ಕ್ಯಾಲಿಕಟ್ : ಪ್ರಧಾನಿ ಮೋದಿ (Modi) ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸಿ ಕಿರುನಾಟಕ ಪ್ರದರ್ಶಿಸಿದ ಸಹಾಯಕ ರಿಜಿಸ್ಟ್ರಾರ್ ಸೇರಿದಂತೆ ಇಬ್ಬರು ಅಧಿಕಾರಿಗಳನ್ನು ಕೇರಳ ಹೈಕೋರ್ಟ್ (Kerala High court) ಅಮಾನತು ಮಾಡಿದೆ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಶಿಶ್ ಜಿತೇಂದ್ರ ದೇಸಾಯಿ ಅವರು ಘಟನೆಯ ಬಗ್ಗೆ ತನಿಖೆ ನಡೆಸುವಂತೆ ರಿಜಿಸ್ಟ್ರಾರ್ ಗೆ ನಿರ್ದೇಶನ ನೀಡಿದ್ದಾರೆ ಮತ್ತು ಹೈಕೋರ್ಟ್ ಸಭಾಂಗಣದಲ್ಲಿ ವಿವಾದಾತ್ಮಕ ಕಿರುನಾಟಕ ಪ್ರದರ್ಶನವನ್ನು ಯಾವ ಸಂದರ್ಭಗಳಲ್ಲಿ ನಡೆಸಲಾಯಿತು ಎಂಬುದರ ಕುರಿತು ಆಡಳಿತ ವಿಭಾಗದ ರಿಜಿಸ್ಟ್ರಾರ್ ಅವರಿಂದ ವಿವರಣೆ ಕೇಳಿದ್ದಾರೆ.
ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರ ನಿರ್ದೇಶನದ ಮೇರೆಗೆ ಸಹಾಯಕ ರಿಜಿಸ್ಟ್ರಾರ್ ಸುಧೀಶ್ ಮತ್ತು ಕೋರ್ಟ್ ಕೀಪರ್ ಸುಧೀಶ್ ಪಿ.ಎಂ ಅವರನ್ನು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಪಿ ಕೃಷ್ಣ ಕುಮಾರ್ ಅವರು ಅಮಾನತುಗೊಳಿಸಿದ್ದಾರೆ.

ಯಾವುದೋ ಒಂದು ವಸ್ತುವಿಗೆ ಔಷಧೀಯ ಗುಣವಿದೆ ಎಂದು ನಾನು ಹೇಳಿದರೆ, ಈ ಮೂರ್ಖರು ಗೋವಿನ ಸಗಣಿ ತಿನ್ನಲು ಸಹ ಹಿಂಜರಿಯುವುದಿಲ್ಲ ಎಂದು ಕಿರುನಾಟಕದಲ್ಲಿ ಒಂದು ಡೈಲಾಗ್ ಹೇಳುತ್ತದೆ. ‘ಅದು ನನ್ನ ಶಕ್ತಿ’ ಎಂದು ಪ್ರಧಾನಿ ಮೋದಿಯ ಪಾತ್ರದಲ್ಲಿ ನಟಿಸಿರುವ ವ್ಯಕ್ತಿಯೊಬ್ಬರು ಹೇಳುತ್ತಿರುವುದು ಕೂಡ ನಾಟಕದಲ್ಲಿದೆ.
ಹೈಕೋರ್ಟ್ ನೌಕರರ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಪ್ರದರ್ಶಿಸಲಾದ ನಾಟಕದಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ವಿರುದ್ಧ ಅವಹೇಳನಕಾರಿ ಸಂಗತಿಗಳಿವೆ ಎಂದು ಆರೋಪಿಸಿ ಬಿಜೆಪಿ ಕಾನೂನು ಘಟಕವು ಮುಖ್ಯ ನ್ಯಾಯಮೂರ್ತಿಗೆ ದೂರು ನೀಡಿತ್ತು.
