ಬಿಜೆಪಿ ಪಕ್ಷದಲ್ಲಿ ಒಳಜಗಳ ತಾರಕಕ್ಕೇರಿದೆ. ವಕ್ಫ್ ವಿಚಾರದಲ್ಲಿ ಯತ್ನಾಳ್ ಟೀಂ ಪ್ರತ್ಯೇಕವಾಗಿ ಪ್ರವಾಸ ಮಾಡುತ್ತಿರುವ ವಿಚಾರದಲ್ಲಿ ಮಾಜಿ ಸಚಿವ ಡಿ.ವಿ ಸದಾನಂದಗೌಡ ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದರು. ಬಿಜೆಪಿಯಲ್ಲಿ ಆಂತರಿಕ ಜಗಳವೇ ಆಯ್ತು. ಇವರಿಂದ ಸರ್ಕಾರವನ್ನು ಏನೂ ಮಾಡೋಕೆ ಸಾಧ್ಯವಿಲ್ಲ ಎಂದು ಜನರು ಮಾತಾಡ್ತಿದ್ದಾರೆ. ಇಗೋ ಪ್ರಾಬ್ಲಂನಿಂದ ಬಿಜೆಪಿಗೆ ದೊಡ್ಡ ಹಾನಿಯಾಗ್ತಿದೆ. ಇಷ್ಟೆಲ್ಲಾ ಪಕ್ಷದಲ್ಲಿ ಆಗ್ತಿರುವ ರಾದ್ದಾಂತವನ್ನು ಸಹಿಸಿಕೊಳ್ಳೋಕೆ ಆಗಲ್ಲ. ಅದಕ್ಕಾಗಿ ಇನ್ನೊಮ್ಮೆ ನಾನು ದೆಹಲಿಗೆ ಹೋಗುವ ನಿರ್ಧಾರ ಮಾಡಿದ್ದೇನೆ. ಡಿಸೆಂಬರ್ 3 ರಂದು ಕೋರ್ ಕಮಿಟಿ ಸಭೆ ಇದೆ. ಅಲ್ಲಿ ಇದರ ಬಗ್ಗೆ ಚರ್ಚಿಸಿ ಇದಕ್ಕೆಲ್ಲ ಬ್ರೇಕ್ ಹಾಕುವಂತೆ ಹೈಕಮಾಂಡ್ಗೆ ಒತ್ತಾಯ ಮಾಡುತ್ತೇವೆ ಎಂದಿದ್ದರು.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸದಾನಂದಗೌಡರು ಪರೋಕ್ಷವಾಗಿ ವಾಗ್ದಾಳಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸದಾನಂದಗೌಡರಿಗೆ ಯತ್ನಾಳ್ ವಾರ್ನಿಂಗ್ ಮಾಡಿದ್ದಾರೆ. ಸದಾನಂದಗೌಡ ಬಾಯಿ ಮುಚ್ಚಿಕೊಂಡು ಇರಬೇಕು. ಇಲ್ಲದೆ ಹೋದರೆ ಅವರ ಬಂಡವಾಳ ಬಯಲು ಮಾಡ್ತೇನೆ ಎನ್ನುವ ಮೂಲಕ ಚಾಟಿ ಬೀಸಿದ್ದಾರೆ. ಸದಾನಂದಗೌಡಗೆ ಪಂಥಾಹ್ವಾನ ನೀಡಿರುವ ಶಾಸಕ ಯತ್ನಾಳ್, ಯಡಿಯೂರಪ್ಪ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದಾರೆ. ಸದಾನಂದಗೌಡ ಮಾತನಾಡಿಲ್ಲ ಅನ್ನೋದಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆಪ್ರಮಾಣ ಮಾಡಲಿ ಎಂದು ಆಣೆಪ್ರಮಾಣಕ್ಕೆ ಆಹ್ವಾನಿಸಿದ್ದಾರೆ ಯತ್ನಾಳ್, ಯಡಿಯೂರಪ್ಪ ಕುಟುಂಬದ ವಿರುದ್ಧ ಸದಾನಂದಗೌಡರು ಮಾತನಾಡಿರೋದನ್ನೆಲ್ಲ ಬಿಚ್ಚಿಡ್ತೀನಿ ಎಂದು ಸವಾಲು ಎಸೆದಿದ್ದಾರೆ.
