• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಪರಿಸರ ರಕ್ಷಣೆಯ ಕೂಗಿಗೆ ದನಿಯಾಗುವ ಪಕ್ಷಿ

ನಾ ದಿವಾಕರ by ನಾ ದಿವಾಕರ
October 30, 2024
in Top Story, ಅಂಕಣ, ಇದೀಗ, ಕರ್ನಾಟಕ, ರಾಜಕೀಯ, ವಿಶೇಷ, ಶೋಧ
0
Share on WhatsAppShare on FacebookShare on Telegram

ಪರಿಸರ ವಿನಾಶ ತಡೆಗಟ್ಟುವ ನಿಟ್ಟಿನಲ್ಲಿ ತೆರೆದ ಮಾರ್ಗದರ್ಶಿ  “ ಭೂಮ್ತಾಯಿಯ ಕಕ್ಷೆಯಲಿ,,,,”

ADVERTISEMENT

ಭಾರತ ಸಾಗುತ್ತಿರುವ ಅಭಿವೃದ್ಧಿಯ ಹಾದಿಯಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೊಳಗಾಗುತ್ತಿರುವುದು ನಮ್ಮ ಸುತ್ತಲಿನ ಪರಿಸರ ಹಾಗೂ ಅದನ್ನು ಕಾಪಾಡುವಂತಹ ನೈಸರ್ಗಿಕ ಸಸ್ಯ-ಜೀವ ಸಂಕುಲಗಳು. ಮಾನವನ ಅಭ್ಯುದಯದ ಹಾದಿಯಲ್ಲಿ ಇತಿಹಾಸದುದ್ದಕ್ಕೂ ಕಾಣುವಂತಹ ಅಸೂಕ್ಷ್ಮತೆ ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯಕ್ಕೆ 21ನೇ ಶತಮಾನದ ಭಾರತವೂ ಒಂದು ಸಾಕ್ಷಿಯಾಗುತ್ತಿರುವುದು ವಿಪರ್ಯಾಸವಾದರೂ ವಾಸ್ತವ. ಏಕೆಂದರೆ ನವ ಉದಾರವಾದ ಮತ್ತು ಕಾರ್ಪೋರೇಟ್‌ ಮಾರುಕಟ್ಟೆ ನಿರ್ದೇಶಿಸುವ ಬಂಡವಾಳಶಾಹಿ ಅಭಿವೃದ್ಧಿ ಪಥವನ್ನು ಒಪ್ಪಿಕೊಂಡಿರುವ ನವ ಭಾರತ ತನ್ನ ವಿಕಸನದ ಹಾದಿಯಲ್ಲಿ ಲಭ್ಯವಾಗುವ ಎಲ್ಲ ನಿಸರ್ಗ ಸಂಪತ್ತು ವರ್ತಮಾನದ ಸಮಾಜಕ್ಕಷ್ಟೇ ಸೀಮಿತ ಎನ್ನುವ ಧೋರಣೆಯೊಂದಿಗೆ ಮುನ್ನುಗ್ಗುತ್ತಿದೆ.

ಪರಿಸರದೊಡನೆ ಒಡನಾಟದೊಂದಿಗೆ ಬದುಕುವ ಸೂಕ್ಷ್ಮ ಮನಸ್ಥಿತಿಯನ್ನು ಎಂದೋ ಕಳೆದುಕೊಂಡಿರುವ ಬಂಡವಾಳಶಾಹಿ ಸಮಾಜದ, ನಿಸರ್ಗದ ಸಕಲ ಸಂಪನ್ಮೂಲಗಳನ್ನೂ ತನ್ನ ಮಾರುಕಟ್ಟೆಯ ಸರಕುಗಳಂತೆ ಭಾವಿಸುವ ಒಂದು ಪರಂಪರೆಯನ್ನು ಭಾರತವೂ ಅನುಸರಿಸುತ್ತಿದೆ. ನವ ಉದಾರವಾದ ಇದಕ್ಕೆ ಪೂರಕವಾದ ಆಳ್ವಿಕೆಯ ಪರಿಕರಗಳನ್ನು ಸೃಷ್ಟಿಸುತ್ತಲೇ ಇದೆ, ಬೌದ್ಧಿಕವಾಗಿ ಈ ವಿನಾಶಕಾರಿ ಹಾದಿಯನ್ನು ಒಪ್ಪಿಕೊಳ್ಳುವಂತಹ ಒಂದು ಮನಸ್ಥಿತಿಯನ್ನೂ ನಾಗರಿಕರಲ್ಲಿ ಮೂಡಿಸಲು ಯತ್ನಿಸುತ್ತಿದೆ. ವಾಣಿಜ್ಯೀಕರಣಕ್ಕೊಳಗಾಗಿ, ಕಾರ್ಪೋರೇಟೀಕರಣಗೊಂಡಿರುವ ಶೈಕ್ಷಣಿಕ ವ್ಯವಸ್ಥೆ, ಸಂಪೂರ್ಣ ಕಾರ್ಪೋರೇಟ್‌ ಹಿಡಿತದಲ್ಲಿರುವ ಸಂವಹನ ಮಾಧ್ಯಮಗಳು ಹಾಗೂ ಇದಕ್ಕೆ ಪೂರಕವಾದ ಸಾಹಿತ್ಯವನ್ನು ಒದಗಿಸುವ ಅಕಾಡೆಮಿಕ್‌ ವಲಯ ಈ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಸದಾ ಸಿದ್ಧವಾಗಿರುತ್ತದೆ.

