
ಚಲನಚಿತ್ರ ಸಂಗೀತದ ಸಾಮ್ರಾಟ ಮೊಹಮ್ಮದ್ ರಫಿ ನೂರರ ಜನ್ಮ ದಿನವನ್ನು ನೆನೆಯುವುದೇ ಹೆಮ್ಮೆ
ನಾ ದಿವಾಕರ
ಹಳೆಯ ಹಿಂದಿ ಚಿತ್ರಗೀತೆಗಳನ್ನು ಆಸ್ವಾದಿಸುವವರಿಗೆ ಇಂಪಾದ ಸಂಗೀತವೆಂದರೆ ಥಟ್ಟನೆ ನೆನಪಾಗುವ ಹೆಸರುಗಳು ಎರಡೇ. ಒಂದು ಸ್ವರ ಸಾಮ್ರಾಜ್ಞಿ ಲತಾಮಂಗೇಶ್ಕರ್ ಮತ್ತೊಂದು ಹಿನ್ನೆಲೆ ಗಾಯನದ ಬಾದಷಾಹ ಮೊಹಮ್ಮದ್ ರಫಿ. ೧೯೬೦-೭೦ರ ದಶಕದಲ್ಲಿ ರೇಡಿಯೋ ಸಿಲೋನ್‌ನಲ್ಲಿ ಬಿನಾಕಾ ಗೀತ್ ಮಾಲಾ ಎಂಬ ಕಾರ್ಯಕ್ರಮವನ್ನು ಮಧುರ ಕಂಠದ ಅಮೀನ್ ಸಯಾನಿ ನಡೆಸುತ್ತಿದ್ದರು. ವಾರದ ಹತ್ತು ಜನಪ್ರಿಯ ಹಾಡುಗಳು ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮವನ್ನು ಕೇಳದ ಸಂಗೀತ ಪ್ರಿಯರೇ ಇರಲಿಲ್ಲವೇನೋ. ವರ್ಷಾಂತ್ಯದಲ್ಲಿ ಆ ಸಾಲಿನ ಹತ್ತು ಶ್ರೇಷ್ಠ ಗೀತೆಗಳನ್ನು ಪ್ರಸಾರಮಾಡಲಾಗುತ್ತಿತ್ತು. ೧೯೬೨ರಲ್ಲಿ ಎಲ್ಲಾ ಹತ್ತು ಹಾಡುಗಳಲ್ಲೂ ಎರಡೇ ಧ್ವನಿಗಳು ಮೇಳೈಸಿದ್ದವು. ಮೊಹಮ್ಮದ್ ರಫಿ ಮತ್ತು ಲತಾ ಮಂಗೇಷ್ಕರ್ ಅವರ ಗಾಯನ ಮೋಡಿ ಹಾಗಿತ್ತು. ೪೦ರ ದಶಕದಿಂದ ೮೦ರ ದಶಕದ ಪ್ರಾರಂಭದವರೆಗೆ ಗಾಯನ ಕ್ಷೇತ್ರದ ಅನಭಿಷಿಕ್ತ ದೊರೆಯಾಗಿ ರಾರಾಜಿಸಿದ ರಫಿ ಇಂದು ನಮ್ಮ ನಡುವೆ ಇದ್ದಿದ್ದರೆ ಅವರಿಗೆ ನೂರು ತುಂಬುತ್ತಿತ್ತು. (24-12-1924)
1924 ರ ಡಿಸೆಂಬರ್ 24 ರಂದು ಕೊಟ್ಟಾ ಸುಲ್ತಾನ್‌ಸಿಂಗ್ ಗ್ರಾಮದಲ್ಲಿ ಜನಿಸಿದ ರಫಿ ತಮ್ಮ ಸಾಂಪ್ರದಾಯಿಕ ಕುಟುಂಬದಿಂದ ಗಾಯನ ಕ್ಷೇತ್ರದಲ್ಲಿ ಉತ್ತೇಜನ ಪಡೆಯಲಿಲ್ಲ. ಅವರ ತಂದೆಯ ಇಚ್ಚೆಗೆ ವಿರುದ್ಧವಾಗಿಯೇ ಉಸ್ತಾದ್ ಗುಲಾಂ ಅಲಿ ಖಾನ್ ಅವರಿಂದ ಸಂಗೀತ ಕಲಿತ ರಫಿ ಗಾಯಕನಾಗಲು ಬಯಸಿ ತಮ್ಮ 14ನೇ ವಯಸ್ಸಿನಲ್ಲಿ ಲಾಹೋರಿಗೆ ಬಂದಾಗ ನಿರಾಸೆಯೇ ಹೆಚ್ಚಾಗಿತ್ತು. ಒಂದು ಸ್ಥಳೀಯ ವಾದ್ಯಗೋಷ್ಠಿಯಲ್ಲಿ ಹಾಡುತ್ತಿದ್ದ ರಫಿಯ ಸುಮಧುರ ಧ್ವನಿಗೆ ಮಾರುಹೋದ ಶ್ಯಾಮ ಸುಂದರ್ ಎಂಬ ಸಂಗೀತ ನಿರ್ದೇಶಕ ಗುಲ್ ಬಲೋಚ್ ಎಂಬ ಪಂಜಾಬಿ ಚಿತ್ರದಲ್ಲಿ ಝೀನತ್ ಬೇಗಮ್‌ನೊಡನೆ ಹಾಡಲು ಅವಕಾಶ ನೀಡಿದರು. ಈ ಹಾಡನ್ನು ಕೇಳಿದ ಅನಿಲ್ ಬಿಶ್ವಾಸ್, ನೌಷಾದ್ ಅಲಿ ಮುಂತಾದ ದಿಗ್ಗಜರು “ ಈ ಬಾಲಕ ಮುಂದೊಂದು ದಿನ ಮಹಾನ್ ಗಾಯಕನಾಗುತ್ತಾನೆ ” ಎಂದು ಉದ್ಗರಿಸಿದ್ದರು. ಅವರ ಭವಿಷ್ಯ ಸುಳ್ಳಾಗಲೂ ಇಲ್ಲ. ಫಿರೋಜ್ ನಜ್ಮಿಯವರ ಚಿತ್ರವೊಂದರಲ್ಲಿ ನೂರ್‌ಜಹಾನ್‌ರೊಡನೆ ಹಾಡಿದ “ ಯಹಾಂ ಬದಲಾ ವಫಾ ಕಾ ಬೇವಫಾಯಿ” ಎಂಬ ಯುಗಳ ಗೀತೆ ಮೊಹಮ್ಮದ್ ರಫಿಯ ಸಂಗೀತ ಕ್ಷೇತ್ರದ ಮೊದಲ ಮೆಟ್ಟಿಲಾಗಿತ್ತು. ನಂತರ ಅವರು ಹಿಂದಿರುಗಿ ನೋಡಲೇ ಇಲ್ಲ.

ಬಾಜಾರ್ ಚಿತ್ರದಲ್ಲಿ ಶ್ಯಾಂಸುಂದರ್ ಅವರ ನಿರ್ದೇಶನದಲ್ಲಿ ಏಳು ಸುಮಧುರ ಗೀತೆಗಳಿಗೆ ಸ್ವರ ನೀಡಿದ್ದ ರಫಿ ಸಂಗೀತ ನಿರ್ದೇಶಕ ನೌಷಾದ್ ಅಲಿಯ ಸಾಂಗತ್ಯ ದೊರೆತ ಮೇಲೆ ಕೆಲವೇ ವರ್ಷಗಳಲ್ಲಿ ಉತ್ತುಂಗಕ್ಕೇರಿದ್ದರು. 50ರ ದಶಕದಲ್ಲಿ ಬೈಜುಬಾವರ, ಮೊಘಲ್ ಎ ಅಝಮ್, ಉಡನ್ ಖಟೋಲ, ದುಲ್ಹಾರಿ, ಮದರ್ ಇಂಡಿಯ, ಕೋಹಿನೂರ್, ಅಮರ್, ಸನ್ ಆಫ್ ಇಂಡಿಯ, ದಿಲ್ ದಿಯಾ ದರ್ದ್ ಲಿಯಾ, ಮುಂತಾದ ಚಿತ್ರಗಳಲ್ಲಿ ನೌಷಾದ್-ರಫಿ ಜೋಡಿ ಸಂಗೀತ ಪ್ರೇಮಿಗಳಲ್ಲಿ ಹೊಸ ಸಂಚಲನ ಮೂಡಿಸಿತ್ತು. ಅಂದಿನ ಯುವಪೀಳಿಗೆಯ ಕನಸು, ಆಕಾಂಕ್ಷೆಗಳಿಗೆ ತಮ್ಮ ಸುಮಧುರ ಕಂಠದ ಮೂಲಕ ಧ್ವನಿ ನೀಡಿದ ರಫಿ ಶ್ರೇಷ್ಠ ನಟ ದಿಲೀಪ್ ಕುಮಾರ್ ಅವರ ಮತ್ತೊಂದು ಧ್ವನಿಯಾಗಿದ್ದರು. ದಿಲೀಪ್-ರಫಿ-ನೌಷಾದ್ ಸಾಂಗತ್ಯದಲ್ಲಿ ಮೂಡಿಬಂದ ಗೀತೆಗಳು ಚಿರಂತನ, ಅಮರ. ಬೈಜೂ ಬಾವರಾದಲ್ಲಿ ಶಕೀಲ್ ಬದಾಯುನಿ ರಚಿಸಿ, ನೌಷಾದ್ ಸಂಗೀತದಲ್ಲಿ ರಫಿ ಹಾಡಿದ “ ಓ ದುನಿಯಾ ಕೇ ರಖ್‌ವಾಲೆ “ ಮತ್ತು “ ಮನ್ ತಡಪತ್ ಹರಿ ದರ್ಶನ್ ಕೋ” ಎಂಬ ಭಕ್ತಿರಸ ಗೀತೆಗಳು ಇಂದಿಗೂ ಮೈನವಿರೇಳಿಸುತ್ತವೆ. ಭಕ್ತಿರಸ ಉಕ್ಕಿ ಹರಿವ ಈ ಗೀತೆಯ ಹಿಂದೆ ಭಾರತದ ಬಹುಮುಖೀ ಸಂಸ್ಕೃತಿಯ ಸಂಕೇತ ವ್ಯಕ್ತವಾಗಿರುವುದನ್ನು ಮರೆಯಲಾಗದು. ಹಿಂದಿ ಚಿತ್ರರಂಗದಲ್ಲಿ ಶಾಸ್ತ್ರೀಯ ಸಂಗೀತದ ಬೇರುಗಳು ಗಟ್ಟಿಗೊಳ್ಳಲು ನೌಷಾದ್ ಮತ್ತು ರಫಿಯವರ ಕೊಡುಗೆ ಅಪಾರ, ಅಮೂಲ್ಯ.
ರಫಿಯವರ ವಿಶೇಷ ಪ್ರತಿಭೆ ಎಂದರೆ ಯಾವುದೇ ನಟರಿಗೆ ಹಿನ್ನೆಲೆ ಗಾಯನ ನೀಡಿದರೂ, ಅವರ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿಬಿಡುತ್ತಿದ್ದರು. ಶಮ್ಮಿಕಪೂರ್, ರಾಜೇಂದ್ರ ಕುಮಾರ್, ರಾಜ್ ಕುಮಾರ್, ದೇವ್ ಆನಂದ್ (೭೦ರ ದಶಕದವರೆಗೆ) ಜಾಯ್ ಮುಖರ್ಜಿ, ರಾಜ್‌ಕುಮಾರ್, ಗುರುದತ್, ಬಿಸ್ವಜೀತ್, ಭರತ್‌ಭೂಷಣ್, ಪ್ರದೀಪ್ ಕುಮಾರ್, ಸುನಿಲ್‌ದತ್, ಜಿತೇಂದ್ರ, ಶಶಿಕಪೂರ್, ಧರ್ಮೇಂದ್ರ ಇಂತಹ ನಾಯಕ ನಟರುಗಳೇ ಅಲ್ಲದೆ ಜಾನಿವಾಕರ್, ಮೆಹಮೂದ್‌ರಂತಹ ಹಾಸ್ಯ ನಟರಿಗೂ ತಮ್ಮ ಧ್ವನಿಯನ್ನು ಹೊಂದಿಸಿಕೊಂಡು ಹಾಡುತ್ತಿದ್ದುದು ರಫಿಯವರ ವೈಶಿಷ್ಟ್ಯ. ಆದರೂ ಅವರ ಕೊರಳಿನ ಇಂಪು ಮಾಸುತ್ತಿರಲಿಲ್ಲ. ಅಂದಿನ ಅನೇಕ ಚಿತ್ರಗಳು ರಫಿ ಅವರ ಮಧುರ ಹಾಡುಗಳಿಂದಲೇ ಯಶಸ್ಸುಗಳಿಸಿರುವುದೂ ಉಂಟು.
ಹಿಂದಿ ಚಿತ್ರರಂಗದಲ್ಲಿ ರಫಿಯವರ ಹಾದಿಯೇನೂ ಸುಗಮವಾಗಿರಲಿಲ್ಲ. ಆದರೆ ಅವರ ಕಂಠಸಿರಿ, ಮಾಧುರ‍್ಯ ಮತ್ತು ಪದೋಚ್ಛಾರಣೆಗಳು ಅವರನ್ನು ಉತ್ತುಂಗಕ್ಕೇರಿಸಿತ್ತು. ಅವರ ಸಮಕಾಲೀನ ಶ್ರೇಷ್ಠರಾದ ಮನ್ನಾ ಡೇ ಹೇಳುವಂತೆ “ ರಫಿಯವರಷ್ಟು ಸ್ಪಷ್ಟವಾಗಿ ಪದಗಳ ಉಚ್ಛಾರಣೆ ಮಾಡುವವರು ಚಲನ ಚಿತ್ರರಂಗದಲ್ಲೇ ದೊರೆಯುವುದಿಲ್ಲ.” ವೇಗದ ಧಾಟಿಯ ಜಂಗ್ಲಿ ಚಿತ್ರದ “ ಚಾಹೆ ಕೋಯಿ ಮುಝೆ ಜಂಗಲಿ ಕಹೆ “ ಆದ್ಮಿ ಚಿತ್ರದ “ಆಜ್ ಪುರಾನಿ ರಾಹೋಂಸೆ “ ಎಂಬ ಶೋಕಗೀತೆ, “ಜಂಗಲ್ ಮೆ ಮೋರ್ ನಾಚೆ “ ಮತ್ತು “ ಸರ್ ಜೊ ತೆರಾ ಚಕರಾಯೆ “ ಎಂಬ ಹಾಸ್ಯಗೀತೆ, “ ಕೋಯಿ ಸಾಗರ್ ದಿಲ್ ಕೊ ಬೆಹಲಾತಾ ನಹೀಂ” ಎಂಬ ಗಝಲ್, “ ಮಧುಬನ್ ಮೆ ರಾಧಿಕಾ ನಾಚೇ ರೇ “ಎಂಬ ಶಾಸ್ತ್ರೀಯ ಗೀತೆ ಹೀಗೆ ಎಲ್ಲ ಪ್ರಕಾರಗಳಲ್ಲೂ ರಫಿಯವರ ಪದೋಚ್ಛಾರಣೆ ಮತ್ತು ಕಂಠ ಮಾಧುರ‍್ಯ ಅದ್ಭುತವಾಗಿ ಮೇಳೈಸುತ್ತಿತ್ತು. ಅನೇಕ ಸತ್ವ ರಹಿತ ಹಾಡುಗಳಿಗೂ ತಮ್ಮ ಸ್ವರಮಾಧುರ‍್ಯದಿಂದ ಜೀವ ತುಂಬುತ್ತಿದ್ದುದು ರಫಿಯವರ ಹೆಗ್ಗಳಿಕೆ.
