ಬೆಂಗಳೂರು: ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮೇಲೆ ಮುನಿಸಿಕೊಂಡು ಕಾಂಗ್ರೆಸ್ ಗೆ ಸೇರಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಗ್ಗೆ ಬಿಜೆಪಿ ನಾಯಕರಿಗೆ ಈಗಲೂ ಅಭಿಮಾನ ಕಡಿಮೆ ಆಗಿಲ್ಲ. ಸ್ವತಃ ಬಿಜೆಪಿಯನ್ನೇ ಶೆಟ್ಟರ್ ಅವರು ಬೈಯುತ್ತಿದ್ದರೂ ʼಶೆಟ್ಟರ್ ರಕ್ತದಲ್ಲಿ ಹಿಂದುತ್ವ ಇದೆʼ ಎಂದು ಬಿಜೆಪಿ ಹಿರಿಯ ನಾಯಕರು ಹೇಳುತ್ತಿದ್ದಾರೆ. ಅದೂ ಅಲ್ಲದೆ, ಶೆಟ್ಟರ್ ಅವರನ್ನು ಕಟುವಾಗಿ ಟೀಕಿಸಲು ಬಿಜೆಪಿ ನಾಯಕರು ಹಿಂಜರಿಯುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಬಿಜೆಪಿ ರಿಪೇರಿ ಮಾಡೋಕಾಗದಷ್ಟು ಹದಗೆಟ್ಟಿದೆ ಎಂಬ ಶೆಟ್ಟರ್ ಟೀಕೆ ಕುರಿತು ಪ್ರತಿಕ್ರಿಯಿಸಿದ ಸಿಟಿ ರವಿ, ಶೆಟ್ಟರ್ ಅವರು ಕಾಂಗ್ರೆಸಿಗರನ್ನು ನಂಬಿಸಲು ಬೇಕಾಗಿ ಬಿಜೆಪಿ ಮೇಲೆ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.

ಜಗದೀಶ್ ಶೆಟ್ಟರ್ ಡಿಎನ್ಎಯಲ್ಲಿ ಸಂಘಪರಿವಾರ ಇದೆ. ಅವರ ಚಿಕ್ಕಪ್ಪ ಜನಸಂಘದವರು. ಹೊಸದಾಗಿ ಮತಾಂತರವಾದವರು ನಾವು ಕಟ್ಟರ್ಗಳೆಂದು ತೋರಿಸಲು ಈ ರೀತಿ ಮಾಡುತ್ತಿದ್ದಾರೆ. ʼನಮ್ಮ ಶೆಟ್ಟರ್ʼ ಬಿಜೆಪಿಗೆ ಬೈದರೆ ನನ್ನನ್ನು ಕಾಂಗ್ರೆಸ್ನವರು ನಂಬುತ್ತಾರೆಂದು ಭಾವಿಸಿದ್ದಾರೆ ಎಂದು ಸಿಟಿ ರವಿ ಹೇಳಿದ್ದಾರೆ.
ಇದೇ ರೀತಿ, ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಕೂಡಾ ಶೆಟ್ಟರ್ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ್ದಾರೆ. ಜಗದೀಶ್ ಶೆಟ್ಟರ್ ರಕ್ತದಲ್ಲಿ ಹಿಂದುತ್ವ ಇದೆ. ಕಾಂಗ್ರೆಸ್ ಮಣ್ಣು ಮುಕ್ಕುತ್ತೆ. ಅಂತಹ ಪಕ್ಷದಲ್ಲಿ ಅವರು ಇರಲ್ಲ ವಾಪಸ್ ಬಿಜೆಪಿಗೆ ಬರ್ತಾರೆ ಅಂತಿದ್ದಾರೆ. ನನಗಂತೂ ಶೆಟ್ಟರ್ ಬಿಜೆಪಿಗೆ ಮರಳಿ ಬರಬೇಕು ಅನ್ನುವ ಅಪೇಕ್ಷೆ ಇದೆ. ನಾನೂ ಅವರೂ ಒಳ್ಳೆಯ ಸ್ನೇಹಿತರು ಎಂದು ಕೆಎಸ್ ಈಶ್ವರಪ್ಪ ಅವರು ಗದಗದಲ್ಲಿ ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ಅವರು, ಬಿಜೆಪಿ ಪ್ರಭಾವಿ ಮುಖಂಡರನ್ನು ಕಾಂಗ್ರೆಸ್ಗೆ ಸೆಳೆಯುತ್ತಿರುವುದು ಬಿಜೆಪಿ ಆತಂಕಕ್ಕೆ ಕಾರಣವಾಗಿದ್ದು, ಲೋಕಸಭೆ ಚುನಾವಣೆಗೆ ಮುನ್ನ ಹುಬ್ಬಳ್ಳಿ-ಧಾರವಾಢ ಭಾಗದ ಲಿಂಗಾಯತರ ಅಸಮಾಧಾನವನ್ನು ಹೋಗಲಾಡಿಸಿ ಲಿಂಗಾಯತ ಮತದಾರರ ಮನಗೆಲ್ಲಬೇಕೆಂಬುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ. ಇಂತಹ ಹೊತ್ತಿನಲ್ಲಿ ಶೆಟ್ಟರ್ ವಿರುದ್ಧ ಕಟುವಾಗಿ ಮಾತನಾಡುವುದು ಬಿಜೆಪಿಗೇ ಹಿನ್ನೆಡೆಯಾಗಬಹುದು ಎಂಬ ಆತಂಕದಲ್ಲಿ ಶೆಟ್ಟರ್ ವಿಚಾರದಲ್ಲಿ ಬಿಜೆಪಿ ನಯವಾಗಿ ವರ್ತಿಸುತ್ತಿದೆ ಎಂಬ ಮಾತುಗಳೂ ಕೇಳಿ ಬರುತ್ತಿದೆ.