ರಾಮನಗರ ಜಿಲ್ಲೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಈ ಕ್ಷೇತ್ರ ಪ್ರತಿನಿಧಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕೇಂದ್ರದಲ್ಲಿ ಮಂತ್ರಿ ಆದ ಬಳಿಕ ಚನ್ನಪಟ್ಟಣಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಮುಂದಿನ 6 ತಿಂಗಳ ಒಳಗಾಗಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ. ಈಗಾಗಲೇ ಡಿ.ಕೆ ಶಿವಕುಮಾರ್ ಚನ್ನಪಟ್ಟಣದಲ್ಲಿ ಪ್ರವಾಸ ಶುರು ಮಾಡಿದ್ದು, ಟೆಂಪಲ್ ರನ್ ಮೂಲಕ ಮತದಾರರನ್ನು ಸೆಳೆಯುವ ಕಸರತ್ತು ಮಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಹೋದರ ಡಿ.ಕೆ ಸುರೇಶ್ ಸೋಲಿಗೆ ಸೇಡು ತೀರಿಸಿಕೊಳ್ಳಲು ಡಿ.ಕೆ ಶಿವಕುಮಾರ್ ತಂತ್ರಗಾರಿಕೆ ಮಾಡಿದ್ದಾರೆ ಎನ್ನಲಾಗ್ತಿದೆ.
ಚನ್ನಪಟ್ಟಣದಲ್ಲಿ ಸ್ವತಃ ಡಿ.ಕೆ ಶಿವಕುಮಾರ್ ಅಖಾಡಕ್ಕೆ ಇಳಿದು ಗೆಲುವು ಸಾಧಿಸಿದ ಬಳಿಕ ಕನಕಪುರ ಕ್ಷೇತ್ರವನ್ನು ಸಹೋದರ ಡಿ.ಕೆ ಸುರೇಶ್ಗೆ ಬಿಟ್ಟುಕೊಡಲಿದ್ದಾರೆ ಎನ್ನುವ ಚರ್ಚೆಗಳು ಶುರುವಾಗಿವೆ. ಅಷ್ಟಕ್ಕೂ ಚನ್ನಪಟ್ಟಣ ಪ್ರವಾಸದ ವೇಳೆ ನನ್ನ ಹೊಸ ರಾಜಕೀಯ ಚನ್ನಪಟ್ಟಣದಿಂದ ಆರಂಭ ಎಂದಿದ್ದ ಮಾತು ಡಿ.ಕೆ ಶಿವಕುಮಾರ್ ಸ್ಪರ್ಧೆ ಮಾಡುವ ಇಂಗಿತ ಎಂದೇ ಬಣ್ಣಿಸಲಾಗ್ತಿದೆ. ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಗಿದ್ದ ಡಿ.ಕೆ ಸುರೇಶ್ ಸೋಲನ್ನಪ್ಪಿದ್ದು, ಇದೀಗ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿದರೆ ಅಧಿಕಾರ ದಾಹ ಎನ್ನುವ ಕಾರಣಕ್ಕೆ ಸೋಲು ಅನುಭವಿಸುವ ಸಾಧ್ಯತೆಯಿದೆ. ಇದೇ ಕಾರಣದಿಂದ ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪರ್ಧೆ ಮಾಡಿ, ಗೆದ್ದ ಬಳಿಕ ಕನಕಪುರಕ್ಕೆ ಸುರೇಶ್ ಪಟ್ಟಾಭಿಷೇಕ ಎಂದು ಸುರೇಶ್ ಬೆಂಬಲಿಗರ ಮಾತುಕತೆ ನಡೆದಿದೆ.