ವಿನಾಶಕಾರಿ ಹಾದಿಯ ಚಿತ್ರಣ

ಇದರ ನೇರ ಪರಿಣಾಮಗಳನ್ನು ಕೇರಳದ ವಯನಾಡಿನ ಪಶ್ಚಿಮ ಘಟ್ಟಗಳಲ್ಲಿ ಸಂಭವಿಸಿದ ದುರಂತಗಳು ನಮ್ಮ ಮುಂದಿಟ್ಟಿವೆ. ವಯನಾಡು ಒಂದು ನಿರ್ದಿಷ್ಟ ಘಟನೆ ಅಥವಾ ಅವಘಢ ಎಂದು ಭಾವಿಸುವುದು ಅರ್ಧಸತ್ಯ. ಅದು ಉತ್ತರದ ಹಿಮಾಲಯ ತಪ್ಪಲಿನ ಪರ್ವತ ಶ್ರೇಣಿಗಳಿಂದ ದಕ್ಷಿಣದ ಪಶ್ಚಿಮ ಘಟ್ಟಗಳವರೆಗೂ ಸಂಭವಿಸುತ್ತಿರುವ ವಿನಾಶದ ಒಂದು ಭಾಗವಷ್ಟೇ. ಭೂಮಿಯ ಒಡಲೊಳಗಿರುವ ನಿಸರ್ಗ ಸಂಪತ್ತನ್ನು ಹೊರಗೆಳೆದು ಆಧುನಿಕ ಸಮಾಜದ ಐಷಾರಾಮಿ ಬದುಕಿಗೆ ಬೇಕಾದ ಪರಿಕರಗಳನ್ನು ಉತ್ಪಾದಿಸುವ ಹುರುಪಿನಲ್ಲಿ ಮಾನವ ಸಮಾಜ ಮಾಡುತ್ತಿರುವ ಶೋಷಣೆ, ಸಂಪನ್ಮೂಲಗಳನ್ನು ಬರಿದು ಮಾಡುತ್ತಿರುವುದಷ್ಟೇ ಅಲ್ಲದೆ, ಭವಿಷ್ಯದ ತಲೆಮಾರಿಗೆ ಏನನ್ನೂ ಉಳಿಸಲಾಗದೇನೋ ಎಂಬ ಆತಂಕವನ್ನು ಸಹ ಸೃಷ್ಟಿಮಾಡುತ್ತಿದೆ.

ಈ ಅಪಾಯಗಳನ್ನು ನಿಸರ್ಗ ಪ್ರಿಯರು, ಭೂ ವಿಜ್ಞಾನಿಗಳು, ಪರಿಸರ ವಿಜ್ಞಾನಿಗಳು, ತಜ್ಞರು ಹಾಗೂ ಪರಿಸರ ಕಾಳಜಿ ಇರುವ ನಾಗರಿಕರು ಹಲವು ಆಯಾಮಗಳಿಂದ ಪದೇಪದೇ ಪ್ರಸ್ತಾಪಿಸುತ್ತಲೇ ಇದ್ದಾರೆ. ಮಾರುಕಟ್ಟೆ ಆರ್ಥಿಕತೆಯನ್ನು ಪೋಷಿಸುವ ಹಾದಿಯಲ್ಲಿ ಎದುರಾಗುವ ಈ ವಿನಾಶಕಾರಿ ಹಾದಿಯನ್ನು ಸರ್ಕಾರಗಳಿಗೆ ಮನದಟ್ಟು ಮಾಡುತ್ತಲೇ ಬಂದಿದ್ದಾರೆ. ಆದರೆ ಈ ಕೂಗು ಆಳ್ವಿಕೆಯ ಕೇಂದ್ರಗಳ ಬಾಗಿಲನ್ನೂ ತಟ್ಟಲಾಗುತ್ತಿಲ್ಲ. ʼ ಪರಿಸರ ರಕ್ಷಣೆ ʼ ಎನ್ನುವುದು ಆಂದೋಲನ ಜೀವಿಗಳ ಒಂದು ಶಾಶ್ವತ ಕಾರ್ಯಸೂಚಿ ಎಂದೇ ಭಾವಿಸುವ ಸರ್ಕಾರಗಳು ಇಂತಹ ದನಿಗಳನ್ನು ʼ ಅಭಿವೃದ್ಧಿ ವಿರೋಧಿʼ ಎಂದೋ ಅಥವಾ ಪ್ರತಿಗಾಮಿ ಎಂದೂ ಭಾವಿಸುವ ಸನ್ನಿವೇಶವನ್ನೂ ನಾವು ಕಾಣುತ್ತಿದ್ದೇವೆ. ಇಂತಹ ಸಂದಿಗ್ಧತೆಯ ನಡುವೆಯೂ ಪರಿಸರ ವಿನಾಶದ ಸಮಕಾಲೀನ ಚರಿತ್ರೆಯನ್ನು ಎಳೆಎಳೆಯಾಗಿ ಸಮಾಜದ ಮುಂದೆ ತೆರೆದಿಡುತ್ತಾ ಭವಿಷ್ಯದ ಅಪಾಯಗಳ ಬಗ್ಗೆ ಎಚ್ಚರಿಸುವ ಕೆಲಸವನ್ನು ಲೇಖಕಿ ರೂಪ ಹಾಸನ ತಮ್ಮ  “ ಭೂಮ್ತಾಯಿಯ ಕಕ್ಷೆಯಲಿ ಪಕ್ಷಿಯಾಗಿ ” ಎಂಬ ಅಮೂಲ್ಯ ಕೃತಿಯಲ್ಲಿ ಮಾಡಿದ್ದಾರೆ.

ಸಾಂದರ್ಭಿಕವಾಗಿ ಬರೆದ ಲೇಖನಗಳ ಈ ಅಕ್ಷರ ಗುಚ್ಛವನ್ನು ಸವೆದ ಹಾದಿಯ ನೆನಪಿನ ಗಣಿ ಎಂದು ಭಾವಿಸುವಂತೆಯೇ ವರ್ತಮಾನದ ದುರಂತ ಸ್ಥಿತಿಗಳ ಒಂದು Running Commentary ಎಂದೂ ಭಾವಿಸಬಹುದು. ಹಾಗೆಯೇ ಭವಿಷ್ಯದ ಮುನ್ಸೂಚನೆ-ಮುನ್ನೆಚ್ಚರಿಕೆಯ ಮಾತುಗಳು ಎಂದೂ ಪರಿಗಣಿಸಬಹುದು. ಪರಿಸರ ಪ್ರಜ್ಞೆ ಯಾವ ವ್ಯಕ್ತಿಯಲ್ಲೂ ಸಹಜವಾಗಿ ಮೂಡಿಬರುವುದಿಲ್ಲ. ಅದು ನಾವು ಬೆಳೆದ-ಬೆಳೆಯುವ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಅಲ್ಲಿ ಸಂಭವಿಸುವಂತಹ ಪ್ರಕೃತಿ ವಿಕೋಪಗಳನ್ನು ನೋಡುತ್ತಾ, ಅವುಗಳ ಕಾರಣಗಳನ್ನು ದೈವೀಶಾಪ-ನಿಸರ್ಗದ ಮುನಿಸು-ಪ್ರಕೃತಿ ಸಹಜ ಕ್ರಿಯೆ, ಇವೆ ಮೊದಲಾದ ಕ್ಲೀಷೆಗಳಲ್ಲಿ ಹುಡುಕದೆ, ನಮ್ಮ ಸುತ್ತಲಿನ ಮಾನವ ಸಮಾಜದ ಅಸೂಕ್ಷ್ಮ ನಡಿಗೆಯಲ್ಲೇ ಹುಡುಕುವ ಪ್ರಜ್ಞಾವಂತಿಕೆಯಲ್ಲಿ ಈ ಪರಿಸರ ಪ್ರಜ್ಞೆ ಮೂಡುತ್ತದೆ. ಇದು ಕಾಳಜಿಯಾಗಿ ಪರಿವರ್ತಿತವಾಗುವುದು ಅನುಭವಾತ್ಮಕ ನೆಲೆಯಲ್ಲಿ. ಇದನ್ನು ಲೇಖಕಿ ತಮ್ಮದೇ ಆದ ಸೃಜನಶೀಲ ಶೈಲಿಯಲ್ಲಿ ಮಂಡಿಸಿದ್ದಾರೆ.

