
ರಾಜ್ಯದ ಪ್ರತಿಷ್ಠಿತ ಬೆಂ.ಗ್ರಾಮಾಂತರ ಕ್ಷೇತ್ರದಲ್ಲಿ ಭಾರಿ ಅಕ್ರಮ ನಡೀತಿದೆ. ಆದ್ರೂ ಎಲೆಕ್ಷನ್ ಕಮಿಷನ್ ಕಣ್ಮುಚ್ಚಿ ಕುಳಿತಿದೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ .ಪಾರದರ್ಶಕ, ಮುಕ್ತ ಚುನಾವಣೆ ನಡೆಸುವಲ್ಲಿ ಚುನಾವಣೆ ಆಯೋಗ ಸಂಪೂರ್ಣ ವಿಫಲವಾಗಿದೆ. ಹಣ ಹಂಚಿಕೊಂಡು ಚುನಾವಣೆಯನ್ನು ನಡೆಸಲು ಅವಕಾಶ ಮಾಡಿಕೊಟ್ಟುಬಿಡಿ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ. 10 ಸಾವಿರ ರೂ. ಮೌಲ್ಯದ ಗಿಫ್ಟ್ ಕಾರ್ಡ್ ಅನ್ನು ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಕಡೆಯವರು ಮತದಾರರಿಗೆ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನ ಜೆಪಿ ನಗರದ ತಮ್ಮ ನಿವಾಸಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಗಿಫ್ಟ್ ಕಾರ್ಡ್ಗಳನ್ನು ಹಂಚಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಪರವಾಗಿ ಕ್ಯೂಆರ್ ಕೋಡ್ ಇರುವ ಕೂಪನ್ಗಳ ಹಂಚಿಕೆ ಮಾಡಲಾಗಿದೆ. ತಡೆಯಲು ಹೋದ ಜೆಡಿಎಸ್, ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದರು. ಕುಸುಮಾ ಹನುಮಂತಯ್ಯ, ಕುಣಿಗಲ್ ಶಾಸಕ ಡಾ ರಂಗನಾಥ್, ಮಾಗಡಿ ಶಾಸಕ ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಡಿಸಿಎಂ ಡಿಕೆ ಶಿವಕುಮಾರ್ ಹೆಸರಿನಲ್ಲಿ ಕೂಪನ್ ಕಾರ್ಡುಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಎಲ್ಲಾ ಕೂಪನ್ ಕಾರ್ಡುಗಳನ್ನು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ತೋರಿಸಿದರು. ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲೂ ಇದೇ ರೀತಿ ಕೂಪನ್ ಕಾರ್ಡುಗಳನ್ನು ಕಾಂಗ್ರೆಸ್ ಹಂಚಿತ್ತು ಎಂದು ಕಿಡಿಕಾರಿದರು. ಮಾದೇಶ್ವರನ ಲಾಡು, 505 ರೂ. ಅನ್ನು ಇಡೀ ರಾತ್ರಿ ಹಂಚುವ ಕೆಲಸವನ್ನು ಮಾಡಿದ್ದಾರೆ. ಇದನ್ನು ತಡೆಯಲು ಹೋದವರ ಮೇಲೆ ಹಲ್ಲೆ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಕಿರುಕುಳದಿಂದ ಕುಣಿಗಲ್ನಲ್ಲಿ ನಮ್ಮ ಕಾರ್ಯಕರ್ತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೂರು ಕೊಟ್ಟರೇ ಯಾವುದೇ ಪ್ರಯೋಜನವಿಲ್ಲ, ಇದು ಬಿಹಾರ ಆಗುತ್ತಿದೆ, ಪೊಲೀಸರು ಕೂಡ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದರು.