ಕರ್ನಾಟಕದಲ್ಲಿ ಆಡಳಿತದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಗುರುತರ ಆರೋಪ ಮಾಡಿದ್ದರು. ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಅಷ್ಟೇ ಅಲ್ಲದೆ ಪೇ ಸಿಎಂ (Pay CM) ಎಂದು ಪೋಸ್ಟರ್ ಹಾಕುವ ಮೂಲಕ ಭಾರೀ ಪ್ರಚಾರ ಗಳಿಸಿದ್ದರು. ಆ ಬಳಿಕ ಬಿಜೆಪಿ ಸರ್ಕಾರವನ್ನು ಉರುಳಿಸಿ ಭಾರೀ ಬಹುಮತದಿಂದ ಅಧಿಕಾರಕ್ಕೆ ಬರುವಲ್ಲಿ ಕಾಂಗ್ರೆಸ್ ಪಕ್ಷ ಯಶಸ್ಸು ಗಳಿಸಿತ್ತು. ಇದೀಗ ಇದೇ ತಂತ್ರಗಾರಿಕೆಯನ್ನು ತಮಿಳುನಾಡಿನಲ್ಲಿ ಡಿಎಂಕೆ (DMK) ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಳಸುತ್ತಿದೆ. ಪೇ ಮಾಡಿ ಸ್ಕ್ಯಾಮ್ ನೋಡಿ ಎನ್ನುವ ಅಭಿಯಾನ ಮಾಡಿದೆ, ಕಂಡ ಕಂಡಲ್ಲಿ ಪ್ರಧಾನಿ ಮೋದಿ ಫೋಟೋದಲ್ಲಿ ಮಾಡಿರುವ ಕ್ಯೂ ಆರ್ (QR Code) ಪೋಸ್ಟರ್ ಹಾಕಲಾಗಿದೆ.

ಚುನಾವಣಾ ಬಾಂಡ್ ಮೂಲಕ ಮೋದಿ ಸರ್ಕಾರ ಸಂಗ್ರಹ ಮಾಡಿರುವ ಕೋಟ್ಯಂತರ ರೂಪಾಯಿ ಬಗ್ಗೆ ವಿಡಿಯೋ ಮಾಡಿರುವ ಡಿಎಂಕೆ ಪಕ್ಷ ಸ್ಕ್ಯಾನರ್ ಮೂಲಕ ತಮಿಳುನಾಡಿನಾದ್ಯಂತ ಜನರು ತಮ್ಮದೇ ಭಾಷೆಯಲ್ಲಿ ನೋಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ತಮಿಳುನಾಡಿನಲ್ಲಿ ಎಲೆಕ್ಟ್ರೋಲ್ ಬಾಂಡ್ ಹಗರಣ ಹಾಗು CAG ಹಗರಣವನ್ನು ಬಯಲು ಮಾಡುವ ಕೆಲಸ ಮಾಡಿದ್ದಾರೆ. ಏಪ್ರಿಲ್ 19ರಂದು ತಮಿಳುನಾಡಿನಲ್ಲಿ ಮೊದಲ ಹಂತದ ಚುನಾವಣಾ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಕೂಡ ಹಲವಾರು ಬಾರಿ ಪ್ರಚಾರ ಮಾಡ್ತಿದ್ದಾರೆ. ಈ ಬಾರಿ ತಮಿಳುನಾಡಿನಲ್ಲಿ ಖಾತೆ ತೆರೆಯುವ ಕಸರತ್ತು ಮಾಡಿದ್ದಾರೆ. ಆದರೆ DMK ಕೊಟ್ಟಿರುವ ಮಾಸ್ಟರ್ ಸ್ಟ್ರೋಕ್ ಮೋದಿ ಅಬ್ಬರಕ್ಕೆ ತಣ್ಣೀರು ಎರೆಚಿದೆ.