ಈ ಕಿರುನಾಟಕದಲ್ಲಿ ಕೇಂದ್ರ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಾದ ಜಲ ಜೀವನ್ ಮಿಷನ್ ಮತ್ತು ಭಾರತ್ ಕಿ ಆಜಾದಿ ಕಾ ಅಮೃತ್ ಮಹೋತ್ಸವವನ್ನು ಅವಮಾನಿಸಲಾಗಿದೆ ಎಂದು ಆರೋಪಿಸಲಾಗಿದೆ.
ನಾಟಕವನ್ನು ಸ್ಪಷ್ಟ ರಾಜಕೀಯ ಅಜೆಂಡಾದೊಂದಿಗೆ ಪ್ರದರ್ಶನ ಮಾಡಲಾಗಿದೆ ಮತ್ತು ವಿಷಯಗಳು, ಚಿತ್ರಕಥೆ, ಸಂಭಾಷಣೆಗಳು ಮತ್ತು ಪಾತ್ರಗಳು ಕೇಂದ್ರ ಸರ್ಕಾರ ಮತ್ತು ನಿರ್ದಿಷ್ಟವಾಗಿ ಪ್ರಧಾನ ಮಂತ್ರಿಯ ನೀತಿಗಳನ್ನು ಟೀಕಿಸುತ್ತಿವೆ ಎಂದು ಹೈಕೋರ್ಟ್‌ಗೆ ದೂರು ನೀಡಲಾಗಿತ್ತು. ಹೈಕೋರ್ಟ್ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆದ ನಂತರ ಕಿರುನಾಟಕವನ್ನು ಪ್ರದರ್ಶಿಸಲಾಗಿದೆ ಎಂದು ಕೂಡ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಮಲಯಾಳಂ ಭಾಷೆಯ ನಾಟಕದಲ್ಲಿ ಚಿತ್ರಕಥೆಗಾರ ಮತ್ತು ಪ್ರದರ್ಶಕರು ಪ್ರಧಾನ ಮಂತ್ರಿಯನ್ನು ಲೇವಡಿ ಮಾಡಿದರು ಮತ್ತು ಕೇಂದ್ರ ಸರ್ಕಾರದ ನೀತಿಗಳನ್ನು ಟೀಕಿಸಿದ್ದಾರೆ. ಆಜಾದಿ ಕಾ ಅಮೃತ್ ಮಹೋತ್ಸವವನ್ನು ಸೂಕ್ಷ್ಮವಾಗಿ ಅಪಹಾಸ್ಯ ಮಾಡಲಾಗಿದೆ. ಕಿರುನಾಟಕದಲ್ಲಿ ದೇಶಕ್ಕೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಹೇಳಲಾಗಿತ್ತು. ‘ಆಜಾದಿ ಕಾ ಅಮೃತ್ ಮಹೋತ್ಸವ”ದ ಅಂಗವಾಗಿ ಕೇರಳದ ಹೈಕೋರ್ಟ್ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಬಡತನ ನಿರ್ಮೂಲನೆಯಲ್ಲಿ ವಿಫಲತೆ, ಜಲ್ ಜೀವನ್ ಮಿಷನ್ ಮತ್ತು ಇತರ ಯೋಜನೆಗಳ ವೈಫಲ್ಯಕ್ಕಾಗಿ ಕೇಂದ್ರ ಸರ್ಕಾರವನ್ನು ಕಿರುನಾಟಕದಲ್ಲಿ ಲೇವಡಿ ಮಾಡಲಾಗಿತ್ತು. ರಾಜಕೀಯ ಉದ್ದೇಶದಿಂದ ದೇಶಕ್ಕೆ ಮಾನಹಾನಿ ಮಾಡುವ ಉದ್ದೇಶದಿಂದ ಈ ಕಿರುನಾಟಕ ಪ್ರದರ್ಶಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.