ದಿವಾಕರ
2024ರ ಲೋಕಸಭಾ ಚುನಾವಣೆಗಳು ನವ ಭಾರತದ ಹೊಸ ಪರ್ವವನ್ನು ಬರೆಯುವ ಒಂದು ನಿರ್ಣಾಯಕ ಘಟ್ಟ ಆಗಲಿದೆ. ಒಂದೆಡೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳು ಶಾಶ್ವತವಾಗಿ ಕಳೆದುಹೋಗುವ ಆತಂಕ ಕಾಡುತ್ತಿದ್ದಂತೆಯೇ ಮತ್ತೊಂದೆಡೆ ಅಧಿಕಾರ ರಾಜಕಾರಣದ ಲಾಲಸೆ-ಬಂಡವಾಳ ವ್ಯವಸ್ಥೆಯ ಲೋಭ ರಾಜಕೀಯ ನಾಯಕರನ್ನು ಮತ್ತಷ್ಟು ಅಸೂಕ್ಷ್ಮಮತಿಗಳನ್ನಾಗಿ ಮಾಡುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬಹಳ ಪ್ರಧಾನವಾಗಿ ಕಾಣಬೇಕಿದ್ದ ʼ ಜನಪ್ರಾತಿನಿಧ್ಯ ʼ ಇಂದು ಅಲಂಕಾರಿಕವಾಗಿ ಉಳಿದುಕೊಂಡಿದ್ದು, ಸಾರ್ವಭೌಮ ಪ್ರಜೆಗಳ ಸಾಂವಿಧಾನಿ ಅಸ್ತಿತ್ವವನ್ನೇ ನಿರಾಕರಿಸಲಾಗುತ್ತಿದೆ. ಚುನಾವಣೆಗಳು ಮುಗಿದು ಮತಗಳ ಅಂತಿಮ ಎಣಿಕೆಯಾಗುವವರೆಗೂ ಕಾತರದಿಂದ ಕಾಯುವ ಒಂದು ಮನಸ್ಥಿತಿಯೇ ನಶಿಸಿಹೋಗಿರುವಂತೆ ಕಾಣುತ್ತಿದೆ. ಏಕೆಂದರೆ 400 ಸ್ಥಾನಗಳನ್ನು ಗೆಲ್ಲುವ ಭರವಸೆಯೊಂದಿಗೆ ಸಂವಿಧಾನ ಬದಲಾವಣೆಯನ್ನೂ ಒಳಗೊಂಡಂತೆ, ಬಿಜೆಪಿ ನಾಯಕರು, ಸ್ವತಃ ಪ್ರಧಾನಿ ಮೋದಿಯವರನ್ನೂ ಸೇರಿದಂತೆ, ಮುಂಬರುವ ಸರ್ಕಾರದ ನೀತಿ ನಿರೂಪಣೆಗಳನ್ನೂ ಜನರ ಮುಂದಿಡುತ್ತಿದ್ದಾರೆ.
ಮೊಟ್ಟಮೊದಲ ಬಾರಿಗೆ ಪ್ರಜಾಸತ್ತಾತ್ಮಕ ಭಾರತವು ಪೂರ್ವನಿರ್ಧಾರಿತ ಫಲಿತಾಂಶಗಳೊಂದಿಗೆ, ಸಚಿವ ಸಂಪುಟದೊಂದಿಗೆ, ಚುನಾವಣೆಗಳನ್ನು ಎದುರಿಸುತ್ತಿರುವಂತೆ ತೋರುತ್ತಿದೆ. ರಾಜಕೀಯ ಪಕ್ಷಗಳಿಗೆ ಈ ರೀತಿಯ ನಿರೀಕ್ಷೆ, ಅತಿಯಾದ ಭರವಸೆ ಇರುವುದು ತಪ್ಪೇನಲ್ಲ ಆದರೆ ಚುನಾವಣೆಗಳು ಮುಗಿದು ಮೊದಲ ಸಂಸತ್ ಅಧಿವೇಶನದಲ್ಲಿ ಮತದಾರರಿಂದ ಚುನಾಯಿತರಾದ ಪ್ರತಿನಿಧಿಗಳು ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಒಂದು ಪರಂಪರೆಯೂ ನಮ್ಮಲ್ಲಿತ್ತು ಎನ್ನುವುದನ್ನು ಮರೆಯಕೂಡದು. ಸಂಸದೀಯ ವ್ಯವಸ್ಥೆಯ ಬಹುಮುಖ್ಯ ಲಕ್ಷಣಗಳಲ್ಲೊಂದಾದ “ಶಾಸನ ಸಭೆಯ ಬಹುಮತದ ಆಯ್ಕೆ” ಈಗ ಇತಿಹಾಸದ ಪಳೆಯುಳಿಕೆಯಾಗಿದ್ದು, ಹೊಸ ಶಾಸನ ಸಭೆ ರಚನೆಯಾಗುವ ಮುನ್ನವೇ ಸಚಿವ ಹುದ್ದೆಯ ಬಗ್ಗೆಯೂ ಆಶ್ವಾಸನೆ ನೀಡುವ ಹಂತಕ್ಕೆ ತಲುಪಿದೆ. ಈ ಗೆಲುವಿನ ಅತಿ ಆಕಾಂಕ್ಷೆಯೇ ರಾಜಕೀಯ ನಾಯಕರಲ್ಲಿ ಇರಬೇಕಾದ ನೈತಿಕ ಉತ್ತರದಾಯಿತ್ವ, ಮನುಜ ಸೂಕ್ಷ್ಮತೆ, ಲಿಂಗ ಸೂಕ್ಷ್ಮತೆಗಳನ್ನೂ ಕಸಿದುಕೊಳ್ಳುತ್ತಿದೆ.
ಪ್ರಾತಿನಿಧಿತ್ವ ಮತ್ತು ಸ್ವಾಯತ್ತತೆ
ಸಂಸದೀಯ ಪ್ರಜಾತಂತ್ರದ ಅಂತಃಸತ್ವ ಎಂದರೆ ಶಾಸನ ಸಭೆಗೆ ಆಯ್ಕೆಯಾಗುವ ಜನಪ್ರತಿನಿಧಿಗಳ ಸ್ವಾಯತ್ತತೆ ಮತ್ತು ಆಯ್ಕೆ ಸ್ವಾತಂತ್ರ್ಯ. ದುರದೃಷ್ಟವಶಾತ್ ಭಾರತದ ಪ್ರಜಾಪ್ರಭುತ್ವ ಈ ಎರಡೂ ಅಂಶಗಳನ್ನು ಎಂದೋ ಮರೆತುಹೋಗಿದ್ದು, ಚುನಾಯಿತ ಶಾಸನಸಭೆ ಕೇವಲ ಆಳ್ವಿಕೆ ವಹಿಸಿಕೊಳ್ಳುವ ಪಕ್ಷದ ಹೈಕಮಾಂಡ್ ನಿರ್ದೇಶನಗಳನ್ನು ಪಾಲಿಸುವ ಗುಂಪಾಗಿ ಉಳಿದಿದೆ. ಪ್ರಧಾನಮಂತ್ರಿ/ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುವ ಚುನಾಯಿತ ಪ್ರತಿನಿಧಿಯನ್ನು , ಆಯ್ಕೆಯಾದ ಜನಪ್ರತಿನಿಧಿಗಳು ಆಯ್ಕೆ ಮಾಡುವ ಪರಂಪರೆ ನಶಿಸಿ ನಾಲ್ಕೈದು ದಶಕಗಳೇ ಗತಿಸಿವೆ. ಇತ್ತೀಚಿನ ವರ್ಷಗಳಲ್ಲಿ ಸಚಿವ ಸಂಪುಟ ರಚನೆಯೂ ಸಹ ಶಾಸನಸಭೆಯ ಮುಖ್ಯಸ್ಥರ ವಿವೇಚನೆಗೊಳಪಡದೆ ಆಡಳಿತಾರೂಢ ಪಕ್ಷದ ಹೈಕಮಾಂಡ್ ನಿರ್ಧಾರದಂತೆ ನಡೆಯುತ್ತದೆ. ಕೆಲವು ದಶಕಗಳ ಹಿಂದೆ ಕಾಂಗ್ರೆಸ್ ಹುಟ್ಟುಹಾಕಿದ ಈ ಪರಂಪರೆಯನ್ನು “ ಹೈಕಮಾಂಡ್ ಸಂಸ್ಕೃತಿ ” ಎಂದು ಹೀಗಳೆಯುತ್ತಿದ್ದ ಬಿಜೆಪಿ ಇಂದು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಇದೇ ಸಂಸ್ಕೃತಿಯನ್ನು ಸಾಂಸ್ಥೀಕರಿಸಿದೆ.
ಹಾಗಾಗಿಯೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 90 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಬ್ಯಾಂಕರ್ಗಳನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ಮೋದಿ “ಮುಂದಿನ ನೂರು ದಿನಗಳ ಕಾಲ ನಾನು ಚುನಾವಣೆಗಳಲ್ಲಿ ತೊಡಗಿರುತ್ತೇನೆ. ಈ ಸಮಯದಲ್ಲಿ ನೀವು ಸಿದ್ಧತೆ ಮಾಡಿಕೊಂಡಿರಿ. ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೇ ಮಾಡಬೇಕಾದ ಕೆಲಸಗಳು ಸಾಕಷ್ಟಿರುತ್ತವೆ ” ಎಂದು ಹೇಳುತ್ತಾರೆ. ಒಂದೆಡೆ ಇಲ್ಲಿ ಗೆಲ್ಲುವ ಆತ್ಮವಿಶ್ವಾಸ ಕಂಡುಬಂದರೂ, ಮತ್ತೊಂದೆಡೆ ಪ್ರಧಾನಿಯ ಆಯ್ಕೆಯಲ್ಲಿ ಸಂಭಾವ್ಯ ಸಂಸದೀಯ ಸಭೆಗೆ ಯಾವುದೇ ಇತರ ಆಯ್ಕೆಗಳಿಲ್ಲ ಎನ್ನುವ ಸಂದೇಶವೂ ಕಾಣುತ್ತದೆ. ಸಂಸದೀಯ ಪ್ರಜಾಪ್ರಭುತ್ವ ಅಪೇಕ್ಷಿಸುವ ತಳಮಟ್ಟದ ಅಧಿಕಾರ ಸ್ವಾಯತ್ತತೆ ಮತ್ತು ಕೆಳಮಟ್ಟದಿಂದ ಮೇಲ್ಮಟ್ಟಕ್ಕೆ ಲಂಬಾನುಕ್ರಮದಲ್ಲಿ ಸಾಗುವ ಅಧಿಕಾರದ ಸಂರಚನೆ ಸಂಪೂರ್ಣ ಪಲ್ಲಟಗೊಂಡಿದ್ದು, ಶಾಸನಸಭೆಯಿಂದ ಹೊರಗಿರುವ ಸಂಸ್ಥೆಯೊಂದು ಆಂತರಿಕ ರಚನೆಯನ್ನು ನಿರ್ದೇಶಿಸುವ ಹೊಸ ಪರಂಪರೆಗೆ ಭಾರತದ ಪ್ರಜಾಪ್ರಭುತ್ವ ಸಾಕ್ಷಿಯಾಗುತ್ತಿದೆ.
ಸಂವಿಧಾನದಲ್ಲಿ ಇಂತಹ ಬೆಳವಣಿಗೆಗೆ ಅವಕಾಶ ಇರುವುದೋ ಇಲ್ಲವೋ ಎನ್ನುವ ಪ್ರಶ್ನೆಯನ್ನು ಬದಿಗಿಟ್ಟು ನೋಡಿದರೂ, ಇದು ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸ್ವಾತಂತ್ರ್ಯದ ಪೂರ್ವಸೂರಿಗಳು ಬಯಸಿದ ಪ್ರಜಾಸತ್ತಾತ್ಮಕ ಭಾರತಕ್ಕೆ ಒಳಿತು ಮಾಡುವ ಬೆಳವಣಿಗೆಯಲ್ಲ ಎನ್ನುವುದಂತೂ ಸ್ಪಷ್ಟವಾಗುತ್ತದೆ. ಕಾಂಗ್ರೆಸ್ ಪಕ್ಷವನ್ನೂ ಒಳಗೊಂಡಂತೆ ಎಲ್ಲ ಪಕ್ಷಗಳಲ್ಲೂ ಆವರಿಸಿರುವ ಈ ಹೈಕಮಾಂಡ್ ಸಂಸ್ಕೃತಿಯೇ ಜನಪ್ರತಿನಿಧಿಗಳ ಸ್ವಾಯತ್ತತೆಯನ್ನು ಕಸಿದುಕೊಳ್ಳುತ್ತಿದೆ. ತನ್ಮೂಲಕ ಮತದಾರರ ಆಯ್ಕೆ ಸ್ವಾತಂತ್ರ್ಯ ಮತ್ತು ಅಭಿಪ್ರಾಯ ಸ್ವಾತಂತ್ರ್ಯವನ್ನೂ ಕ್ಷೀಣಗೊಳಿಸುತ್ತಿದೆ. ಈ ಮೇಲಧಿಕಾರದ ಹೈಕಮಾಂಡ್ ಸಂಸ್ಕೃತಿಯೇ ಪಕ್ಷಗಳ ಒಳಗಿನ ಅಧಿಕಾರ ವಿಕೇಂದ್ರೀಕರಣಕ್ಕೆ ಧಕ್ಕೆ ಉಂಟುಮಾಡುತ್ತಿದ್ದು, ತಳಮಟ್ಟದಿಂದ ರಾಷ್ಟ್ರಮಟ್ಟದವರೆಗೂ ಮತದಾರರಿಂದ ಆಯ್ಕೆಯಾದ ಪ್ರತಿನಿಧಿಗಳು ತಮ್ಮ ಸ್ವಂತಿಕೆ, ಅಸ್ತಿತ್ವ ಹಾಗೂ ಪ್ರಾತಿನಿಧಿತ್ವವನ್ನು ಮೌಲಿಕವಾಗಿ ಕಳೆದುಕೊಳ್ಳುತ್ತಿದ್ದಾರೆ.
ಸ್ವಂತಿಕೆಯಿಲ್ಲದ ಪ್ರಾತಿನಿಧಿತ್ವ
ಹೀಗೆ ತಮ್ಮ ಅಸ್ತಿತ್ವ ಮತ್ತು ಸ್ವಂತಿಕೆಯನ್ನು ಆಳ್ವಿಕೆಯ ಅಂಗಳದಲ್ಲಿ, ಪಕ್ಷದ ಹಿತಾಸಕ್ತಿಗಳಿಗೆ, ಹೈಕಮಾಂಡ್ಗಳಿಗೆ ಒತ್ತೆ ಇಡುವುದರಿಂದಲೇ ರಾಜಕೀಯ ನಾಯಕರಲ್ಲಿ ನೈತಿಕ ಮೌಲ್ಯಗಳೂ ಕುಸಿಯುತ್ತಿವೆ. ತಾವು ಸಾರ್ವಜನಿಕ ವಲಯದಲ್ಲಿ ಆಡುವ ಪ್ರತಿಯೊಂದು ಮಾತೂ, ನೀಡುವ ಪ್ರತಿಯೊಂದು ಹೇಳಿಕೆಯೂ ಕ್ಷಣಮಾತ್ರದಲ್ಲಿ ಕೋಟ್ಯಂತರ ಜನರನ್ನು ತಲುಪುತ್ತದೆ ಎಂಬ ಅರಿವು ಇದ್ದಾಗ್ಯೂ, ಒಂದು ಸಮುದಾಯವನ್ನು ಅಪಮಾನಿಸುವ, ಮಹಿಳೆಯರನ್ನು ಹೀನಾಯವಾಗಿ ಕಾಣುವ, ಅನ್ಯ ಮತದ ಜನರನ್ನು ಹೀಗಳೆಯುವ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಹಿಂದುತ್ವ ಮತ್ತು ಮತೀಯ ರಾಜಕಾರಣದ ನಡುವೆಯೇ ಬೆಳೆದುಬಂದಿರುವ ದ್ವೇಷ ರಾಜಕಾರಣವನ್ನೂ ಈ ನೆಲೆಯಲ್ಲೇ ಗುರುತಿಸಬಹುದು. ತಮ್ಮ ಗೆಲುವಿನ ಶ್ರೇಯವನ್ನು ಮತದಾರರ ಬಾಗಿಲಲ್ಲಿರಿಸದೆ ಹೈಕಮಾಂಡಿನ ಪದತಳದಲ್ಲಿರಿಸುವ ಒಂದು ಮನಸ್ಥಿತಿ ರಾಜಕೀಯ ವಲಯದಲ್ಲಿ ಆಳವಾಗಿ ಬೇರೂರುತ್ತಿರುವುದರಿಂದ, ನೈತಿಕ ಉತ್ತರದಾಯಿತ್ವವೂ ಸಹ ಇಲ್ಲವಾಗುತ್ತಿದೆ.
ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ “ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿತಪ್ಪಿದ್ದಾರೆ” ಎಂದು ಹೇಳುವ ಮೂಲಕ ಇಡೀ ಮಹಿಳಾ ಸಂಕುಲವನ್ನೇ ಅಪಮಾನಗೊಳಿಸಿರುವುದನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ. ಇಲ್ಲಿ ಎರಡು ಅಂಶಗಳನ್ನು ಗುರುತಿಸಬೇಕು. ಮೊದಲನೆಯದು ಶಕ್ತಿ, ಗೃಹಲಕ್ಷ್ಮಿ ಮುಂತಾದ ಯೋಜನೆಗಳಿಂದ ರಾಜ್ಯದ ಮಹಿಳೆಯರಿಗೆ ದೊರೆತಿರುವ ಸಾಮಾಜಿಕ ವಿಮೋಚನೆ ಮತ್ತು ಆರ್ಥಿಕ ಸ್ವಾಯತ್ತತೆಯನ್ನು ಸಹಿಸಿಕೊಳ್ಳುವುದು ಪಿತೃಪ್ರಧಾನ ಮನಸ್ಥಿತಿಗೆ ಕಷ್ಟವಾಗುತ್ತದೆ. ಎರಡನೆಯದು ಗ್ಯಾರಂಟಿ ಯೋಜನೆ ಸಮಸ್ತ ಜನಕೋಟಿಗೂ ಲಭ್ಯವಾದರೂ, ಮಹಿಳೆ ಮಾತ್ರ ಏಕೆ ದಾರಿತಪ್ಪಿದಂತೆ ಕಾಣುತ್ತಾಳೆ ಎಂಬ ಪ್ರಶ್ನೆ. ಲಿಂಗ ಸೂಕ್ಷ್ಮತೆ ಇಲ್ಲದವರಿಂದ ಮಾತ್ರ ಇಂತಹ ಮಾತುಗಳು ಬರಲು ಸಾಧ್ಯ. ತಮ್ಮ ಗ್ಯಾರಂಟಿ ಗೆಲುವು ಮತ್ತು ಸಚಿವ ಸ್ಥಾನದ ಉಮೇದು ರಾಜಕಾರಣಿಗಳಲ್ಲಿ ಈ ರೀತಿಯ ದಾರ್ಷ್ಟ್ಯವನ್ನು ಸೃಷ್ಟಿಸುತ್ತದೆ.
ಜನಪ್ರತಿನಿಧಿಗಳಾಗಿ, ಸಂಭಾವ್ಯ ಸಚಿವ ಅಥವಾ ಮುಖ್ಯಮಂತ್ರಿಯಾಗಿ ತಾವು ತಳಮಟ್ಟದ ಕಟ್ಟಕಡೆಯ ವ್ಯಕ್ತಿಗೂ ಉತ್ತರದಾಯಿಯಾಗಿರುತ್ತೇವೆ ಎಂಬ ಸಾಮಾನ್ಯ ಪರಿಜ್ಞಾನವನ್ನೂ ಇವತ್ತಿನ ರಾಜಕೀಯ ನಾಯಕರು ಕಳೆದುಕೊಂಡಿದ್ದಾರೆ. ಗೆಲುವಿನ ಖಚಿತತೆ ಮತ್ತು ಅಧಿಕಾರ ಕೇಂದ್ರದ ಸಾಮೀಪ್ಯ ಈ ಮನಸ್ಥಿತಿಗೆ ಮೂಲ ಕಾರಣವಾಗಿ ಕಾಣುತ್ತದೆ. “ ತಮ್ಮ ಮಾತಿನಿಂದ ನೋವಾಗಿದ್ದರೆ ಸಾರ್ವಜನಿಕ ಕ್ಷಮೆ ಯಾಚಿಸುತ್ತೇವೆ ” ಎಂಬ ಸೋಗಲಾಡಿ ಹೇಳಿಕೆಗಳು ಲಿಂಗಸೂಕ್ಷ್ಮತೆಯ ಕೊರತೆಯನ್ನು ಸರಿಪಡಿಸುವುದಿಲ್ಲ. ಕಾಂಗ್ರೆಸ್ ನಾಯಕ ಸುರ್ಜೇವಾಲಾ ಅವರೂ ಸಂಸದೆ ಹೇಮಮಾಲಿನಿ ಅವರ ಬಗ್ಗೆ ಇದೇ ರೀತಿಯ ಕೀಳು ಅಭಿರುಚಿಯ ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗಿದ್ದಾರೆ. ಈ ಅಪಮಾನಕರ ಮಾತುಗಳಿಗಾಗಿ ಕ್ಷಮೆ ಕೋರುವ ನಾಯಕರು, ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವ ವಿಚಾರದಲ್ಲೇಕೆ ಕ್ಷಮೆ ಕೋರುವುದಿಲ್ಲ ? ಪಿತೃಪ್ರಧಾನ ಮನಸ್ಥಿತಿ ಇಲ್ಲಿ ಎದ್ದುಕಾಣುತ್ತದೆ.
ಸಾಂವಿಧಾನಿಕ ನೈತಿಕತೆಯ ಪ್ರಶ್ನೆ
ಡಾ. ಬಿ.ಆರ್. ಅಂಬೇಡ್ಕರ್ ಸಾಂವಿಧಾನಿಕ ನೈತಿಕತೆಯ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದುದು ಏಕೆ ಎಂದು ವರ್ತಮಾನದ ರಾಜಕಾರಣ ಗಮನಿಸಿದರೆ ತಿಳಿಯುತ್ತದೆ. ನೈತಿಕತೆಯಿಲ್ಲದ ರಾಜಕಾರಣದಲ್ಲಿ ಸತ್ಯ-ಪಾರದರ್ಶಕತೆ-ಉತ್ತರದಾಯಿತ್ವ ಮತ್ತು ಪ್ರಾಮಾಣಿಕತೆ ಕಳೆದುಹೋಗುತ್ತದೆ, ಸುಳ್ಳು ರಾರಾಜಿಸುತ್ತದೆ. ಕಣ್ಣೆದುರಿನ ವಾಸ್ತವಕ್ಕೆ ಕುರುಡಾಗಿ, ಕಪೋಲಕಲ್ಪಿತ ಚಿತ್ರಣಗಳನ್ನು ಸಾಂಸ್ಥೀಕರಿಸುವ ಆಡಳಿತಗಾರರ ನಿರೂಪಣೆಗಳಲ್ಲಿ, ವ್ಯಾಖ್ಯಾನಗಳಲ್ಲಿ ನೈತಿಕತೆಯ ಈ ಕುಸಿತವನ್ನು ಸ್ಪಷ್ಟವಾಗಿ ಗಮನಿಸಬಹುದು. “ಮಹಿಳೆಯರು ದಾರಿ ತಪ್ಪಿದ್ದಾರೆ” ಎಂಬ ಹೇಳಿಕೆಗೂ, ಅತ್ಯಾಚಾರಕ್ಕೊಳಗಾಗಿ ಬೆತ್ತಲೆ ಮೆರವಣಿಗೆಗೆ ಗುರಿಯಾದ ಅಮಾಯಕ ಮಹಿಳೆಯರ ಬಗ್ಗೆ ಮೌನ ವಹಿಸುವುದಕ್ಕೂ, ಶಿಕ್ಷೆಗೊಳಗಾದ ಅತ್ಯಾಚಾರಿಗಳನ್ನು ʼ ಸಂಸ್ಕಾರವಂತರೆಂದುʼ ಗೌರವಿಸುವುದಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಕಾಣುವುದಿಲ್ಲ. ಮೂರೂ ಸಂದರ್ಭಗಳಲ್ಲಿ ಲಿಂಗ ಸೂಕ್ಷ್ಮತೆ ಮತ್ತು ಮನುಜ ಸಂವೇದನೆಯ ಕೊರತೆ ಢಾಳಾಗಿ ಕಾಣುತ್ತದೆ. ಮಹಿಳೆಯನ್ನು ಗೌರವಿಸುವ ಮನಸ್ಸುಗಳಿಗೆ ಎರಡೂ ಸನ್ನಿವೇಶಗಳು ಪಿತೃಪ್ರಧಾನತೆಯ ಅಹಮಿಕೆಯ ಲಕ್ಷಣಗಳಾಗಿಯೇ ಕಾಣುತ್ತವೆ.
