ನಾ ದಿವಾಕರ
ನೈತಿಕ ಮೌಲ್ಯಗಳನ್ನು ಕಳೆದುಕೊಂಡ ಯಾವುದೇ ಸಮಾಜ ತನ್ನ ಭವಿಷ್ಯದ ಹಾದಿಯಲ್ಲಿ ಎಡವುವ ಸಾಧ್ಯತೆಗಳೇ ಹೆಚ್ಚು. ನೈತಿಕತೆಯನ್ನು ಅಮೂರ್ತ ರೂಪದಲ್ಲಿ, ಸಾಮಾನ್ಯ ಜನತೆಯ ಅರಿವಿಗೆ ನಿಲುಕದ ಹಾಗೆ ನಿರ್ವಚಿಸುವ ಒಂದು ಪರಂಪರೆಯನ್ನು ಸಾಂಪ್ರದಾಯಿಕ ಸಮಾಜಗಳು ರೂಢಿಸಿಕೊಳ್ಳುತ್ತವೆ. ಇಲ್ಲಿ ಸಮಾಜದ ಮೇಲೆ ನಿಯಂತ್ರಣ ಸಾಧಿಸುವ ಬಲಾಢ್ಯ ಸಮುದಾಯಗಳು, ವರ್ಗಗಳು ಕಾಲಕಾಲಕ್ಕೆ ರೂಪಿಸುವ ಅಥವಾ ಸೃಷ್ಟಿಸುವ ನಿರೂಪಣೆಗಳೇ ಇಡೀ ಸಮಾಜವನ್ನು ನಿರ್ದೇಶಿಸುವುದನ್ನು ಕಾಣಬಹುದು. ಭಾರತದ ಸಂದರ್ಭದಲ್ಲಿ ಇದನ್ನು ಶ್ರೇಣೀಕೃತ ಜಾತಿ ವ್ಯವಸ್ಥೆ ಹಾಗೂ ಪ್ರಬಲ ಧಾರ್ಮಿಕ ನೆಲೆಗಳಲ್ಲಿ ಗಮನಿಸಿದಾಗ, ಜನಸಾಮಾನ್ಯರ ನಿತ್ಯಜೀವನದಲ್ಲಿ ನೈತಿಕತೆ ಎನ್ನುವುದು ಒಂದು ನಿರ್ದೇಶಿತ ಮೌಲ್ಯವಾಗಿ ಬೇರೂರಿರುವುದನ್ನು ಗುರುತಿಸಬಹುದು. ಆದರೆ ಸಾಪೇಕ್ಷ ನೆಲೆಯಲ್ಲಿ (Relative terms) ರೂಪಿಸಲಾಗುವ ಈ ನೈತಿಕ ಮೌಲ್ಯಗಳು ಮಾನವ ಸಮಾಜಕ್ಕೆ ಅತ್ಯವಶ್ಯವಾದ ಸೂಕ್ಷ್ಮಸಂವೇದನೆಗಳಿಂದ ವಿಮುಖವಾಗಿರುವ ಸಾಧ್ಯತೆಗಳೇ ಹೆಚ್ಚು.
ಸಾಮಾಜಿಕವಾಗಿ, ಸಾಂಸ್ಕೃತಿಕ ವಲಯಗಳಲ್ಲಿ, ಕೌಟುಂಬಿಕವಾಗಿ ಹಾಗೂ ಎಲ್ಲಕ್ಕಿಂತಲೂ ಮಿಗಿಲಾಗಿ ರಾಜಕಾರಣದಲ್ಲಿ ಮೌಲ್ಯಗಳು ನಿರಂತರವಾಗಿ ಶಿಥಿಲವಾಗುತ್ತಿರುವ ಸನ್ನಿವೇಶವನ್ನು ನವ ಭಾರತ ಎದುರಿಸುತ್ತಿರುವುದರಿಂದ ಈ ಪ್ರಶ್ನೆ ಇಂದು ಹೆಚ್ಚು ಪ್ರಸ್ತುತ ಎನಿಸುತ್ತದೆ. ದೇಶದ ಆಳ್ವಿಕೆಯ ಉಚ್ಛ ಸ್ತರಗಳಲ್ಲಿ ನೈತಿಕತೆ ಹಾಗೂ ಮೌಲ್ಯಗಳು ಬಹುತೇಕ ನಿರ್ನಾಮವಾಗಿರುವ ಹೊತ್ತಿನಲ್ಲಿ ಆಧುನಿಕ ಭಾರತ ಇತಿಹಾಸದತ್ತ ಹಿಂತಿರುಗಿ ನೋಡುತ್ತಲೇ ತನ್ನ ಭವಿಷ್ಯವನ್ನು ಕಟ್ಟಿಕೊಳ್ಳಬೇಕಿದೆ. ಕಟ್ಟುವ ಅಥವಾ ಕಟ್ಟಿರುವುದನ್ನು ಮತ್ತಷ್ಟು ಗಟ್ಟಿಗೊಳಿಸುವ ಜವಾಬ್ದಾರಿ ಇರುವ ಆಳ್ವಿಕೆಯ ಕೇಂದ್ರಗಳು ಅನುಸರಿಸುತ್ತಿರುವ ಬುಲ್ಡೋಜರ್ ನ್ಯಾಯವು ಕೆಡವುವ ಪ್ರಕ್ರಿಯೆಗೆ ಸಾರ್ವತ್ರಿಕ ಮಾನ್ಯತೆ ಪಡೆಯುತ್ತಿರುವ ಸಂದರ್ಭದಲ್ಲಿ ವಿಶಾಲ ಸಮಾಜದ ನೈತಿಕ ತಳಪಾಯವನ್ನು ಸರಿಪಡಿಸಬೇಕಾದ್ದು ಪ್ರಜ್ಞಾವಂತ ಸಮಾಜದ ಆದ್ಯತೆಯೂ ಆಗಬೇಕಿದೆ.
![](https://pratidhvani.com/wp-content/uploads/2024/02/image_750x_61ecda01afa6f-1-jpg.webp)
ಚಾರಿತ್ರಿಕ ಹಿನ್ನೋಟ-ಮುನ್ನೋಟ: ಗತ ಚರಿತೆಯೇ ಶ್ರೇಷ್ಠ ಅಥವಾ ನಡೆದುಬಂದ ಹಾದಿಯೇ ಸರ್ವಶ್ರೇಷ್ಠ ಎಂಬ ಅಹಂಭಾವದೊಂದಿಗೆ ಸಾರ್ವಜನಿಕ ಅಭಿಪ್ರಾಯಗಳನ್ನು ಉತ್ಪಾದಿಸುವ ಬಲಪಂಥೀಯ ರಾಜಕಾರಣದ ನಡುವೆಯೇ ಇತಿಹಾಸವನ್ನು ನೋಡುವ ಬಗೆ ಮತ್ತು ವಿಧಾನವೂ ಸಹ ಬದಲಾಗಬೇಕಿದೆ. ಮಾನವ ಸಮಾಜ ಚರಿತ್ರೆಯನ್ನು ನೋಡುವ ಬಗ್ಗೆ ದಾರ್ಶನಿಕರು ಭಿನ್ನ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ. ಜರ್ಮನಿಯ ತತ್ವಶಾಸ್ತ್ರಜ್ಞ ಹೆಗೆಲ್ “ನಾವು ಚರಿತ್ರೆಯಿಂದ ಕಲಿಯಬಹುದಾದ ಒಂದೇ ಅಂಶವೆಂದರೆ ನಾವು ಇತಿಹಾಸದಿಂದ ಏನನ್ನೂ ಕಲಿಯದೆ ಇರುವುದು ” ಎಂದು ಹೇಳುವ ಮೂಲಕ ಆಧುನಿಕ ಸಮಾಜದ ಮನಸ್ಥಿತಿಯನ್ನು ಬಿಚ್ಚಿಡುತ್ತಾರೆ. ಡಾ. ಬಿ.ಆರ್. ಅಂಬೇಡ್ಕರ್ “ ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು ” ಎಂದು ಹೇಳುವ ಮೂಲಕ ಗತ ಇತಿಹಾಸದ ಕ್ರೌರ್ಯ-ದೌರ್ಜನ್ಯ-ಶೋಷಣೆಗಳನ್ನು ನಗಣ್ಯವಾಗಿ ಕಾಣುವ ಭಾರತದ ಜಾತಿ ವ್ಯವಸ್ಥೆಗೆ ಉಳಿಪೆಟ್ಟು ನೀಡುತ್ತಾರೆ.
“ಇತಿಹಾಸದಿಂದ ಕಲಿಯಲು ವಿಫಲರಾದವರು ಅದನ್ನು ಪುನರಾವರ್ತಿಸುತ್ತಾರೆ ” ಎಂಬ ಎಚ್ಚರಿಕೆಯ ಮಾತುಗಳ ಮೂಲಕ ವಿನ್ಸ್ಟನ್ ಚರ್ಚಿಲ್ ಸಮಕಾಲೀನ ಚರಿತ್ರೆಯ ಬಗ್ಗೆ ಪ್ರಜ್ಞಾವಂತರಲ್ಲಿ ಇರಬೇಕಾದ ಅರಿವನ್ನು ವಿಸ್ತರಿಸಲೆತ್ನಿಸುತ್ತಾರೆ. ಮಾನವ ಸಮಾಜದ ಅಭ್ಯುದಯದ ಹಾದಿಯನ್ನು ವೈಜ್ಞಾನಿಕ ನೆಲೆಯಲ್ಲಿ ವ್ಯಾಖ್ಯಾನಿಸಿದ ಕಾರ್ಲ್ ಮಾರ್ಕ್ಸ್ “ ತತ್ವಜ್ಞಾನಿಗಳು ಜಗತ್ತನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ , ಅದನ್ನು ಬದಲಾಯಿಸುವುದು ಮುಖ್ಯ ” ಎಂದು ಹೇಳುವ ಮೂಲಕ ಚಾರಿತ್ರಿಕ ಭೌತವಾದದ ನೆಲೆಯಲ್ಲಿ ಇಡೀ ಮನುಕುಲದ ಬೆಳವಣಿಗೆಯನ್ನು ವಿಶ್ಲೇಷಿಸುತ್ತಾರೆ. ಹಿಲೇರಿ ಮಾಂಟೆಲ್ ಎಂಬ ಬ್ರಿಟನ್ನಿನ ಲೇಖಕಿ ಚರಿತ್ರೆಯ ಅಧ್ಯಯನದ ಬಗ್ಗೆ ಹೇಳುತ್ತಾ “ ಚರಿತ್ರೆಯ ಅಧ್ಯಯನ ಎಂದರೆ ಆಗಿಹೋಗಿರುವುದನ್ನು ವರದಿ ಮಾಡುವುದಲ್ಲ, ಬದಲಾಗಿ ನಾವು ನೋಡುವ ಮತ್ತು ಗ್ರಹಿಸುವ ವಿಧಾನದಲ್ಲಿ ಇತಿಹಾಸವನ್ನು ವ್ಯಾಖ್ಯಾನಿಸಬೇಕಾಗುತ್ತದೆ. ಈ ಆಲೋಚನೆಯೇ ನಮ್ಮಲ್ಲಿ ಗತ ಇತಿಹಾಸದ ಮಾನವ ಹಕ್ಕು ಉಲ್ಲಂಘನೆಗಳನ್ನು, ಅನ್ಯಾಯ-ದೌರ್ಜನ್ಯಗಳನ್ನು ಅರ್ಥಮಾಡಿಕೊಳ್ಳಲು ನೆರವಾಗಬೇಕು ” ಎಂದು ಹೇಳುತ್ತಾರೆ.
ಅಮೃತಕಾಲದತ್ತ ಧಾವಿಸುತ್ತಿರುವ ನವ ಭಾರತಕ್ಕೆ, ವಿಶೇಷವಾಗಿ ಅತಿದೊಡ್ಡ ಪ್ರಮಾಣದ ಮಿಲೆನಿಯಂ ಜನಸಂಖ್ಯೆಗೆ, ಸಮಕಾಲೀನ ಇತಿಹಾಸದ ನೆಲೆಯಲ್ಲಿ, ಚರಿತ್ರೆಯ ಬಗ್ಗೆ ಈ ಚಿಂತಕರು ಆಡಿರುವ ಮಾತುಗಳು ಮುಖ್ಯವಾಗುತ್ತವೆ. ಗತ ಚರಿತೆಯನ್ನು ವೈಭವೀಕರಿಸುವ ಮೂಲಕ ಪ್ರಾಚೀನ ಮೌಲ್ಯಗಳನ್ನು ಆಧುನಿಕೀಕರಣಗೊಳಿಸುವ ಪ್ರಯತ್ನಗಳ ನಡುವೆಯೇ ಅಲ್ಲಿ ನಡೆದಿರಬಹುದಾದ ಕ್ರೌರ್ಯಗಳಿಗೆ ವೈಜ್ಞಾನಿಕ ನಿರೂಪಣೆಗಳನ್ನು ಸೃಷ್ಟಿಸುತ್ತಾ ಸಮಕಾಲೀನ ಸಾಮಾಜಿಕ ಕ್ರೌರ್ಯಗಳನ್ನು ಸಮರ್ಥಿಸುವ ಒಂದು ಬೌದ್ಧಿಕ ವಾಹಿನಿ ದೇಶದಲ್ಲಿ ಸಕ್ರಿಯವಾಗಿದೆ. ಮತ್ತೊಂದೆಡೆ ಇದೇ ಗತ ಇತಿಹಾಸದ ಸ್ವಾಭಾವಿಕ ಘಟನೆಗಳನ್ನು ವರ್ತಮಾನದ ನೆಲೆಯಲ್ಲಿಟ್ಟು ಇಂದಿನ ಸಾಮಾಜಿಕ ಚೌಕಟ್ಟುಗಳನ್ನು ಶಿಥಿಲಗೊಳಿಸುವ ಚಿಂತನಾ ವಿಧಾನವೂ ಸಾರ್ವಜನಿಕ ಅಭಿಪ್ರಾಯ-ಅಭಿವ್ಯಕ್ತಿಯನ್ನು ನಿರ್ದೇಶಿಸುತ್ತಿದೆ. ಸಾಮಾನ್ಯ ಪರಿಭಾಷೆಯಲ್ಲಿ ವಾಟ್ಸಾಪ್ ವಿಶ್ವವಿದ್ಯಾಲಯ ಎಂದೇ ಹೆಸರಾಗಿರುವ ಇಲ್ಲಿ ಉತ್ಪಾದಿಸಲಾಗುವ ನಿರೂಪಣೆಗಳು ಭಾರತದ ಗತ ಚರಿತೆಯೊಂದಿಗೇ ಸಮಕಾಲೀನ ಬೆಳವಣಿಗೆಗಳನ್ನೂ ಅಪವ್ಯಾಖ್ಯಾನಕ್ಕೊಳಪಡಿಸುತ್ತಿದ್ದು, ಯುವ ಸಮೂಹದ ದಿಕ್ಕುತಪ್ಪಿಸಲಾಗುತ್ತಿದೆ.
![](https://pratidhvani.com/wp-content/uploads/2022/07/parliment.jpg)
ಅಧಿಕಾರ ರಾಜಕಾರಣದ ಮೌಲ್ಯಗಳು: ಈ ಹಿನ್ನೆಲೆಯಲ್ಲಿ ಕಳೆದ ಹತ್ತು ವರ್ಷಗಳ ಆಳ್ವಿಕೆಯಲ್ಲಿ ಭಾರತದ ಸಾಮಾಜಿಕ ಜೀವನದಲ್ಲಿ ಸಾಮಾನ್ಯ ಜನತೆ ಕಳೆದುಕೊಂಡಿರುವ ಕೆಲವು ಮೌಲ್ಯಗಳ ಕುರಿತು ಗಂಭೀರ ಚಿಂತನೆ ನಡೆಯಬೇಕಿದೆ. ಆಳ್ವಿಕೆ ಎಂದರೆ ಕೇವಲ ನಿರ್ದಿಷ್ಟ ಕಾಲಾವಧಿಯ ಅಧಿಕಾರ ನಿರ್ವಹಣೆ ಎಂದೇ ಭಾವಿಸಿರುವ ಭಾರತದ ರಾಜಕೀಯ ವ್ಯವಸ್ಥೆ ತಾನು ನಿರ್ವಹಿಸಬೇಕಾದ ಚಾರಿತ್ರಿಕ ಪಾತ್ರವನ್ನೂ ಮರೆತು, ಭವಿಷ್ಯ ಭಾರತವನ್ನು ಆತಂಕಕ್ಕೀಡುಮಾಡುತ್ತಿದೆ. ಆಡಳಿತ ನಿರ್ವಹಣೆಯಲ್ಲಿ ಸಾಮಾಜಿಕ ಸ್ವಾಸ್ಥ್ಯ, ಸಾಂಸ್ಕೃತಿಕ ಸೌಹಾರ್ದತೆ, ಆರ್ಥಿಕ ಸಮತೋಲನ ಹಾಗೂ ಸಾರ್ವಜನಿಕ ಸಮನ್ವಯತೆಯನ್ನು ಕಾಪಾಡುವ ಮನೋಭಾವ ಇಲ್ಲದೆ ಹೋದರೆ ತಳಮಟ್ಟದ ಸಾಮಾಜಿಕ ನೆಲೆಗಳೂ ಛಿದ್ರವಾಗುತ್ತಲೇ ಹೋಗುತ್ತದೆ ಎಂಬ ಪರಿವೆ ಅಧಿಕಾರ ಕೇಂದ್ರಗಳಲ್ಲಿ ಅವಶ್ಯವಾಗಿ ಇರಬೇಕಾಗುತ್ತದೆ. ಚುನಾಯಿತ ಜನಪ್ರತಿನಿಧಿಗಳಲ್ಲಿ ಈ ಪರಿಜ್ಞಾನದ ಕೊರತೆ ಹೆಚ್ಚಾದಂತೆಲ್ಲಾ ಸಾಮಾಜಿಕ ಸ್ವಾಸ್ಥ್ಯವೂ ಹದಗೆಡುತ್ತಲೇ ಹೋಗುತ್ತದೆ. ಡಾ. ಅಂಬೇಡ್ಕರ್ ಪ್ರತಿಪಾದಿಸಿದ ಸಾಂವಿಧಾನಿಕ ಮೌಲ್ಯಗಳು, ಠಾಗೋರ್-ವಿವೇಕಾನಂದ-ಗಾಂಧಿ ಬೋಧಿಸಿದ ಜೀವನ ಮೌಲ್ಯಗಳು ಇಲ್ಲಿ ಮುಖ್ಯ ಭೂಮಿಕೆಗಳಾಗುತ್ತವೆ. ಶಾಸನಸಭೆಗಳಲ್ಲಿ ಕುಳಿತು ದೇಶದ ಭವಿಷ್ಯವನ್ನು ನಿರ್ಧರಿಸುವ ಜನಪ್ರತಿನಿಧಿಗಳಲ್ಲಿ ಈ ಮೌಲ್ಯಗಳು ಶಿಥಿಲವಾಗಿರುವುದರಿಂದಲೇ ವರ್ತಮಾನದ ಭಾರತ ಮೌಲ್ಯಹೀನವಾಗುವತ್ತ ಸಾಗುತ್ತಿದೆ.
ಇಂದು ಶಿಥಿಲವಾದಂತೆ ಅಥವಾ ನಾಶವಾದಂತೆ ಕಾಣುತ್ತಿರುವ ಮೌಲ್ಯಗಳೆಲ್ಲವೂ ಪರಿಪೂರ್ಣವಾಗಿ ಯಾವ ಕಾಲಘಟ್ದದಲ್ಲೂ ಇರಲಿಲ್ಲ ಎನ್ನುವುದು ಸ್ವತಂತ್ರ ಭಾರತದ ಸಮಕಾಲೀನ ಇತಿಹಾಸದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಆದರೆ ಈ ಸಮಕಾಲೀನ ಚರಿತ್ರೆಯ ವಿಭಿನ್ನ ಹಂತಗಳನ್ನು ಗಮನಿಸಿದಾಗ, ಅಧಿಕಾರ ರಾಜಕಾರಣದ ವ್ಯತ್ಯಯ-ಅಪಸವ್ಯಗಳ ನಡುವೆಯೂ ಕೆಲವು ಮಾರ್ಗದರ್ಶಕ ಎನ್ನಬಹುದಾದ ಮೌಲ್ಯಯುತ ವ್ಯಕ್ತಿತ್ವಗಳು, ಗುಣಲಕ್ಷಣಗಳು ಸ್ವಲ್ಪ ಮಟ್ಟಿಗಾದರೂ ನಮ್ಮ ನಡುವೆ ಇದ್ದುದನ್ನು ಅಲ್ಲಗಳೆಯಲಾಗುವುದಿಲ್ಲ. ಆಡಳಿತ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅಪ್ರಾಮಾಣಿಕತೆಯನ್ನು ಹೊದ್ದುಕೊಂಡೇ ಸ್ವತಂತ್ರ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಿದ ನಾಯಕರನ್ನು ಈ ದೇಶ ಗೌರವಿಸುತ್ತಲೂ ಬಂದಿದೆ. ಏಕೆಂದರೆ ಆಡಳಿತಾರೂಢ ಪಕ್ಷಗಳು ಈ ಎಲ್ಲ ವ್ಯತ್ಯಯಗಳ ಹೊರತಾಗಿಯೂ ಜನಮಾನಸದ ಧ್ವನಿಗೆ ಸ್ಪಂದಿಸುವ ಸಂವೇದನಾಶೀಲ ಧೋರಣೆಯನ್ನು ಹೊಂದಿದ್ದವು. ಕೊಂಚ ಮಟ್ಟಿಗಾದರೂ ಉತ್ತರದಾಯಿತ್ವವನ್ನು ಪ್ರದರ್ಶಿಸುತ್ತಿದ್ದವು.
ಕಳೆದ ಹತ್ತು ವರ್ಷಗಳ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಾವು ಈ ಸಣ್ಣ ಬೆಳಕಿಂಡಿಗಳನ್ನೂ ಕಳೆದುಕೊಂಡು ಗಾಡಾಂಧಕಾರದತ್ತ ಸಾಗುತ್ತಿರುವಂತೆ ತೋರುತ್ತದೆ. ಒಂದೆಡೆ ಆಡಳಿತಾತ್ಮಕ ಮೌಲ್ಯಗಳು ನಶಿಸುತ್ತಿದ್ದರೆ ಮತ್ತೊಂದೆಡೆ ವ್ಯಕ್ತಿಗತ ನೈತಿಕತೆಯೂ ಪಾತಾಳಕ್ಕೆ ಜಿಗಿಯುತ್ತಿರುವುದು ವಿಷಾದಕರ ಬೆಳವಣಿಗೆಯಾಗಿದೆ. ಹಣಕಾಸು ಭ್ರಷ್ಟಾಚಾರ ಒಂದು ಮಹಾಪಾಪ ಎಂದು ಭಾವಿಸುತ್ತಿದ್ದ ರಾಜಕಾರಣವು ಇಂದು ಭ್ರಷ್ಟರಿಗೆ ಸನ್ಮಾನ ಮಾಡುವ ಹೊಸ ರೀತಿರಿವಾಜುಗಳನ್ನು ರೂಢಿಸಿಕೊಂಡಿದೆ. ಅಧಿಕಾರ ಗಳಿಕೆಯೊಂದೇ ಪರಮಧ್ಯೇಯವಾಗಿರುವ ರಾಜಕೀಯ ವಲಯದಲ್ಲಿ ತತ್ವ-ಸಿದ್ಧಾಂತ-ಆದರ್ಶಗಳೆಲ್ಲವೂ ವಿನಿಮಯ ವಸ್ತುಗಳಂತಾಗಿದ್ದು ಪಕ್ಷ ಬದಲಿಕೆಯ ಪ್ರಕ್ರಿಯೆಯೂ ರೂಪಾಂತರಗೊಂಡಿದೆ. ಆಯಾರಾಂ-ಗಯಾರಾಂ ಯುಗವನ್ನು ನಾಚಿಸುವಂತೆ ಇಂದು ರಾಜಕೀಯ ನಾಯಕರ ಬೇಲಿಜಿಗಿತ ಪಕ್ಷಾಂತರ ನಿಷೇಧ ಕಾಯ್ದೆಯನ್ನೂ ನಗೆಪಾಟಲಿಗೀಡುಮಾಡಿದೆ. ವ್ಯಕ್ತಿಗತವಾಗಿ ಕ್ಷಣಮಾತ್ರದಲ್ಲಿ ರೂಪಾಂತರಗೊಳ್ಳುತ್ತಿದ್ದ ಪಕ್ಷ ನಿಷ್ಠೆ ಈಗ ಪಕ್ಷದ ನೆಲೆಯಲ್ಲೂ ವ್ಯಕ್ತವಾಗತೊಡಗಿದ್ದು, ಅಧಿಕಾರಕ್ಕಾಗಿ ಜನಾಭಿಪ್ರಾಯವನ್ನೂ ಲೆಕ್ಕಿಸದಂತೆ ಸ್ವಾರ್ಥ ರಾಜಕಾರಣ ನೆಲೆಯೂರಿದೆ.
ನಾವು ಕಳೆದುಕೊಂಡಿರುವ ಮತ್ತೊಂದು ಅಮೂಲ್ಯ ಮೌಲ್ಯ ಎಂದರೆ ರಾಜಕೀಯ ಉತ್ತರದಾಯಿತ್ವ. ನೆಲ್ಲಿ ಹತ್ಯಾಕಾಂಡದಿಂದ ಇತ್ತೀಚಿನ ದೆಹಲಿ ಗಲಭೆಗಳವರೆಗೂ ಭಾರತದ ತಳಸಮಾಜವನ್ನು ಬಾಧಿಸಿದ ಯಾವುದೇ ಕೋಮು-ಮತೀಯ ಘಟನೆಗಳಿಗೆ ನೈತಿಕ ಹೊಣೆ ಹೊತ್ತ ರಾಜಕೀಯ ನಾಯಕರನ್ನು ಗುರುತಿಸಲಾಗುವುದಿಲ್ಲ. ಈ ಗಲಭೆಗಳಲ್ಲಿ ಸಂಭವಿಸಿದ ಸಾವು ನೋವುಗಳಿಗೆ, ನಷ್ಟವಾದ ಆಸ್ತಿಪಾಸ್ತಿಗಳಿಗೆ, ನಾಶವಾದ ಬದುಕುಗಳಿಗೆ ಉತ್ತರದಾಯಿ ಯಾರು ಎಂಬ ಪ್ರಶ್ನೆ ಎದುರಾದಾಗ ಇಡೀ ವ್ಯವಸ್ಥೆಯೇ ಮೌನಕ್ಕೆ ಶರಣಾಗುತ್ತದೆ. ಆಡಳಿತದ ಜವಾಬ್ದಾರಿ ಹೊತ್ತಿರುವ ಸರ್ಕಾರಗಳಿಗೆ ಈ ಸಾವು ನೋವುಗಳೆಲ್ಲವೂ ಕಾನೂನು ಸುವ್ಯವಸ್ಥೆಯ ನಿರ್ವಹಣೆಯಲ್ಲಿ ಸಂಭವಿಸುವ ಸಹಜ ಪ್ರಕರಣಗಳಾಗಿಯೇ ಕಾಣುತ್ತವೆ. ಇತ್ತೀಚಿನ ಉದಾಹರಣೆಯಾಗಿ ಮಣಿಪುರದತ್ತ ನೋಡಬಹುದು. ಯಾವುದೇ ರೀತಿಯ ಹತ್ಯಾಕಾಂಡ-ಸಾವುನೋವುಗಳಿಗೆ ನೈತಿಕ ಹೊಣೆ ಹೊತ್ತು ನಿರ್ಗಮಿಸುವ ರಾಜಕೀಯ ಉತ್ತರದಾಯಿತ್ವ ಭಾರತದ ರಾಜಕೀಯ ನಿಘಂಟಿನಲ್ಲಿ ತನ್ನ ಸ್ಥಾನ ಕಳೆದುಕೊಂಡಿದೆ.
ಸಂಸದೀಯ ನೈತಿಕತೆಯ ನೆಲೆಗಳು: ದುರಂತವೆಂದರೆ ಈ ಬೆಳವಣಿಗೆಯೊಂದಿಗೇ ರಾಜಕೀಯ ನಾಯಕರಲ್ಲಿ ಸಂಯಮ, ಸಭ್ಯತೆ, ಸಾರ್ವಜನಿಕ ವ್ಯವಧಾನವೂ ನಿರಂತರವಾಗಿ ಕ್ಷೀಣಿಸುತ್ತಲೇ ಇದೆ. “ಗುಂಡಿಟ್ಟು ಕೊಲ್ಲಿ/ ಕೊಲ್ಲುತ್ತೇನೆ/ಕೊಲ್ಲಬೇಕು” ಎಂಬ ರಾಜಕೀಯ ನಾಯಕರುಗಳ ಸಾರ್ವಜನಿಕ ಹೇಳಿಕೆಗಳು ಅಪಭ್ರಂಶವಾಗಿ ಕಾಣುವುದಕ್ಕಿಂತಲೂ ಹೆಚ್ಚಾಗಿ ದ್ವೇಷ ರಾಜಕಾರಣದ ಸಹಜಾಭಿವ್ಯಕ್ತಿಯಾಗಿ ತೋರುತ್ತಿದೆ. ಸಮಾಜದ ದಿಕ್ಕುತಪ್ಪಿಸುವ ಇಂತಹ ಹೇಳಿಕೆಗಳಿಗೆ ಯಾವ ರಾಜಕೀಯ ನಾಯಕರೂ ಅವರ ಪಕ್ಷಗಳಿಂದ ಶಿಕ್ಷೆಗೊಳಗಾಗುತ್ತಿಲ್ಲ. ಇತ್ತೀಚೆಗೆ ಮುಂಬಯಿಯ ಕಾರ್ಪೋರೇಟರ್ ಒಬ್ಬರು ಫೇಸ್ಬುಕ್ ಲೈವ್ ಕಾರ್ಯಕ್ರಮವೊಂದರಲ್ಲೇ ಗುಂಡೇಟಿಗೆ ಬಲಿಯಾದ ಪ್ರಕರಣ ಈ ಮನಸ್ಥಿತಿಯ ಕ್ರೂರ ಸ್ವರೂಪವಾಗಿ ಕಾಣುತ್ತದೆ. ಸಮಕಾಲೀನ ಭಾರತದ ಇತಿಹಾಸ ಪುಟಗಳನ್ನು ತಿರುವಿ ಹಾಕಿದಾಗ, ಕನಿಷ್ಠ ಹತ್ತು ವರ್ಷಗಳ ಹಿಂದೆ ಸಹ ಇಂತಹ ಕ್ರೂರ ಮನಸ್ಥಿತಿಯನ್ನು ಕಾಣಲಾಗುತ್ತಿರಲಿಲ್ಲ. ರಾಜಕೀಯ ನಾಯಕರಲ್ಲಿರಬೇಕಾದ ವಿವೇಕ, ವಿವೇಚನೆ, ವ್ಯವಧಾನ ಮತ್ತು ಸಂಯಮಗಳು ಭ್ರಷ್ಟವಾಗುತ್ತಿದ್ದರೂ, ಮೌನವಾಗಿ ಸಹಿಸಿಕೊಳ್ಳುವ ಹೈಕಮಾಂಡ್ಗಳು ಶಿಥಿಲವಾಗುತ್ತಿರುವ ಮೌಲ್ಯಗಳಿಗೆ ಮತ್ತಷ್ಟು ಇಂಬು ನೀಡುತ್ತಿವೆ.
ಅಂಬೇಡ್ಕರ್, ನೆಹರೂ ಮೊದಲಾದ ಸ್ವತಂತ್ರ ಭಾರತದ ಪ್ರಾರಂಭಿಕ ದಿನಗಳ ನಾಯಕರು ಅನುಸರಿಸುತ್ತಿದ್ದ ಸಂಸದೀಯ ಮೌಲ್ಯಗಳು ಹಾಗೂ ಸಾಂವಿಧಾನಿಕ ನೈತಿಕತೆಯೂ ಸಹ ಪ್ರಸ್ತುತ ಸಂದರ್ಭದಲ್ಲಿ ಮರೆಯಾದಂತೆ ಕಾಣುತ್ತಿದೆ. ನೆಹರೂ ಕಾಲದಲ್ಲಿ ಲೋಕಸಭೆಯ ಸರಾಸರಿ ವಾರ್ಷಿಕ ಕಲಾಪದ ದಿನಗಳು 135 ದಿನಗಳಾಗಿದ್ದವು. ಈಗ ಮುಕ್ತಾಯವಾಗುತ್ತಿರುವ 17ನೆಯ ಲೋಕಸಭೆಯಲ್ಲಿ ಈ ಸರಾಸರಿ 55 ದಿನಗಳಿಗೆ ಇಳಿದಿದೆ. ಚರ್ಚೆಗೆ ಅವಕಾಶ ನೀಡದೆ ಮಸೂದೆಗಳನ್ನು ಅಂಗೀಕರಿಸುವುದು, ವಿರೋಧ ಪಕ್ಷಗಳನ್ನು ಅಮಾನತಿನಲ್ಲಿಟ್ಟು ಕಾಯ್ದೆಗಳನ್ನು ಜಾರಿಗೊಳಿಸುವುದು, ಜನಸಾಮಾನ್ಯರ ಬದುಕನ್ನು ಪ್ರಭಾವಿಸುವ ಮಹತ್ವದ ಕಾಯ್ದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ಅನುಷ್ಟಾನ ಮಾಡುವುದು, ವಿರೋಧ ಪಕ್ಷಗಳ ಪ್ರತಿರೋಧವನ್ನು ಪ್ರಜಾಸತ್ತಾತ್ಮಕವಾಗಿ ಸ್ವೀಕರಿಸದೆ ದೇಶದ್ರೋಹದ ನಡೆ ಎಂಬಂತೆ ಬಿಂಬಿಸುವುದು ಈ ಎಲ್ಲ ಅಸಾಂವಿಧಾನಿಕ ಬೆಳವಣಿಗೆಗಳಿಗೆ ಭಾರತದ ಸಂಸದೀಯ ಪ್ರಜಾತಂತ್ರ ಸಾಕ್ಷಿಯಾಗಿದೆ. ಸಂಸತ್ತಿನ ಸಾಂಖ್ಯಿಕ ಅಧ್ಯಯನದ ಅನುಸಾರವೇ 58% ಮಸೂದೆಗಳು ಮಂಡನೆಯಾದ ಎರಡು ವಾರಗಳೊಳಗೆ ಅಂಗೀಕೃತವಾಗಿವೆ. 35 % ಮಸೂದೆಗಳು ಒಂದು ಗಂಟೆಯ ಒಳಗೆ ಅನುಮೋದನೆ ಪಡೆದಿವೆ. ಅಂದರೆ ದೇಶದ ಜನತೆಯ ಹಿತದೃಷ್ಟಿಯಿಂದ ನಡೆಯಬೇಕಾದ ಚರ್ಚೆಗಳು ನಡೆಯುತ್ತಿಲ್ಲ ಎನ್ನುವುದು ಸ್ಪಷ್ಟ.
![](https://pratidhvani.com/wp-content/uploads/2022/06/india-farmer-protests.jpg)
ಅಂದರೆ ಸ್ಪಷ್ಟ ಬಹುಮತ ಎನ್ನುವುದು ಅಧಿಕಾರ ರಾಜಕಾರಣದ ಸ್ವೇಚ್ಛಾಧಿಕಾರಕ್ಕೆ ಅವಕಾಶ ಒದಗಿಸಿದೆ. ಸಂಸದೀಯ ಶಿಸ್ತು ಮತ್ತು ಸಾಂವಿಧಾನಿಕ ನೈತಿಕತೆ ಎಂಬ ಅಮೂಲ್ಯ ಆದರ್ಶಗಳು ಹಂತಹಂತವಾಗಿ ಶಿಥಿಲವಾಗುತ್ತಿರುವುದನ್ನು ವರ್ತಮಾನ ಭಾರತದ ಶಾಸನ ಸಭೆಗಳ ಚರ್ಚೆಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಹತ್ತು ವರ್ಷದ ಬಹುಮತದ ಆಳ್ವಿಕೆಯ ಹೊರತಾಗಿಯೂ ಆಡಳಿತ ವೈಫಲ್ಯಗಳಿಗೆ, ಸಾಮಾಜಿಕ-ಆರ್ಥಿಕ ಹಿನ್ನಡೆಗಳಿಗೆ ಹಿಂದಿನ ಸರ್ಕಾರಗಳನ್ನು ದೂಷಿಸುವುದು ಉತ್ತರದಾಯಿತ್ವದ ಕೊರತೆಯನ್ನು ಎತ್ತಿ ತೋರಿಸುತ್ತದೆ. ಪಕ್ಷಾಂತರ ಎಂದು ಗೌರವಯುತವಾಗಿ ಗುರುತಿಸಲಾಗುವ ರಾಜಕೀಯ ಬೇಲಿಜಿಗಿತಕ್ಕೆ ಅಧಿಕೃತ ಮಾನ್ಯತೆ ನೀಡುವ ಒಂದು ಬೆಳವಣಿಗೆಗೂ ನಾವು ಸಾಕ್ಷಿಯಾಗಿದ್ದೇವೆ. ಅವಕಾಶವಾದಿ/ಸಮಯಸಾಧಕ ರಾಜಕಾರಣಕ್ಕೆ ʼದೇಶದ ಹಿತ/ಜನರ ಹಿತಾಸಕ್ತಿʼ ಮುಂತಾದ ಗುಣವಿಷೇಷಣಗಳನ್ನು ಆರೋಪಿಸುವ ಮೂಲಕ ರಾಜಕೀಯ ನಾಯಕರು/ಪಕ್ಷಗಳು ಮೂಲ ಜನಾಭಿಪ್ರಾಯವನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿರುವುದನ್ನೂ ನೋಡುತ್ತಿದ್ದೇವೆ.
