ಲೋಕಸಭಾ ಅಧಿವೇಶನನಲ್ಲಿ ಯುವಕ ಯುವತಿ ಕಲರ್ ಬಾಂಬ್ ಸಿಡಿಸಿದ್ದ ಪ್ರಕರಣದಲ್ಲಿ ಬಿಜೆಪಿ ಎಡವಟ್ಟು ದೇಶದ ಎದುರಲ್ಲಿ ಬೆತ್ತಲಾಗಿದೆ. ಸಂಸತ್ ಭವನದಲ್ಲಿ ಸಂಸದರಿಗೆ ರಕ್ಷಣೆ ಕೊಡಲಾಗದ ಸರ್ಕಾರ, ಮೌನಕ್ಕೆ ಶರಣಾಗಿದೆ. ದೇಶದ ರಕ್ಷಣೆಗೆ ಕಟಿಬದ್ಧರಾಗಬೇಕಿದ್ದ ಗೃಹ ಸಚಿವ ಅಮಿತ್ ಷಾ, ಹಾಗು ಪ್ರಧಾನಿ ನರೇಂದ್ರ ಮೋದಿ ಇಲ್ಲೀವರೆಗೂ ತುಟಿ ಬಿಚ್ಚಿಲ್ಲ. ಆದರೆ ರಾಜನಾಥ್ ಸಿಂಗ್ ಅವರನ್ನು ಸಂಸತ್‌ನಲ್ಲಿ ಮಾತನಾಡಿಸಲು ಮುಂದಾಗಿದ್ದಾರೆ. ‘ಭದ್ರತಾ ಲೋಪ ಗಂಭೀರವಾದ ವಿಚಾರ, ಸಂಸತ್‌ನಲ್ಲಿ ಈ ಬಗ್ಗೆ ಚರ್ಚೆ ಆಗ್ಬೇಕು, ಚರ್ಚೆಗೆ ಅವಕಾಶ ನೀಡಲೇಬೇಕು, ಗೃಹ ಸಚಿವರು ಉತ್ತರ ಕೊಡ್ಬೇಕು’ ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿದ್ದವು. ಆಗ ಅಮಿತ್ ಷಾ ಉತ್ತರ ಕೊಡಬೇಕಿತ್ತು. ಆದರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉತ್ತರ ಕೊಡುವ ಪ್ರಯತ್ನ ಮಾಡಿದರು.
ರಕ್ಷಣಾ ಸಚಿವರಿಗೂ ಸಂಸತ್ ಭದ್ರತೆಗೂ ಲಿಂಕ್ ಹೇಗೆ..?
ಸಂಸತ್ ಭವನದಲ್ಲಿ ಆಗಿರುವ ಭದ್ರತಾ ಲೋಪದ ಬಗ್ಗೆ ಗೃಹ ಸಚಿವ ಅಮಿತ್ ಷಾ ಉತ್ತರ ಕೊಡಬೇಕಿತ್ತು. ಆದರೆ ರಾಜನಾಥ್ ಸಿಂಗ್ ಗಡಿಯಲ್ಲಿ ಯುದ್ಧ ಭೀತಿ ಎದುರಾಗಿರುವ ರೀತಿಯಲ್ಲಿ ಲೋಕಸಭೆಗೆ ಉತ್ತರ ನೀಡಿದ್ದಾರೆ. ದಾಳಿ ಮಾಡಿದವರನ್ನ ಸುಮ್ಮನೆ ಬಿಡಲ್ಲ. ಅರಾಜಕತೆ ಸೃಷ್ಟಿಸೋ ಕೆಲಸ ಕೆಲವರಿಂದ ಆಗ್ತಿದೆ. ಹಳೇ ಸಂಸತ್ ಭವನದ ಮೇಲೂ ದಾಳಿ ಆಗಿತ್ತು. ಇಂಥ ಘಟನೆಗಳನ್ನ ನಾವು ಖಂಡಿಸುತ್ತೇವೆ. ಮುಂದೆ ಪಾಸ್‌ಗಳನ್ನು ನೀಡುವಾಗ ನಾವೆಲ್ಲರೂ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ. ಇದೇ ರೀತಿ ಚುನಾವಣೆಯಲ್ಲಿ ಗೆದ್ದಾಗ ಕೈ ಬೀಸಿಕೊಂಡು ಬರುವ ಪ್ರಧಾನಿ ಮೋದಿ ಹಾಗು ಅಮಿತ್ ಷಾ, ಚುನಾವಣೆಯಲ್ಲಿ ಸೋಲುಂಡರೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಮುಂದೆ ಬಿಡುತ್ತಾರೆ. ಅಥವಾ ಆ ರಾಜ್ಯದ ಕಡೆಗೆ ಮುಖವನ್ನೂ ಹಾಕುವುದಿಲ್ಲ ಎನ್ನುವುದನ್ನು ಕರ್ನಾಟಕ ಚುನಾವಣೆ ಬಳಿಕ ಎಲ್ಲರೂ ಗಮನಿಸಿದ್ದಾರೆ.
ಸಂಸತ್‌ನಲ್ಲಿ ಸದಸ್ಯರು ಪ್ರಶ್ನೆಯನ್ನೇ ಮಾಡಬಾರಾದ..?