ಕೃತಿಯೊಳಗಿನ ಅಮೃತ ಹೂರಣ

“ಭೂಮ್ತಾಯಿಯ ಕಕ್ಷೆಯಲಿ ಪಕ್ಷಿಯಾಗಿ” ಪುಸ್ತಕದಲ್ಲಿ ಲೇಖಕಿ ರೂಪ ಹಾಸನ ತಮ್ಮ ಜೀವನಾನುಭವನ್ನು ಅನುಭಾವದ ನೆಲೆಯಲ್ಲೂ ವಿಸ್ತರಿಸುತ್ತಾ ತಮ್ಮೊಳಗಿನ ಪರಿಸರ ಕಾಳಜಿಯ ಬೀಜಗಳು ಹೇಗೆ ಮೊಳೆತು ಈ ದೊಡ್ಡ ವೃಕ್ಷಗಳಾಗಿವೆ ಎನ್ನುವುದನ್ನು ಆರಂಭದ “ ಮಣ್ಣಿನ ಹೆಜ್ಜೆಯಲಿ,,,,,” ಅಧ್ಯಾಯದಲ್ಲಿ ವಿವರಿಸುತ್ತಾರೆ. ನಿಸರ್ಗದ ಒಡಲಲ್ಲಿ ಜನಿಸದಿದ್ದರೂ, ಅಂತಹ ಸಸ್ಯ-ಜೀವ ಸಂಕುಲಗಳನ್ನು ಪೊರೆಯುವ ವಾತಾವರಣದಲ್ಲಿ ತಮ್ಮ ಬಾಲ್ಯ ಮತ್ತು ಯೌವ್ವನವನ್ನು ಕಳೆದಿರುವ ಲೇಖಕಿಯ ಅನುಭವಗಳು ಎಂತಹ ವ್ಯಕ್ತಿಯಲ್ಲಾದರೂ ಪರಿಸರ ಸೂಕ್ಷ್ಮತೆಯನ್ನು ಬೆಳೆಸಬಹುದೇನೋ. ಪರಿಸರ ನಾಶವನ್ನು ಅಕ್ಷರ ಸಾಹಿತ್ಯದಲ್ಲಿ ಓದುವುದಕ್ಕೂ, ನಿಸರ್ಗದ ಮೇಲೆ ನಡೆಯುವ ದಾಳಿಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿರುವುದಕ್ಕೂ ಇರುವ ವ್ಯತ್ಯಾಸವನ್ನು ರೂಪ ಹಾಸನ ಅವರ ಅನುಭವಗಳು ಸ್ಪಷ್ಟವಾಗಿ ತೆರೆದಿಡುತ್ತದೆ. ಹಾಗಾಗಿ ತುಸು ದೀರ್ಘ ಎನಿಸಿದರೂ ʼಮಣ್ಣಿನ ಹೆಜ್ಜೆಗಳʼ ಪ್ರವೇಶಿಕೆ ಅತ್ಯುಪಯುಕ್ತ ಎನಿಸಿಬಿಡುತ್ತದೆ.

ಲೇಖಕಿಯು ತಮ್ಮ ಕೃತಿಯನ್ನು ಎರಡು ಭಾಗಗಳಲ್ಲಿ ವಿಂಗಡಿಸುತ್ತಾರೆ. ಮೊದಲನೆಯದು                                        ʼ ಉಳಿವಿನ ದಾರಿʼ ಯನ್ನು ಅರಸುವ ಮಾನವ ಸಮಾಜದ ಆತಂಕ ಮತ್ತು ಹಪಹಪಿ. ಎರಡನೆಯದು ನೆಮ್ಮದಿಯ ಬದುಕಿಗಾಗಿ ಅತ್ಯವಶ್ಯವಾದ ʼನೀರು ʼ ಎಂಬ ಅಮೂಲ್ಯ ಸಂಪತ್ತನ್ನು ರಕ್ಷಿಸುವ ಹಾದಿಗಳು. ಎರಡೂ ಭಾಗಗಳ ಆರಂಭ-ಕೊನೆಯಲ್ಲಿರುವ ಕವಿತೆಗಳು ( ಜೋಗಿಣಿ ಹಕ್ಕಿ ತಾವು ಹುಡುಕುತ್ತಾ ಮತ್ತು ನೀರೆಂಬ ಮಾಯೆ) ಲೇಖಕಿಯ ಅಭಿವ್ಯಕ್ತಿಯ ಸ್ಥಾಯಿ ಭಾವವನ್ನಷ್ಟೇ ಅಲ್ಲದೆ, ಪುಸ್ತಕದಲ್ಲಿರುವ ವಸ್ತುವಿಷಯದ ಅಂತರಂಗವನ್ನೂ ಹೊರಸೂಸುವಂತಿವೆ. ಕವಯಿತ್ರಿಯೂ ಆಗಿರುವ ರೂಪ ಹಾಸನ                                 “ ಅವರ ಕವಿತೆಗಳಲ್ಲಿ ಪ್ರಕೃತಿಯ ಸಂಕೇತಗಳು ಹಾಗೂ ರೂಪಕಗಳು ಅತ್ಯಂತ ಸಹಜವಾಗಿ ಕಾಣಸಿಗುತ್ತದೆ ” ಎಂಬ ವಿಮರ್ಶಕರ ಮಾತುಗಳು ಅತಿಶಯೋಕ್ತಿಯೇನಲ್ಲ. ಈ ಪುಸ್ತಕದಲ್ಲಿರುವ ಬರಹಗಳನ್ನು ಓದುತ್ತಾ ಹೋದಂತೆ ಇದು ಸ್ಪಟಿಕ ಸ್ಪಷ್ಟತೆಯಿಂದ ಹೊಳೆಯುವ ಚಿಂತನೆ.

