ಪುಷ್ಪಾ 2 ಸಿನಿಮಾ ಪ್ರೀಮಿಯರ್ ಶೋ ವೇಳೆ ಮಹಿಳಾ ಅಭಿಮಾನಿ ಕಾಲ್ತುಳಿತಕ್ಕೆ ಬಲಿಯಾದ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಒಂದು ದಿನ ಜೈಲುವಾಸ ಅನುಭವಿಸಿದ್ದಾರೆ. ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಶುಕ್ರವಾರ ಬೇಲ್ ಸಿಕ್ಕರೂ ಒಂದು ರಾತ್ರಿ ಜೈಲು ವಾಸ ಅನುಭವಿಸಿದ್ರು. ಶನಿವಾರ ಬೆಳಗ್ಗೆ ಜೈಲಿನಿಂದ ರಿಲೀಸ್ ಆದ ಬಳಿಕ ಅಲ್ಲು ಅರ್ಜುನ್ ಮನೆಗೆ ತೆಲುಗು ಚಿತ್ರ ನಟರ ದಂಡು ಹರಿದು ಬಂದಿತ್ತು. ಹೈದ್ರಾಬಾದ್‌ನ ಜ್ಯುಬಿಲಿ ಹಿಲ್ಸ್ ನಿವಾಸಕ್ಕೆ ಸಿನಿಮಾ ಗಣ್ಯರು ಆಗಮಿಸಿ ಧೈರ್ಯ ಹೇಳಿದ್ರು. ಅಲ್ಲು ಅರ್ಜುನ್‌ಗೆ ಇಡೀ ಟಾಲಿವುಡ್ ಬೆಂಬಲ ಸೂಚಿಸಿತು.
ಜೈಲಿನಿಂದ ರಿಲೀಸ್ ಆದ ಬಳಿಕ ನಟ ಅಲ್ಲು ಅರ್ಜುನ್ ಪ್ರತಿಕ್ರಿಯೆ ನೀಡಿ, ಉದ್ದೇಶ ಪೂರ್ವಕವಾಗಿ ಆ ಘಟನೆ ನಡೆದಿಲ್ಲ. ನಾನು ಕಳೆದ 20 ವರ್ಷಗಳಿಂದಲೂ ಆ ಥಿಯೇಟರ್ಗೆ ಹೋಗ್ತಿದ್ದೇನೆ. ಈವರೆಗೆ 30 ಬಾರಿ ಆ ಥಿಯೇಟರ್ಗೆ ಭೇಟಿ ನೀಡಿದ್ದೇನೆ. ಆದ್ರೆ ಈ ರೀತಿ ಯಾವತ್ತೂ ನಡೆದಿಲ್ಲ. ಇದೊಂದು ಅಚಾನಕ್ ಆಗಿ ನಡೆದಿರುವ ಘಟನೆ. ರೇವತಿ ಕುಟುಂಬಸ್ಥರಿಗೆ ನನ್ನ ಕೈಯಲ್ಲಿ ಆಗುವಷ್ಟು ಸಹಾಯವನ್ನು ಮಾಡ್ತೇನೆ. ಈ ಘಟನೆಗೂ ನನಗೂ ನೇರ ಸಂಬಂಧ ಇಲ್ಲ. ನಾನು ಕುಟುಂಬದ ಜೊತೆ ಥಿಯೇಟರ್ ಒಳಗೆ ಸಿನಿಮಾ ನೋಡುವಾಗ ಈ ದುರ್ಘಟನೆ ನಡೆದಿದ್ದು, ನನಗೂ ಬೇಸರವಾಗಿದೆ. ಆ ಕುಟುಂಬದ ಜೊತೆ ನಾನಿರ್ತೇನೆ ಎಂದಿದ್ದಾರೆ.
ಅಲ್ಲು ಅರ್ಜುನ್ ಅರೆಸ್ಟ್ ಆಗಿ ರಿಲೀಸ್ ಆದ ಪ್ರಕರಣದಲ್ಲಿ ಸರ್ಕಾರದ ವಿರುದ್ದ ಟೀಕಾಸ್ತ್ರಗಳು ಬರುತ್ತಿವೆ. ಈ ನಡುವೆ ಚಂಚಲಗೂಡ ಜೈಲಿನಲ್ಲಿ ರಾತ್ರಿ ಕಳೆದಿದ್ದ ನಟ ಅಲ್ಲು ಅರ್ಜುನ್‌ಗೆ ವಿಚಾರಣಾಧೀನ ಕೈದಿನ ನಂ 7697 ನೀಡಲಾಗಿತ್ತು. ಅಲ್ಲು ಅರ್ಜುನ್ ಬಿಡುಗಡೆಗೆ ವಿಳಂಬ ಮಾಡಿದ್ದಕ್ಕೆ ವಕೀಲ ಅಶೋಕ್ ರೆಡ್ಡಿ ಗರಂ ಆಗಿದ್ದಾರೆ. ಶುಕ್ರವಾರವೇ ಕೋರ್ಟ್ ಜಾಮೀನು ನೀಡಿ ಆದೇಶ ಕೊಟ್ಟರೂ ಬಿಡುಗಡೆ ಮಾಡಿಲ್ಲ. ಉದ್ದೇಶ ಪೂರ್ವಕವಾಗೇ 1 ದಿನ ಜೈಲಿನಲ್ಲಿ ಇಟ್ಟಿದ್ದರು ಎಂದು ಕಿಡಿಕಾರಿದ್ದಾರೆ. ಈ ಬಗ್ಗೆ ಕೋರ್ಟ್‌ನಲ್ಲಿ ಪ್ರಶ್ನೆ ಮಾಡ್ತೀವಿ ಅಂತಾನೂ ವಕೀಲರು ತಿಳಿಸಿದ್ದಾರೆ.
ಒಟ್ಟಾರೆ, ಒಂದು ಘಟನೆ ನಡೆದಾಗ ಇಡೀ ಚಿತ್ರರಂಗ ಒಗ್ಗಟ್ಟು ಪ್ರದರ್ಶನ ಮಾಡಿದೆ. ನಟನದ್ದು ತಪ್ಪು ಇದ್ಯೋ ಇಲ್ವೋ ಅನ್ನೋ ವಿಚಾರ ಪೊಲೀಸ್ ಠಾಣೆಯಲ್ಲಿ ನಿರ್ಧಾರ ಆಗುವುದಿಲ್ಲ. ಅದು ಏನಿದ್ದರೂ ಕೋರ್ಟ್‌ಗೆ ಇರುವ ಅಧಿಕಾರ. ಈ ಬಗ್ಗೆ ಕೋರ್ಟ್ ಏನೇ ನಿರ್ಧಾರ ಮಾಡಲಿ, ಆದರೆ ಚಿತ್ರರಂಗ ಒಂದು ಎನ್ನುವ ಸಂದೇಶ ರವಾನೆ ಮಾಡಿದ್ದಾರೆ.ಇಡೀ ಚಿತ್ರರಂಗ ಅಲ್ಲು ಅರ್ಜುನ್‌ಗೆ ಸಪೋರ್ಟ್ ಮಾಡಿದೆ ಅನ್ನೋದು ಮಾತ್ರ ಉಳಿತ ಚಿತ್ರರಂಗಕ್ಕೆ ಮಾದರಿ.