ಸಂಸತ್‌ನಲ್ಲಿ ಭದ್ರತಾ ಲೋಪ ಆಗಿರುವ ಬಗ್ಗೆ ಕಾಂಗ್ರೆಸ್ ಸೇರಿದಂತೆ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಪ್ರಶ್ನೆಯನ್ನು ಮುಂದಿಟ್ಟಿವೆ. ಸಂಬಂಧ ಪಟ್ಟ ಗೃಹ ಸಚಿವರು ಉತ್ತರ ನೀಡಬೇಕಿತ್ತು. ಸಮರ್ಪಕ ಉತ್ತರ ಬಾರದಿದ್ದಾಗ ಪ್ರತಿಭಟನೆ ಮಾಡುವುದು ಗದ್ದಲ ಏರ್ಪಡುವುದು ಸಹಜ. ಪರಿಸ್ಥಿತಿ ಹೀಗಿರುವಾಗ ಲೋಕಸಭಾ ಸ್ಪೀಕರ್ ಮೂಲಕ ಸಂಸದರನ್ನು ಅಮಾನತು ಮಾಡುವ ಕುತಂತ್ರ ಮಾಡಿದ್ದು ಎಷ್ಟು ಸರಿ..? ಓರ್ವ ಗೃಹ ಸಚಿವರೇ ಭದ್ರತಾ ಲೋಪ ಆದ ಬಗ್ಗೆ ಮಾತನಾಡಲಿಲ್ಲ ಎಂದ ಮೇಲೆ ದೇಶದ ಜನರಿಗೆ ಇವರ ಉತ್ತರದಾಯಿತ್ವ ಏನು..? ಎನ್ನುವ ಪ್ರಶ್ನೆ ಜನಸಾಮಾನ್ಯರನ್ನೂ ಕಾಡುತ್ತದೆ. ಕಳೆದ ಬಾರಿಯ ಅಧಿವೇಶನದಲ್ಲೂ ಕಾಂಗ್ರೆಸ್‌ನ ಹಲವಾರು ಸಂಸದರನ್ನು ಅಮಾನತು ಮಾಡಲಾಗಿತ್ತು. ಅದಕ್ಕೂ ಮೊದಲು ರಾಹುಲ್ ಗಾಂಧಿ ಹೇಳಿಕೆಯ ಕಾರಣಕ್ಕೆ ಅಮಾನತು ಮಾಡಲಾಗಿತ್ತು.
ಅಮಾನತು ಆಗಿರುವ ಸಂಸದರು ಯಾಱರು..?
ಕಾಂಗ್ರೆಸ್ ಪಕ್ಷದ 9 ಸಂಸದರು ಅಮಾನತು ಆಗಿದ್ದಾರೆ. ಅದರಲ್ಲಿ ಕೇರಳದ ಚಲಕ್ಕುಡಿ ಕ್ಷೇತ್ರದ ಸಂಸದ ಬೆನ್ನಿ ಬೆಹನನ್, ಪಾಲಕ್ಕಾಡ್‌ನ ವಿ ಕೆ ಶ್ರೀಕಂದನ್, ಎರ್ನಾಕುಲಂನ ಹಿಬಿ ಈಡನ್, ಅಲತೂರ್‌ನ ರಮ್ಯಾ ಹರಿದಾಸ್, ಇಡುಕ್ಕಿ ಕ್ಷೇತ್ರದ ಡೀನ್ ಕುರಿಯಾಕೋಸ್, ತಮಿಳುನಾಡಿನ ಕೃಷ್ಣಗಿರಿಯ ಮೊಹಮ್ಮದ್ ಜಾವೇದ್ ವಿರುಧುನಗರದ ಮಣಿಕಂ ಠಾಗೋರ್, ತ್ರಿಶೂರ್‌ನ ಟಿ ಎನ್ ಪ್ರತಾಪನ್, ಕರೂರು ಕ್ಷೇತ್ರದ ಜ್ಯೋತಿಮಣಿ, ಸಿಪಿಎಂ ಪಕ್ಷದ ಕೊಯಮತ್ತೂರು ಕ್ಷೇತ್ರದ ಪಿ ಆರ್ ನಟರಾಜನ್, ಮಧುರೈನ ಎಸ್. ವೆಂಕಟೇಶನ್, ಸಿಪಿಐ ಪಕ್ಷದಿಂದ ಆಯ್ಕೆಯಾಗಿರುವ ತಿರುಪ್ಪೂರ್ ಸಂಸದ ಕೆ. ಸುಬ್ಬರಾಯನ್, ಡಿಎಂಕೆ ಪಕ್ಷದಿಂದ ಆಯ್ಕೆಯಾಗಿರುವ ತೂತ್ತುಕುಡಿ ಸಂಸದೆ ಕನ್ನಿಮೊಳಿ ಕರುಣಾನಿಧಿ, ಸೇಲಂನ ಎಸ್ ಆರ್ ಪಾರ್ತಿಬನ್ ಅಮಾನತು ಆಗಿದ್ದಾರೆ. ಇನ್ನು ಟಿಎಂಸಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಡೆರೆಕ್ ಓ ಬ್ರಿಯಾನ್ ಅವರನ್ನೂ ಕೂಡ ಅಮಾನತು ಮಾಡಲಾಗಿದೆ. ಇದು ಯಾವ ನ್ಯಾಯ..? ಭದ್ರತಾ ವೈಫಲ್ಯ ಪ್ರಶ್ನೆ ಮಾಡುವ ಹಕ್ಕು ಸಂಸದರಿಗೆ ಇಲ್ವಾ..? ಅಥವಾ ಪ್ರಶ್ನೆ ಮಾಡುವ ಸಂಸದರನ್ನು ಅಮಾನತು ಮಾಡಿ ಸಂಸತ್‌ನಿಂದ ಹೊರಗಿಡುವ ಕುತಂತ್ರವಾ..? ಜನರೇ ಉತ್ತರಿಸಬೇಕಿದೆ.