ತಿರುಪತಿ ತಿಮ್ಮಪ್ಪನ ಭಕ್ತರಿಗೆ ಬಿಗ್ ಶಾಕ್ ಎದುರಾಗಿದೆ. ತಿರುಪತಿ ತಿರುಮಲಕ್ಕೆ ಭಕ್ತಿಯಿಂದ ಬರುವ ಭಕ್ತರು, ಪ್ರಸಾದ ರೂಪದಲ್ಲಿ ಸೇವಿಸುವ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಿರುವ ಆರೋಪ ಕೇಳಿ ಬಂದಿದೆ. ತಿಮ್ಮಪ್ಪನ ಪ್ರಸಾದದ ಪಾವಿತ್ರ್ಯತೆ ಬಗ್ಗೆಯೇ ಶಂಕೆ ವ್ಯಕ್ತವಾಗ್ತಿದೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಆರೋಪ ಭಾರೀ ಸಂಚಲನ ಮೂಡಿಸಿದೆ. ಈ ಹಿಂದಿನ ಜಗನ್ಮೋಹನ್ ರೆಡ್ಡಿ ಸರ್ಕಾರದಿಂದ ಅಪಚಾರ ಆಗಿದೆ ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹೇಳಿಕೆ ನೀಡಿದ್ದಾರೆ.
ಜಗನ್ಮೋಹನ್ ಸರ್ಕಾರದ ವಿರುದ್ಧ ಸಿಎಂ ಚಂದ್ರಬಾಬು ನಾಯ್ಡು ಆರೋಪಕ್ಕೆ YSRCP ಕೆಂಡಾಮಂಡಲ ಆಗಿದೆ. ತಿರುಪತಿ ಪ್ರಸಾದದಲ್ಲಿ ತುಪ್ಪದ ಬದಲು ಪ್ರಾಣಿಯ ಕೊಬ್ಬು ಬಳಸಿದ್ರು ಅನ್ನೋ ಚಂದ್ರಬಾಬು ನಾಯ್ಡು ಆರೋಪಕ್ಕೆ ತಿರುಗೇಟು ನೀಡಿದ್ದು, ರಾಜಕೀಯ ಲಾಭಕ್ಕಾಗಿ ಈ ರೀತಿ ಹೇಳುತ್ತಿದ್ದಾರೆ ಎಂದು ಜಗನ್ ಪಕ್ಷದ ನಾಯಕರು ವಾಗ್ದಾಳಿ ಮಾಡಿದ್ದಾರೆ.
ಟಿಟಿಡಿ ಪ್ರಸಾದ ವಿಚಾರವಾಗಿ ಬೆಂಗಳೂರು ಟಿಟಿಡಿ ಸೂಪರಿಂಟೆಂಡೆಂಟ್ ಜಯಂತಿ ಪ್ರತಿಕ್ರಿಯೆ ನೀಡಿದ್ದು, ಟಿಟಿಡಿಯ ಪ್ರಸಾದ ಗುಣಮಟ್ಟ ಚೆನ್ನಾಗಿದೆ. ಕರ್ನಾಟಕದಿಂದಲೇ ತುಪ್ಪ ಹೋಗುವುದು. ಆ ತುಪ್ಪದಿಂದಲೇ ಪ್ರಸಾದ ತಯಾರಾಗಲಿದೆ. ಅದರ ಬಗ್ಗೆ ಏನು ಯೋಚನೆ ಇಲ್ಲ. ಕ್ವಾಲಿಟಿಯು ಕೂಡಾ ಚೆನ್ನಾಗಿದೆ. ಕೆಲವು ಸಮಯ ತುಪ್ಪದ ಬದಲಾವಣೆಯಾಗಿತ್ತು. ಆದ್ರೀಗ ಪ್ರಸಾದ ಕ್ವಾಲಿಟಿ ಚೆನ್ನಾಗಿದೆ ಎಂದಿದ್ದಾರೆ.
ತಿಮ್ಮಪ್ಪನ ಪ್ರಸಾದದಲ್ಲಿ ಕೊಬ್ಬು ಬಳಕೆ ಮಾಡಲಾಗಿದೆ ಎಂದು ಹಿಂದಿನ ಜಗನ್ ಸರ್ಕಾರದ ವಿರುದ್ಧ ಆಂಧ್ರ ಸಿಎಂ ನಾಯ್ಡು ವಾಗ್ದಾಳಿ ನಡೆಸಿದ್ದಾರೆ. ಪ್ರಸಾದದಲ್ಲಿ ಕೊಬ್ಬು ಬಳಕೆ ಜೊತೆಗೆ ಅನ್ನದಾನದಲ್ಲೂ ಗುಣಮಟ್ಟ ಇಲ್ಲ ಎಂದಿದ್ದಾರೆ ನಾಯ್ಡು. ದೇವರ ಪ್ರಸಾದವನ್ನ ಅಪವಿತ್ರ ಮಾಡಿದ್ದಾರೆ. ಈಗ ಮತ್ತೆ ತುಪ್ಪ ಬಳಕೆಗೆ ಆದೇಶ ನೀಡಿದ್ದೇವೆ ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಆ ಬಳಿಕ TDP ರಾಷ್ಟ್ರೀಯ ವಕ್ತಾರ ಆನಂ ವೆಂಟಕರಮಣ ರೆಡ್ಡಿ ಮಾಧ್ಯಮಗೋಷ್ಟಿ ನಡೆಸಿ ಸಾಕ್ಷಿ ಬಿಡುಗಡೆ ಮಾಡಿದ್ದಾರೆ.