ಮೊದಲ ಭಾಗದ ಪ್ರಥಮ ಲೇಖನದಲ್ಲೇ (ಪ್ರಕೃತಿಯನ್ನು ಮರುಸೃಷ್ಟಿಸುವ,,,,,,) ಲೇಖಕಿಯು ನಾವು ಅನುಸರಿಸುವ ಅಭಿವೃದ್ಧಿ ಮಾದರಿ ಹೇಗಿರಬೇಕು ಎಂದು ಸೂಚಿಸುವುದೇ ಅಲ್ಲದೆ, ಅನುಸರಿಸಲಾಗುತ್ತಿರುವ ಮಾದರಿ ಎಷ್ಟು ನಿಸರ್ಗಘಾತುಕ ಎನ್ನುವುದನ್ನೂ ವಿವರಿಸಲು ಯತ್ನಿಸುತ್ತಾರೆ. ದಕ್ಷಿಣ ಭಾರತದಲ್ಲಿ, ಅದರಲ್ಲೂ ಮಲೆನಾಡು-ಕರಾವಳಿಯಲ್ಲಿ ಬದುಕು ಕಂಡವರಿಗೆ ಈ ವಿನಾಶವನ್ನು ಕಾಣಲು ಉತ್ತರದೆಡೆಗೆ ಚಾರಣ ಹೋಗುವ ಅವಶ್ಯಕತೆಯೇ ಇಲ್ಲದ ಹಾಗೆ, ನಮ್ಮ ಕಣ್ಣೆದುರಿನ ಪಶ್ಚಿಮ ಘಟ್ಟಗಳನ್ನು ವಿನಾಶದಂಚಿಗೆ ಕೊಂಡೊಯ್ಯುತ್ತಿರುವುದನ್ನು ಲೇಖಕಿ ವಿವರಿಸಲೆತ್ನಿಸುತ್ತಾರೆ. ಗುಂಡ್ಯದಿಂದ ಎತ್ತಿನಹೊಳೆಯವರೆಗೆ ಸರ್ಕಾರಗಳು ಪಶ್ಚಿಮಘಟ್ಟದ ನಿಸರ್ಗದೊಡಲನ್ನು ಹೇಗೆ ಬರಿದು ಮಾಡುತ್ತಿವೆ ಎನ್ನುವುದನ್ನು ವಿಮರ್ಶಾತ್ಮಕ ನೆಲೆಯಲ್ಲಿ ವಿಶ್ಲೇಷಿಸುವ ರೂಪ ಹಾಸನ ಸಮರ್ಥನೀಯ ಅಂಕಿಅಂಶಗಳನ್ನು ಒದಗಿಸುವ ಮೂಲಕ ʼ ಅಭಿವೃದ್ಧಿ ʼಯ ಪರಿಚಾರಕರನ್ನು ಅಪರಿಚಿತ ಭ್ರಾಮಕ ಲೋಕದಿಂದ ಹೊರತರುತ್ತಾರೆ.

ರೂಪ ಹಾಸನ ಅವರ ಪರಿಸರ ಕಾಳಜಿ ಕೇವಲ ಹಸಿರುವಲಯಕ್ಕಷ್ಟೇ ಸೀಮಿತವಾಗುವುದಲ್ಲ. ಅದು ಜೀವ ಸಂಕುಲಗಳ ನಡುವೆಯೂ ವಿಹರಿಸುತ್ತದೆ. ಸೂಕ್ಷ್ಮಾತಿಸೂಕ್ಷ್ಮ ಜೀವಿಗಳು ಆಧುನಿಕತೆಯ ಗಜನಡೆಗೆ ಸಿಲುಕಿ ನೆಲಸಮವಾಗುತ್ತಿರುವುದನ್ನು ನೆನಪಿಸುವ ಹಾಗೆ “ ಅವು ಎಲ್ಲಿ ಹೋಗಬೇಕು ” ಅಧ್ಯಾಯದಲ್ಲಿ ಸಣ್ಣ ಹಕ್ಕಿ, ಕ್ರಿಮಿ ಕೀಟಗಳು, ಚಿಟ್ಟೆಗಳು ಈ ಪುಟಗಳುದ್ದಕ್ಕೂ ಅಡ್ಡಾಡುತ್ತವೆ. ಪರಿಸರ ಪ್ರಜ್ಞೆಯನ್ನು ಹೊತ್ತ ಈ ಬೌದ್ಧಿಕ ಚಿಟ್ಟೆ 2018ರಲ್ಲಿ ಮತ್ತು ಇತ್ತೀಚೆಗೆ ಸಹ ಚಿಕ್ಕಮಗಳೂರು ಸುತ್ತಮುತ್ತಲಿನ ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಸಂಭವಿಸಿದ ಮೇಘಸ್ಫೋಟ ಮತ್ತು ಭೂಕುಸಿತದ ಕಾರಣ-ಪರಿಣಾಮಗಳನ್ನು ಓದುಗರ ಮುಂದಿಡುವುದು “ಸೂಕ್ಷ್ಮಾರಣ್ಯ ಸಮಾಧಿ ಮಾಡಿ-ಅಭಿವೃದ್ಧಿ” ಅಧ್ಯಾಯದ ಮೂಲಕ.

ಅಪರೂಪದ ಜೀವ ವೈವಿಧ್ಯತೆಯ ತವರಾದ ಪಶ್ಚಿಮ ಘಟ್ಟದ ಒಡಲನ್ನು ನಿರಂತರವಾಗಿ ಬಗೆದು ನಡೆಸುತ್ತಿರುವ ಅವೈಜ್ಞಾನಿಕ ಅಭಿವೃದ್ಧಿ ಕಾರ್ಯಗಳನ್ನು ಪ್ರತ್ಯಕ್ಷದರ್ಶಿಯಾಗಿ ವಿವರಿಸುತ್ತಾ ಹೋಗುವ ಲೇಖಕಿಯು ಈ ವಿನಾಶಕಾರಿ ಹಾದಿಯಲ್ಲಿ ಎದುರಾಗಬಹುದಾದ ಅಪಾಯಗಳನ್ನೂ ಮನದಟ್ಟು ಮಾಡುವುದು ಅವರ ಸಾಹಿತ್ಯಕ ಸೃಜನಶೀಲತೆಗೆ ಸಾಕ್ಷಿ.  ಮಾಧವಗಾಡ್ಗಿಲ್‌ ಅವರ ವರದಿಯನ್ನು ಬದಿಗೆ ತಳ್ಳಿ , ಕಸ್ತೂರಿ ರಂಗನ್‌ ವರದಿಯನ್ನು ಮುನ್ನಲೆಗೆ ತರುವ ಮೂಲಕ ಪಶ್ಚಿಮ ಘಟ್ಟಗಳನ್ನು ಬೋಳಿಸುವ ವಿಧಾನ ಅನುಸರಿಸಿದ ಸರ್ಕಾರಗಳ ಕುಹಕ ನೀತಿಗಳನ್ನು ಈ ಅಧ್ಯಾಯದಲ್ಲಿ ಲೇಖಕಿಯು ತೆರೆದಿಡುತ್ತಾರೆ. ಈ ವಿನಾಶಕಾರಿ ಹಾದಿಯ ಪರಿಣಾಮವನ್ನು ಈಗಷ್ಟೇ ಕರ್ನಾಟಕದ ಜನರು ಪ್ರತ್ಯಕ್ಷವಾಗಿ ಕಂಡಿದ್ದಾರೆ.

ಅನುಕರಣೀಯ ಆದರ್ಶ ಮತ್ತು ಔದಾತ್ಯ

ವಿಶ್ವ ಪರಿಸರ ಚಳುವಳಿಯಲ್ಲಿ ತನ್ನದೇ ಆದ ವಿಶಿಷ್ಟ ಧ್ವನಿ ಮೂಡಿಸಿ, ಆಳುವ ವರ್ಗಗಳನ್ನು ತಲ್ಲಣಗೊಳಿಸಿರುವ ಕಿಶೋರಿ ಗ್ರೇಟಾ ಥನ್ಬರ್ಗ್‌ ಅವರ ಯಶೋಗಾಥೆಯನ್ನು ವಿವರಿಸುವ “ ಗ್ರೇಟಾ ತಳಮಳಿಸಿದಾಗ ಹೊತ್ತಿದ ಕಿಡಿ ” ಕೇವಲ ಆಕೆಯ ಹೋರಾಟವನ್ನು ಮಾತ್ರವೇ ಬಿಂಬಿಸದೆ, ಅದರಿಂದ ಭಾರತೀಯರಾದ ನಾವು ಕಲಿಯಬೇಕಾದ ಪಾಠಗಳನ್ನೂ ರೂಪ ಹಾಸನ ತಿಳಿಸಿಕೊಡುತ್ತಾರೆ. 21ನೇ ಶತಮಾನದ ನವ ಉದಾರವಾದ ಮತ್ತು ಮಾರುಕಟ್ಟೆ ಆರ್ಥಿಕತೆಯನ್ನು ಮೈದಾಸನ ಕಥೆಗೆ ಹೋಲಿಸುವ ಮೂಲಕ, ನಮ್ಮ ದೇಶ ಕಾರ್ಪೋರೇಟ್‌ ಆರ್ಥಿಕತೆಯ ಮೂಲಕ ತನ್ನನ್ನು ತಾನೇ ಸುಟ್ಟುಕೊಳ್ಳುತ್ತಿದೆ ಎನ್ನುವುದನ್ನು ಲೇಖಕಿಯು “ ನಿಸರ್ಗಕ್ಕೇ ತುರ್ತುಪರಿಸ್ಥಿತಿ,,,,,” ಅಧ್ಯಾಯದಲ್ಲಿ ಸೋದಾಹರಣವಾಗಿ ನಿರೂಪಿಸುತ್ತಾರೆ.

ಈ ಅಧ್ಯಾಯದಲ್ಲಿ  ಲೇಖಕಿಯು ಆಳ್ವಿಕೆಯ ಮುಂದೆ ಮಂಡಿಸಿರುವ ಸಲಹೆಗಳು ( ಪುಟ 104-110) ಅತ್ಯಮೂಲ್ಯವಷ್ಟೇ ಅಲ್ಲ, ಅನುಕರಣೀಯವೂ ಹೌದು. ಈ ಸಲಹೆಗಳನ್ನು ಸರ್ಕಾರಗಳು ಎಷ್ಟರ ಮಟ್ಟಿಗೆ ಸ್ವೀಕರಿಸುತ್ತವೆ ಎನ್ನುವುದಕ್ಕಿಂತಲೂ, ಪರಿಸರ ವಿನಾಶದ ಅರಿವು ಇಲ್ಲದ ಓದುಗರಿಗೆ ಈ ಸಲಹೆಗಳು ಕಣ್ತೆರೆಸುವಂತಹ ಮಾರ್ಗದರ್ಶಿ ಸೂತ್ರಗಳಂತೂ ಆಗುತ್ತವೆ. ಮೈಸೂರಿನ ಚಾಮುಂಡಿ ಬೆಟ್ಟವೂ ಇತ್ತೀಚೆಗೆ ಪರಿಸರ ಭಂಜಕರ ಕಾಕದೃಷ್ಟಿಗೆ ಬೀಳುತ್ತಿದ್ದು, ರೋಪ್‌ ವೇ ಮುಂತಾದ ಸವಲತ್ತುಗಳಿಗೆ ತೆರೆದುಕೊಳ್ಳುತ್ತಿರುವ ಹೊತ್ತಿನಲ್ಲಿ ಈ ಕೃತಿಯ “ ಪ್ರಾಕೃತಿಕ ಸಂರಚನೆಗಳೂ ಜೀವಗಳೇ ” ಅಧ್ಯಾಯವು ಮೈಸೂರು ಜನತೆಗೆ ಕೆಲವು ಉಪಯುಕ್ತ ಸಲಹೆ, ಸೂಚನೆಗಳನ್ನು ಒದಗಿಸುತ್ತದೆ. ನಿಸರ್ಗದ ರಚನೆಗಳನ್ನು ನಾವು ಬಳಕೆಯ ಸರಕುಗಳನ್ನಾಗಿ ಮಾಡಿಕೊಂಡಿರುವ ಹೊತ್ತಿನಲ್ಲಿ ಇಂತಹ ಬರಹಗಳು ಅಪ್ಯಾಯಮಾನ ಎನಿಸುತ್ತವೆ.

