ಬಿಡುವೆನೆಂದರೂ ಬಿಡದ ನೆನಪುಗಳನು ಹಿಡಿದಿಡುವುದಾದರೂ ಹೇಗೆ ಹೇಳ್ತೀಯಾ ಅಪ್ಪ ? ನೀನು ಹುಟ್ಟಿದ ದಿನ ಯಾವುದೆಂದು ತಿಳಿಯಲೇ ಇಲ್ಲ , ಕಾರಣ ಏನೆಂದು ಕೇಳುವೆಯಾ ನನ್ನ ಹುಟ್ಟಿನ ಅರ್ಥವನ್ನು ತಿಳಿದುಕೊಳ್ಳುವ ಮೊದಲೇ ನೀನು ಬಿಟ್ಟು ಹೊರಟುಹೋದೆ, ಅಲ್ಲವೇ ಅಪ್ಪಾ ? ಡಿಜಿಟಲ್ ಯುಗದಲ್ಲಿ ನಿಂತು ನೋಡಿದಾಗ 15-16 ರ ವಯೋಮಾನ ಇಡೀ ಜಗತ್ತಿನ ವಿದ್ಯಮಾನಗಳನ್ನು ತಿಳಿದುಕೊಂಡಿರುವ ಒಂದು ಓರಿಗೆಯಾಗಿ ಕಾಣುತ್ತೆ. ತಂತ್ರಜ್ಞಾನದ ಕ್ರಾಂತಿ ಇದನ್ನು ಆಗುಮಾಡಿದೆ. ವಿಜ್ಞಾನ ಇದನ್ನು ಸುಲಭ ಮಾಡಿದೆ. ಆದರೆ ಐವತ್ತು ವರ್ಷಗಳ ಹಿಂದೆ ಈ ವಯೋಮಾನ, ಆಟಪಾಠಗಳ ನಡುವೆ, ಜಗತ್ತಿನ ಅರಿವಿಗೆ ತೆರೆದುಕೊಳ್ಳದೆ , ಅಪ್ಪ ಅಮ್ಮನ ಪ್ರೀತಿಯ ತೋಳ್ತೆಕ್ಕೆಯೊಳಗೆ ಸೇರಿಕೊಂಡು ಬೆಳೆಯುವ ಒಂದು ಹಂತ. ನಾಲ್ಕು ಗೋಡೆಗಳ ನಡುವಿನ ಸಂಸಾರದಿಂದಾಚೆಗೆ ಏನನ್ನೂ ನೋಡಲು ಕಲಿಸದ ಒಂದು ವಯಸ್ಸು ಅದು. ಹಾಗೆ ನೋಡಿದರೂ ಅರ್ಥವಾಗುತ್ತಿರಲಿಲ್ಲ ಎನ್ನಿ, ಅಲ್ಲವೇ ಅಪ್ಪ ? ಆದರೆ ನನ್ನ ದುರದೃಷ್ಟ ನೋಡು, ನಿನಗೆ ಅದೇನೋ ಅವಸರವಾಗಿಬಿಟ್ಟಿತ್ತು.
ಜೀವನ ಸಾಕೆನಿಸಿತ್ತೇ ಅಥವಾ ಸುತ್ತಲಿನ ಪರಿಸ್ಥಿತಿಗಳು ಸಾಕೆನಿಸುವಂತೆ ಮಾಡಿದ್ದವೇ ? ಅಥವಾ ನೀನು ಅಪಾರವಾಗಿ ನಂಬಿದ ದೇವರು, ಅದರಲ್ಲೂ ಮಂತ್ರಾಲಯದ ಗುರುಗಳು, ನಿನ್ನ ಕೈಹಿಡಿಯಲಿಲ್ಲವೇ ? ಈಗ ಈ ಪ್ರಶ್ನೆಗಳಿಗೆ ಯಾರಿಂದ ಉತ್ತರ ಬೇಡಲಿ ಹೇಳುವೆಯಾ ಅಪ್ಪಾ ? ಯಾರೂ ಇಲ್ಲ. ಆಗ ನಿನ್ನನ್ನು ಅರ್ಥಮಾಡಿಕೊಂಡಿದ್ದ ಹಿರಿಯಕ್ಕ ಅಥವಾ ನಿನ್ನನ್ನು ಕಡೆಗಣಿಸಿ ತನ್ನ ಸ್ವಾರ್ಥ ಬದುಕಿನತ್ತ ಹೊರಳಿದ ದೊಡ್ಡಣ್ಣ ಇಬ್ಬರೂ ಈಗ ನಿನ್ನ ಬಳಿಯೇ ಸೇರಿಕೊಂಡಿದ್ದಾರೆ. ಇನ್ನೊಬ್ಬಳು ಅಕ್ಕ ಇದ್ದಾಳೆ ಆದರೆ ಲೌಕಿಕ ಜಗತ್ತಿನ ಪಾಲಿಗೆ ಅವಳ ಇರುವು ಅಪ್ರಸ್ತುತವೇನೋ ಎನ್ನುವಂತಾಗಿದೆ. ನಿನ್ನ ದೊಡ್ಡ ಮಗನಂತೆ ಅವಳ ಮಗನೂ. ಎಲ್ಲೋ ಉಸಿರಾಡುತ್ತಿದ್ದಾಳೆ ಎಂಬ ಆಶಾಭಾವನೆಯಲ್ಲಿದ್ದೇನೆ. ನೀನು ಮರೆಯಾಗಿರುವೆ ಅವಳು ಅಜ್ಞಾತದಲ್ಲಿದ್ದಾಳೆ ಅಷ್ಟೇ ವ್ಯತ್ಯಾಸ. ಇರಲಿ ನನ್ನ ಪ್ರಶ್ನೆ ಬೇರೆಯೇ ಇದೆ. ಇಂದಿಗೆ (ಡಿಸೆಂಬರ್ 17) 47 ವರ್ಷಗಳು ಸಂದಿವೆ ನೀನು ನಮ್ಮೆಲ್ಲರನ್ನೂ ಅಗಲಿ. ಏಕೆ ಹೀಗಾಯಿತು ಎಂದು ಯೋಚಿಸುವಷ್ಟು ಪ್ರೌಢಿಮೆ ಆಗ ಇರಲಿಲ್ಲ ಆದರೆ ಈಗ ಬಂದಿದೆ, ನಾನೂ 60 ದಾಟಿದ್ದೇನಲ್ಲವೇ ? ಆ ಕೊನೆಯ ಕ್ಷಣಗಳು ಇಂದಿಗೂ ಕಣ್ಣಿಗೆ ಕಟ್ಟಿದ ಹಾಗಿದೆ. ಬೆಳಿಗ್ಗೆ ಕೆಜಿಎಫ್ ಆಸ್ಪತ್ರೆಗೆ ಬಂದಾಗ ನೀನು ಹಾಸಿಗೆಯಲ್ಲೇ ಮಲಮೂತ್ರ ವಿಸರ್ಜನೆ ಮಾಡಿಕೊಂಡಿದ್ದುದು, ನಾನೇ ಎಲ್ಲವನ್ನೂ ಶುಚಿಗೊಳಿಸಿ ನಿನಗೆ ಬೇರೆ ಪಂಚೆ ಉಡಿಸಿ, ಬೇರೆ ಹಾಸಿಗೆ ಪಡೆದು ನಿನಗೆ ಊಟ ಮಾಡಿಸಿ (ಏನು ತಿನ್ನಿಸಿದೆ ಮರೆತುಹೋಗಿದೆ ಅಪ್ಪಾ) ವಾಪಸ್ ಬಂದಿದ್ದು, ಎಲ್ಲವೂ ಹಸಿರಾಗಿದೆ. ಅಷ್ಟೇ ಹಸಿರಾಗಿರುವುದು ಸಂಜೆ 6ರ ವೇಳೆಗೆ ಎದೆಗೆ ಅಪ್ಪಳಿಸಿದ ನೀನಿಲ್ಲವಾದ ಸುದ್ದಿ. ಸಂಜೆಯವರೆಗೂ ನಿನ್ನ ಜೊತೆ ಇರಬಹುದಿತ್ತಲ್ಲವೇ ? ಈ ಪ್ರಶ್ನೆ ಈಗ ಮೂಡುತ್ತಿದೆ ಪ್ರಯೋಜನವೇನು , ಅಲ್ಲವೇ ಅಪ್ಪ ? ಹುಟ್ಟು ಮತ್ತು ಸಾವು ಇವುಗಳ ಅರ್ಥವೇ ಗೊತ್ತಿಲ್ಲದಿದ್ದ ವಯಸ್ಸು ಅದು, ಕಾಲವೂ ಅಂತಹುದೇ. ಎಳೆಯ ವಯಸ್ಸಿನಲ್ಲಿ ನನಗಿಂತಲೂ ಚಿಕ್ಕವ ಮಗುವಾಗಿದ್ದಾಗಲೇ ತೀರಿ ಹೋದ ನೆನಪು ಮಸುಕು ಮಸುಕಾಗಿದೆ, ಭದ್ರಾವತಿಯಲ್ಲಿದ್ದಾಗ. ಆನಂತರ ದೊಡ್ಡಕ್ಕನ ಎರಡು ಎಳೆಯ ಹಸುಳೆಗಳು ಇಷ್ಟು ಬಿಟ್ಟರೆ ಕುಟುಂಬದಲ್ಲಿ ಸಾವು ಎನ್ನುವ ಭೀಕರ ವಾಸ್ತವವನ್ನು ನಾನು ಕಂಡಿರಲೇ ಇಲ್ಲ. ಹಾಗಾಗಿಯೇ ನೀನು ಇನ್ನಿಲ್ಲ ಎಂದು ತಿಳಿದಾಗ ದಿಗ್ಮೂಢನಾದೆ , ದಿಗ್ಭ್ರಾಂತನಾದೆ, ವಿಚಲಿತನಾದೆ ಆದರೆ ಏನೂ ಅರ್ಥವಾಗದವನಂತೆ ಮೌನಕ್ಕೆ ಜಾರಿಬಿಟ್ಟೆ. ಜೊತೆಯಲ್ಲಿದ್ದ ಗೆಳೆಯರೂ ಏನು ಹೇಳಿಯಾರು. ಮನೆಯವರೆಗೂ ಬಿಟ್ಟು ಹೋದರು. ಅಮ್ಮನಿಗೆ ಹೇಗೆ ಹೇಳುವುದು ಎಂದು ಯೋಚಿಸುತ್ತಿರುವಾಗಲೇ ಅವಳಿಗೆ ವಿಷಯ ತಿಳಿದಿತ್ತು. ನನ್ನಂತೆಯೇ ತಣ್ಣನೆಯ ಮೌನಕ್ಕೆ ಜಾರಿದ್ದರು.
ಈಗ ನೆನಪಾಗುವಂತೆ ಬಹುಶಃ ಒಂದು ತಾಸಿಗೂ ಹೆಚ್ಚು ಕಣ್ಣುಗಳು ಹನಿಗೂಡಲಿಲ್ಲ. ಹೃದಯ ಸ್ಫೋಟಿಸಲಿಲ್ಲ. ಮನಸ್ಸು ರೋದಿಸಲಿಲ್ಲ. ಈಗ ನೆನೆದರೆ ವಿಚಿತ್ರ ಎನಿಸುತ್ತೆ ಅಪ್ಪ. ಇತ್ತೀಚೆಗೆ ಆತ್ಮೀಯ ಸಂಗಾತಿ ಲಕ್ಷ್ಮೀನಾರಾಯಣ್ ಅಗಲಿದಾಗ ನನ್ನ ದುಃಖದ ಕಟ್ಟೆ ಒಡೆದ ಪರಿಯನ್ನು ನಾನೇ ಹಿಂತಿರುಗಿ ನೋಡಿದಾಗ, ಅಪ್ಪ ಹೋದಾಗ ಏಕೆ ಹೀಗಾಗಲಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. ಯಾರನ್ನು ಕೇಳಲಿ. ನಚಿಕೇತನಂತೆ ಸಂವಾದಿಸಲು ಯಾರಿಹರಿಲ್ಲಿ. ಕನಿಷ್ಠ ಪಕ್ಷ ನನಗೆ ಹುಟ್ಟು ಸಾವಿನ ಅರಿವು ಬರುವವರೆಗಾದರೂ ನೀನು ಇರಬಾರದಿತ್ತೇ ಅಪ್ಪಾ ? ಈ ಜಿಜ್ಞಾಸೆಗೆ ಉತ್ತರ ಎಲ್ಲಿ ಹುಡುಕಲಿ. ನಿನ್ನದೇನೂ ಇಚ್ಛಾ ಮರಣವಲ್ಲ. ಅಥವಾ ಪರರ ಇಚ್ಛೆಯೂ ನಿನ್ನ ಮರಣ ಆಗಿರಲಿಲ್ಲ. ಅಂತಹ ದೈವೀಕ ವ್ಯಕ್ತಿ ನೀನು. ಹ್ಞಾಂ , ದೈವೀಕ ಎನ್ನುವಾಗ ನೆನಪಾಗುತ್ತದೆ. ಅದೆಂತಹಾ ಅದಮ್ಯ ಭಕ್ತಿ ನಿನ್ನದು. ನೀನು ಹೋದ ದಿನದಿಂದ ಈವರೆಗೂ ಅವನತ್ತ ತಿರುಗಿ ನೋಡದ ನನಗೆ ನಿನ್ನಲ್ಲಿದ್ದುದು ಮೌಢ್ಯ ಎನಿಸುವುದಿಲ್ಲ. ಅದು ಕಾಲದ ಗುಣ ಅಲ್ಲವೇ ? ಆದರೂ ನೀನು ಬಹಳವೇ ನಂಬಿದೆ. ಎಲ್ಲರನ್ನೂ. ಹೆತ್ತ ಮಗನನ್ನು, ನಂಬಿದ ದೇವರನ್ನು, ಇಲ್ಲದ ಗುರುಗಳನ್ನು, ಅವೈಜ್ಞಾನಿಕ ಜೋತಿಷ್ಯವನ್ನು ಹೀಗೆ ಎಲ್ಲವನ್ನೂ ನಂಬಿದೆ. ಅಷ್ಟೇಕೆ ನಿನ್ನ ಬ್ಯಾಂಕ್ ಸಹೋದ್ಯೋಗಿಗಳನ್ನು, ಗ್ರಾಹಕರನ್ನು, ಅವರಲ್ಲಿದ್ದ ವಂಚಕರನ್ನು, ವಿಶ್ವಾಸಘಾತುಕರನ್ನು ಎಲ್ಲರನ್ನೂ ನಂಬಿದೆ. ಆದರೆ ಎಲ್ಲರೂ ನಿನಗೆ ದ್ರೋಹ ಬಗೆದವರೇ ಆದರು. ಕೈ ಹಿಡಿದು ನಡೆಸಬೇಕಾದ, ಕುಸಿದಾಗ ಹೆಗಲು ನೀಡಬೇಕಾದ ದೊಡ್ಡ ಮಗನಿಂದ ನೀನು ಅನುಭವಿಸಿದ ಆಘಾತ ಬಹುಶಃ ನಿನ್ನೊಳಗಿನ ಚೈತನ್ಯವನ್ನು ಉಡುಗಿಸಿರಬಹುದು. ನೀನು ಮಾಡುತ್ತಿದ್ದ ನಿತ್ಯ ಪೂಜೆ, ಆರಾಧನೆ, ವ್ರತ ಇತ್ಯಾದಿಗಳು ಎಷ್ಟು ವ್ಯರ್ಥ ಎಂದು ನನಗೆ ಅರಿವಾದದ್ದೇ ನಿನ್ನ ಬದುಕಿನಿಂದ , ಒಪ್ಪುವೆಯಾ ಅಪ್ಪಾ ? ಇಲ್ಲೊಂದು ವಿಡಂಬನೆಯೂ ಇದೆ. ನಮ್ಮೊಡನಿರುವ ಜನರನ್ನು ನಂಬಬೇಕೇ ಹೊರತು ಇಲ್ಲದ ದೇವರನ್ನಲ್ಲ ಎನ್ನುವ ಲೋಕಾರೂಢಿಯೂ ನಿನ್ನ ಬದುಕಿನಲ್ಲಿ ನಿಜವಾಗಲಿಲ್ಲ ಅಲ್ಲವೇ ಅಪ್ಪಾ ? ಈಗ ಪದೇ ಪದೇ ಕಾಡುವ ಮತ್ತೊಂದು ಸಂಗತಿ. ಎಂಟು ಮಕ್ಕಳು ನಿನಗೆ ಮ ಆದರೆ ನೀನು ಕಣ್ತುಂಬ ನೋಡಿದ್ದು ಒಬ್ಬಳ ಮದುವೆ ಮಾತ್ರ. ತಂದೆ ಎನಿಸಿಕೊಂಡ ವ್ಯಕ್ತಿಗೆ ಇರಬಹುದಾದ ಮಹದಾಕಾಂಕ್ಷೆ ಮಕ್ಕಳ ಮದುವೆ ನೋಡುವುದು. ನೀನು ಆ ಆಕಾಂಕ್ಷೆಯ 1/8ರಷ್ಟು ಸವಿಯನ್ನು ಮಾತ್ರ ಕಾಣಲು ಸಾಧ್ಯವಾಯಿತು. ಎಂತಹ ನತದೃಷ್ಟ ನನ್ನ ಅಪ್ಪ ಎನಿಸುತ್ತದೆ. ಆದರೆ ನನ್ನ ಬದುಕಿನ ಆ ಮಹತ್ವಾಕಾಂಕ್ಷೆಗೆ ಇದ್ದ ಒಂದೇ ಅವಕಾಶವೂ ನನಗೆ ಒದಗಿಬರಲಿಲ್ಲವಲ್ಲಾ ! ನಿನಗಿಂತಲೂ ನಾನು ಹೆಚ್ಚು ನತದೃಷ್ಟ ಎನ್ನಬಹುದೇ ? ಶೇಕಡಾ ನೂರರಷ್ಟು. ಇರಲಿ ಈಗ ಯಾರಲ್ಲಿ ದುಃಖ ತೋಡಿಕೊಳ್ಳಲಿ.
ಅಮ್ಮ ಇದ್ದಿದ್ದರೆ ಅವಳ ಸೆರಗನ್ನಾದರೂ ಒದ್ದೆ ಮಾಡಬಹುದಿತ್ತು. ಇಲ್ಲವಲ್ಲಾ !!! ಇರಲಿ ಬಿಡು, ನಿನ್ನ ನೆನಪು ಕಾಡುವಾಗ ಕೆಲವೊಮ್ಮೆ ವರ್ತಮಾನವೂ ಹೀಗೆ ಕಾಡಿಬಿಡುತ್ತೆ. ಆದರೂ ನಿನ್ನ ಬದುಕು ಏಕೆ ಹಾಗೆ ಅಪೂರ್ಣವಾಯಿತು ಎನ್ನುವ ಪ್ರಶ್ನೆಗೆ ಇದಾವುದೂ ಉತ್ತರವಲ್ಲ, ಅಲ್ಲವೇ ಅಪ್ಪಾ ? ನಿನ್ನಂತಹ ಯಾವುದೇ ವ್ಯಕ್ತಿಯನ್ನು ನಮ್ಮ ಸಮಾಜದಲ್ಲಿ ಇಂದಿಗೂ ಹೋಲಿಸುವುದು ಗಾಂಧಿಗೆ. ಸತ್ಯಸಂಧತೆ, ಪ್ರಾಮಾಣಿಕತೆ, ಶ್ರದ್ಧಾಭಕ್ತಿ, ಕರ್ತವ್ಯ ನಿಷ್ಠೆ, ಸಹಾನುಭೂತಿ, ಪರೋಪಕಾರದ ಬುದ್ಧಿ, ಔದಾರ್ಯ ಹೀಗೆ ಈ ಸದ್ಗುಣಗಳೇ ಒಳ್ಳೆಯ ವ್ಯಕ್ತಿಯ ಮಾನದಂಡಗಳು ಎನ್ನಲಾಗುತ್ತದೆ. ನಿನ್ನೊಳಗೆ ಇವೆಲ್ಲವೂ ಇತ್ತಲ್ಲವೇ ಅಪ್ಪಾ ? ಆದರೂ ನಿನಗೆ ಕೆಲವರು ದ್ರೋಹ ಬಗೆದಿದ್ದೇಕೆ ? ನೀನು ಯೋಚಿಸಿದ್ದೆಯೋ ಇಲ್ಲವೋ, ಈಗ 47 ವರ್ಷಗಳ ನಂತರ ನಾನು