ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಸಿಡಿದೆದ್ದಿದ್ದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಕೇಂದ್ರ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದೆ ಎನ್ನಲಾಗ್ತಿದೆ. ತಮ್ಮ ನಡೆ ಹಾಗೂ ಪಕ್ಷದ ವಿರುದ್ಧ ನಿಲುವಿನ ಬಗ್ಗೆ ಕಾರಣ ಕೇಳಿ ನೋಟಿಸ್ ಕೊಟ್ಟಿದ್ದಾರೆ ಎನ್ನಲಾಗಿದೆ. ವಿಜಯೇಂದ್ರ ಹೋಗಿ ದೂರು ಕೊಟ್ಟು ಬಂದ ಬೆನ್ನಲ್ಲೆ ಯತ್ನಾಳ್‌ಗೆ ನೋಟಿಸ್ ಕೊಡಲಾಗಿದೆ ಎನ್ನಲಾಗಿದ್ದು, ನೋಟಿಸ್ ನಂತರ ಯತ್ನಾಳ್ ವಿರುದ್ಧ ಕ್ರಮ ಆಗುತ್ತಾ..? ಅನ್ನೋ ನಿರೀಕ್ಷೆ ಹುಟ್ಟುಹಾಕಿದೆ. ಇದ್ರ ಬೆನ್ನಲ್ಲೇ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಬಸನಗೌಡ ಪಾಟೀಲ್ ಯತ್ನಾಳ್.
ದೆಹಲಿಯ ಬಿಜೆಪಿ ನಾಯಕರು ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ ಯತ್ನಾಳ್‌ಗೆ ದೆಹಲಿಗೆ ಬರುವಂತೆ ಬುಲಾವ್ ಬಂದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಮೂಲಕ ದೆಹಲಿಗೆ ತೆರಳಿದ್ದಾರೆ ಯತ್ನಾಳ್. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಒಳಗೆ ಹೋಗಿದ್ದಾರೆ ಯತ್ನಾಳ್. ಯತ್ನಾಳ್ ಜೊತೆಗೆ ಒಂದೇ ವಿಮಾನದಲ್ಲಿ ಸಂಸದರಾದ ಜಗದೀಶ್ ಶೆಟ್ಟರ್ ಹಾಗು ಗೋವಿಂದ ಕಾರಜೋಳ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಪ್ರಯಾಣ ಮಾಡಿದ್ದಾರೆ. ಬಿಎಸ್ ಯಡಿಯೂರಪ್ಪ ಹಾಗು ವಿಜಯೇಂದ್ರ ವಿರುದ್ಧ ಬಂಡಾಯ ಎದ್ದ ಹಿನ್ನೆಲೆಯಲ್ಲಿ ದೆಹಲಿಗೆ ಬರುವಂತೆ ಬಿಜೆಪಿ ಹಿರಿಯ ನಾಯಕರು ಆಹ್ವಾನ ಕೊಟ್ಟ ಬೆನ್ನಲ್ಲೇ ದೆಹಲಿಗೆ ತೆರಳಿದ್ದಾರೆ. ಆದರೆ ಮೂವರು ಸಂಸದರು ಸಂಸತ್ ಅಧಿವೇಶನಕ್ಕೆ ತೆರಳುತ್ತಿದ್ದೇವೆ ಎಂದಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಬೆಳಗಾವಿಯ ಹೋಟೆಲ್‌ನಲ್ಲಿ ರೆಬೆಲ್ಸ್ ಮೀಟಿಂಗ್ ಮಾಡಿದ್ದಾರೆ.. ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಯತ್ನಾಳ್ ಟೀಂ ಸಭೆ ನಡೆಸಿ ಸಮಾಲೋಚನೆ ಮಾಡಿತು. ಯತ್ನಾಳ್ & ಟೀಂ ದೆಹಲಿಗೆ ಹೋಗಲು ನಿರ್ಧಾರ ಮಾಡಿದ್ದರು. ಹೈಕಮಾಂಡ್ ನಾಯಕರ ಜೊತೆಗೆ ಸಮಾಲೋಚನೆ ನಡೆಸಲು ಯೋಜನೆ ರೂಪಿಸಿದ್ದರು. ಆದರೆ ಹೈಕಮಾಂಡ್ ನಾಯಕರು ಏಕಾಂಗಿಯಾಗಿ ಬರುವಂತೆ ತಿಳಿಸಿದ್ರಿಂದ ಬಸನಗೌಡ ಪಾಟೀಲ್ ಯತ್ನಾಳ್ ಏಕಾಂಗಿಯಾಗಿ ದೆಹಲಿಗೆ ತೆರಳಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಟಾಂಗ್ ಕೊಟ್ಟಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾವು B.S ಯಡಿಯೂರಪ್ಪ, ಅವರ ಕುಟುಂಬದ ಬಗ್ಗೆ ಮಾತನಾಡಿಲ್ಲ.. ಅವರ ಬಗ್ಗೆ ಮಾತನಾಡಲು ನಮಗೆ ಕೆಲಸ ಇಲ್ವಾ..? ನಾವು ಮಾತನಾಡೋದು ವಕ್ಫ್ ವಿರುದ್ಧ ಅಂತಾ ತಿರುಗೇಟು ಕೊಟ್ಟಿದ್ದಾರೆ. ಇನ್ನು ಕಳೆದ 15 ವರ್ಷಗಳಿಂದ ಉಚ್ಛಾಟನೆ ಮಾತು ಬರ್ತಿದೆ. ಯಾಕೆ ಉಚ್ಛಾಟನೆ ಆಗಿಲ್ಲ ಅಂದ್ರೆ, ನಮ್ಮ ಹೋರಾಟ ಸರಿಯಿದೆ ಅಂತಾ ಹೇಳಿದ್ರು. ಈ ನಡುವೆ ದೆಹಲಿಯಲ್ಲಿ ವಿಜಯೇಂದ್ರ ಕಂಪ್ಲೀಟ್ ಮಾಹಿತಿ ಕೊಟ್ಟು ಬಂದಿದ್ದು, ಹೈಕಮಾಂಡ್ ನಾಯಕರ ಭೇಟಿ ಬಳಿಕ ಯಾವ ಕ್ರಮ ಆಗುತ್ತೆ ಅನ್ನೋದನ್ನು ಕಾದು ನೋಡ್ಬೇಕು.