ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಕರಣ ವಾಪಸ್ ಪಡೆದಿರುವುದು ಸರ್ಕಾರ ಬಿದ್ದು ಹೋಗುವುದರ ಮೊದಲ ಹೆಜ್ಜೆ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಹಾವೇರಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಸಿಎಂ ಖುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲಾ, ಅವರು ತಿಹಾರ್ ಜೈಲಿಗೆ ಹೋಗುತ್ತಾರೆ. ಅವರ ಕೇಸ್ ಹಿಂಪಡೆಯುತ್ತಿರೊದು ಸರ್ಕಾತ ಬೀಳುವ ಮೊದಲ ಹೆಜ್ಜೆ, ಎರಡನೆಯ ಹೆಜ್ಜೆ ಅಂದರೆ ಜಾತಿಗಣತಿ. ಒಂಭತ್ತು ವರ್ಷದ ಹಿಂದೆ ಜಾತಿ ಗಣತಿ ಮಾಡಲಾಗಿತ್ತು. ಆದರೆ ಅದನ್ನ ಬಹಿರಂಗ ಪಡಿಸಿಲ್ಲ. ಸಿಎಂ ಸಿದ್ದರಾಮಯ್ಯಗೆ ತಾನು ಹಿಂದುಳಿದ ವರ್ಗದ ಚಾಂಪಿಯನ್ ಅನಿಸಿಕೊಳ್ಳಬೇಕಿತ್ತು ಅದಕ್ಕಾಗಿ 163 ಕೋಟಿ ರೂಪಾಯಿ ವ್ಯರ್ಥ ಖರ್ಚು ಮಾಡಿದ್ದಾರೆ ಎಂದು ಕೆಎಸ್ ಈಶ್ವರಪ್ಪ ಆರೋಪಿಸಿದರು.
ಮೂರು ತಿಂಗಳ ಹಿಂದೆ ಹಿಂದುಳಿದ ವರ್ಗಗಳ ದಲಿತ ಮಠಾಧೀಶರು ಜಾತಿಗಣತಿ ಬಹಿರಂಗ ನೀಡುವಂತೆ ಸಿಎಂ ಸಿದ್ದರಾಮಯ್ಯ ಬಳಿ ಹೋಗಿದ್ದರು. ಅಂದು ಸಿಎಂ ಸಿದ್ದರಾಮಯ್ಯ ನವೆಂಬರ್ ತಿಂಗಳಲ್ಲಿ ಬಹಿರಂಗ ಮಾಡುವುದಾಗಿ ತಿಳಿಸಿದ್ದರು. ಆದರೂ ಸಹ ಬಹಿರಂಗ ಮಾಡಿಲ್ಲ. ಸಿಎಂ ಸಿದ್ದರಾಮಯ್ಯಗೆ ಜಾತಿ ಗಣತಿ ಬಗ್ಗೆ ಆಸಕ್ತಿ ಇಲ್ಲ ಎಂದು ಆರೋಪಿಸಿದ್ದಾರೆ.
ಪಕ್ಷದ ಒಳ ಜಗಳ ಬಗ್ಗೆ ಮಾತಾಡಿದ ಅವರು, ಪ್ರತಿಪಕ್ಷನಾಯಕ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಆಯ್ಕೆಯಲ್ಲಿ ಉತ್ತರ ಕರ್ನಾಟಕಕ್ಕೆ ಸ್ಥಾನ ನೀಡಬೇಕಿತ್ತು ಎನ್ನುವ ನೋವಿದೆ. ಅವರನ್ನು ನಮ್ಮ ಹಿರಿಯ ನಾಯಕರು ಕರೆಸಿ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.