ಮಡಿಕೇರಿ : ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಪತ್ರಕರ್ತರು ಕಾರ್ಯನಿರ್ವಹಿಸಿದರೆ ಸಮಾಜದಲ್ಲಿ ಸಕರಾತ್ಮಕ ಬದಲಾವಣೆ ತರಲು ಸಾಧ್ಯವಿದೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಭಿಮತ ವ್ಯಕ್ತಪಡಿಸಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರರ್ತರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನವೀಯ ತುಡಿತಗಳಿಗೆ ಸ್ಪಂದಿಸುವ ಗುಣ ಪತ್ರಕರ್ತರು ಹೊಂದಿರಬೇಕು. ಮಾನವೀಯ ಸಂಬಂಧಗಳನ್ನು ಬೆಸೆದುಕೊಂಡು ಕೆಲಸ ಮಾಡಬೇಕಾದ ಪರಿಸ್ಥಿತಿ ಇಂದಿನ ಕಾಲಘಟ್ಟದಲ್ಲಿ ಬಂದಿದೆ. ಸಮಾಜದ ಕಷ್ಟ-ಕಾರ್ಪಣ್ಯಗಳಿಗೆ ಮಿಡಿಯಬೇಕಾದರೆ ನಮ್ಮಲ್ಲಿ ಮಾನವೀಯ ಅಂತಕರಣ ಇದ್ದರೆ ಮಾತ್ರ ಸಾಧ್ಯ. ಕೇವಲ ವರದಿಗಾರಿಕೆ ಮಾತ್ರ ಪತ್ರಕರ್ತರ ಕೆಲಸವಲ್ಲ. ಜನರ ಕಣ್ಣೀರಿಗೆ ಸ್ಪಂದಿಸುವ, ಅನ್ಯಾಯಕ್ಕೆ ಒಳಗಾದವರಿಗೆ ಧ್ವನಿಯಾಗುವ ಅವಕಾಶ ಮಾಧ್ಯಮ ಕ್ಷೇತ್ರದಲ್ಲಿ ದುಡಿಯುವ ಪತ್ರಕರ್ತರಿಗಿದೆ. ಇದರ ಸದ್ಬಳಕೆ ಆಗಬೇಕು ಎಂದರು.
ಕೋವಿಡ್ ನಿಂದ ಅನೇಕ ಪತ್ರಕರ್ತರು ಪ್ರಾಣ ಕಳೆದುಕೊಂಡರು. ಅವರ ಕುಟುಂಬಕ್ಕೆ ಸರಕಾರದಿಂದ ರೂ. 5 ಲಕ್ಷ ಪರಿಹಾರ ಕೊಡಿಸುವ ಕೆಲಸ ಸಂಘಟನೆಯಿಂದಾಗಿದೆ. ಇದರಿಂದ ಕುಟುಂಬಕ್ಕೆ ಅಪಾರ ಪ್ರಮಾಣದ ಸಹಾಯವಾಗಿರುವ ಉದಾಹರಣೆಗಳಿವೆ. 2018ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡು ನಿರಾಶ್ರಿತ ಪತ್ರಕರ್ತರಿಗೂ ನೆರವು ನೀಡುವ ಕೆಲಸ ಸಂಘನೆಯಿಂದ ಮಾಡಲಾಗಿದೆ. ಭಾರತ ದೇಶದ ಅತೀ ಹೆಚ್ಚು ಪತ್ರಕರ್ತರನ್ನು ಹೊಂದಿರುವ ದೊಡ್ಡ ಸಂಘಟನೆ ನಮ್ಮದಾಗಿದೆ. ಸಂಘಟನಾತ್ಮಕ ಕೆಲಸದಿಂದ ಕೋವಿಡ್ ಸಂದರ್ಭ ಪತ್ರಕರ್ತ ಕುಟುಂಬಕ್ಕೆ ರೂ. 5 ಲಕ್ಷ ಪರಿಹಾರ ಒದಗಿಸಲು ಸಾಧ್ಯವಾಯಿತು. ಪತ್ರಕರ್ತರ ಆರೋಗ್ಯ ಹದಗೆಟ್ಟರೆ ನೀಡಬೇಕಾದ ರೂ. 10 ಕೋಟಿ ವಾರ್ತಾ ಇಲಾಖೆಯಲ್ಲಿ ಹಾಗೆ ಇದೆ. ಮಾಸಾಶನ ದೊರೆಯುತ್ತಿಲ್ಲ. ನಮಗಾಗಿ ಸರಕಾರದ ಯೋಜನೆಗಳು ಹಲವಷ್ಟಿವೆ.
ಆದರೆ, ಅವುಗಳು ಪತ್ರಕರ್ತರ ಕೈಸೇರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಒಳ್ಳೆ ವರದಿ ಪತ್ರಕರ್ತರ ವಿಶ್ವಾಸರ್ಹತೆ ಹೆಚ್ಚು ಮಾಡುತ್ತದೆ. ಈ ವೃತ್ತಿಗೆ ನ್ಯಾಯ ಒದಗಿಸುವ ಕೆಲಸವಾಗಬೇಕು. ಸಾಮಾಜಿಕ ಜಾಲತಾಣ ಮೂಲಕ ಹಲವಾರು ಮಂದಿ ಪತ್ರಕರ್ತರ ರೂಪ ತೊಟ್ಟಿದ್ದಾರೆ. ಪತ್ರಕರ್ತ ಎಂಬ ಗುರುತಿಗಾಗಿ ಹಲವರು ಬಂದು ಕ್ಷೇತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಿಶ್ವಾಸರ್ಹತೆ ಮಾರುಕಟ್ಟೆಯಲ್ಲಿ ಮಾರಾಟಕ್ಕಿಲ್ಲ.
ಸಾಮಾನ್ಯ ಜನರು ಮಾಧ್ಯಮದ ಮೇಲೆ ವಿಶ್ವಾಸ ಕಳೆದುಕೊಂಡರೆ ಪತ್ರಕರ್ತರು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಾರೆ. ಈ ರೀತಿ ಆಗದಂತೆ ಎಚ್ಚರವಹಿಸಬೇಕು. ನೈಜ ಪತ್ರಕರ್ತರು ತಮ್ಮ ಬದ್ಧತೆ ಉಳಿಸಿಕೊಂಡು ಮಾಧ್ಯಮ ಕ್ಷೇತ್ರದ ಪಾವಿತ್ರ್ಯತೆ ಉಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸುಂಟಿಕೊಪ್ಪ ಗ್ರಾ.ಪಂ. ಸದಸ್ಯ ರಫೀಕ್ ಖಾನ್, ಪ್ರಜಾಪ್ರಭುತ್ವ ನಾಲ್ಕನೇ ಅಂಗ ಪತ್ರಿಕಾ ರಂಗವಾಗಿದ್ದು, ಇದರ ಮೇಲೆ ಜನ ನಂಬಿಕೆ ಇಟ್ಟಿದ್ದಾರೆ.
ಪತ್ರಕರ್ತರೇ ಜನರಿಗೆ ಭರವಸೆಯ ಬೆಳಕು. ಮಾಧ್ಯಮದ ಸಮಾಜದ ಎಚ್ಚರಿಕೆ ಗಂಟೆಯಾಗಿದೆ. ಮಾಧ್ಯಮದಿಂದ ನ್ಯಾಯ ದೊರಕುತ್ತದೆ ಎಂಬ ನಂಬಿಕೆ ಜನರಿಗಿದೆ. ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಪತ್ರಿಕಾ ರಂಗ ಪಾವಿತ್ರ್ಯತೆ ಉಳಿಯಲಿ ಎಂದು ಆಶಿಸಿದರು. ನಿವೃತ್ತ ಶಿರಸ್ತೇದಾರ್ ಪ್ರಕಾಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಹಾದಿತಪ್ಪಿದರೆ ಸರಿದಾರಿಗೆ ತರುವ ಕೆಲಸ ಮಾಧ್ಯಮ ರಂಗದಿಂದಾಗುತ್ತಿದೆ ಎಂದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿದರು. ಕಾರ್ಯಕ್ರಮ ಸಂಚಾಲಕಿ ಯಶೋಧ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಹಾಜರಿದ್ದರು.
