ಕಲಬುರಗಿ:ವಿವಾಹವಾಗುವುದಾಗಿ ನಂಬಿಸಿ ಯುವತಿಯೊಬ್ಬಳನ್ನು ಅತ್ಯಾಚಾರಗೈದ ಆರೋಪದಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಒಬ್ಬನ ವಿರುದ್ಧ ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿಯ ಸುಲ್ತಾನಪುರ ಕೆ.ಎಸ್.ಆರ್.ಪಿ.ಯಲ್ಲಿ ಕಾನ್ ಸ್ಟೇಬಲ್ ಆಗಿರುವ ಯಲ್ಲಾಲಿಂಗ ಮೇತ್ರೆ ಅತ್ಯಾಚಾರ ಆರೋಪಿ.
6-7 ತಿಂಗಳ ಹಿಂದೆ ಇನಸ್ಟಾಗ್ರಾಮ್ ನಲ್ಲಿ ಪರಿಚಯ ಆಗಿದ್ದ ಚಿಂಚೋಳಿ ತಾಲೂಕಿನ ಯುವತಿಯೊಬ್ಬಳ ಜೊತೆ ಯಲ್ಲಾಲಿಂಗ ಸ್ನೇಹ ಬೆಳೆಸಿದ್ದಾನೆ. ಈ ವಿಚಾರ ಯುವತಿಯ ಮನೆಯಲ್ಲಿ ಗೊತ್ತಾಗಿದ್ದರಿಂದ ಆಕೆಯನ್ನು ಹೈದರಾಬಾದ್ ಗೆ ಕಳುಹಿಸಿದ್ದರು. ಈ ನಡುವೆ ಯುವತಿಯನ್ನು ಆ.13ರಂದು ಕಲಬುರಗಿಗೆ ಕರೆಸಿದ ಯಲ್ಲಾಲಿಂಗ, ಮದುವೆ ಆಗುವುದಾಗಿ ನಂಬಿಸಿ ಲಾಡ್ಜ್ ವೊಂದರಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಪೊಲೀಸ್ ದೂರಿನಲ್ಲಿ ಆರೋಪ ಮಾಡಿದ್ದಾಳೆ.
ಬಳಿಕ ವಿವಾಹವಾಗಲು ನಿರಾಕರಿಸಿ ವಂಚಿಸಿದ್ದಲ್ಲದೆ, ಯಾರಲ್ಲಾದರೂ ವಿಷಯ ಬಾಯಿಬಿಟ್ಟರೆ ತಾಯಿಯನ್ನು ಕೊಲೆಗೈಯುವುದಾಗಿ ಯಲ್ಲಾಲಿಂಗ ಬೆದರಿಸಿದ್ದಾನೆ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.