ತಮಿಳುನಾಡಿನಲ್ಲಿ ರಾಜ್ಯ ಸರ್ಕಾರ vs ಕೇಂದ್ರ ಸರ್ಕಾರ ಜಂಗಿ ಕುಸ್ತಿ ನಡೆಯುತ್ತಿದೆಯಾ ಎಂಬ ಅನುಮಾನಗಳು ದಟ್ಟವಾಗತೊಡಗಿವೆ. ಕೇಂದ್ರೀಯ ತನಿಖಾ ಸಂಸ್ಥೆಗಳ ಕಛೇರಿಗಳಲ್ಲಿ ತಮಿಳುನಾಡು ವಿಜಿಲೆನ್ಸ್ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರ ಇಡಿ, ಸಿಬಿಐ, ಐಟಿ ಮೊದಲಾದ ಕೇಂದ್ರೀಯ ತನಿಖಾ ಸಂಸ್ಥೆಗಳ ಮೂಲಕ ತಮಿಳುನಾಡು ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದೆ ಎಂದು ತಮಿಳುನಾಡು ಸರ್ಕಾರ ಆರೋಪಿಸಿರುವ ಬೆನ್ನಲ್ಲೇ ಇಡಿ ಅಧಿಕಾರಿಯೊಬ್ಬರನ್ನು ತಮಿಳುನಾಡು ರಾಜ್ಯ ಸರ್ಕಾರದ ಅಧಿಕಾರಿಗಳು ಲಂಚ ಪ್ರಕರಣದಲ್ಲಿ ಬಂಧಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರನಿಂದ ₹ 20 ಲಕ್ಷ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ತಮಿಳುನಾಡು ಪೊಲೀಸರು ಜಾರಿ ನಿರ್ದೇಶನಾಲಯದ (ED) ಅಧಿಕಾರಿ ಅಂಕಿತ್ ತಿವಾರಿ ಎಂಬವರನ್ನು ಮಧುರೈನಲ್ಲಿ ಬಂಧಿಸಿದ್ದಾರೆ.
ತನಿಖೆಯ ಭಾಗವಾಗಿ ಪೊಲೀಸರು ನಗರದ ಕೇಂದ್ರೀಯ ಸಂಸ್ಥೆಯಾದ ಇಡಿ ಕಚೇರಿಗಳು ಮತ್ತು ಅಧಿಕಾರಿಯ ನಿವಾಸವನ್ನು ಶೋಧಿಸುತ್ತಿದ್ದು, ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಜಾರಿ ನಿರ್ದೇಶನಾಲಯದ ಅಧಿಕಾರಿಯನ್ನು ತಮಿಳುನಾಡು ಪೊಲೀಸರು ಬಂಧಿಸಿರುವುದು ಇದೇ ಮೊದಲಾಗಿದ್ದು, ಬಂಧಿತ ಇಡಿ ಅಧಿಕಾರಿಯನ್ನು ಡಿಸೆಂಬರ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಈಗಾಗಲೇ ಇತ್ಯರ್ಥವಾಗಿರುವ ಪ್ರಕರಣದಲ್ಲಿ ಕಾನೂನು ಕ್ರಮವನ್ನು ತಪ್ಪಿಸಲು ಆರೋಪಿ ತಿವಾರಿ 3 ಕೋಟಿ ರೂ.ಗಳಿಗೆ ಬೇಡಿಕೆಯಿಟ್ಟಿದ್ದರು. ತಾನು ಪ್ರಧಾನ ಮಂತ್ರಿ ಕಚೇರಿಯ ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿಕೊಂಡು ಸರ್ಕಾರಿ ನೌಕರನನ್ನು ಸಂಪರ್ಕಿಸಿದ್ದ ತಿವಾರಿ, ಲಂಚದ ಮೊತ್ತವನ್ನು 3 ಕೋಟಿ ರೂ.ಗಳಿಂದ 51 ಲಕ್ಷ ರೂ.ಗಳಿಗೆ ಇಳಿಸುವುದಾಗಿ ಸರ್ಕಾರಿ ನೌಕರನ ಬಳಿ ಹೇಳಿದ್ದರು. ಅದರಂತೆ, ಮೊದಲ ಕಂತು 20 ಲಕ್ಷ ರೂ.ಗಳನ್ನು ನವೆಂಬರ್ 1 ರಂದು ಪಾವತಿಸಲಾಗಿದ್ದು, ನಂತರ ಉಳಿದ ₹ 31 ಲಕ್ಷಕ್ಕಾಗಿ ಸರ್ಕಾರಿ ಉದ್ಯೋಗಿಗೆ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿದೆ.
ಸಂತ್ರಸ್ತ ಸರ್ಕಾರಿ ನೌಕರ ನವೆಂಬರ್ 30 ರಂದು ಡಿವಿಎಸಿಗೆ ದೂರು ಸಲ್ಲಿಸಿದ್ದು, ಅದರಂತೆ ಶುಕ್ರವಾರ ಅಂಕಿತ್ ತಿವಾರಿ ಅವರನ್ನು ಬಂಧಿಸಲಾಗಿದೆ. ತಿವಾರಿ ಇತರರಿಗೆ ಬೆದರಿಕೆ ಅಥವಾ ಬ್ಲ್ಯಾಕ್ಮೇಲ್ ಮಾಡುವ ಮೂಲಕ ಹಣ ಪಡೆದಿದ್ದಾರೆಯೇ ಎಂಬ ತನಿಖೆಯೂ ನಡೆಯುತ್ತಿದೆ ಎಂದು ತಮಿಳುನಾಡು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ ಹೇಳಿದೆ.