
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ ವಿಚಾರವಾಗಿ, ಗವರ್ನರ್ ವಿರುದ್ಧ ಘೇರಾವ್‌ಗೆ ಶೋಷಿತ ಒಕ್ಕೂಟಗಳು ನಿರ್ಧಾರ ಮಾಡಿವೆ. ರಾಜ್ಯಾದ್ಯಂತ ಕಪ್ಪು ಪಟ್ಟಿ ಪ್ರದರ್ಶನದ ಮೂಲಕ ಘೇರಾವ್ ಹಾಕಲು ಕರೆ ಕೊಡಲಾಗಿದೆ. ಬೆಂಗಳೂರಲ್ಲಿ ಕರ್ನಾಟಕ ಶೋಷಿತ ಸಮುದಾಯದ ಮಹಾ ಒಕ್ಕೂಟ ಘೋಷಣೆ ಮಾಡಿದೆ.
ಶೋಷಿತ ಒಕ್ಕೂಟಗಳ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ರಾಜ್ಯಪಾಲರ ನಿರ್ಧಾರ ಖಂಡಿಸಿ ಕಪ್ಪು ಬಟ್ಟೆ ಪ್ರದರ್ಶನ ಮಾಡುತ್ತೇವೆ. ಘಟಿಕೋತ್ಸವ ವೇಳೆ ಕಪ್ಪು ಬಟ್ಟೆ ಪ್ರದರ್ಶನ ಮಾಡುತ್ತೇವೆ. ವಿದ್ಯಾರ್ಥಿಗಳು, ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗ್ತಾರೆ. ರಾಜ್ಯಪಾಲರೇ ಗೋ ಬ್ಯಾಕ್ ಅಂತ ಘಟಿಕೋತ್ಸವ ವೇಳೆ ಕೂಗುತ್ತೇವೆ. ರಾಜ್ಯಪಾಲರನ್ನು ತೊಲಗಿಸಿ, ಕರ್ನಾಟಕ ರಕ್ಷಿಸಿ, ಕಪ್ಪು ಬಟ್ಟೆ ಪ್ರದರ್ಶನ ಮಾಡಿ ಘೇರಾವ್ ಹಾಕಲು ಕರೆ ಕೊಡಲಾಗಿದೆ.
ಬೆಂಗಳೂರು, ಧಾರವಾಡ, ಕಲಬುರಗಿ ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದ್ದು, ಘಟಿಕೋತ್ಸವ ಕಾರ್ಯಕ್ರಮ ನಡೆಯುವ ವೇಳೆ ಪ್ರತಿಭಟನೆಗೆ ಕರೆ ನೀಡಲಾಗಿದೆ. ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಘಟಿಕೋತ್ಸವದಲ್ಲಿ ರಾಜ್ಯಪಾಲರು ಭಾಗಿಯಾಗಲಿದ್ದು, ಆ ವೇಳೆ ಮುಜುಗರ ಉಂಟು ಮಾಡಲು ನಿರ್ಧಾರ ಮಾಡಲಾಗಿದೆ.

