ಲೋಕಸಭಾ ಚುನಾವಣಾ ಪ್ರಚಾರ ರಂಗು ಪಡೆದುಕೊಂಡಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಇಂದು ವಿಜಯೇಂದ್ರ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ವಿಜಯೇಂದ್ರ ಮತಬೇಟೆ ನಡೆಸಲಿದ್ದು, ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ. ಕೊಳ್ಳೇಗಾಲ ಹಾಗು ಹನೂರು ಪಟ್ಟಣಗಳಲ್ಲಿ ರೋಡ್ ಶೋ ನಡೆಸಿ ಬಾಲರಾಜ್ ಪರವಾಗಿ ಮತಯಾಚನೆ ಮಾಡಲಿದ್ದಾರೆ. ನಾಳೆ ಸಿಎಂ ಸಿದ್ದರಾಮಯ್ಯ ಕೊಳ್ಳೆಗಾಲ ಭಾಗದಲ್ಲಿ ಪ್ರಚಾರ ಮಾಡಲಿದ್ದು, ಸಿಎಂ ಸಿದ್ದರಾಮಯ್ಯಗೂ ಮೊದಲೇ ಮತಬೇಟೆ ನಡೆಸುತ್ತಿದ್ದಾರೆ ವಿಜಯೇಂದ್ರ.
ಇತ್ತ ಕೋಲಾರದಲ್ಲಿ ಮೈತ್ರಿ ಅಭ್ಯರ್ಥಿ ಪರವಾಗಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರಚಾರ ಮಾಡಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಪರ ಬೆಳಗ್ಗೆ 11 ಗಂಟೆಗೆ ಪ್ರಚಾರ ಆರಂಭ ಮಾಡಲಿದ್ದಾರೆ. ಕೋಲಾರ ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಲಿರುವ ಅಶೋಕ್, ಮಧ್ಯಾಹ್ನ 12ಕ್ಕೆ ಶಾಪೂರು, ಹುತ್ತೂರು ಹೋಬಳಿಯಲ್ಲಿ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಬಂಗಾರಪೇಟೆ ತಾಲೂಕಿನ ಅನಿಗಾನಹಳ್ಳಿ ಗ್ರಾಮದಲ್ಲಿ ಪ್ರಚಾರ ಸಭೆ ಹಮ್ಮಿಕೊಳ್ಳಲಾಗಿದೆ. ಸಂಜೆ 5 ಗಂಟೆಗೆ ಬಂಗಾರಪೇಟೆ ನಗರದಲ್ಲಿ ಆರ್ ಅಶೋಕ್ ನೇತೃತ್ವದಲ್ಲಿ ರೋಡ್ ಶೋ ಹಮ್ಮಿಕೊಳ್ಳಲಾಗಿದೆ. ಬಿಜೆಪಿ-ಜೆಡಿಎಸ್ ಜಂಟಿ ಪ್ರಚಾರ ಸಭೆಗಳಲ್ಲಿ ಉಭಯ ಪಕ್ಷಗಳ ನಾಯಕರು ಹಾಜರು ಇರಲಿದ್ದಾರೆ.

ಮಲೆನಾಡು ಚಿಕ್ಕಮಗಳೂರಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪ್ರಚಾರ ನಡೆಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪರ ಬಿ.ಎಸ್ ಯಡಿಯೂರಪ್ಪ ಮತಯಾಚನೆ ಮಾಡಲಿದ್ದಾರೆ, ಸಖರಾಯಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿರುವ ಮಾಜಿ ಸಿಎಂ ಮತಯಾಚನೆ ಮಾಡಲಿದ್ದಾರೆ. ಬಿಜೆಪಿ ಭದ್ರಕೋಟೆ ಆಗಿರುವ ಚಿಕ್ಕಮಗಳೂರು ಉಡುಪಿ ಕ್ಷೇತ್ರದಲ್ಲಿ ಕಳೆದ ಬಾರಿ ಸಂಸದರಾಗಿದ್ದ ಶೋಭಾ ಕರಂದ್ಲಾಜೆಗೆ ವಿರೋಧ ವ್ಯಕ್ತವಾಗಿದ್ದರಿಂದ ಈ ಬಾರಿ ಬೆಂಗಳೂರು ಉತ್ತರದಿಂದ ಕಣಕ್ಕಿಳಿಸಿ, ಚಿಕ್ಕಮಗಳೂರು – ಉಡುಪಿ ಕ್ಷೇತ್ರಕ್ಕೆ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅಭ್ಯರ್ಥಿ ಮಾಡಲಾಗಿದೆ.