ಕಟ್ಟಾ ಧಾರ್ಮಿಕ ವ್ಯಕ್ತಿಯಾಗಿದ್ದ ರಫಿಯವರಿಗೆ ಯಾವುದೇ ಕೆಟ್ಟ ಚಟಗಳಿರಲಿಲ್ಲ. ಪರಧರ್ಮವನ್ನೂ ಅಷ್ಟೇ ಗೌರವಾದರದಿಂದ ನೋಡುತ್ತಿದ್ದರು. ಹಿಂದಿ ಚಿತ್ರರಂಗದ ಬಹುತೇಕ ಭಜನ್‌ಗಳು ಅವರ ಧ್ವನಿಯಲ್ಲೇ ಮೂಡಿಬಂದಿದ್ದು, ಭಕ್ತಿರಸ ಮೇಳೈಸಿರುವುದನ್ನು ಗಮನಿಸಲೇಬೇಕು. ಬೈಜೂ ಬಾವರಾ ಚಿತ್ರದ “ ಮನ್ ತಡಪತ್ ಹರಿ ದರ್ಶನ್ ಕೋ “, ಗೋಪಿ ಚಿತ್ರದ “ ಸುಖ್ ಸೆ ಸಬ್ ಸಾಥಿ ದುಖ್ ಮೇ ನ ಕೋಯಿ “, ಬಸಂತ್ ಬಹಾರ್ ಚಿತ್ರದ ” ದುನಿಯಾ ನ ಭಾಯೆ ಮೋಹೆ “, ಅಮರ್ ಚಿತ್ರದ “ ಇನ್ಸಾಫ್ ಕಾ ಮಂದಿರ್ ಹೈ ಏ “ ಬೈಜೂ ಬಾವರಾ ಚಿತ್ರದ “ ಒ ದುನಿಯಾ ಕೆ ರಖ್ ವಾಲೆ “ ಮುಂತಾದ ಭಕ್ತಿಗೀತೆಗಳು ಇಂದಿಗೂ ಮನಸೂರೆಗೊಳ್ಳುತ್ತವೆ. ಗಝಲ್ ಕಿಂಗ್ ಎಂದೇ ಹೆಸರಾಗಿದ್ದ ರಫಿಯವರ ಗಝಲ್ ಗಾಯನ ಶೈಲಿ ಜಗಜಿತ್ ಸಿಂಗ್, ಪಂಕಜ್ ಉದಾಸ್ ಮುಂತಾದವರಿಗೆ ಆದರ್ಶಪ್ರಾಯವಾಗಿತ್ತು. ಗಝಲ್ ಚಿತ್ರದ “ ರಂಗ್ ಔರ್ ನೂರ್ ಕಿ ಬಾರಾತ್ ಕಿಸೆ ಪೇಶ್ ಕರೂಂ “, ನವ ನಿಹಾಲ್ ಚಿತ್ರದ “ ಮೇರಿ ಆವಾಜ್ ಸುನೋ “ ಎಂಬ ಗೀತೆಗಳು ಇಂದಿಗೂ ಚಿತ್ರರಂಗದ ಇತಿಹಾಸದಲ್ಲಿ ಅತ್ಯುತ್ತಮ ಗಝಲ್ ಎಂದು ಪ್ರಸಿದ್ಧಿ ಪಡೆದಿದೆ.

ಗುರುದತ್‌ನ ಕಾಗಜ್ ಕೆ ಫೂಲ್ “ದೇಖೀ ಜಮಾನೇ ಕಿ ಯಾರೀ”, ದಿಲೀಪ್ ಕುಮಾರನ ಉಡನ್ ಖಟೋಲ “ಚಲೇ ಆಜ್ ತುಂ ಜಹಾಂ ಸೇ ಹುಯಿ ಜಿಂದಗಿ ಪರಾಯಿ”, ರಾಜೇಂದ್ರ ಕುಮಾರ್‌ನ ಮೇರೆ ಮೆಹಬೂಬ್ ಚಿತ್ರದ “ ಯಾದ್ ಮೆ ರಾತ್ ಜಾಗ್ ಜಾಗ್ ಕೆ ಹಂ ”, ದೇವಾನಂದನ ಗೈಡ್ ಚಿತ್ರದ “ತೇರೆ ಮೇರೆ ಸಪನೆ”, ಧಮೇಂದ್ರನ ಶೋಲ ಔರ್ ಶಬನಮ್ ಚಿತ್ರದ “ ಜಾನೆ ಕ್ಯಾ ಢೂಂಢ್‌ತಿ ರಹತೀ ಹೈ ಎ ಆಂಖೇ”, ರಾಜ್‌ಕುಮಾರ್‌ನ ನೀಲ್ ಕಮಲ್ ಚಿತ್ರದ “ ತುಜಕೋ ಪುಕಾರೆ ಮೇರ ಪ್ಯಾರ್”, ಶಮ್ಮಿಕಪೂರ್‌ನ ತುಂಸೆ ಅಚ್ಚ ಕೌನ್ ಹೈ ಚಿತ್ರದ “ ಜನಮ್ ಜನಮ್ ಕಾ ಸಾಥ್ ಹೈ”, ಸುನಿಲ್ ದತ್‌ನ ಚಿರಾಗ್ ಚಿತ್ರದ “ ತೇರಿ ಆಂಖೋಂಸೆ ಸಿವಾ ದುನಿಯಾ ಮೆ”, ಜಿತೇಂದ್ರನ ಮೇರೆ ಹುಜೂರ್ ಚಿತ್ರದ “ಘಮ್ ಉಠಾನೆ ಕೇ ಲಿಯೇ”, ಭರತ್ ಭೂಷಣ್‌ನ ಬೈಜು ಬಾವರ ಚಿತ್ರದ “ ಓ ದುನಿಯಾ ಕೆ ರಖ್‌ವಾಲೆ”, ಶಶಿಕಪೂರ್‌ನ ಪ್ಯಾರ್ ಕಾ ಮೌಸಮ್ ಚಿತ್ರದ “ ನಿಸುಲ್ತನಾ ರೇ ಪ್ಯಾರ್ ಕಾ ಮೌಸಮ್ ಆಯಾ”, ಪ್ರದೀಪ್ ಕುಮಾರ್‌ನ ಭೀಗಿ ರಾತ್ ಚಿತ್ರದ “ದಿಲ್ ಜೋ ನ ಕೆಹ ಸಕಾ ಓ ” ಇವು ರಫಿಯವರ ಕಂಠ ಮಾಧುರ‍್ಯದ ಅಣಿಮುತ್ತುಗಳು, ಅವಿಸ್ಮರಣೀಯ ಹವಳಗಳು.
ಸಾವಿರಾರು ಹಾಡುಗಳನ್ನು ಹಾಡಿರುವ ರಫಿಯವರ ಹಾಡುಗಳಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡುವುದೇ ಒಂದು ಸಾಹಸ. ರಿಕಾರ್ಡಿಂಗ್ ಮಾಡುವ ವೇಳೆಯಲ್ಲಿ ಶಾಸ್ತ್ರೀಯವಾಗಲೀ, ರೊಮ್ಯಾಂಟಿಕ್ ಆಗಲಿ, ಅಲುಗಾಡದೆ, ಹಾವಭಾವಗಳಿಲ್ಲದೆ ಹಾಡುತ್ತಿದ್ದುದು ರಫಿ ಅವರ ವೈಶಿಷ್ಟ್ಯ . ಲಕ್ಷ್ಮೀಕಾಂತ್- ಪ್ಯಾರೆಲಾಲ್ ನಿರ್ದೇಶನದಲ್ಲಿ ಒಂದೇ ದಿನದಲ್ಲಿ ಆರು ಹಾಡುಗಳನ್ನು ಹಾಡಿದ್ದು ಒಂದು ದಾಖಲೆ. ಆಗ ಡಬ್ಬಿಂಗ್ ತಂತ್ರಜ್ಞಾನ ಇರಲಿಲ್ಲ ಎಂಬುದು ಗವiನಾರ್ಹ. ಒ.ಪಿ ನಯ್ಯರ್, ಲಕ್ಷ್ಮೀಕಾಂತ್-ಪ್ಯಾರೆಲಾಲ್, ನೌಷಾದ್,

ಶಂಕರ್ ಜೈಕಿಷನ್, ರೋಷನ್, ಮದನ್ ಮೋಹನ್, ಎಸ್.ಡಿ.ಬರ್ಮನ್, ಆರ್.ಡಿ.ಬರ್ಮನ್ ಮುಂತಾದ ದಿಗ್ಗಜರಿಗೆ ರಫಿ ಅನಿವಾರ್ಯವೇ ಆಗಿಬಿಟ್ಟಿದ್ದರು. 70ರ ದಶಕದಲ್ಲಿ ಕಿಶೋರ್ ಕುಮಾರ್ ಅವರ ಯುಗದಲ್ಲಿ ಬೇಡಿಕೆ ಕ್ಷೀಣಿಸದರೂ ಎದೆಗುಂದದ ರಫಿ ಹಮ್ ಕಿಸೀ ಸೆ ಕಂ ನಹಿ ಚಿತ್ರದ “ ಕ್ಯಾ ಹುವಾ ತೇರ ವಾದಾ “ ಹಾಡಿನಿಂದ ಪುನಃ ಮರುಹುಟ್ಟು ಪಡೆದಿದ್ದರು.