ಜೀ ಪೇ ಅಂದರೆ ಗೂಗಲ್ ಪೇ (Google Pay) ಅಲ್ಲ. ಆದರೆ ಹಣ ಪಾವತಿಸಿ ಜೀ ಎಂದು ಹಿಂದಿಯಲ್ಲಿ ಬಳಸಿದ್ದಾರೆ. ಇದನ್ನು ಯಾರಾದರು ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡಿದಾಗ ಎಲೆಕ್ಟ್ರೋಲ್ ಬಾಂಡ್, CAG ಹಗರಣ, ದೊಡ್ಡ ದೊಡ್ಡ ಯೋಜನೆಯಲ್ಲಿ ನಡೆದಿರುವ ಹಗರಣ ಹಾಗು ದೊಡ್ಡ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ಲೋನ್ ಮನ್ನಾ ಮಾಡಿರುವ ಬಗ್ಗೆ ಹಲವಾರು ವಿಡಿಯೋಗಳಿವೆ. ಜನರು ಯಾವುದನ್ನು ಬೇಕಿದ್ದರು ಆಯ್ಕೆ ಮಾಡಿ ನೋಡಲು ಅವಕಾಶ ಮಾಡಿಕೊಡಲಾಗಿದೆ. ಕೊನೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿ INDIA ಒಕ್ಕೂಟವನ್ನು ಬೆಂಬಲಿಸಿ ಎಂದು ಮನವಿ ಮಾಡಿಕೊಳ್ಳಲಾಗಿದೆ. ಹೊಸ ಮತದಾರರನ್ನು ಸೆಳೆಯಲು ಮೋದಿ ಕಸರತ್ತು ನಡೆಸುತ್ತಿರುವಾಗ ಸ್ಟಾಲಿನ್ ಪಡೆ ಈ ಕೌಂಟರ್ ನೀಡಿದೆ.
ಮೋದಿ ಅಬ್ಬರಿಸಿದ್ರೂ ತಮಿಳುನಾಡಲ್ಲಿ ಸಿಗ್ತಿಲ್ಲ ಯಶಸ್ಸು..!
ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಪ್ರಚಾರ ಮಾಡ್ತಾರೆ. ತಮಿಳುನಾಡಿನ ಭಾಷಾ ಪ್ರೇಮವನ್ನೇ ಲಾಭಕ್ಕೆ ಬಳಸಿಕೊಳ್ಳುವ ಸಲುವಾಗಿ ತಮಿಳು ಭಾಷೆಯನ್ನು ಹಾಡಿ ಹೊಗಳ್ತಾರೆ. ಅವರದ್ದೇ ವೇಷಭೂಷಣ ಹಾಕಿಕೊಂಡು ಪ್ರಚಾರ ಮಾಡ್ತಾರೆ. ಆದರೂ ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯುವಲ್ಲಿ ಯಶಸ್ಸು ಕಂಡಿಲ್ಲ. ಈ ಬಾರಿ ಮಾಜಿ ಪೊಲೀಸ್ ಅಧಿಕಾರಿ ಅಣ್ಣಾ ಮಲೈ ಅವರನ್ನು ಬಳಸಿಕೊಂಡು ಬಿಜೆಪಿ ಖಾತೆ ತೆರೆಯುವ ಹುಮ್ಮಸ್ಸಿನಲ್ಲಿದೆ. ತಮಿಳುನಾಡಿನಲ್ಲಿ ಮೊದಲ ಬಾರಿಗೆ ಮತದಾನ ಮಾಡುವ ಯುವಕರನ್ನು ಸೆಳೆಯುವ ಆಲೋಚನೆ ಬಿಜೆಪಿ ಪಕ್ಷದಲ್ಲಿದೆ. ಆದರೆ ದ್ರಾವಿಡರ ಬೀಡು ತಮಿಳುನಾಡಿನ ಜನರು ಮೋದಿಗೆ ಒಂದು ಸೀಟ್ ಆದರೂ ಕೊಡ್ತಾರಾ..? ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.
ಕೃಷ್ಣಮಣಿ







