೆ ನಮ್ಮ ಬೆಂಬಲ ಎಂದು ಪ್ರಾದೇಶಿಕ ಪಕ್ಷಗಳು ಬಹಿರಂಗವಾಗಿಯೇ ಘೋಷಣೆ ಮಾಡಿವೆ. INDIA ಒಕ್ಕೂಟದಲ್ಲಿ AAP ಬಹುಮುಖ್ಯ ಪಕ್ಷ. 2013 ರಿಂದ AAP ದೆಹಲಿಯಲ್ಲಿ ಯಶಸ್ವಿಯಾಗಿ ಸರ್ಕಾರ ನಡೆಸುತ್ತಿದೆ. AAPಗೆ ನಮ್ಮ ಬೆಂಬಲ ಇರುತ್ತದೆ. ಕಾಂಗ್ರೆಸ್ ಸ್ಥಳೀಯ ಪಾರ್ಟಿಗಳನ್ನು ಗೌರವಿಸಬೇಕು. ಅದೇ ರೀತಿ ದೆಹಲಿಯಲ್ಲಿ AAP ಬೆಂಬಲಿಸಬೇಕು. ಆಮ್ ಆದ್ಮಿ ಪಾರ್ಟಿ ಜೊತೆಗೆ ಸ್ಪರ್ಧೆ ಮಾಡುತ್ತಿರುವುದು ಸರಿಯಲ್ಲ ಎಂದು ಟಿಎಂಸಿ ಸಂಸದ ಕೀರ್ತಿ ಆಜಾದ್ ಹೇಳಿದ್ದಾರೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಎನ್ಸಿಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದು, ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಗೆ ಬೆಂಬಲ ಸೂಚಿಸಿದೆ. ಸಂಸದೆ ಪ್ರಿಯಾಂಕಾ ಚೌಧರಿ ಮಾತನಾಡಿ, ಅರವಿಂದ್ ಕೇಜ್ರಿವಾಲ್ ಜನರ ಮನಸ್ಸು ಗೆದ್ದಿದ್ದಾರೆ. ದೆಹಲಿ ಜನರ ಹೃದಯದಲ್ಲಿ ಅರವಿಂದ್ ಕೇಜ್ರಿವಾಲ್ಗೆ ಸ್ಥಾನ ಸಿಕ್ಕಿದೆ. ದೆಹಲಿಯ ಜನರು ಕೇಜ್ರಿವಾಲ್ಗೆ ಸಪೋರ್ಟ್ ಮಾಡಲಿದ್ದು, ಮತ್ತೊಮ್ಮೆ ಸರ್ಕಾರ ರಚನೆ ಮಾಡಲು ದೆಹಲಿ ಜನ ಬೆಂಬಲಿಸ್ತಾರೆ. ದೆಹಲಿಯಲ್ಲಿ ಮುಂದೆಯೂ ಅರವಿಂದ್ ಕೇಜ್ರಿವಾಲ್ ಉತ್ತಮ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೆಹಲಿ ಚುನಾವಣೆಗೂ ಮುನ್ನ ಇಂಡಿಯಾ ಒಕ್ಕೂಟದ ಸಭೆ ನಡೆಸಿ ಆಮ್ ಆದ್ಮಿ ಪಾರ್ಟಿ ಹಾಗು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಚುನಾವಣೇ ಮಾಡದೆ ಇರುವುದಕ್ಕೆ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಬೇಸರ ಹೊರ ಹಾಕಿದ್ದಾರೆ. ಕಾಂಗ್ರೆಸ್ ಹಾಗು ಆಮ್ ಆದ್ಮಿ ಪಾರ್ಟಿ ಪ್ರತ್ಯೇಕವಾಗಿ ಚುನಾವಣೆ ಮಾಡ್ತಿರೋದು ಸರಿಯಲ್ಲ. ಇಂಡಿಯಾ ಒಕ್ಕೂಟ ರಚನೆ ಆಗಿದ್ದು ಕೇವಲ ಲೋಕಸಭಾ ಚುನಾವಣೆಗಾಗಿ ಮಾತ್ರವೇ ಆಗಿದ್ದರೆ ಇಂಡಿಯಾ ಒಕ್ಕೂಟವನ್ನು ವಿಸರ್ಜನೆ ಮಾಡುವುದು ಸೂಕ್ತ. ಆ ಬಳಿಕ ನಾವು ಪ್ರತ್ಯೇಕವಾಗಿ ರಾಜಕೀಯ ಮಾಡಬಹುದು ಎಂದಿದ್ದಾರೆ.
ಇಂಡಿಯಾ ಒಕ್ಕೂಟದ ಪ್ರಾದೇಶಿಕ ಪಕ್ಷಗಳು ಆಮ್ ಆದ್ಮಿ ಪಾರ್ಟಿ ಜೊತೆಗೆ ನಿಂತಿವೆ. ಆದರೂ ಕಾಂಗ್ರೆಸ್ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಇಂಡಿಯಾ ಒಕ್ಕೂಟವನ್ನು ಉಳಿಸಿಕೊಳ್ಳುವ ಬಗ್ಗೆಯೂ ಏನನ್ನೂ ಹೇಳಿಲ್ಲ. ಇದು ಬಿಜೆಪಿಗೆ ಭಾರೀ ಲಾಭ ಮಾಡಿಕೊಡುವ ಸಂಭವವಿದೆ. ಇದೀಗ ಲೋಕಸಭೆಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷವಾಗಿದ್ದು, ಇಂಡಿಯಾ ಒಕ್ಕೂಟದ ಮೂಲಕ ಬಿಜೆಪಿಯನ್ನ ಎದುರಿಸುತ್ತಿದೆ. ಒಂದು ವೇಳೆ ಇಂಡಿಯಾ ಒಕ್ಕೂಟ ಛಿದ್ರವಾಗಿ ಕಾಂಗ್ರೆಸ್ ಏಕಾಂಗಿ ಆದರೆ ಲೋಕಸಭೆಯಲ್ಲೂ ವಿರೋಧ ಪಕ್ಷಕ್ಕೆ ಭಾರೀ ಹಿನ್ನಡೆ ಆಗಲಿದೆ ಎನ್ನುವುದು ನಿಶ್ಚಿತ.