ಚನ್ನಪಟ್ಟಣ ಚುನಾವಣಾ ಅಖಾಡದಲ್ಲಿ ಸ್ವತಃ ಮಾಜಿ ಪ್ರಧಾನಮಂತ್ರಿ ದೇವೇಗೌಡರು, ಸಿದ್ದರಾಮಯ್ಯನ ಸೊಕ್ಕು ಮುರಿಬೇಕು. ಅಹಂಕಾರ ಇಳಿಸಬೇಕು. ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕರೆಕೊಟ್ಟಿದ್ದರು. ಆ ಬಳಿಕ ಸಿಎಂ ಸಿದ್ದರಾಮಯ್ಯ ಸ್ವಾಭಿಮಾನ ಕೆರಳಿದ್ದು, ಉಪಚುನಾವಣಾ ಕಣದಲ್ಲಿ ಮೂರಕ್ಕೆ ಮೂರು ಕ್ಷೇತ್ರಗಳಲ್ಲೂ ಗೆಲುವಿನ ನಗೆ ಬೀರಿದ ಬಳಿಕ ಅಹಿಂದ ಮತಗಳ ಧ್ರುವೀಕರಣ ಸ್ಪಷ್ಟವಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಸಿಎಂ ಸಿದ್ದರಾಮಯ್ಯ, ಸ್ವಾಭಿಮಾನ ಸಮಾವೇಶದ ಮೂಲಕ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದಾರೆ. ಅದೂ ಕೂಡ ಮಾಜಿ ಪ್ರಧಾನಿ ದೇವೇಗೌಡರ ತವರಲ್ಲಿ ಅನ್ನೋದು ವಿಶೇಷ.
ದಾವಣಗೆರೆಯಲ್ಲಿ ಈ ಹಿಂದೆ ಸಿದ್ದರಾಮೋತ್ಸವ ಹೆಸರಿನಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡು ಶಕ್ತಿಪ್ರದರ್ಶನ ಮಾಡಿದ್ದ ಸಿಎಂ ಸಿದ್ದರಾಮಯ್ಯ, ಚಿತ್ರದುರ್ಗದಲ್ಲಿ ಶೋಷಿತ ಸಮುದಾಯಗಳ ಸಮಾವೇಶ ಮಾಡಿ ಬೀಗಿದ್ರು. ಇದೀಗ ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶಕ್ಕೆ ಸಿದ್ದರಾಮಯ್ಯ ಆಪ್ತರು ಮುಂದಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅಭಿಮಾನಿಗಳ ಸ್ವಾಭಿಮಾನ ಸಮಾವೇಶಕ್ಕೆ ಸಲಕ ತಯಾರಿ ನಡೆದಿದ್ದು, ಈ ಸಮಾವೇಶದ ಉದ್ದೇಶ ಏನು..? ಕಾಂಗ್ರಸ್ ಪಕ್ಷದ ಚಿಹ್ನೆ ಅಡಿಯಲ್ಲಿ ಯಾಕೆ ಸಮಾವೇಶ ಮಾಡ್ತಿಲ್ಲ ಅನ್ನೋ ಬಗ್ಗೆ ಹೈಕಮಾಂಡ್‌ಗೆ ಅನಾಮಧೇಯ ಪತ್ರವೊಂದು ಹೋಗಿತ್ತು. ಆ ಪತ್ರವನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಆಪ್ತರ ಮೂಲಕ ಬರೆಸಿದ್ದಾರೆ ಅನ್ನೋದು ಗುಮಾನಿ.
ಯಾವುದೇ ಅಪಸ್ವರಗಳಿಗೆ ಹೈಕಮಾಂಡ್ ನಾಯಕರು ಯಾವುದೇ ಬೆಲೆ ಕೊಟ್ಟಿಲ್ಲ. ಸಿಎಂ ಸಿದ್ದರಾಮಯ್ಯ ಕೂಡ ಈ ವಿಚಾರದ ಬಗ್ಗೆ ಹೈಕಮಾಂಡ್ ನಾಯಕರ ಜೊತೆಗೆ ಚರ್ಚೆ ನಡೆಸಿದ್ದು, ಸ್ವಾಭಿಮಾನಿ ಸಮಾವೇಶಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸಮಾವೇಶಕ್ಕೆ ಒಪ್ಪಿಗೆ ಪಡೆದುಕೊಂಡಿದ್ದಾರೆ. ಹಾಸನದಲ್ಲಿ ಡಿಸೆಂಬರ್ 5ಕ್ಕೆ ಬೃಹತ್ ಸಮಾವೇಶ ನಡೆಯಲಿದ್ದು, ‘ಸ್ವಾಭಿಮಾನಿ ಸಮಾವೇಶ’ ಹೆಸರಲ್ಲಿ ಸಿಎಂ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ವರಿಷ್ಠರ ಬೆಂಬಲ ಪಡೆದು ಬಂದಿರುವ ಸಿಎಂ ಸಿದ್ದರಾಮಯ್ಯಗೆ ಮತ್ತಷ್ಟು ಹುಮ್ಮಸ್ಸು ಬಂದಂತಾಗಿದೆ.
ಹಾಸನದಲ್ಲಿ ಡಿಸೆಂಬರ್ 5ರಂದು ನಡೆಯುತ್ತಿರುವ ಬೃಹತ್ ಸಮಾವೇಶದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ನನಗೆ ಮಾಹಿತಿ ನೀಡಿದ್ದಾರೆ. ‘ಸ್ವಾಭಿಮಾನಿ ಸಮಾವೇಶ’ದ ಹೆಸರಲ್ಲಿ ಸಿಎಂ ಸಿದ್ದರಾಮಯ್ಯ ತಾಕತ್ತು ಪ್ರದರ್ಶನ ಆಗಲಿದೆ. ಸ್ವಾಭಿಮಾನಿ ಸಮಾವೇಶದ ವಿಚಾರದಲ್ಲಿ ನಾವೆಲ್ಲಾ ಜೊತೆಯಾಗಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.. ಆದರೆ ಹೈಕಮಾಂಡ್‌ಗೆ ಸ್ವಾಭಿಮಾನಿ ಸಮಾವೇಶದ ಬಗ್ಗೆ ಪತ್ರ ಬರೆದು ಗೊಂದಲ ಮೂಡಿಸುವ ಪ್ರಯತ್ನ ಮಾಡಿದ್ದು ಇದೇ ಡಿ.ಕೆ ಶುವಕುಮಾರ್ ಅನ್ನೋದು ಸಿದ್ದರಾಮಯ್ಯ ಆಪ್ತ ಬಳಗದ ಮಾತು. ಪತ್ರ ರವಾನೆ ಮಾಡಿದವರಿಗೆ ಧೈರ್ಯ ಇದ್ದರೆ ಹೆಸರನ್ನು ಯಾಕೆ ಅಳಿಸಿ ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕಿತ್ತು. ಅಂದರೆ ನಮ್ಮ ಎದುರು ಧೈರ್ಯವಾಗಿ ಹೇಳುವುದಕ್ಕೂ ಆಗ್ತಿಲ್ಲ ಎಂದು ಬಿ. ಶಿವರಾಂ ವಾಗ್ದಾಳಿ ಮಾಡಿದ್ದಾರೆ.