ಹುಬ್ಬಳ್ಳಿ: ಕ್ರಾಂತಿವೀರ ಬ್ರಿಗೇಡ್ ಸ್ಥಾಪನೆಗೆ ಮಾಜಿ ಡಿಸಿಎಂ ಈಶ್ವರಪ್ಪ ನಿರ್ಧಾರ ಮಾಡಿದ್ದಾರೆ. ಮಠಾಧೀಶರ ನೇತೃತ್ವದಲ್ಲಿ ಕ್ರಾಂತಿವೀರ ಬ್ರಿಗೇಡ್ ಸ್ಥಾಪನೆ ಮಾಡಲಾಗುವುದು ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಫೆಬ್ರವರಿ 4 ರಂದು ರಥಸಪ್ತಮಿ ದಿನದಂದು ಬ್ರಿಗೇಡ್ ಉದ್ಘಾಟನೆ ಮಾಡಲಾಗುವುದು. ಕ್ರಾಂತಿಕಾರಿ ಬಸವಣ್ಣನವರ ಬಸವನ ಬಾಗೇವಾಡಿಯಲ್ಲಿ ಬ್ರಿಗೇಡ್ಗೆ ಚಾಲನೆ ನೀಡಲಾಗುವುದು. ಸೋಮೇಶ್ವರ ಸ್ವಾಮೀಜಿ ಮತ್ತಿತರರು ಇದರ ನೇತೃತ್ವ ವಹಿಸಲಿದ್ದಾರೆ ಎಂದಿದ್ದಾರೆ.
1008 ಸಾಧು ಸಂತರ ಪಾದ ಪೂಜೆ ಮಾಡಿ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಮಾಡಲಿದ್ದೇವೆ. ಬ್ರಿಗೇಡ್ಗೆ ಒಂದು ಸಮಿತಿಯಾಗಬೇಕಿದೆ, ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಎರಡು ಬಾರಿ ಮಠಕ್ಕೆ ಹಣ ಬಿಡುಗಡೆ ಮಾಡಿದ್ದೆವು. ಸದಾನಂದಗೌಡ ಹಾಗೂ ಬಸವರಾಜ್ ಬೊಮ್ಮಾಯಿ ಎರಡು ಬಾರಿ ಹಣ ಬಿಡುಗಡೆ ಮಾಡಿದ್ರು. ಕರ್ನಾಟಕ ರಾಜ್ಯದಲ್ಲಿ ಸಾವಿರಾರು ಸಣ್ಣ ಮಠಗಳಿವೆ, ಆ ಸಣ್ಣ ಸಣ್ಣ ಮಠಗಳಿಗೆ ಅದಾಯವೂ ಇಲ್ಲ. ಸಣ್ಣ ಸಣ್ಣ ಮಠಗಳಿಗೂ ನ್ಯಾಯ ಸಿಗಬೇಕು. ಕ್ರಾಂತಿವೀರ ಬ್ರಿಗೇಡ್ನಿಂದ ಸಣ್ಣ ಸಣ್ಣ ಮಠಗಳಿಗೆ ನ್ಯಾಯ ಕೊಡಿಸೋ ಕೆಲಸ ಮಾಡ್ತೇವೆ ಎಂದಿದ್ದಾರೆ.
ಈ ಹಿಂದೆ ನಾನು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡಿದಾಗ ಕೆಲವರು ಹೈಕಮಾಂಡ್ ನಾಯಕರಿಗೆ ದೂರು ಕೊಟ್ಟರು. ಕೆಲವರು ರಾಣಿ ಚೆನ್ನಮ್ಮ ಬ್ರಿಗೇಡ್ ಎಂದು ಹೇಳಿದ್ರು. ಯತ್ನಾಳ್ ಬರ್ತೀನಿ ಅಂದಿದ್ರು, ಬರಬಹುದು. ಯಾವಾಗ ಬರ್ತಾರೋ ಗೊತ್ತಿಲ್ಲ. ಮೀಸಲಾತಿ ವಿಚಾರವಾಗಿ ನಮ್ಮ ಬ್ರಿಗೇಡ್ ಮಾತಾಡಲ್ಲ. ಹಿಂದೂ ಧರ್ಮದ ರಕ್ಷಣೆಗೆ ಬ್ರಿಗೇಡ್ ಹೋರಾಟ ಮಾಡುತ್ತದೆ. ಪಂಚಮಸಾಲಿ 2ಎ ಮೀಸಲಾತಿ ಹೋರಾಟ ವಿಚಾರವಾಗಿ ಮಾತನಾಡಿ, ನಾನು ಮೀಸಲಾತಿ ಪರವೂ ಅಲ್ಲ, ವಿರೋಧವೂ ಅಲ್ಲ. ಇದು ಹಿಂದೂ ಧರ್ಮದ ರಕ್ಷಣೆ ಮಾಡುವ ಸಂಘಟನೆ ಎಂದಿದ್ದಾರೆ ಈಶ್ವರಪ್ಪ.
ಹಿಂದೂಗಳ ಹಿತ ರಕ್ಷಣೆಗಾಗಿ ಕ್ರಾಂತಿವೀರ ಬ್ರಿಗೇಡ್ ಸ್ಥಾಪನೆ ಮಾಡಲಾಗ್ತಿದೆ ಎಂದು ಕ್ರಾಂತಿವೀರ ಬ್ರಿಗೇಡ್ ಅಧ್ಯಕ್ಷ ಮಖಣಾಪುರ ಸೋಮೇಶ್ವರ ಸ್ವಾಮೀಜಿ ಹೇಳಿದ್ದಾರೆ. ವಕ್ಫ್ ವಿರುದ್ಧ ಮಠಾಧೀಶರ ನೇತೃತ್ವದಲ್ಲಿ ಹೋರಾಟ ಮಾಡ್ತೇವೆ. ಅದಕ್ಕೆ ಪೂರಕವಾಗಿ ಕ್ರಾಂತಿವೀರ ಬ್ರಿಗೇಡ್ ಸ್ಥಾಪನೆ ಮಾಡಲಾಗ್ತಿದೆ. ಸಾದು ಸಂತರ ನೇತೃತ್ವದಲ್ಲಿ ಮಾರ್ಗದರ್ಶಕ ಮಂಡಳಿ ರಚನೆ ಮಾಡಲಾಗುತ್ತದೆ. ಫೆಬ್ರವರಿ 4ಕ್ಕೆ ಬಸವನ ಬಾಗೇವಾಡಿಯಲ್ಲಿ ಬ್ರಿಗೇಡ್ ಪ್ರಾರಂಭ ಮಾಡಲಿದ್ದು, 1008 ಸ್ವಾಮೀಜಿಗಳ ಪಾದ ಪೂಜೆ ಮಾಡಿ ಆರಂಭ ಮಾಡುತ್ತೇವೆ. ಮಹಾತ್ಮರೆಲ್ಲ ಸೇರಿ ಒಂದು ಸಂಘಟನೆ ಮಾಡಿಕೊಂಡು ನಾಮಕರಣ ಮಾಡಿದ್ದೇವೆ. 100 ಮಠಾಧೀಶರು ಸೇರಿ ಕ್ರಾಂತಿವೀರ ಬ್ರಿಗೇಡ್ ಎಂಬ ಸಂಘಟನೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ.