
ಪ್ರಧಾನಿ ನರೇಂದ್ರ ಮೋದಿ 2014ರಿಂದಲೂ ದೇಶದ ಪ್ರಧಾನಿಯಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ 2014 ಹಾಗು 2019 ಸೇರಿದಂತೆ ಎರಡೂ ಅವಧಿಯಲ್ಲೂ ಪ್ರಧಾನಿ ಮೋದಿ ಸಮಸ್ಯೆಗಳ ಬಗ್ಗೆ ಮಾತನ್ನೇ ಆಡಳಿಲ್ಲ. ದೇಶದಲ್ಲಿ ಯಾವುದಾದರೂ ಒಂದು ಸಮಸ್ಯೆ ಎದುರಾದಾಗ ಆ ವಿಚಾರದ ಬಗ್ಗೆ ಸ್ಪಂದನೆ ನೀಡುವುದು ಇರಲಿ, ಆ ಬಗ್ಗೆ ಮಾತನ್ನೇ ಆಡದೆ ಮೌನಕ್ಕೆ ಶರಣಾಗುವುದನ್ನು ರೂಢಿಸಿಕೊಂಡು ಬಂದಿದ್ದಾರೆ. ಆದರೆ 2024ರಲ್ಲಿ ಮೂರನೇ ಬಾರಿಗೆ ಚುನಾವಣೆಗೆ ಹೊರಟಾಗ ಅಲ್ಲಲ್ಲಿ ಮಾಧ್ಯಮಗಳ ಎದುರು ಕಾಣಿಸಿಕೊಂಡ ಪ್ರಧಾನಿ ಮೋದಿ, ಇನ್ಮುಂದೆ ತನ್ನ ವರಸೆ ಬದಲಿಸಿಕೊಳ್ತಾರೆ ಎನ್ನುವಂತೆ ಬಿಂಬಿಸಿದ್ರು. ಆದರೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದೆ ಹೋದರೂ ಎನ್‌ಡಿಎ ಮೈತ್ರಿಕೂಟ ಅಧಿಕಾರ ಹಿಡಿಯುವಲ್ಲಿ ಯಶಸ್ವಿ ಆಗಿತ್ತು. ಇದೀಗ ಮತ್ತೆ ತನ್ನ ಹಳೇ ವರಸೆಯನ್ನೇ ಮೋದಿ ಮುಂದುವರಿಸಿದ್ದಾರೆ.

ಇತ್ತೀಚಿಗಷ್ಟೇ ಲೋಕಸಭೆ ಅಧಿವೇಶನ ನಡೆಯಿತು. ಲೋಕಸಭಾ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ದೇಶದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಭಾಷಣ ಮಾಡಿದ್ದರು. ದೇಶದಲ್ಲಿ ನೀಟ್ NEET ಪರೀಕ್ಷೆ ಅಕ್ರಮದಿಂದ ಲಕ್ಷ ಲಕ್ಷ ಮಂದಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಒಳಗಾಗಿರುವ ಬಗ್ಗೆ ಸರ್ಕಾರವನ್ನು ಪ್ರಶ್ನೆ ಮಾಡಿದ್ದರು. ಮಣಿಪುರದಲ್ಲಿ ನಡೆದಿರುವ ಘನಘೋರ ಘಟನೆಗಳ ಬಗ್ಗೆ ಕೇಂದ್ರದ ಎನ್‌ಡಿಎ NDA ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಆದರೂ ಪ್ರಧಾನಿ ನರೇಂದ್ರ ಮೋದಿ ಡೋಂಟ್‌ಕೇರ್ ಮಾಸ್ಟರ್ ರೀತಿಯಲ್ಲೇ ವರ್ತನೆ ಮಾಡಿದರು. ವಿರೋಧ ಪಕ್ಷದ ನಾಯಕರು ಎತ್ತಿದ ಒಂದೇ ಒಂದು ಪ್ರಶ್ನೆಗೂ ಉತ್ತರ ಕೊಡಲಿಲ್ಲ. ದೇಶದ ಸಮಸ್ಯೆಗಳ ಬಗ್ಗೆ ಮಾತನ್ನೇ ಆಡಳಲಿಲ್ಲ.

ರಾಹುಲ್ ಗಾಂಧಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದ ಧರ್ಮ ಸರ್ಕಾರದ ಮುಖ್ಯಸ್ಥನಾದ ನರೇಂದ್ರ ಮೋದಿ ಅವರದ್ದೇ ಆಗಿತ್ತು. ಆದರೂ ಪ್ರಧಾನಿ ಮೋದಿ ಜಾಣಕುರುಡುತನ ಪ್ರದರ್ಶನ ಮಾಡಿದರು. ದೇಶದ ಆರ್ಥಿಕತೆ, ದೇಶದಲ್ಲಿ ಜನರು ಬೆಂಬಲಿಸುತ್ತಿರುವ ರೀತಿ. ಬಿಜೆಪಿ ಬೆಳೆದ ಬಗೆ ಹೀಗೆ ಬೇಕಿಲ್ಲದ ವಿಚಾರಗಳನ್ನು ಮುಂದಿಟ್ಟು ಸಮಯ ತುಂಬಿಸಿದರು. ಇದರಲ್ಲಿ ಎಲ್ಲಿಯೂ ನೀಟ್ ಪರೀಕ್ಷೆ ಅಕ್ರಮದ ಬಗ್ಗೆ ಮಾತನಾಡಲಿಲ್ಲ. ಅಥವಾ ಮಣಿಪುರದಲ್ಲಿ ನಡೆದಿರುವ ಹಾಗು ನಡೆಯುತ್ತಿರುವ ಹಿಂಸಾಚಾರವನ್ನು ನಿಯಂತ್ರಣಕ್ಕೆ ತರುವ ವಿಚಾರ ಪ್ರಸ್ತಾಪ ಮಾಡಲಿಲ್ಲ. ಅಂದರೆ ಪ್ರಧಾನಿಗೆ ಈ ವಿಚಾರಗಳ ಬಗ್ಗೆ ಅರಿವಿಲ್ಲವೋ..? ಅಥವಾ ಈ ವಿಚಾರಗಳ ನಿಲಕ್ಷ್ಯವೋ ಅನ್ನೋ ಬಗ್ಗೆ ಜನರೇ ನಿರ್ಧಾರ ಮಾಡುವಂತಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸದಾ ಕಾಲ ಹೊಗಳಿಕೆಯನ್ನೇ ಬಯಸುವಂತಹ ಮನಸ್ಥಿತಿ ಹೊಂದಿರುವ ನಾಯಕ. ಪ್ರಧಾನಿ ಮೋದಿ ಅವರಿಗೆ ಉಘೇ ಉಘೇ ಎನ್ನುವುದು ಮಾತ್ರ ಇಷ್ಟವಾಗುತ್ತದೆ. ಒಂದು ವೇಳೆ ಇಲ್ಲಿ ಸಮಸ್ಯೆ ಆಗಿದೆ ಎಂದರೆ ಆ ಕಡೆಗೆ ಮುಖವನ್ನೂ ಹಾಕದೆ ಮಾಧ್ಯಮಗಳನ್ನು ಬೇರೆ ಕಡೆಗೆ ಸೆಳೆದು ಇದೇ ಸತ್ಯ ಎಂದು ಬಿಂಬಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಅದೇ ಕಾರಣಕ್ಕೆ ಮಣಿಪುರದ ಸಮಸ್ಯೆ ಬಗ್ಗೆ ಚುನಾವಣೆ ನಡೆದ ಬಳಿಕವೂ ಮಾತನಾಡದೆ ಮೌನವಾಗಿದ್ದಾರೆ. ಕರ್ನಾಟಕದಲ್ಲಿ ಪ್ರವಾಹ ಬಂದು ಕೊಚ್ಚಿಕೊಂಡು ಹೋಗುತ್ತಿದ್ದರೂ ಮೋದಿ ಮಾತನಾಡದೆ ವಾಪಸ್ ಆಗಿದ್ದ ವಿಚಾರವನ್ನು ಕನ್ನಡಿಗರು ಮರೆಯುವುದು ಉಂಟೇ..? ಇದೇ ರೀತಿಯ ವರ್ತನೆಯಿಂದ ಮೋದಿ ಈಗಾಗಲೇ ತಿರಸ್ಕಾರಕ್ಕೆ ಒಳಗಾಗಿದ್ದಾರೆ. ಇದೇ ರೀತಿ ಮುಂದಿವರಿದರೆ ಮುಂದಿನ ಬಾರಿ ಎನ್‌ಡಿಎ ಒಕ್ಕೂಟವೂ ಅಧಿಕಾರಕ್ಕೆ ಬರುವುದಿಲ್ಲ ಎನ್ನಬಹುದು.

ಕೃಷ್ಣಮಣಿ