ಇದನ್ನು ಯೋಚಿಸುತ್ತೇನೆ. ಬಹುಶಃ ನೀನು ಎಲ್ಲರನ್ನೂ ನಿನ್ನಂತೆಯೇ ಎಂದು ಭಾವಿಸಿದ್ದೆ ಎನಿಸುತ್ತದೆ. ಬ್ಯಾಂಕಿನಲ್ಲಿದ್ದ ನಿನಗೆ ಜೀವನದ ಲೆಕ್ಕಾಚಾರ ಅರ್ಥವಾಗಲಿಲ್ಲವೇನೋ. ಇದ್ದಿದ್ದರೆ ಆ ಒಬ್ಬ ಗ್ರಾಹಕ ಮಿತ್ರ ನಿನಗೆ ಕಂಟಕವಾಗುತ್ತಿರಲಿಲ್ಲ.
ನಿನ್ನ ಸ್ವಜಾತಿ ಸಹೋದ್ಯೋಗಿಗಳು ವಿಶ್ವಾಸಘಾತುಕರಾಗುತ್ತಿರಲಿಲ್ಲ. ನೀ ಹೆತ್ತ ಮಗನೇ ನಿನಗೆ ಹಿತಶತ್ರು ಆಗುತ್ತಿರಲಿಲ್ಲ. ಬಹುಶಃ ನಾವು ಬದುಕಿನ ಈ ಅಮೂಲ್ಯ ಪಾಠ ಕಲಿಯಲೆಂದೇ ನೀನು ನಿರ್ಗಮಿಸಿಬಿಟ್ಟೆಯಾ ಅಪ್ಪಾ ? ನಾನು ಕಲಿತಿದ್ದೇನೆ ಬಿಡು. ಆದರೂ ನಿನ್ನ ಅಕಾಲಿಕ ಸಾವಿನಲ್ಲಿ ನಾನು ಕಂಡ ಮತ್ತೊಂದು ಲೋಕದರ್ಶನವನ್ನು ಹೇಗೆ ಬಣ್ಣಿಸಲಿ ಅಪ್ಪಾ ? ನಿನ್ನ ಚಿತೆಗೆ ಅಗ್ನಿಸ್ಪರ್ಶ ಮಾಡಿದವನೇನೋ ನಾನೇ ಆದರೆ ಆ ಸಮಯದಲ್ಲಿ ನನ್ನನ್ನು ಆವರಿಸಿದ್ದ ನಿರ್ಲಿಪ್ತತೆ ಇರುವ ಕಂಬನಿಯನ್ನೆಲ್ಲಾ ಹಿಂಗಿಸಿಬಿಟ್ಟಿತ್ತೇನೋ ಎನಿಸುತ್ತದೆ. ಅದೆಲ್ಲಾ ಹೊರಬರಲು ಕೆಲಕಾಲ ಕಳೆಯಿತು. ಹ್ಞಾಂ ! ದರ್ಶನದ ಬಗ್ಗೆ ಹೇಳಿದೆ ಅಲ್ಲವೇ ? ನೀನು ನಂಬಿದವರಿಂದ ಎಷ್ಟೇ ವಂಚಿಸಲ್ಪಟ್ಟರೂ ನಿನ್ನ ಸದ್ಗುಣಗಳು ಸಂಪಾದಿಸಿದ್ದ ಆ ಸಮಾಜ ಮತ್ತು ಅದರೊಳಗಿನ ನಿನ್ನ ಆಪ್ತೇಷ್ಟರು ನನ್ನ ಬದುಕಿನ ಪುಟಗಳಲ್ಲಿ ಸದಾ ಹಸಿರಾಗಿಯೇ ಉಳಿಯುತ್ತಾರೆ ಅಪ್ಪಾ . ನಿನ್ನ ಅಂತಿಮ ಪಯಣದ ಹಾದಿಗೆ ಹೆಗಲು ನೀಡಿದವರು ಆ ಮಹನೀಯರು. ಯಾರ ಹೆಸರು ಹೇಳಲಿ ಅಪ್ಪಾ ? ಅವರಲ್ಲೂ ಅನೇಕರು, ಬಹುತೇಕರು ಈಗಿಲ್ಲ. ಆದರೆ ಅವರ ಸಹೃದಯತೆ ಮತ್ತು ಸ್ನೇಹ ಸದಾಕಾಲಕ್ಕೂ ಸ್ಮರಣೀಯವಲ್ಲವೇ ಅಪ್ಪಾ ! ಅದೇನೋ ಋಣ ಅಂತಾರಲ್ಲಾ , ನನಗೆ ಅದರ ಅರ್ಥವೇ ತಿಳಿಯುತ್ತಿಲ್ಲ. ಆ ಹಿರಿಯರ ಋಣ ಹೇಗೆ ತೀರಿಸಲಿ ? ನಿನ್ನ ಋಣ ತೀರಿಸಲು ಹೇರಲಾಗುವ , ಪಿಂಡ, ತರ್ಪಣ, ಶ್ರಾದ್ಧ ಇತ್ಯಾದಿ ಸಂಪ್ರದಾಯ ಮತ್ತು ಆಚರಣೆಗಳನ್ನು ನಾನು ಅನುಸರಿಸಿಯೇ ಇಲ್ಲ. ನನ್ನ ಎದೆಯೊಳಗೇ ಸದಾ ಉಸಿರಾಡುತ್ತಿರುವ ನಿನ್ನನ್ನು ಕಾಣಲು ತಿಥಿ ವಾರಗಳೇಕೆ ಬೇಕು ಅಲ್ಲವೇ ಅಪ್ಪಾ ? ನಿನ್ನಂತೆಯೇ ನಿನಗೆ ಹೆಗಲು ನೀಡಿದವರೂ ನನ್ನ ಮನದಾಳದಲ್ಲಿ ಹಸಿರಾಗಿ ಉಳಿದುಬಿಟ್ಟಿದ್ದಾರೆ. “ ಎಂದರೋ ಮಹಾನುಭಾವುಲು ಅಂದರಿಕೆ ನಾ ವಂದನಾಲು” ಎಂದು ತ್ಯಾಗರಾಜರು ಹೇಳಿದಂತೆ ಆ ಮಹಾನುಭಾವರನ್ನೂ ಇಂದೇ ನೆನೆದು ಮನದೊಳಗೇ ನಮಿಸುತ್ತೇನೆ. ಸಾಕಲ್ಲವೇ ಅಪ್ಪಾ ? ಈಗ ಅನ್ನಿಸುತ್ತದೆ ಅಪ್ಪಾ, ನನ್ನ ಬದುಕಿಗೆ ನೀನು ಇರಬೇಕಿತ್ತು. ನೀನು ಹೋದನಂತರ ಅನುಭವಿಸಿದ ಹಸಿವೆ, ಬಡತನ, ಕಷ್ಟ ಕಾರ್ಪಣ್ಯಗಳು, ಮತ್ತದೇ ವಿಶ್ವಾಸದ್ರೋಹದ ಸಂಬಂಧಗಳು ಎಲ್ಲವೂ ನೆನಪಾದಾಗ “ ಅಪ್ಪ ಇದ್ದಿದ್ದರೆ !!!!! ” ಎನಿಸುವುದು ಸಹಜ ಅಲ್ಲವೇ ಅಪ್ಪಾ ? ಆದರೆ ನಿನಗೆ ಅದೇನೋ ಅವಸರವಾಗಿತ್ತು.
ನಿತ್ಯ ಬ್ಯಾಂಕಿನ ಕೆಲಸಕ್ಕೆ ಹೋಗುವಂತೆಯೇ ಬಿರಬಿರನೆ ನಡೆದು ಹೊರಟುಬಿಟ್ಟೆ. ನನಗೆ ಚೆನ್ನಾಗಿ ನೆನಪಿದೆ, ನೀನು ಬ್ಯಾಂಕಿಗೆ ಹೊರಟು ಹೊಸ್ತಿಲು ದಾಟಿದರೆ ಕಚೇರಿ ತಲುಪುವವರೆಗೂ ಹಿಂತಿರುಗಿ ನೋಡುತ್ತಿರಲಿಲ್ಲ. ಹಿಂದೆ ಹಿಂದೆ ನಾವೇ ಕೂಗುತ್ತಾ ಓಡಿಬರುತ್ತಿದ್ದೆವು. ಈಗಲೂ ಹಾಗೇ ಆಗಿದೆ. ನೀನು ಹಿಂತಿರುಗಿ ನೋಡಲಾಗದ ಜಾಗಕ್ಕೆ ಹೊರಟುಹೋಗಿದ್ದೀಯ. “ ಅಣ್ಣಾ ಅಣ್ಣಾ,,,,,,” ಎಂದು ಕೂಗುತ್ತಾ ಈಗಲೂ ಓಡಿಬರೋಣ ಎಂದರೆ ಆ ಕೂಗು ಯಾರಿಗೆ ಮುಟ್ಟುತ್ತೆ ? ಬದುಕು ಎಂತಹ ವಿಸ್ಮಯ ಅಲ್ಲವೇ ಅಪ್ಪಾ ? ಆದರೂ ಈ ವಿಸ್ಮಯದ ನಡುವೆಯೇ ನನಗೇ ತಿಳಿಯದ ಹಾಗೆ ಎದೆಯಾಳದ ಕೂಗು ಬಡಿದೆಬ್ಬಿಸುತ್ತದೆ. ದಿನಾಲೂ ಬೆಳಿಗ್ಗೆ ಎದ್ದ ಕೂಡಲೇ ನಾನು ನೋಡುವ ನಿನ್ನ 1966ರ ಭಾವಚಿತ್ರ ನೀನು ನನ್ನೊಡೆಯೇ ಇದ್ದೀಯ ಎಂದು ಕೂಗಿ ಹೇಳುತ್ತದೆ. ಆ ಭಾವಚಿತ್ರದಲ್ಲಿ ಅಡಗಿರುವ ನೆನಪುಗಳು ಅಪಾರ. ನಿನ್ನೊಡನೆ ಕಳೆದ ಸಮಯದ ಮೂರರಷ್ಟು ಕಾಲ ನೀನಿಲ್ಲದೆ ಕಳೆದಿದ್ದೇನಲ್ಲಾ !!! ಎಂತಹ ವಿಡಂಬನೆ ಈ ಜೀವನ. ನೆನಪುಗಳ ಭಾರಕ್ಕೆ ಕೆಲವೊಮ್ಮೆ ಕುಗ್ಗಿ ಹೋಗುತ್ತೇನೆ. ಆದರೂ ಸಮಾಜದಲ್ಲಿ ಇರಬೇಕಲ್ಲವೇ ನನ್ನ ಹೆಸರಿನೊಡನೆ ಬೆಸೆದಿರುವ ನಿನ್ನ ಹೆಸರು ನಿನ್ನನ್ನೂ ಜೀವಂತವಾಗಿರಿಸುತ್ತದೆ ಎನ್ನುವ ನಂಬಿಕೆ. ಈ ದಿನದಂದು ನನ್ನ ಕಣ್ಣಂಚಿನ ಹನಿಯನ್ನು ಒರೆಸುವುದೂ ಇದೇ ನಂಬಿಕೆಯೇ ಅಪ್ಪಾ. ಬೇರಾವ ದಾರಿ ಇದೆ. ನನ್ನ ಬರವಣಿಗೆಯ ಪ್ರತಿ ಅಕ್ಷರದಲ್ಲೂ ನಿನ್ನನ್ನು ಕಾಣುತ್ತಲೇ ಬರೆಯುತ್ತೇನೆ, ಬರೆಯುತ್ತಲೇ ಇರುತ್ತೇನೆ, ನಿನ್ನ ಅಲೌಕಿಕ ಹಾರೈಕೆಯ ಅಪೇಕ್ಷೆಯಲ್ಲಿ. ಒಂದೆರಡು ಹನಿ ತೊಟ್ಟಿಕ್ಕುತ್ತಿದೆ. ಅದು ನೆನಪಿನ ಬುತ್ತಿಯೊಳಗಿನ ಅಮೂಲ್ಯ ವಸ್ತು ಎಂದು ಭಾವಿಸುತ್ತಲೇ ಅಮ್ಮನ ಕಡೆ ನೋಡುತ್ತೇನೆ. ಇಂದಿಗೆ ಸಾಕು ಬಿಡು ಅಪ್ಪಾ ಇನ್ನೂ ಹೇಳುವುದಿದೆ, ಮುಂದಿನ ದಿನಗಳಲ್ಲಿ.
-೦-೦-೦-೦-