ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗು ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಮಾತಿನ ಸಮರ ತಾರಕಕ್ಕೇರಿದೆ.. ಉಭಯ ನಾಯಕರ ನಡುವಿನ ಮಾತಿನ ಸಮರ ಬಿಜೆಪಿ ಹೈಕಮಾಂಡ್ ಪಾಲಿಗೆ ಬಿಸಿತುಪ್ಪ ಆಗಿದ್ದು, ರಾಜ್ಯ ಬಿಜೆಪಿಯಲ್ಲಿನ ಬಣ ಬಡಿದಾಟಕ್ಕೆ ಬ್ರೇಕ್ ಹಾಕಲು ಸರ್ಕಸ್ ಮಾಡುತ್ತಿದೆ. ಸಂಧಾನ ಮಾಡಲು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರನ್ನು ಬೆಂಗಳೂರಿಗೆ ಕಳುಹಿಸಿದೆ. ಇನ್ನೊಂದು ಕಡೆ ದೆಹಲಿಯಲ್ಲಿ ಯತ್ನಾಳ್ ಟೀಂ ಬೀಡುಬಿಟ್ಟಿದೆ.. ಆದರೆ ಯಾರ ಮಾತಿಗೂ ಬ್ರೇಕ್ ಬೀಳುವ ಲಕ್ಷಣ ಕಾಣಿಸ್ತಿಲ್ಲ. ಬೆಂಗಳೂರಿನಲ್ಲಿ ತರುಣ್ ಚುಗ್ ಎದುರಲ್ಲೇ ಯತ್ನಾಳ್ ಉಚ್ಛಾಟನೆಗೆ ಆಗ್ರಹಿಸಿದ್ರೆ, ಅತ್ತ ದಿಲ್ಲಿಯಲ್ಲಿರುವ ಯತ್ನಾಳ್ ಟೀಂ ವಿಜಯೇಂದ್ರ ಉಚ್ಛಾಟನೆಗೆ ಆಗ್ರಹ ಮಾಡಿದೆ.
ರಾಜ್ಯ ಬಿಜೆಪಿಯ ಪರಿಸ್ಥಿತಿ ಒಡೆದ ಮಡಿಕೆ ಎನ್ನುವಂತಾಗಿದೆ. ಬೆಂಗಳೂರಿನಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಬಿಜೆಪಿಯ ಸಂಘಟನಾ ಸಭೆ ಮಾಡಿದ್ದಾರೆ. ಈ ವೇಳೆ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಬೇಕು ಎಂದು ಹಾಲಿ, ಮಾಜಿ ಶಾಸಕರು ಒತ್ತಾಯ ಮಾಡಿದ್ದಾರೆ. ಅಷ್ಟೇ ಅಲ್ಲದೆ ಬಿಜೆಪಿಯ ಎಲ್ಲಾ ಜಿಲ್ಲಾಧ್ಯಕ್ಷರು ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಬೇಕು ಎಂದು ತರುಣ್ ಚುಗ್‌ಗೆ ಮನವಿ ಪತ್ರ ನೀಡಿದ್ದಾರೆ. ನಿನ್ನು ಯತ್ನಾಳ್ ಟೀಂ ಇಡೀ ಪಕ್ಷ ಸಂಘಟನೆಗೆ ಅಡ್ಡಿ ಮಾಡುತ್ತಿದೆ ಎಂದು ದೆಹಲಿ ನಾಯಕರಿಗೆ ಚುಗ್ ಮೂಲಕ ಪತ್ರ ನೀಡಿದ್ದಾರೆ. ಅತ್ತ ದೆಹಲಿಯಲ್ಲಿರುವ ಯತ್ನಾಳ್ ಟೀಂಕೂಡ ವಿಜಯೇಂದ್ರ ವಿರುದ್ಧ ಭರ್ಜರಿ ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿದೆ.
ವಿಜಯೇಂದ್ರ ಕಾಂಗ್ರೆಸ್ ಸರ್ಕಾರ ಹಾಗು ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ವಿಜಯೇಂದ್ರ ಸರ್ಕಾರದ ವಿರುದ್ಧ ಆಕ್ರಮಣಕಾರಿ ಹೋರಾಟ ಮಾಡ್ತಿಲ್ಲ. ಉಪ ಚುನಾವಣೆ ಸೋಲಿಗೆ ವಿಜಯೇಂದ್ರ ಹಾಗೂ ಯಡಿಯೂರಪ್ಪನವೇ ಕಾರಣ ಎಂದು ಆರೋಪಿಸಿದೆ. ಇನ್ನು ವಿಜಯೇಂದ್ರ ಏಕಪಕ್ಷೀಯ ನಿರ್ಧಾರ ಮಾಡುತ್ತಿದ್ದಾರೆ. ಹಿರಿಯರನ್ನ ಪಕ್ಷದಲ್ಲಿ ಕಡೆಗಣನೆ ಮಾಡಲಾಗುತ್ತಿದೆ. ಯಡಿಯೂರಪ್ಪ, ವಿಜಯೇಂದ್ರ ಆಪ್ತರಿಗೆ ಮಾತ್ರ ಪಕ್ಷದಲ್ಲಿ ಆದ್ಯತೆ ನೀಡಲಾಗುತ್ತಿದೆ. ವಿಜಯೇಂದ್ರ ಅಧಿಕಾರಕ್ಕೆ ಬ್ರೇಕ್ ಹಾಕಿ, ರಾಜ್ಯಾಧ್ಯಕ್ಷರನ್ನು ಕೂಡಲೇ ಬದಲಾವಣೆ ಮಾಡಿ ಅಂತ ಯತ್ನಾಳ್ ಟೀಂ ಮನವಿ ಮಾಡಲು ಸಿದ್ಧವಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರ ಕಾರ್ಯವೈಖರಿ ವಿರುದ್ಧ ಪತ್ರ ರವಾನೆ ಆಗಿದ್ದು, ವಿಜಯೇಂದ್ರ ವಿರುದ್ಧ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಪ್ರಧಾನಿ ನರೇಂದ್ರ ಮೋದಿ, ಬಿ.ಎಲ್ ಸಂತೋಷ್ಗೆ ಪತ್ರ ಬರೆಯಲಾಗಿದೆ.ಬಿಜೆಪಿ ಸದಸ್ಯರ ಗುಂಪು ಎಂದು ಹೇಳಿಕೊಂಡಿರುವ ಪತ್ರ ವೈರಲ್ ಆಗಿದೆ.ಎರಡೂ ಬಣವನ್ನು ಒಂದು ಮಾಡುವ ಹೈಕಮಾಂಡ್ ಯೋಜನೆ ಯಶಸ್ಸು ಕಾನುವುದು ಅಷ್ಟು ಸುಲಭದ ಮಾತಲ್ಲ. ಇನ್ನು ಯಾವುದೇ ಬಣದ ಮೇಲೆ ಕ್ರಮ ತೆಗೆದುಕೊಂಡರೂ ಪಕ್ಷಕ್ಕೆ ಸಮಸ್ಯೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.ಯಾವ ಟೀಂ ವಿರುದ್ಧ ಕ್ರಮ ಎಷ್ಟರ ಪ್ರಮಾಣದಲ್ಲಿ ಪರಿಣಾಮ ಬೀರಲಿದೆ ಅನ್ನೋದ್ರ ಮೇಲೆ ಬಿಜೆಪಿ ಹೈಕಮಾಂಡ್ ಕ್ರಮಕ್ಕೆ ಮುಂದಾಗಬೇಕಿದೆ.