ಕೊಪ್ಪಳ : ಕೊಪ್ಪಳದ ತುಂಗಭದ್ರಾ ನದಿಯ ಪಂಪಾಸಾಗರ ಅಣೆಕಟ್ಟಿನ 19 ನೇ ಕ್ರಸ್ಟ್ ಗೇಟ್ನ ಸರಪಳಿ ಒಡೆದಿರುವ ಹಿನ್ನೆಲೆಯಲ್ಲಿ ಪಂಪಾಸಾಗರ ಅಣೆಕಟ್ಟಿನ ಕೆಳಭಾಗದಲ್ಲಿ ಪ್ರವಾಹದ ಎಚ್ಚರಿಕೆ ನೀಡಲಾಗಿದ್ದು, ಇದರಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾಗಿದೆ. ದುರಸ್ತಿ ಕಾರ್ಯ ಕೈಗೊಳ್ಳಲು ಜಲಾಶಯವನ್ನು ಈಗಿರುವ 105 ಟಿಎಂಸಿ ಸಾಮರ್ಥ್ಯದಿಂದ 65ರಿಂದ 55 ಟಿಎಂಸಿಗೆ ಖಾಲಿ ಮಾಡಬೇಕಾಗುತ್ತದೆ ಎಂದು ಜಲಸಂಪನ್ಮೂಲ ಇಲಾಖೆಯ ಮೂಲಗಳು ತಿಳಿಸಿವೆ.
ಜಲಸಂಪನ್ಮೂಲ ಇಲಾಖೆಯು ಐದು ಕ್ರಸ್ಟ್ ಗೇಟ್ಗಳನ್ನು ಹೊರತುಪಡಿಸಿ ಎಲ್ಲಾ ಕ್ರಸ್ಟ್ ಗೇಟ್ಗಳನ್ನು ತುರ್ತಾಗಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲು ತೆರೆದಿದೆ. ಮೂಲಗಳ ಪ್ರಕಾರ ಸದ್ಯಕ್ಕೆ 89 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಅಣೆಕಟ್ಟೆಗೆ ಭೇಟಿ ನೀಡಿದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಅಣೆಕಟ್ಟೆಯಿಂದ ಕನಿಷ್ಠ 60ರಿಂದ 65 ಟಿಎಂಸಿ ನೀರು ಬಿಡಬೇಕಾಗಬಹುದು, 20 ಅಡಿ ನೀರು ಬಿಟ್ಟರೆ ಮಾತ್ರ ಸಮಸ್ಯೆ ಬಗೆಹರಿಯಬಹುದು, ಹೀಗಾಗಿ ಆಣೆಕಟ್ಟೆ ನೀರನ್ನು ಖಾಲಿ ಮಾಡುವ ತುರ್ತು ಅಗತ್ಯ ಇದೆ ಎಂದರು.ಅಣೆಕಟ್ಟು ನಿರ್ಮಾಣದ ಸಮಯದಲ್ಲಿ ಮಾಡಲಾಗಿದ್ದ ವಿನ್ಯಾಸವನ್ನು ಜಲಸಂಪನ್ಮೂಲ ಇಲಾಖೆ ಸ್ಥಳಕ್ಕೆ ತರುತ್ತಿದೆ ಎಂದು ಸಚಿವರು ಹೇಳಿದರು.
ಈ ನಡುವೆ ಜಲಸಂಪನ್ಮೂಲ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೊಪ್ಪಳಕ್ಕೆ ದೌಡಾಯಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಸದ್ಯಕ್ಕೆ ನೀರಿನ ಹರಿವು ತೀವ್ರಗೊಂಡಿದ್ದರೂ ಕೆಳಭಾಗದಲ್ಲಿ ಪ್ರವಾಹ ಭೀತಿ ಇಲ್ಲ. ಅಣೆಕಟ್ಟಿನಿಂದ ನೀರು ಹೊರಹರಿವು ಹೆಚ್ಚಾಗಿರುವ ಕಾರಣ ನದಿಯ ಸಮೀಪಕ್ಕೆ ತೆರಳದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಅಣೆಕಟ್ಟು ನಿರ್ಮಾಣವಾದ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