ಈ ಅಸಂಸದೀಯ ನಡವಳಿಕೆಗಳನ್ನು ಪ್ರಶ್ನಿಸಬೇಕಾದ ನಾಗರಿಕರು ಪಕ್ಷನಿಷ್ಠೆ/ತತ್ವನಿಷ್ಠೆ/ನಾಯಕನಿಷ್ಠೆಯ ಪ್ರಭಾವಕ್ಕೊಳಪಟ್ಟು ಪ್ರಶ್ನಿಸುವ ಮನೋಭಾವವನ್ನೇ ಕಳೆದುಕೊಳ್ಳುತ್ತಿದ್ದಾರೆ. 1975ರಲ್ಲಿ ಪ್ರಜಾಪ್ರಭುತ್ವಕ್ಕೆ ಅಪಾಯ ಒದಗಿದಾಗ ಸಾಗರೋಪಾದಿಯಾಗಿ ಒಗ್ಗಟ್ಟಾಗಿ ವಿರೋಧಿಸಿದ ಸಮಾಜ 50 ವರ್ಷಗಳ ನಂತರ ಸಣ್ಣ ತೊರೆಗಳಲ್ಲೂ ಕಾಣದಿರುವುದು ಬದಲಾದ ಭಾರತದ ಸಂಕೇತವಾಗಿ ಕಾಣುತ್ತದೆ. ಮತ್ತೊಂದೆಡೆ ಪ್ರತಿಭಟನೆಗಳನ್ನು ಪ್ರಜಾಸತ್ತೆಯ ಒಂದು ಭಾಗ ಎಂದು ಪರಿಗಣಿಸುತ್ತಿದ್ದ ಆಳುವ ವ್ಯವಸ್ಥೆ ಇಂದು ತಮ್ಮ ಹಕ್ಕುಗಳಿಗಾಗಿ ಹೋರಾಡುವ ಅನ್ನದಾತರನ್ನೂ ದೇಶದ್ರೋಹಿಗಳಂತೆ ಬಿಂಬಿಸಲು ಯತ್ನಿಸುತ್ತಿರುವುದು ಇದರ ಮತ್ತೊಂದು ಆಯಾಮದಂತೆ ಕಾಣುತ್ತದೆ. ಅಂತರ್ಜಾಲ ನಿಷ್ಕ್ರಿಯಗೊಳಿಸುವುದು, ಬುಲ್ಡೋಜರ್ ನ್ಯಾಯ, ಕರಾಳ ಶಾಸನಗಳನ್ನು ಬಳಸುವ ಮೂಲಕ ಪ್ರತಿರೋಧದ ಧ್ವನಿಗಳನ್ನು ಹತ್ತಿಕ್ಕುವ ಹೊಸ ವಿಧಾನಗಳನ್ನು ನವ ಭಾರತ ಕಂಡುಕೊಂಡಿದೆ. ಈ ಕ್ರಮಗಳನ್ನು ಪ್ರಶ್ನಿಸುವ ಕನಿಷ್ಠ ವಿವೇಕವನ್ನೂ ಸುಶಿಕ್ಷಿತ-ಮೇಲ್ವರ್ಗದ-ಮೇಲ್ಪದರದ-ಹಿತವಲಯ ಸಮಾಜ ಕಳೆದುಕೊಂಡಿದೆ.
ಕಳೆದ ಒಂದು ವರ್ಷದಲ್ಲಿ ಕಾರ್ಪೋರೇಟ್ ಆದಾಯ ತೆರಿಗೆಗಿಂತಲೂ ವೈಯುಕ್ತಿಕ ಆದಾಯ ತೆರಿಗೆ ಸಂಗ್ರಹ ಹೆಚ್ಚಾಗಿರುವುದು ಬದಲಾಗುತ್ತಿರುವ ಭಾರತದ ಮುನ್ಸೂಚನೆಯಾಗಿ ತೋರುತ್ತದೆ. ರಾಜಕೀಯ ನೆಲೆಯಲ್ಲಿ ಅರ್ಥ ಕಳೆದುಕೊಂಡಿರುವ ತತ್ವ ಸಿದ್ಧಾಂತಗಳು, ಅಧಿಕಾರ ರಾಜಕಾರಣದ ವಿನಿಮಯ ವಸ್ತುಗಳಂತೆ ಬಳಕೆಯಾಗುತ್ತಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಆರ್ಥಿಕತೆಗೆ ಪೂರಕವಾಗಿ ರೂಪುಗೊಳ್ಳುತ್ತಿರುವ ಭಾರತದ ಕಾರ್ಪೋರೇಟ್ ಕೇಂದ್ರಿತ ಆಡಳಿತ ವ್ಯವಸ್ಥೆಯಲ್ಲಿ ತಳಸಮಾಜದ ಸಾಮಾನ್ಯ ಜನತೆಯ ಆಯ್ಕೆಗಳು ನಗಣ್ಯವಾಗುತ್ತಿದ್ದರೆ, ಆದ್ಯತೆಗಳು ನಿಕೃಷ್ಟವಾಗುತ್ತಿವೆ. ಹಂತಹಂತವಾಗಿ ಕಳೆದುಹೋಗುತ್ತಿರುವ ನೈತಿಕತೆ ಮತ್ತು ಸಾಮಾಜಿಕ ಪ್ರಜ್ಞೆ ಅಭಿವೃದ್ಧಿ ಪಥದಲ್ಲಿರುವ ಭಾರತದ ವಿದ್ಯಾವಂತ ಸಮಾಜವನ್ನು ಜಾಗೃತಗೊಳಿಸಬೇಕಿತ್ತು. ಆದರೆ ಈ ಬೃಹತ್ ಸಮೂಹ ಭ್ರಮಾಧೀನವಾಗಿದೆ. ತಳಮಟ್ಟದ ಕಟ್ಟಕಡೆಯ ವ್ಯಕ್ತಿಯೂ ಜಾತಿ-ಧರ್ಮ-ಮಾರುಕಟ್ಟೆಯ ಭ್ರಮೆಗೊಳಗಾಗುತ್ತಿರುವ ಹೊತ್ತಿನಲ್ಲಿ ಪ್ರಜ್ಞಾವಂತ ನಾಗರಿಕರು, ಕಳೆದುಹೋಗುತ್ತಿರುವ ನೈತಿಕ ನೆಲೆಗಳನ್ನು ಮರಳಿ ಸ್ವ-ಸ್ಥಾನಕ್ಕೆ ತರಲು ಯೋಚಿಸಬೇಕಿದೆ. ಇದು ಕಾಲದ ಅನಿವಾರ್ಯತೆಯೂ ಆಗಿದೆ.