ಸದಾನಂದಗೌಡ ನನಗಿಂತ ಕೆಟ್ಟದಾಗಿ ಯಡಿಯೂರಪ್ಪ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ನಾನು ವಕ್ಫ್ ವಿರುದ್ಧ ಮಾತನಾಡಿದ್ದೇನೆ, ಸದಾನಂದಗೌಡ ಯಾಕೆ ಗಾಬರಿ ಆಗಬೇಕು..? ಎಂದು ಪ್ರಶ್ನಿಸಿರುವ ಯತ್ನಾಳ್, ಸದಾನಂದಗೌಡರೇ ಗಾಬರಿ ಆಗಬೇಡಿ ಎಂದು ಸಲಹೆ ನೀಡಿದ್ದಾರೆ. ಇನ್ನು ದೀಪ ಆರುವವರ ಬಗ್ಗೆ ನಾನು ಮಾತನಾಡಲ್ಲ. ಸದಾನಂದಗೌಡ ದೀಪ ಆರುತ್ತಿದೆ. ಈಗಾಗಲೇ ಸದಾನಂದಗೌಡ ದೀಪ ಆರಿ ಹೋಗಿದೆ ಎಂದಿದ್ದಾರೆ ಬಸನಗೌಡ ಪಾಟೀಲ್ ಯತ್ನಾಳ್. ನಾನು ಯಾರ ಜೊತೆಗೂ ಅಡ್ಜಸ್ಟ್ಮೆಂಟ್ ಮಾಡಿಕೊಂಡಿಲ್ಲ, ನಿನಗೂ ನಿನ್ನ ನಾಲಿಗೆಗೂ ಎತ್ತ ಸಂಬಂಧವಯ್ಯ ಎಂದು ಹೇಳಿ ಇದು ಹೊಸ ವಚನ ಎಂದು ಡಿವಿಎಸ್ ವಿರುದ್ಧ ವಚನದ ಮೂಲಕ ಯತ್ನಾಳ್ ವಾಗ್ದಾಳಿ ಮಾಡಿದ್ದಾರೆ.
ಬಿ.ವೈ ವಿಜಯೇಂದ್ರ ಪರವಾಗಿ ಸಭೆ ಮಾಡಿದ್ದ ಬಿ.ಸಿ ಪಾಟೀಲ್ ಹಾಗು ರೇಣುಕಾಚಾರ್ಯ ಯತ್ನಾಳ್ ವಿರುದ್ಧ ಕಿಡಿ ಕಾರಿದ್ದರು. ಇದೀಗ ಬಿ.ಸಿ ಪಾಟೀಲ್ ವಿರುದ್ಧ ಯತ್ನಾಳ್ ವಾಗ್ದಾಳಿ ಮಾಡಿದ್ದಾರೆ. ಕಾಂಗ್ರೆಸ್ ಜೊತೆಗೆ ಯತ್ನಾಳ್ ಕೈ ಜೋಡಿಸಿದ್ದಾರೆ ಎಂದಿದ್ದ ಬಿ.ಸಿ ಪಾಟೀಲ್ಗೆ ಎಚ್ಚರಿಕೆ ನೀಡಿರುವ ಯತ್ನಾಳ್, ಕಾಂಗ್ರೆಸ್ ಜೊತೆಗೆ ಕೂರುವಂತಹ ಹಲ್ಕಾ ಕೆಲಸ ನಾವು ಮಾಡಲ್ಲ, ರಾಜ್ಯಾಧ್ಯಕ್ಷ ಹೋಗಿ ಡಿಸಿಎಂ ಡಿ.ಕೆ ಶಿವಕುಮಾರ್ ಬಳಿ 20 ಪತ್ರಕ್ಕೆ ಸಹಿ ಹಾಕಿಸಿಕೊಂಡ . ಆ ವಿಡಿಯೋ ನನ್ನ ಬಳಿ ಇವೆ. ನಾವು ಕಾಂಗ್ರೆಸ್ ಜೊತೆಗೆ ಕೈ ಜೋಡಿಸೋ ಕೆಲಸ ಮಾಡಲ್ಲ. ಪಕ್ಷಕ್ಕೆ ದ್ರೋಹ ಮಾಡಲ್ಲ, ಹೆತ್ತತಾಯಿಗೆ ದ್ರೋಹ ಬಗೆಯಲ್ಲ ಎಂದು ತಿರುಗೇಟು ನೀಡಿದ್ದಾರೆ.