ಭಾರತದ ಆಧುನಿಕ ಬೇಸಾಯ ಪದ್ಧತಿಯಲ್ಲಿ ಅನುಸರಿಸುತ್ತಿರುವ ಕ್ರಮಗಳು, ಬಳಸಲಾಗುತ್ತಿರುವ ರಾಸಾಯನಿಕ ವಸ್ತುಗಳು ಮತ್ತು ವಿನಾಶಕಾರಿ ಔಷಧಗಳ ಪರಿಣಾಮವನ್ನು ಸಹ ಚರ್ಚೆಗೊಳಪಡಿಸುವ ರೂಪ ಹಾಸನ ಅವರು (,,,,,ಬೆಳಕಿನ ಬೇಸಾಯ) ಸಸ್ಯವೈವಿಧ್ಯ ಮತ್ತು ಜೀವ ವೈವಿಧ್ಯವನ್ನು ಉಳಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಹಾಗೆಯೇ ಜಾಗತಿಕ ತಾಪಮಾನದ ಹೆಚ್ಚಳದಿಂದ ಉಂಟಾಗುತ್ತಿರುವ ಹವಾಮಾನ ವೈಪರೀತ್ಯದ ದುಷ್ಕರಿಣಾಮಗಳನ್ನೂ “ ಮನುಷ್ಯನೆಂಬ ಆತ್ಮಾಹುತಿ ಬಾಂಬ್‌,,,,, ” ಅಧ್ಯಾಯದಲ್ಲಿ ಚರ್ಚೆಗೊಳಪಡಿಸುತ್ತಾರೆ. ವರ್ತಮಾನದ ಭಾರತ ಅನುಸರಿಸುತ್ತಿರುವ ಅಭಿವೃದ್ಧಿ ಮಾದರಿಗೆ ಪ್ರತಿಯಾಗಿ ಗಾಂಧಿ ಪ್ರತಿಪಾದಿಸಿದ ಗ್ರಾಮ ಸ್ವರಾಜ್ ಮಾದರಿಯನ್ನು ಮುಂದಿಡುವ ರೂಪ ಹಾಸನ್‌ ಅದರ ಸಾಧಕ ಬಾಧಕಗಳನ್ನೂ ಎರಡು ಅಧ್ಯಾಯಗಳಲ್ಲಿ ಚರ್ಚೆಗೊಳಪಡಿಸುತ್ತಾರೆ.

ಹನಿ ನೀರಿಗಾಗಿ ಏನೆಲ್ಲಾ,,,,,

ʼನೀರ ನೆಮ್ಮದಿಯ ಹುಡುಕುತ್ತಾʼ ಸಾಗುವ ಎರಡನೇ ಭಾಗದಲ್ಲಿ ಲೇಖಕಿಯು ಜಲಸಂಪನ್ಮೂಲಗಳ ರಕ್ಷಣೆಯ ಬಗ್ಗೆ ತೀವ್ರವಾದ ಕಾಳಜಿಯನ್ನು ವ್ಯಕ್ತಪಡಿಸುತ್ತಲೇ, ನಾಶವಾಗುತ್ತಿರುವ ಪ್ರಾಕೃತಿಕ ಜಲಸಂಪನ್ಮೂಲಗಳ ಬಗ್ಗೆ ಸವಿವರವಾಗಿ ಮಾಹಿತಿ-ದತ್ತಾಂಶಗಳನ್ನು ಒದಗಿಸುತ್ತಾ ಹೋಗುತ್ತಾರೆ.  ಮಲೆನಾಡ ಊಟಿ ಎಂದು ಒಂದು ಕಾಲದಲ್ಲಿ ಪ್ರಸಿದ್ಧವಾಗಿದ್ದ ಹಾಸನ ಜಿಲ್ಲೆಯ ಕೆಲವು ಪ್ರದೇಶಗಳು ಈಗ ಬರಪೀಡಿತವಾಗಿರುವುದು ನಮ್ಮ ಅಭಿವೃದ್ಧಿ ಮಾದರಿ ಮತ್ತು ಆಧುನಿಕ ಜೀವನ ಶೈಲಿಯ ನೇರ ಪರಿಣಾಮ ಎನ್ನುವುದನ್ನು ಈ ಭಾಗದ ಎಲ್ಲ ಲೇಖನಗಳೂ ನಿರೂಪಿಸುತ್ತವೆ. ಜಲಸಂವರ್ಧನೆ ಮತ್ತು ಜಲಸಂಪನ್ಮೂಲಗಳ ರಕ್ಷಣೆಯ ಹಾದಿಯಲ್ಲಿ ಹಸಿರುಭೂಮಿ ಪ್ರತಿಷ್ಠಾನದ ಯೋಜನೆಗಳು, ಕಾರ್ಯಚಟುವಟಿಕೆಗಳು ಇಡೀ ರಾಜ್ಯಕ್ಕೆ ಮಾದರಿಯಾಗುವಂತಹುದು. ಈ ಅಭಿಯಾನದ ಸಕ್ರಿಯ ಭಾಗವಾಗಿ ಲೇಖಕಿ ರೂಪ ಹಾಸನ ಆಧುನಿಕ ಭಗೀರಥ ಎಂದು ಕರೆಯಲ್ಪಡುವ ರಾಜೇಂದ್ರ ಸಿಂಗ್‌ ಅವರ ಕಿರುಪರಿಚಯ ಮಾಡಿರುವುದು ಪ್ರಶಂಸನೀಯ.

ನೀರು ಮನುಷ್ಯನ ನಿತ್ಯ ಜೀವನಕ್ಕೆ ಎಷ್ಟು ಅವಶ್ಯವೋ ಕುಟುಂಬಗಳಲ್ಲಿರುವ ಮಹಿಳೆಯರ ಪಾಲಿಗೆ ಅಷ್ಟೇ ಸವಾಲಿನ ಪ್ರಶ್ನೆ ಎನ್ನುವುದನ್ನು “ ನೀರಿನ ಜೀತಕ್ಕೆ ಬಿದ್ದ ನಾರಿಯರು ” ಅಧ್ಯಾಯ ನೆನಪಿಸುತ್ತದೆ. ಕೇವಲ ಕುಗ್ರಾಮಗಳಲ್ಲಷ್ಟೇ ಅಲ್ಲ, ಸಣ್ಣ ಪುಟ್ಟ ನಗರಗಳಲ್ಲೂ ನಲ್ಲಿ ನೀರು ಸರಬರಾಜು ಸಮರ್ಪಕವಾಗಿಲ್ಲದಿರುವುದು ಇಂದೂ ಕಾಣಬಹುದಾದ ವಿದ್ಯಮಾನ. ಜೊತೆಗೆ ಪ್ರತಿಯೊಂದು ಕಟ್ಟಡದ ಜೊತೆಗೂ ಕೊಳವೆ ಬಾವಿ ತೋಡಿಸುವ ಮಧ್ಯಮ ವರ್ಗದ ಒಂದು ಚಟವೂ ಸೇರಿಕೊಂಡು, ಇತ್ತ ಅಂತರ್ಜಲವೂ ಇಲ್ಲದೆ, ಅತ್ತ ಹೊರವಲಯದ ಜಲಸಂಪನ್ಮೂಲಗಳೂ ಇಲ್ಲದೆ ಊರುಗಳಲ್ಲಿ ನೀರಿನ ಕೊರತೆಯಾಗುವುದು ಸಾಮಾನ್ಯ ಲಕ್ಷಣ. ಬೇಸಿಗೆಯಲ್ಲಿ ನಲ್ಲಿ ನೀರು ಸರಬರಾಜು ಸಾಪ್ತಾಹಿಕ, ಪ್ರಾಕ್ಷಿಕ, ಮಾಸಿಕ ಕಾರ್ಯಕ್ರಮಗಳಾಗಿರುವುದನ್ನೂ ಬಯಲುಸೀಮೆಯ,  ಕೋಲಾರ ಜಿಲ್ಲೆಯ ಹಲವು ಪಟ್ಟಣಗಳಲ್ಲಿ ಇಂದೂ ಕಾಣಬಹುದು.