ಭಾರತದ ರಾಜಕೀಯ ವ್ಯವಸ್ಥೆ ತನ್ನ ನೈತಿಕ ಭೂಮಿಕೆಯನ್ನು ಕಳೆದುಕೊಂಡಿರುವುದರಿಂದಲೇ ಇಂದು ಮುಖ್ಯವಾಹಿನಿ ಪಕ್ಷಗಳ ನಡುವೆ ಪರಸ್ಪರ ಗೌರವ-ಸಮ್ಮಾನ ಇಲ್ಲವಾಗಿದೆ. ಹಾಗಾಗಿಯೇ ವಿರೋಧ ಪಕ್ಷಗಳನ್ನು ಸಾಂದರ್ಭಿಕ ಎದುರಾಳಿಗಳಂತೆ ಕಾಣುವುದರ ಬದಲು ಶಾಶ್ವತ ವೈರಿಗಳಂತೆ, ನಿರ್ನಾಮ ಮಾಡಬೇಕಾದ ಶತ್ರುಗಳಂತೆ ಕಾಣುವ ಮನಸ್ಥಿತಿ ಇಂದು ಮುಖ್ಯವಾಹಿನಿ ಪಕ್ಷಗಳನ್ನು ಆವರಿಸಿಕೊಂಡಿದೆ. ಡಬಲ್ ಇಂಜಿನ್ ಸರ್ಕಾರ ಎಂಬ ಹೊಸ ಆಡಳಿತ ಪ್ರಬೇಧವು, ವಿರೋಧ ಪಕ್ಷಗಳನ್ನು ತಲ್ಲಣಗೊಳಿಸುವಷ್ಟುಮಟ್ಟಿಗೆ ಪ್ರಚಾರದಲ್ಲಿದೆ. ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಕರ್ನಾಟಕ ಸರ್ಕಾರದ ಪತನವಾಗುತ್ತದೆ ಎಂಬ ಕೂಗಿನ ಹಿಂದೆ, ಒಂದು ಸ್ಪಷ್ಟ ಬಹುಮತ ಇರುವ ಚುನಾಯಿತ ಸರ್ಕಾರವನ್ನೂ ಉರುಳಿಸುವ ತಂತ್ರಗಾರಿಕೆ ಈಗಾಗಲೇ ಸಿದ್ಧವಾಗಿದೆ ಎಂಬ ಸಂಕಲ್ಪವನ್ನೂ ಗುರುತಿಸಬಹುದು. ಇದು ಭಾರತದ ಪ್ರಜಾಪ್ರಭುತ್ವ ಎದುರಿಸುತ್ತಿರುವ ಅಪಾಯಗಳಲ್ಲೊಂದು.
ಸಂಸದೀಯ ಪ್ರಜಾತಂತ್ರವನ್ನು ಆರೋಗ್ಯಕರ ಸ್ಥಿತಿಯಲ್ಲಿ ಮುಂದೊಯ್ಯಲು ಪ್ರಬಲವಾದ ವಿರೋಧ ಪಕ್ಷಗಳು ಅತ್ಯವಶ್ಯ ಎಂದು ಭಾವಿಸುತ್ತಿದ್ದ ಕಾಲವೂ ಒಂದಿತ್ತು ಎನ್ನುವುದನ್ನು ಯುವ ಪೀಳಿಗೆಗೆ, ಮಿಲೆನಿಯಂ ಜನಸಂಖ್ಯೆಗೆ ಮನದಟ್ಟು ಮಾಡಬೇಕಿದೆ. ವಿಶ್ವದ ಬಹುತೇಕ ಪ್ರಜಾಪ್ರಭುತ್ವಗಳಲ್ಲಿ ಚುನಾವಣೆಗಳ ವೇಳೆ ಸ್ಪರ್ಧೆಯಲ್ಲಿರುವ ಪಕ್ಷಗಳ ನಡುವೆ ಆರೋಗ್ಯಕರ ಚರ್ಚೆ, ಸಂವಾದ ನಡೆಯುತ್ತದೆ. ಪ್ರಣಾಳಿಕೆಗಳ ತುಲನಾತ್ಮಕ ಪರಾಮರ್ಶೆ ಸಾರ್ವಜನಿಕವಾಗಿ ನಡೆಯುತ್ತದೆ. ಆದರೆ ನವ ಭಾರತದಲ್ಲಿ ಪ್ರಧಾನ ವಿರೋಧ ಪಕ್ಷದ ಪ್ರಣಾಳಿಕೆಯಲ್ಲಿ ಸ್ವಾತಂತ್ರ್ಯಪೂರ್ವದ ಮುಸ್ಲಿಂ ಲೀಗ್ ಅಥವಾ ವಿಭಜಕ ಛಾಯೆ ಕಾಣುತ್ತದೆ. ಇದು ಸಾಂವಿಧಾನಿಕ ನೈತಿಕತೆಯ ಕುಸಿತಕ್ಕೆ ಸ್ಪಷ್ಟ ನಿದರ್ಶನ. ಪ್ರಣಾಳಿಕೆಗಳನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸಿ ಮತದಾರರ ಮುಂದೆ ಪರ್ಯಾಯಗಳನ್ನು ಮಂಡಿಸುವ ಬದಲು, ಅದರ ಅಸ್ತಿತ್ವವನ್ನೇ ಅಲ್ಲಗಳೆಯುವ ಹಂತಕ್ಕೆ ಭಾರತದ ಪ್ರಜಾಪ್ರಭುತ್ವ ತಲುಪಿದೆ.
ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮುಂದಿರುವ ಜ್ವಲಂತ ಸವಾಲು ಇದು. ಇಡೀ ರಾಜಕೀಯ ಕ್ಷೇತ್ರ ತನ್ನ ಸಾಂವಿಧಾನಿಕ ನೈತಿಕತೆಯನ್ನು ಕಳೆದುಕೊಂಡಿರುವುದರಿಂದಲೇ ಚುನಾಯಿತ/ಸಂಭಾವ್ಯ/ಅಪೇಕ್ಷಿತ/ಸ್ವಘೋಷಿತ ಜನಪ್ರತಿನಿಧಿಗಳಲ್ಲಿ ಉತ್ತರದಾಯಿತ್ವವೂ ಮರೆಯಾಗುತ್ತಿದೆ. ತಾವು ಯಾರಿಗೂ ಉತ್ತರಿಸಬೇಕಿಲ್ಲ ಎಂಬ ದಾರ್ಷ್ಟ್ಯ ತಳಮಟ್ಟದ ರಾಜಕೀಯ ನಾಯಕರವರೆಗೂ ವ್ಯಾಪಿಸಿದೆ. ಹಾಗಾಗಿಯೇ ಪ್ರಶ್ನಿಸಿದವರು ಅಪರಾಧಿಗಳಾಗುತ್ತಿದ್ದಾರೆ. ಪ್ರಶ್ನಿಸುವುದು ಮಹಾಪರಾಧವಾಗುತ್ತಿದೆ. ಈ ಬೌದ್ಧಿಕ ದಾರಿದ್ರ್ಯವನ್ನು ಸರಿಪಡಿಸುವ ಮಹತ್ವದ ಜವಾಬ್ದಾರಿ ಇರುವ ಸಂವಹನ ಮಾಧ್ಯಮಗಳು ಬಹುತೇಕವಾಗಿ ತಮ್ಮ ನೈತಿಕತೆಯನ್ನು ಕಳೆದುಕೊಂಡಿರುವುದು ವರ್ತಮಾನ ಭಾರತದ ಅತಿ ದೊಡ್ಡ ದುರಂತ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಗೌರವಿಸುವ, ಲಿಂಗ ಸೂಕ್ಷ್ಮತೆ-ಮನುಜ ಸಂವೇದನೆಯನ್ನು ಗಟ್ಟಿಗೊಳಿಸಲು ಬಯಸುವ ಪ್ರಜಾಸತ್ತಾತ್ಮಕ ಮನಸುಗಳು ಈ ಸಂದರ್ಭದಲ್ಲಿ ಒಂದು ಹೊಸ ಪರ್ಯಾಯ ರಾಜಕೀಯ ಸಂಸ್ಕೃತಿಯತ್ತ ಯೋಚಿಸಬೇಕಿದೆ. 2024ರ ಚುನಾವಣೆಗಳ ಫಲಿತಾಂಶಗಳು ಇದಕ್ಕೆ ದಾರಿಮಾಡಿಕೊಡುವುದಂತೂ ನಿಶ್ಚಿತ.