ಈಗಾಗಲೇ ರಾಮನಗರ ಜಿಲ್ಲೆಯಲ್ಲಿ ಕನಕಪುರ, ರಾಮನಗರ, ಮಾಗಡಿಯಲ್ಲಿ ಗೆಲುವು ದಕ್ಕಿಸಿಕೊಂಡಿರುವ ಕಾಂಗ್ರೆಸ್, ಚನ್ನಪಟ್ಟಣದಲ್ಲಿ ಜೆಡಿಎಸ್ ಎದುರು ಸೋಲುಂಡಿತ್ತು. ಇದೀಗ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಕೇಂದ್ರದಲ್ಲಿ ಸಚಿವರಾದ ಬಳಿಕ ತೆರವಾಗಿರುವ ಸ್ಥಾನವನ್ನು ಕಾಂಗ್ರೆಸ್ ಗೆದ್ದುಕೊಂಡರೆ ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಅಧಿಪತ್ಯ ಸಾಧಿಸಿದಂತೆ ಆಗಲಿದೆ ಎನ್ನುವುದು ಡಿಕೆ ಶಿವಕುಮಾರ್ ಲೆಕ್ಕಾಚಾರ. ಆದರೆ ಈ ಲೆಕ್ಕಾಚಾರದಲ್ಲಿ ಮತ್ತೆ ಡಿ.ಕೆ ಶಿವಕುಮಾರ್ ಹಳಿ ತಪ್ಪುವ ಸಾಧ್ಯತೆಗಳು ಹೆಚ್ಚಿವೆ. ಇದಕ್ಕೆ ಕಾರಣ ಮುಖ್ಯಮಂತ್ರಿ ಸ್ಥಾನದ ಮೇಲೆ ಡಿ.ಕೆ ಶಿವಕುಮಾರ್ ಇಟ್ಟಿರುವ ಕಣ್ಣು.
ಎರಡೂವರೆ ವರ್ಷಕ್ಕೆ ಮುಖ್ಯಮಂತ್ರಿ ಬದಲಾವಣೆ ಅನ್ನೋದು ಡಿ.ಕೆ ಶಿವಕುಮಾರ್ ಬೆಂಬಲಿಗರ ಅಂಬೋಣ. ಡಿ.ಕೆ ಶಿವಕುಮಾರ್ ಶಕ್ತಿ ಕುಗ್ಗಿಸಬೇಕು ಎಂದು ಈಗಾಗಲೇ ಕಾಂಗ್ರೆಸ್ನಲ್ಲೇ ಒಂದು ಗುಂಪು ಕೆಲಸ ಮಾಡುತ್ತಿದೆ. ಲೋಕಸಭಾ ಚುನಾವಣೆಯಲ್ಲೂ ಆ ಗುಂಪು ಕೆಲಸ ಮಾಡಿದೆ. ಅದೇ ಕಾರಣಕ್ಕೆ ಡಿ.ಕೆ ಸುರೇಶ್ಗೇ ಭಾರೀ ಅಂತರದ ಸೋಲಾಗಿದೆ ಎನ್ನುವುದು ಕಾಂಗ್ರೆಸ್ನಲ್ಲೇ ಕೇಳಿ ಬರ್ತಿರೋ ಮಾತು. ಇದೀಗ ಚನ್ನಪಟ್ಟಣದಲ್ಲಿ ಡಿ.ಕೆ ಶಿವಕುಮಾರ್ ಅಥವಾ ಡಿ.ಕೆ ಸುರೇಶ್ ಸ್ಪರ್ಧೆ ಮಾಡಿದರೂ ಕಾಂಗ್ರೆಸ್ ನಾಯಕರುಗಳೇ ಸೋಲಿನ ಹಣೆಪಟ್ಟಿ ಕಟ್ಟುವುದಕ್ಕೆ ಸಜ್ಜಾಗಿದ್ದಾರೆ ಎನ್ನಲಾಗ್ತಿದೆ. ಲೋಕಸಭಾ ಚುನಾವಣೆ ಬಳಿಕ ಚನ್ನಪಟ್ಟಣದಲ್ಲೂ ಕಾಂಗ್ರೆಸ್ ಸೋಲುಂಡರೆ ಡಿ.ಕೆ ಶಿವಕುಮಾರ್ ಬಲ ಸಂಪೂರ್ಣವಾಗಿ ಕುಗ್ಗಲಿದ್ದು, ಮುಖ್ಯಮಂತ್ರಿ ಸ್ಥಾನದತ್ತ ಕಣ್ಣನ್ನೂ ಹಾಯಿಸದಂತೆ ಮಾಡುತ್ತಾರೆ ಎನ್ನಲಾಗ್ತಿದೆ. ಆದರೂ ರಾಜಕೀಯ ತಂತ್ರಗಾರಿಕೆಯಲ್ಲಿ ಗೆಲ್ಲೋದ್ಯಾರು ಅನ್ನೋದನ್ನು ಕಾದು ನೋಡ್ಬೇಕು.
ಕೃಷ್ಣಮಣಿ..