16 ಪತ್ರಕರ್ತರಿಗೆ ಪ್ರಶಸ್ತಿ : ಕ್ರೀಡಾ ವರದಿ ಪ್ರಶಸ್ತಿಯನ್ನು ಶಕ್ತಿ ಉಪಸಂಪಾದಕ ಕಾಯಪಂಡ ಶಶಿ ಸೋಮಯ್ಯ, ಅತ್ಯುತ್ತಮ ಗ್ರಾಮೀಣ ವರದಿಯ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆ ಎ.ಎನ್.ವಾಸು, ಅತ್ಯುತ್ತಮ ವೀಡಿಯೋಗ್ರಫಿ ಪ್ರಶಸ್ತಿಯನ್ನು ರಿಪಬ್ಲಿಕ್ ಕನ್ನಡ ಚಾನಲ್ ನ ಕೆ.ಬಿ.ದಿವಾಕರ್, ತನಿಖಾ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯ ಎಂ.ಎನ್.ಚಂದ್ರಮೋಹನ್, ಅರಣ್ಯ ವನ್ಯಜೀವಿ ಪ್ರಶಸ್ತಿ ವಿಜಯಕರ್ನಾಟಕ ಪತ್ರಿಕೆಯ ಜಗದೀಶ್ ಜೋಡುಬೀಟಿ, ಹೈನುಗಾರಿಕೆ ವರದಿ ಪ್ರಶಸ್ತಿ ಶಕ್ತಿ ಪತ್ರಿಕೆಯ ಅಣ್ಣೀರ ಹರೀಶ್ ಮಾದಪ್ಪ, ಶೈಕ್ಷಣಿಕ ವರದಿ ಪ್ರಶಸ್ತಿ ಶಕ್ತಿ ಪತ್ರಿಕೆಯ ಹೆಚ್.ಕೆ. ಜಗದೀಶ್, ತೋಟಗಾರಿಕೆ ಪ್ರಶಸ್ತಿ ವಿಜಯವಾಣಿಯ ಸುನಿಲ್ ಪೊನ್ನೇಟಿ ಪಡೆದುಕೊಂಡರು.
ಮಾನವೀಯ ವರದಿ ಪ್ರಶಸ್ತಿಯನ್ನು ವಿಜಯವಾಣಿಯ ಹಿರಿಕರ ರವಿ, ವನ್ಯಜೀವಿ ದೃಶ್ಯಮಾಧ್ಯಮ ವರದಿ ಪ್ರಶಸ್ತಿ ಚಿತ್ತಾರ ವಾಹಿನಿಯ ವಿಷ್ಮಾ ಪೆಮ್ಮಯ್ಯ, ಸೇನೆಗೆ ಸಂಬಂಧಿಸಿದ ದೃಶ್ಯ ಮಾಧ್ಯಮ ವರದಿ ಪ್ರಶಸ್ತಿ ಚಿತ್ತಾರ ಚಾನಲ್ ನ ವಿಶ್ವ ಕುಂಬೂರು, ಮಾನವೀಯ ವರದಿ ಪ್ರಶಸ್ತಿಗೆ ಪಬ್ಲಿಕ್ ಟಿವಿ ಯ ಮಲ್ಲಿಕಾರ್ಜುನ, ಆರೋಗ್ಯ ವರದಿ ಪ್ರಶಸ್ತಿ ಆದೋಲನ ಪತ್ರಿಕೆಯ ಕೃಷ್ಣ ಸಿದ್ದಾಪುರ, ಕೃಷಿ ವರದಿ ಪ್ರಶಸ್ತಿ ಜನಮಿತ್ರ ಪತ್ರಿಕೆಯ ಉದಿಯಂಡ ಜಯಂತಿ ಮಂದಣ್ಣ, ಅತ್ಯುತ್ತಮ ಸುದ್ದಿ ಛಾಯಾ ಚಿತ್ರ ಪ್ರಶಸ್ತಿಯನ್ನು ಪ್ರಜಾವಾಣಿಯ ರಂಗಸ್ವಾಮಿ, ಅತ್ಯುತ್ತಮ ಸಾಂಸ್ಕೃತಿಕ ವರದಿ ಪ್ರಶಸ್ತಿಯನ್ನು ಪ್ರತಿನಿಧಿ ಪತ್ರಿಕೆಯ ಅಜ್ಜಮಾಡ ರಮೇಶ್ ಕುಟ್ಟಪ್ಪ ಭಾಜನರಾದರು.
ಸಾಧಕ ಪತ್ರಕರ್ತರಿಗೆ ಸನ್ಮಾನ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ನೂತನ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಪಿಹೆಚ್ ಡಿ ಪದವಿ ಪಡೆದ ಡಾ. ಹೇಮಂತ್, ರಾಜ್ಯ ಪ್ರಶಸ್ತಿ ಪಡೆದ ಬಾಚರಣಿಯಂಡ ಅನುಕಾರ್ಯಪ್ಪ,ಸಣ್ಣುವಂಡ ಕಿಶೋರ್ ನಾಚಪ್ಪ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಚನ್ನನಾಯಕ ಪ್ರಾರ್ಥಿಸಿ, ಖಜಾಂಜಿ ಆನಂದ್ ಕೊಡಗು ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ ಸ್ವಾಗತಿಸಿ, ಉಪಾಧ್ಯಕ್ಷ ಹೆಚ್.ಕೆ. ಜಗದೀಶ್ ವಂದಿಸಿದರು.