ರೈತರ ಬಂಧನದ ಹಿಂದಿರುವ ಕ್ರಿಮಿನಲ್ ಮೈಂಡ್ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕೇಂದ್ರ ಸರ್ಕಾರದ್ದು ಎಂದು ಆರೋಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಅವರು ಬಂಧನದಿಂದ ಹೋರಾಟವನ್ನು ಹತ್ತಿಕ್ಕಲಾಗದು ಎಂದಿದ್ದಾರೆ.
ಹೊಸದಿಲ್ಲಿಯಲ್ಲಿ (newdelhi) ನಡೆಯಲಿರುವ ರೈತ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ರೈತರನ್ನು ಬಂಧಿಸಿರುವ ಮಧ್ಯಪ್ರದೇಶದ ಕ್ರಮವನ್ನು ಖಂಡಿಸಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ದೆಹಲಿಯಲ್ಲಿ ನಾಳೆ ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ ಹುಬ್ಬಳ್ಳಿಯ ರೈತರನ್ನು ಭೋಪಾಲ್ ನಲ್ಲಿ ಬಂಧಿಸಿರುವ ಮಧ್ಯಪ್ರದೇಶ ಸರ್ಕಾರದ ಕ್ರಮ ಅತ್ಯಂತ ಖಂಡನೀಯ.
ಬಂಧಿಸಲಾದ ರಾಜ್ಯದ ನಮ್ಮ ಎಲ್ಲ ರೈತರನ್ನು ತಕ್ಷಣ ಬಿಡುಗಡೆಗೊಳಿಸಿ ನಾಳೆ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಿಕೊಳ್ಳಲು ಕಳಿಸಿಕೊಡಬೇಕು ಎಂದು ಮಧ್ಯಪ್ರದೇಶ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಂಧಿಸಿರುವುದು ಮಧ್ಯಪ್ರದೇಶದ ಸರ್ಕಾರವಾದರೂ ಈ ದುಷ್ಕೃತ್ಯದ ಹಿಂದಿನ ಕ್ರಿಮಿನಲ್ ಮೆದುಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎನ್ನುವುದು ಸ್ಪಷ್ಟ. ಈ ರೀತಿ ಬಂಧಿಸಿ, ಬೆದರಿಸಿ ರೈತರ ಹೋರಾಟವನ್ನು ಹತ್ತಿಕ್ಕಲಾಗದು. ಇಂತಹ ದಬ್ಬಾಳಿಕೆಯಿಂದ ಇನ್ನಷ್ಟು ರೈತರು ಬೀದಿಗಿಳಿಯಬಹುದೇ ಹೊರತು ಮಣ್ಣಿನ ಮಕ್ಕಳ ಹೋರಾಟ ನಿಲ್ಲದು ಎಂದಿದ್ದಾರೆ.
ಶಾಂತಿ-ಸುವ್ಯವಸ್ಥೆಯ ಕಾಳಜಿಯನ್ನು ಕೇಂದ್ರ ಸರ್ಕಾರ ಹೊಂದಿದ್ದರೆ ತಕ್ಷಣ ರೈತರ ಬೇಡಿಕೆಗಳನ್ನು ಈಡೇರಿಸಿ ಸಮಸ್ಯೆ ಬಗೆಹರಿಸಬೇಕೇ ಹೊರತು ಈ ರೀತಿ ದಮನ-ದೌರ್ಜನ್ಯ ನಡೆಸಿ ರೈತರ ಬಾಯಿ ಮುಚ್ಚಿಸುವುದಲ್ಲ ಎಂದು ಹರಿಹಾಯ್ದಿದ್ದಾರೆ.
ಸಿದ್ದರಾಮಯ್ಯ ಅವರ ಪೋಸ್ಟ್ ಗೆ ವ್ಯಾಪಕ ಪ್ರತಿಕ್ರಿಯೆ ಬಂದಿದ್ದು ನೆಟ್ಟಿಗರು ಕಳಸಾ ಬಂಡೂರಿ ಹೋರಾಟದ ವೇಳೆ ರೈತರ ನಡೆದ ಲಾಠಿಚಾರ್ಜ್ ಅನ್ನು ಪ್ರಸ್ತಾಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಹೊಸ್ತಿಲಲ್ಲಿ ನಾಟಕ ಆಡುವುದನ್ನು ನಿಲ್ಲಿಸಿ ಮೊದಲು ರೈತರಿಗೆ ಬರಪರಿಹಾರ ಕೊಡಿಸಿ ಎಂದು ಆಗ್ರಹಿಸಿದ್ದಾರೆ.
#farmers #farmersprotest #siddaramaiah #narendramodi #bengaluru


