
ಬೀದರ್:ಜಿಲ್ಲೆಯಲ್ಲಿ ಆಂಗ್ಲ ನಾಮಫಲಕಗಳು ಕಂಡುಬಂದಲ್ಲಿ ಅ.28ರಿಂದ ಮಸಿ ಬಳಿದು ಆಂದೋಲ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ ಕರ್ ತಿಳಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅವರು, ಜಿಲ್ಲಾಡಳಿತ ಮುಖ ನೋಡಿ ಮಣೆ ಹಾಕುವ ಕಾರ್ಯದಲ್ಲಿ ತೊಡಗಿದೆ. ಶಿವನಗರ ರಿಂಗ್ ರಸ್ತೆಯ ಬಳಿ, ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಆಂಗ್ಲ ನಾಮಫಲಕಗಳು ಇದ್ದರೂ ಜಿಲ್ಲಾಡಳಿತ ಮೌನ ವಹಿಸಿದೆ. ನೆಪ ಮಾತ್ರಕ್ಕೆ ಬಡ ಹಾಗೂ ಸಣ್ಣ ಅಂಗಡಿಗಳ ಬೋರ್ಡ್ ತೆರವುಗೊಳಿಸಿ ಪ್ರಚಾರ ಗಿಟ್ಟಿಸಿಕೊಳ್ಳುವಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ ಎಂದು ಕಿಡಿಕಾರಿದರು.

ಕರ್ನಾಟಕ ಉಚ್ಛ ನ್ಯಾಯಾಲಯದ ತೀರ್ಪು ಹಾಗೂ ರಾಜ್ಯ ಸರ್ಕಾರದ ನಿರ್ದೇಶನದನ್ವಯ ರಾಜ್ಯದ ಎಲ್ಲ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ, ಅನುದಾನಿತ, ಅನುದಾನ ರಹಿತ ಸಂಘ, ಸಂಸ್ಥೆಗಳು, ಕಂಪನಿಗಳು, ಅಂಗಡಿ ಮುಗ್ಗಟ್ಟುಗಳು, ಕೈಗಾರಿಕೆಗಳು ಸೇರಿದಂತೆ ರಾಜ್ಯದ ಎಲ್ಲ ಸಂಸ್ಥೆಗಳ ಶೇಕಡಾ 60 ರಷ್ಟು ನಾಮಫಲಕಗಳು ಕನ್ನಡದಲ್ಲಿ ಕಡ್ಡಾಯವಾಗಿ ಇರಬೇಕು.
ಅದರೆ, ರಾಜ್ಯದಲ್ಲಿ ಅದರಲ್ಲೂ ಬೀದರ್ ಜಿಲ್ಲೆಯಲ್ಲಿಯೇ ದೊಡ್ಡ ದೊಡ್ಡ ರಾಜಕಾರಣಿಗಳ, ಶಿಕ್ಷಣ ಸಂಸ್ಥೆಗಳ ಬೋರ್ಡ್‌ಗಳು ಆಂಗ್ಲ ಭಾಷೆಯಲ್ಲಿ ರಾಜಾರೋಷವಾಗಿ ಸಾರ್ವಜನಿಕ ಸ್ಥಳಗಳಲ್ಲಿಯೇ ಹಾಕಿರುವುದು ಅತ್ಯಂತ ದುರ್ದೈವದ ಸಂಗತಿಯಾಗಿದ್ದು, ಆಂಗ್ಲ ಭಾಷೆಯ ಬೋರ್ಡ್ ಅದು ಎಂತಹ ಪ್ರಭಾವಿಗಳದ್ದೆ ಆಗಿರಲಿ ಅದರ ಮೇಲೆ ಮಸಿ ಬಳಿಯುವುದಾಗಿ ಎಚ್ಚರಿಸಿದರು. ಅನೀಲ ಹೇಡೆ, ಬಂಡೆಪ್ಪ ಕರಬಸಪ್ಪ, ವಿರೇಶ ರೆಡ್ಡಿ, ವಿಶ್ವನಾಥ ಗೌಡ, ಸೋಮಶೇಖರ ಸಜ್ಜನ್, ಉದಯಕುಮಾರ ಅಷ್ಟುರೆ, ನಾಗೇಶ ಕಮಠಾಣಾ, ನಾಗಯ್ಯ ಸ್ವಾಮಿ ಹಿರೇಮಠ ಮತ್ತಿತರಿದ್ದರು.












