ಜೂನ್ 13 ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಪೈಪೋಟಿ ತೀವ್ರಗೊಂಡಿದೆ.

ಕಾಂಗ್ರೆಸ್‌ನ ಶಾಸಕರ ಸಂಖ್ಯಾ ಬಲಾಬಲದ ಮೇಲೆ ಖಾಲಿಯಾಗಲಿರುವ 11 ಸ್ಥಾನಗಳ ಪೈಕಿ, 7 ಸ್ಥಾನ ಲಭಿಸಲಿದ್ದು, ಟಿಕೆಟ್‌ಗಾಗಿ ಪೈಪೋಟಿ ಆರಂಭವಾಗಿದೆ. ಇನ್ನು ವಿಧಾನಸಭೆಯ ಶಾಸಕರ ಸಂಖ್ಯಾ ಬಲಾಬಲದ ಮೇಲೆ, 7 ಮಂದಿ ಕಾಂಗ್ರೆಸ್ ಸದಸ್ಯರು ಸುಲಭವಾಗಿ ಪರಿಷತ್ ಪ್ರವೇಶ ಪಡೆಯುವುದು ಸುಲಭ. ಆದ್ರೆ ವಿಚಾರ ಏನೆಂದರೆ, 7 ಮಂದಿಯ ಪೈಕಿ 4 ಸ್ಥಾನಕ್ಕೆ ಈಗಾಗಲೇ ಅಭ್ಯರ್ಥಿಗಳು ಫಿಕ್ಸ್ ಆಗಿದ್ದಾರೆ.

ಡಾ.ಯತೀಂದ್ರ ಸಿದ್ಧರಾಮಯ್ಯ, ಕೆ. ಗೋವಿಂದರಾಜು, ಎನ್.ಎಸ್. ಬೋಸರಾಜು ಹಾಗೂ ವಿಜಯ್ ಮುಳಗುಂದ್ ಅವರ ಹೆಸರು ಅಂತಿಮಗೊಂಡಿದೆ. ಡಾ.ಯತೀಂದ್ರ ಸಿದ್ಧರಾಮಯ್ಯ, ಕ್ಷೇತ್ರ ತ್ಯಾಗ ಮಾಡಿದ ಬೆನ್ನಲ್ಲೇ, ಪರಿಷತ್ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಎಂಬ ಚರ್ಚೆಗಳು ಪಕ್ಷದ ಪಡಸಾಲೆಯಲ್ಲಿ ಕೇಳಲಾರಂಭಿಸಿದೆ.

ಈ ಹಿಂದೆ ಕ್ಷೇತ್ರ ತ್ಯಾಗ ಮಾಡುವಾಗಲೇ ತೆರೆಮರೆಯಲ್ಲಿ ಆಗಿದ್ದ ಮಾತುಕತೆಯ ಆಧಾರದ ಮೇಲೆ ಈಗ ಡಾ.ಯತೀಂದ್ರ ಸಿದ್ಧರಾಮಯ್ಯಗೆ ಪಕ್ಷ ಮಣೆ ಹಾಕಿದೆ ಎನ್ನಲಾಗಿದೆ. ಇನ್ನು ಎನ್.ಎಸ್.ಬೋಸರಾಜು, ಹಾಲಿ ಸಚಿವರು ಜೊತೆಗೆ 2023 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಹೆಚ್ಚಿನ ಸ್ಥಾನ ತಂದುಕೊಟ್ಟಿರುವ ಮಾನದಂಡದ ಆಧಾರದಲ್ಲಿ ಅವಕಾಶ ನೀಡಲಾಗುತ್ತಿದೆ. ಇತ್ತ ಕೆ. ಗೋವಿಂದರಾಜು, ಹಾಲಿ ವಿಧಾನಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಬಹಳ ಪ್ರಭಾವಿ, ಜೊತೆಗೆ ಎಲ್ಲಾ ಬಣಗಳಿಗೂ ಬೇಕಾಗಿರುವ ವ್ಯಕ್ತಿ. ಹೀಗಾಗಿ, ಅವರನ್ನು ಮತ್ತೊಮ್ಮೆ ಪರಿಷತ್‌ಗೆ ಆಯ್ಕೆ ಮಾಡುವ ಜವಾಬ್ದಾರಿ ಪಕ್ಷದ ಮೇಲಿದೆ.

ಇನ್ನು ವಿಜಯ್ ಮುಳಗುಂದ್. ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಬೇಕಾದ ಆತ್ಯಾಪ್ತ, ಸಹಾಯಕ. ಡಿ.ಕೆ.ಶಿವಕುಮಾರ್ ಸಂಕಷ್ಟದ ದಿನದಲ್ಲಿ ಜೊತೆಗಿದ್ದರು ಎಂಬ ಮಾನದಂಡದ ಆಧಾರದಲ್ಲಿ ಅವರಿಗೂ ಅವಕಾಶ ನೀಡುವುದು ಬಹುತೇಕ ಖಚಿತ ಎಂಬ ಮಾಹಿತಿ ಹೊರಬಿದ್ದಿದೆ. ಹೀಗೆ 7 ಮಂದಿಯ ಪೈಕಿ ನಾಲ್ವರು ಅಭ್ಯರ್ಥಿಗಳ ಹೆಸರನ್ನು ರಾಜ್ಯ ಕಾಂಗ್ರೆಸ್‌ನ ನಾಯಕರು ಅಂತಿಮಗೊಳಿಸಿದ್ದಾರೆ. ಇನ್ನುಳಿದ ಮೂರು ಸ್ಥಾನಕ್ಕೆ ಈಗ ಭಾರೀ ಪೈಪೋಟಿ ಆರಂಭವಾಗಿದ್ದು, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್, ವಿನಯ್ ಕಾರ್ತಿಕ್, ಪಕ್ಷಕ್ಕಾಗಿ ದುಡಿದ ಜಿಲ್ಲಾಧ್ಯಕ್ಷರುಗಳು ರೇಸ್‌ನಲ್ಲಿದ್ದಾರೆ.

ಬಾಕಿಯಿರುವ ಮೂರು ಸ್ಥಾನಕ್ಕೆ ಹತ್ತಾರು ಮಂದಿಯ ಹೆಸರು ರೇಸ್‌ಗೆ ಬಂದಿದ್ದು, ಈ ಮೂರು ಸ್ಥಾನಗಳ ಆಯ್ಕೆ ಹಿನ್ನೆಲೆಯಲ್ಲಿ, ಮೇ 25 ಅಥವಾ 26 ರಂದು ಕಾಂಗ್ರೆಸ್ ಉಸ್ತುವಾರಿ ರಣ್‌ದೀಪ್ ಸಿಂಗ್ ಸುರ್ಜೇವಾಲ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಆ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳು ಯಾರಾಗಬೇಕೆಂದು ಕಾಂಗ್ರೆಸ್‌ನ ಹೈಕಮಾಂಡ್ ನಾಯಕರು ನಿರ್ಧರಿಸಲಿದ್ದು, “ಪ್ರತಿಧ್ವನಿ” ಗೆ ಕಾಂಗ್ರೆಸ್‌ನ ಆಪ್ತ ಮೂಲಗಳಿಂದಲೇ ಮಾಹಿತಿ ಲಭ್ಯವಾಗಿದೆ.