ಶೋಷಿತ ಸಮುದಾಯ ಮಹಾ ಒಕ್ಕೂಟ ಪ್ರಧಾನ ಸಂಚಾಲಕ ಕೆ .ಎಂ ರಾಮಚಂದ್ರಪ್ಪ ಮಾತನಾಡಿ, ಎಲ್ಲೆಲ್ಲಿ ಘಟಿಕೋತ್ಸವ ಕಾರ್ಯಕ್ರಮ ನಡೆಯುತ್ತೆ ಅಲ್ಲೆಲ್ಲಾ ಪ್ರತಿಭಟನೆ ಮಾಡುತ್ತೇವೆ. ರಾಜ್ಯಪಾಲರು ಘಟಿಕೋತ್ಸವದಲ್ಲಿ ಭಾಗಿಯಾಗಿ ಹೋಗುವವರೆಗೂ ಪ್ರತಿಭಟಿಸುತ್ತೇವೆ. ರಾಷ್ಟ್ರಪತಿಗಳನ್ನು ಭೇಟಿ ಮಾಡಲು ನಿರ್ಧಾರ ಮಾಡಲಾಗಿದೆ. ದೆಹಲಿಯಲ್ಲು ಪ್ರತಿಭಟಿಸಲು ಸಿದ್ಧತೆ ನಡೆಸಲಾಗ್ತಿದೆ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯರ ಅವರನ್ನು ಬದಲಾವಣೆ ಮಾಡಬಾರದು. ಈ ಬಗ್ಗೆ ಹಿಂದಿನಿಂದಲೂ ನಮ್ಮ ನಿಲುವು ಒಂದೇ, ಮುಂದೆಯೂ ಅದೇ ನಿಲುವು. ಸತೀಶ್ ಜಾರಕಿಹೊಳಿ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾರು ಬೇಕಾದ್ರು ಸಿಎಂ ಆಗಬಹುದು. ಅವರ ಬೆಂಬಲಕ್ಕೆ ನಾವು ನಿಲ್ಲುತ್ತೇವೆ ಎಂದು ಇದೇ ವೇಳೆ ಅನಂತ ನಾಯ್ಕ್ ಹೇಳಿದ್ದಾರೆ.

ಸಿಎಂ ಅವರನ್ನು ಮುಡಾ ಪ್ರಕರಣದಲ್ಲಿ ಎಳೆದು ತಂದು ಸರ್ಕಾರದ ಶಕ್ತಿಯನ್ನು ಡೈವರ್ಟ್ ಮಾಡಲಾಗ್ತಿದೆ. ಇದು ಜೆಡಿಎಸ್, ಬಿಜೆಪಿ ರಾಜಕೀಯ ಕುತಂತ್ರ. ನ್ಯಾಯಾಲಯದಲ್ಲಿ ಎಲ್ಲರು ಗಮನಿಸುತ್ತಿದ್ದಾರೆ. ಸಿಎಂ ಪಾತ್ರದ ಬಗ್ಗೆ ನ್ಯಾಯಮೂರ್ತಿಗಳು ಕೇಳ್ತಿದ್ದಾರೆ. ಇದಕ್ಕೆ ಯಾರು ಉತ್ತರ ಕೊಟ್ಟಿಲ್ಲ. ಉಳಿದ ಸೈಟ್ ಹಂಚಿಕೆ ಬಗ್ಗೆ ಮಾಹಿತಿ ಬಗ್ಗೆ ಯಾರು ಮಾತಾಡ್ತಿಲ್ಲ. ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಲಾಗ್ತಿದೆ ಎಂದಿದ್ದಾರೆ.

ರಾಜ್ಯಪಾಲರ ವಿರುದ್ಧ ವಿವಿಧ ರೀತಿಯಲ್ಲಿ ಪ್ರತಿಭಟನೆ ಮಾಡ್ತಿದ್ದೇವೆ. ರಾಜ್ಯಪಾಲರು ಕಾನೂನು ವ್ಯವಸ್ಥೆಯನ್ನು ಹಾಳು ಮಾಡ್ತಿದ್ದಾರೆ. ಸಿದ್ದರಾಮಯ್ಯ ವಿರೋಧಿ ಅಲ್ಲದೆ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಪಾಲರು ನಡೆದುಕೊಳ್ತಿದ್ದಾರೆ. 11 ಮಸೂದೆಗಳನ್ನು ವಾಪಸ್ಸು ಕಳಿಸಿದ್ದಾರೆ. ಪ್ರಜಾಪ್ರಭುತ್ವ ಸಂವಿಧಾನಕ್ಕೆ ಬೆಲೆಕೊಡದ ರಾಜ್ಯಪಾಲರು ರಾಜ್ಯಕ್ಕೆ ಬೇಡ. ರಾಜ್ಯಪಾಲರು ಕರ್ನಾಟಕದಲ್ಲಿ ಇರುವ ಅವಶ್ಯಕತೆ ಇಲ್ಲ. ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ. ರಾಷ್ಟ್ರಪತಿಗಳು ರಾಜ್ಯಪಾಲರನ್ನು ವಾಪಸ್ಸು ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.