ಈ ಬವಣೆಯ ಒಂದು ಆಯಾಮವನ್ನು ಮಲೆನಾಡ ಜಿಲ್ಲೆ ಹಾಸನದಲ್ಲೇ ತೆರೆದಿಡುವ ಮೂಲಕ ರೂಪ ಹಾಸನ ಅವರು ನೀರು ಸಂಗ್ರಹ, ಸರಬರಾಜು ಮತ್ತು ಸಮರ್ಪಕ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಯತ್ನಿಸುತ್ತಾರೆ.  ಜಲಮೂಲಗಳ ಸಂರಕ್ಷಣೆಗೆ ಅವಶ್ಯವಾದ ಕೆಲವು ಮಾರ್ಗದರ್ಶಿ ಸಲಹೆಗಳನ್ನೂ ಲೇಖಕಿಯು “ ಜೀವದಾಯಿನಿಯರೇ,,,,, ” ಅಧ್ಯಾಯದಲ್ಲಿ ಓದುಗರ ಮುಂದಿಡುತ್ತಾರೆ. ಈ ಸಲಹೆಗಳು ಕೇವಲ ಸಾರ್ವಜನಿಕರಿಗಷ್ಟೇ ಅಲ್ಲದೆ, ಆಡಳಿತ ವ್ಯವಸ್ಥೆಯ ನಿರ್ವಾಹಕರಿಗೂ ಸಹ ತಲುಪಬೇಕಾದ್ದು ಇವತ್ತಿನ ತುರ್ತು. ಏಕೆಂದರೆ ಐಷಾರಾಮಿ ಬದುಕಿನಲ್ಲಿದ್ದುಕೊಂಡೇ ಆಳ್ವಿಕೆ ನಡೆಸುವ ಅಧಿಕಾರವಲಯದವರಿಗೆ ಈ ಸೂಕ್ಷ್ಮಗಳು ಕೇವಲ ರಜತ ಪರದೆಯ ದೃಶ್ಯಗಳಂತೆ ಕಾಣುತ್ತಿರುತ್ತವೆ. ನೀರ ನೆಮ್ಮದಿ ಕಂಡುಕೊಳ್ಳಬೇಕಾದರೆ ನೀರಿನ ಮೂಲ ಆವಾಸಸ್ಥಾನದಲ್ಲ ಅವಕಾಶಗಳನ್ನೂ ಕಲ್ಪಿಸಬೇಕು ಎಂಬ ಉದಾತ್ತ ಚಿಂತನೆಗೆ ರೂಪ ಹಾಸನ ಅವರ ಬರಹಗಳು ಚಾಲನೆ ನೀಡುತ್ತವೆ.

ಸಾಂದರ್ಭಿಕವಾದರೂ ಸಾರ್ವತ್ರಿಕ-ಸಾರ್ವಕಾಲಿಕ

ಆಯಾ ಕಾಲಕ್ಕೆ ಸಾಂದರ್ಭಿಕವಾಗಿ ಬರೆದ ಲೇಖನಗಳಾಗಿರುವುದರಿಂದ ಪುನರಾವರ್ತನೆ ಸಹಜವಾಗಿಯೇ ಒಳನುಸುಳಿದೆ. ಅಂಕಣ ಬರಹಗಳ ಸಂಗ್ರಹದಲ್ಲಿ ಇದು ಸಾಮಾನ್ಯ ಸಹನೀಯ ಸಮಸ್ಯೆ ಎಂದುಕೊಳ್ಳಬಹುದು. ಆದರೆ “ ಭೂಮ್ತಾಯಿಯ ಕಕ್ಷೆಯಲಿ ಪಕ್ಷಿಯಾಗಿ ” ಕೃತಿಯು ಕೇವಲ ಓದಿ ಪಕ್ಕಕ್ಕಿಡಬಹುದಾದ ಪುಸ್ತಕವಲ್ಲ. ಗ್ರಂಥಾಲಯಗಳ ಅಟ್ಟದಲ್ಲಿ ಜೋಡಿಸಿಡಬೇಕಾದ ಪುಸ್ತಕವೂ ಅಲ್ಲ. ಇದರಲ್ಲಿ ಅಮೂಲ್ಯ ಮಾಹಿತಿಗಳಿವೆ, ದತ್ತಾಂಶಗಳಿಗೆ, ಸಸ್ಯ ಸಂಕುಲ, ಜೀವ ವೈವಿಧ್ಯ ಹಾಗೂ ನಿಸರ್ಗ ಸಂಪನ್ಮೂಲಗಳನ್ನು ಕುರಿತ ಅಗಾಧ ಮಾಹಿತಿಯ ಕಣಜ ಅಡಗಿದೆ. ಹಾಗೆಯೇ ಈ ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ಹಾದಿಯಲ್ಲಿ ಬೌದ್ಧಿಕವಾಗಿ ಮುಂದುವರೆದ ಸಮಾಜವೂ ಅನುಸರಿಸಬೇಕಾದ ಜೀವನ ಶೈಲಿಯ ಪರಿಚಯ ಇದೆ. ಎಸ್.‌ ಆರ್.‌ ಹಿರೇಮಠ್‌ ಅವರ ಸಂದರ್ಶನದಲ್ಲಿ ಇದರ ವಿಭಿನ್ನ ಆಯಾಮಗಳನ್ನು ತಮ್ಮ ಈ ಪುಸ್ತಕದಲ್ಲೂ ದಾಖಲಿಸುವ ಮೂಲಕ ರೂಪ ಹಾಸನ ಓದುಗರಿಗೆ ಒಂದು ಮೇಲ್‌-ಕೊಂಡಿಯನ್ನು  (Hyperlink) ನೀಡಿದ್ದಾರೆ.