ಯುವ ಪೀಳಿಗೆಯವರಿಗೆ ಹಾಡಲು ಹಿಂಜರಿಯುತ್ತಿದ್ದ ರಫಿಗೆ, ನೌಷಾದ್ “ನಿನ್ನ ಪ್ರತಿಭೆಯ ಒಂದಂಶಕ್ಕೆ ಸರಿಸಮಾನರಾಗುವ ಹಿನ್ನೆಲೆ ಗಾಯಕರಾರಿದ್ದಾರೆ, ನೀನು ಮನಸ್ಸು ಮಾಡಿದರೆ ಎಲ್ಲರನ್ನೂ ಮೀರಿಸಿ ಬೆಳೆಯುವ ಸಾಮರ್ಥ್ಯ ನಿನ್ನಲ್ಲಿದೆ” ಎಂದು ಹುರಿದುಂಬಿಸಿದ್ದರು. ನಂತರದಲ್ಲಿ ತಮ್ಮ ಸಾಮರ್ಥ್ಯವನ್ನು ನಿರೂಪಿಸಿದ್ದೂ ಹೌದು. “ ರಫಿ ಅವರ ಯುಗ ಮುಗಿಯಿತು ಎಂದು ಹೇಳುವವರಿಗೆ ತಕ್ಕ ಉತ್ತರ ನೀಡಲು ನನಗೆ ಒಂದೇ ಒಂದು ಸಿನಿಮಾ ಸಿಕ್ಕರೆ ಸಾಕು, ಅವರ ಶ್ರೇಷ್ಠತೆಯನ್ನು ಸಾಬೀತು ಪಡಿಸುತ್ತೇನೆ. ಮೊಹಮ್ಮದ್ ರಫಿ ಇಲ್ಲದಿದ್ದರೆ ಈ ನಯ್ಯರ್ ಇರುತ್ತಿರಲಿಲ್ಲ” ಎಂಬ ಒ.ಪಿ ನಯ್ಯರ್ ಅವರ ಮಾತುಗಳು ಎಷ್ಟು ಸತ್ಯ. ಕೆಲವೊಮ್ಮೆ ನಿರ್ಮಾಪಕರ ಬಳಿ ಹಣವಿಲ್ಲದಿದ್ದಾಗ ರಫಿ ಕೇವಲ ಒಂದು ರೂ ಸಂಭಾವನೆಗೆ ಹಾಡಿದ್ದೂ ಉಂಟು.
ಒಂದು ಪೀಳಿಗೆಯ, ಸಂಸ್ಕೃತಿಯ, ಧರ್ಮದ ಮತ್ತು ದೇಶ ಭಾಷೆಗಳ ಎಲ್ಲೆಗಳನ್ನು ಮೀರಿ, ಯಾವುದೇ ಹಾಡಿರಲಿ ಸರಾಗವಾಗಿ, ಸುಲಲಿತವಾಗಿ, ಸುಶ್ರಾವ್ಯವಾಗಿ ಹಾಡುವ ಸಾಮರ್ಥ್ಯ ಮೊಹಮ್ಮದ್ ರಫಿಯವರಿಗಲ್ಲದೆ ಬೇರಾರಿಗೂ ಇರಲಿಲ್ಲ. ರಫಿಯವರ ಧ್ವನಿಯಲ್ಲಿ ಅಡಗಿದ್ದ ಮಾಂತ್ರಿಕತೆಯೇ ಕೇಳುಗರನ್ನು ಮೋಡಿ ಮಾಡಿಬಿಡುತ್ತಿತ್ತು. ಆರೋಹಣ-ಅವರೋಹಣಗಳಲ್ಲಿ ಅವರನ್ನು ಮೀರಿಸುವವರೇ ಇರಲಿಲ್ಲವೆಂದು ಸಮಕಾಲೀನರೇ ಒಪ್ಪಿಕೊಳ್ಳುತ್ತಾರೆ. ಹಿಂದಿ, ಪಂಜಾಬಿ, ಭೋಜ್‌ಪುರಿ, ಮರಾಠಿ, ಗುಜರಾತಿ, ಒರಿಯಾ, ತೆಲುಗು, ಕನ್ನಡ, ಬಂಗಾಲಿ ಹೀಗೆ ಹಲವು ಭಾಷೆಗಳಲ್ಲಿ ತಮ್ಮ ಕಂಠಸಿರಿಯನ್ನು ಮೊಳಗಿಸಿದ ರಫಿಯವರಂತಹ ಗಾಯಕ ಮತ್ತೊಮ್ಮೆ ಹುಟ್ಟಿಬರಲಾರ.
೧೯೮೧ರ ಜುಲೈ ೩೧ರಂದು ಆಸ್ ಪಾಸ್ ಚಿತ್ರದ ಹಾಡಿನ ರಿಕಾರ್ಡಿಂಗ್ ಮುಗಿಸಿ ಲಕ್ಷ್ಮೀಕಾಂತ್-ಪ್ಯಾರೆಲಾಲ್ ಅವರಿಗೆ “ ನಾನು ಹೋಗುತ್ತಿದ್ದೇನೆ” ಎಂದು ವಿದಾಯ ಹೇಳಿದ ರಫಿ ಅದೇ ಸಂಜೆ ಇಹಲೋಕವನ್ನೇ ತ್ಯಜಿಸಿದ್ದರು. ಸ್ವಾತಂತ್ರ್ಯೋತ್ತರ ಯುವಪೀಳಿಗೆಗೆ ತಮ್ಮ ಸುಮಧುರ ಕಂಠಸಿರಿಯಿಂದ ನಾಲ್ಕು ದಶಕಗಳ ಕಾಲ ಸಾವಿರಾರು ಹಾಡುಗಳ ರಸದೌತಣ ನೀಡಿದ ಮಹಾನ್ ತಪಸ್ವಿ ಮೊಹಮ್ಮದ್ ರಫಿ ಅಜರಾಮರ. “ ಅಭೀ ನ ಜಾವೋ ಛೋಡ್ ಕರ್ ಏ ದಿಲ್ ಅಭೀ ಭರಾ ನಹೀಂ” ಎಂಬ ಅವರದೇ ಹಾಡು ಅವರ ಅಭಿಮಾನಿಗಳ ಮನದಾಳದಲ್ಲಿ ಪ್ರತಿಧ್ವನಿಸುತ್ತಲೇ ಇದೆ. ತಮ್ಮ ನೆಚ್ಚಿನ ಗಾಯಕ ರಫಿಯವರನ್ನು ಕುರಿತು ನೌಷಾದ್ ಅಲಿ ಹೀಗೆ ಹೇಳುತ್ತಾರೆ ;
“ ದ್ವೇಷವೇ ತುಂಬಿದ ಈ ಜಗತ್ತಿನಲ್ಲಿ ,
ರಫಿ ನೀನು ಪ್ರೀತಿಗೆ ಧ್ವನಿಯಾಗಿದ್ದೆ
ದುಃಖ ಭರಿತ ಈ ಜಗತ್ತಿನಲ್ಲಿ , ರಫಿ,
ನಿನ್ನ ಮಧುರ ಧ್ವನಿ ಹರುಷದ ಚಿಲುಮೆಯಾಗಿತ್ತು. ”
ಇದಕ್ಕಿಂತಲೂ ಬಾಷ್ಪಾಂಜಲಿ ಇನ್ನೇನು ಬೇಕು. ರಫಿ ನೀನು ಅಜರಾಮರ.
-೦-೦-೦-೦-