ರೂಪ ಹಾಸನ ಅವರ ಈ ಅಂಕಣ ಬರಹಗಳ ಸಂಗ್ರಹ ಅವರೇ ಹೇಳಿರುವಂತೆ “ ಪ್ರಕೃತಿಯ ಏಳುಬೀಳಿನ ಕುರಿತ ಬರಹ ಗುಚ್ಛ ”. ಇದನ್ನೂ ಮೀರಿ ನಿಲ್ಲುವುದು ಇದರಲ್ಲಿ ಅಡಕವಾಗಿರುವ ಅಮೂಲ್ಯ ಮಾಹಿತಿಯ ಕಣಜ ಮತ್ತು ಪರಿಸರ ಕಾಳಜಿ ಇದ್ದವರು ಅನುಸರಿಸಬಹುದಾದ ಸಲಹೆಗಳು. ಓರ್ವ ಕವಯಿತ್ರಿಯಾಗಿ, ಸಾಹಿತಿ-ಅಂಕಣ ಬರಹಗಾರ್ತಿಯಾಗಿ ರೂಪ ಹಾಸನ ಸಾಮಾಜಿಕ-ಸಾಂಸ್ಕೃತಿಕ-ಪರಿಸರ ಕಾರ್ಯಕರ್ತರೂ ಹೌದು.  ಆ ಎಲ್ಲ ಲಕ್ಷಣಗಳನ್ನು ಈ ಪುಸ್ತಕದ ಪುಟಪುಟವೂ ಹೊರಸೂಸುತ್ತದೆ. ಹಾಗಾಗಿಯೇ ಇದು ಸಂಗ್ರಹ ಯೋಗ್ಯ ಮಾತ್ರವಲ್ಲ ಅಧ್ಯಯನ ಯೋಗ್ಯ ಕೃತಿಯೂ ಆಗಿ ಕನ್ನಡದ ಅಕ್ಷರ ಲೋಕವನ್ನು ಪ್ರವೇಶಿಸಿದೆ. ದ. ರಾ. ಬೇಂದ್ರೆ ಅವರು 50 ವರ್ಷಗಳ ಹಿಂದೆ ಬರೆದ ʼ ಚಿಗರಿಗಂಗಳ ಚೆಲುವಿ ʼ ಕವಿತೆಯ-

” ಉಕ್ಕುಕ್ಕುವ ದುಃಖ ಒಳಗೊತ್ಯಾಳೋ

ನಿಂತ ನೆಲವೆಂದು ಕಡಿಲಾಕೋ, ಬಡಿಲಾಕೋ, ಒಡಿಲಾಕೋ

ಒಡವ್ಯಲ್ಲೋ ಮಗನೇ ಉಸಿರಿದ್ದೊಡಲಂತಾಳೋ “

ಎಂಬ ಸಾಲುಗಳು ಇಡೀ ಪುಸ್ತಕದ ಈ ಪುಸ್ತಕದ ಸಾರ್ಥಕತೆಯನ್ನೂ ಸಾರುತ್ತವೆ.

ನಿಸರ್ಗ ಪ್ರಿಯರಿಗೆ ಮತ್ತು ಪ್ರಕೃತಿ ರಕ್ಷಣೆಯ ಕಾಳಜಿ ಇರುವವರಿಗೆ ಉಪಯುಕ್ತವಾಗುವ ಈ ಕೃತಿಯನ್ನು ಹೆಚ್ಚು ಹೆಚ್ಚು ಯುವ ಸಮೂಹ ಓದುವಂತಾಗಲಿ, ತನ್ಮೂಲಕ ನಮ್ಮ ಕಣ್ಣೆದುರಿನಲ್ಲೇ ವಿನಾಶದತ್ತ ಸಾಗುತ್ತಿರುವ ನಿಸರ್ಗವನ್ನು ಕಾಪಾಡುವ ಕ್ಷಮತೆ ಸಮಾಜದಲ್ಲಿ ಮೂಡಲಿ ಎಂಬ ಆಶಯದೊಂದಿಗೆ, ಈ ಪುಸ್ತಕದ ಸದಾಶಯವನ್ನೂ, ಲೇಖಕಿ ರೂಪ ಹಾಸನ ಅವರನ್ನೂ ಅಭಿನಂದಿಸುತ್ತೇನೆ.

Tags: Naa DivakaraROOPARoopa Hassan
Previous Post

ಮುಡಾ ಹಗರಣದಲ್ಲಿ ಮಾಜಿ ಆಯುಕ್ತ ED ವಶಕ್ಕೆ.. ಸಿಎಂಗೆ ಟೆನ್ಷನ್‌

Next Post

ಭೀಕರ ರಸ್ತೆ ಅಪಘಾತದಲ್ಲಿ 12 ಜನ ಸಾವು;30 ಜನರಿಗೆ ಗಾಯ

Related Posts

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ
Top Story

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

by ಪ್ರತಿಧ್ವನಿ
October 24, 2025
0

ಬೆಂಗಳೂರು: ಇತ್ತೀಚೆಗೆ ಹೊರಬಂದ ಡಾ.ಕೃತಿಕಾ ರೆಡ್ಡಿ ಕೊಲೆ ಪ್ರಕರಣದ ಮತ್ತಷ್ಟು ರೋಚಕ ವಿಚಾರಗಳು ಬಯಲಾಗ್ತಿದೆ. ವಿಚಾರಣೆ ವೇಳೆ ತಾನೇ ಕೊಲೆ‌ ಮಾಡಿದ್ದು ಎಂದು ಒಪ್ಪಿಕೊಂಡಿರುವ ಪತಿ ಡಾ.ಮಹೇಂದ್ರ ರೆಡ್ಡಿ...

Read moreDetails
ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

October 24, 2025
ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ

ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ

October 24, 2025
ಸಿದ್ದರಾಮಯ್ಯಗೆ ಕೇಳಿದ ಪ್ರಶ್ನೆನ..ನಿಮ್ಮ ಮೋದಿಗೆ ಕೇಳಿ Mr.ತೇಜಸ್ವಿ ಸೂರ್ಯ ಅವರೇ..

ಸಿದ್ದರಾಮಯ್ಯಗೆ ಕೇಳಿದ ಪ್ರಶ್ನೆನ..ನಿಮ್ಮ ಮೋದಿಗೆ ಕೇಳಿ Mr.ತೇಜಸ್ವಿ ಸೂರ್ಯ ಅವರೇ..

October 24, 2025
ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

October 24, 2025
Next Post

ಭೀಕರ ರಸ್ತೆ ಅಪಘಾತದಲ್ಲಿ 12 ಜನ ಸಾವು;30 ಜನರಿಗೆ ಗಾಯ

Recent News

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ
Top Story

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

by ಪ್ರತಿಧ್ವನಿ
October 24, 2025
ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು
Top Story

ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

by ಪ್ರತಿಧ್ವನಿ
October 24, 2025
ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ
Top Story

ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ

by ಪ್ರತಿಧ್ವನಿ
October 24, 2025
ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ
Top Story

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

by ಪ್ರತಿಧ್ವನಿ
October 24, 2025
HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ
Top Story

HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ

by ಪ್ರತಿಧ್ವನಿ
October 24, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

October 24, 2025
ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

October 24, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada