ವಿಶ್ವದಲ್ಲಿ ಮೂರನೇ ಮಹಾಯುದ್ಧ ಈಗಾಗಲೇ ಶುರುವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಯುದ್ಧ ಅಧಿಕೃತವಾಗಿ ಶುರುವಾಗುವ ಸಾಧ್ಯತೆಗಳು ದಟ್ಟವಾಗಿದೆ. ಈಗಾಗಲೇ ನಾಲ್ಕು ದೇಶಗಳ ನಡುವೆ ಯುದ್ಧ ಶುರುವಾಗಿದ್ದು, ವಿಶ್ವದ ಶಕ್ತಿಶಾಲಿ ರಾಷ್ಟ್ರಗಳು ಇಬ್ಭಾಗ ಆಗುವ ಸಾಧ್ಯತೆಗಳು ಸೃಷ್ಟಿಯಾಗುತ್ತಿವೆ. ರಷ್ಯಾ ಹಾಗು ಉಕ್ರೇನ್ ನಡುವೆ ಯುದ್ಧ ಆರಂಭ ಆದ ಬಳಿಕ ಅಮೆರಿಕ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳು ಉಕ್ರೇನ್ ಪರವಾಗಿ ಬೆಂಬಲ ನೀಡಿದ್ದವು. ರಷ್ಯಾ ಇಲ್ಲೀವರೆಗೂ ಯುದ್ಧದಲ್ಲಿ ಗೆಲುವು ಕಾಣಿಸಲು ಸಾಧ್ಯವಾಗಿಲ್ಲ. ನಿರಂತರವಾಗಿ ಒಂದೂವರೆ ವರ್ಷದಿಂದಲೂ ಯುದ್ಧ ನಡೆಯುತ್ತಲೇ ಇದ್ದು, ರಷ್ಯಾ ಸರ್ಕಾರ ಯುದ್ಧ ಗೆಲ್ಲುವ ನಿರೀಕ್ಷೆಯಲ್ಲಿದೆ. ಇದು ಇಸ್ರೇಲ್ ಹಾಗು ಪ್ಯಾಲೆಸ್ಟೀನ್ ನಡುವಿನ ಯುದ್ಧಕ್ಕೆ ನಾಂದಿ ಆಡಿರುವ ಸಾಧ್ಯತೆಗಳು ಹೆಚ್ಚಾಗಿವೆ.
ನ್ಯಾಟೋ ಪಡೆಗಳು ಇಸ್ರೇಲ್ ಸರ್ಕಾರದ ಬೆಂಬಲಕ್ಕೆ ಹೋಗುತ್ತಾ..?
ರಷ್ಯಾ ಹಾಗು ಉಕ್ರೇನ್ ನಡುವೆ ಯುದ್ಧ ಶುರುವಾದ ಬಳಿಕ ನ್ಯಾಟೋ ಪಡೆಗಳು ಉಕ್ರೇನ್ ಬೆಂಬಲಕ್ಕೆ ನಿಂತಿದ್ದು, ಪರೋಕ್ಷವಾಗಿ ಉಕ್ರೇನ್ ಸೇನೆಗೆ ಸಹಕಾರ ನೀಡುತ್ತಿವೆ. ಇದೇ ಕಾರಣಕ್ಕಾಗಿ ರಷ್ಯಾ, ಉಕ್ರೇನ್ ವಿರುದ್ಧ ಯುದ್ಧದಲ್ಲಿ ಗೆಲುವು ಕಾಣಲು ಸಾಧ್ಯವಾಗ್ತಿಲ್ಲ. ಇದೀಗ ಅಮೆರಿಕ ಸರ್ಕಾರ ಇಸ್ರೇಲ್‌ಗೆ ಬೆಂಬಲ ಘೋಷಣೆ ಮಾಡಿದ್ದ, ನ್ಯಾಟೋ ಪಡೆಗಳೂ ಸಹ ಇಸ್ರೇಲ್ ಪರವಾಗಿ ಕೆಲಸ ಮಾಡುತ್ತಾ..? ಅನ್ನೋ ಕುತೂಹಲ ಮನೆ ಮಾಡಿದೆ. ಇನ್ನೂ ಇಸ್ರೇಲ್ ಪರವಾಗಿ ನ್ಯಾಟೋ ಪಡೆಗಳು ಕೆಲಸ ಮಾಡಿದರೆ, ಉಕ್ರೇನ್ ಮೇಲೆ ಯುದ್ಧದಲ್ಲಿ ಜಯಗಳಿಸಬಹುದು ಅನ್ನೋದು ರಷ್ಯಾ ಯೋಜನೆಯೂ ಆಗಿದೆ ಎನ್ನಬಹುದು. ಇದೇ ಕಾರಣಕ್ಕೆ ಈಜಿಪ್ಟ್ ಹಾಗು ಇರಾನ್ ಮೂಲಕ ಪ್ಯಾಲೆಸ್ಟೀನ್ ದೇಶಕ್ಕೆ ಹೆಚ್ಚಿನ ಬೆಂಬಲ ಸಿಗುವಂತೆ ರಷ್ಯಾ ತಂತ್ರಗಾರಿಕೆ ಮಾಡುತ್ತಿದೆ.
ಪ್ಯಾಲೆಸ್ಟೀನ್ ಜನರ ಮಾರಣಹೋಮ ಜಗತ್ತೇ ನಿಬ್ಬೆರಗು..!
ಇಸ್ರೇಲ್ ತಂತ್ರಜ್ಞಾನದಲ್ಲಿ ಮುಂದುವರಿದ ರಾಷ್ಟ್ರ ಅನ್ನೋದು ಇಡೀ ಜಗತ್ತಿಗೇ ಗೊತ್ತಿರುವ ಸಂಗತಿ. ಇನ್ನು ಗಾಜಾಪಟ್ಟಿಯಿಂದ ಇಸ್ರೇಲ್ ಮೇಲೆ ದಾಳಿ ಮಾಡುತ್ತಿರುವ ಹಮಾಸ್ ಉಗ್ರರು (ಇಸ್ರೇಲ್ ಹೇಳುವಂತೆ) ಕೂಡ ಇಸ್ರೇಲ್‌ಗೆ ಸರಿಸಾಟಿಯಾಗಿ ದಾಳಿ ಮಾಡುತ್ತಿದ್ದಾರೆ ಎಂದರೆ ಹಮಾಸ್ ಉಗ್ರರಿಗೂ ಬೆಂಬಲ ಸಿಗುತ್ತಿದೆ ಎಂದೇ ಅರ್ಥ. ಇನ್ನು ಗಾಜಾಪಟ್ಟಿಗೆ ಮೂಲಭೂತ ಸೌಕರ್ಯಗಳು ಸಂಫೂರ್ಣವಾಗಿ ಇಸ್ರೇಲ್ ಮೂಲಕವೇ ಹೋಗಬೇಕಿದ್ದು, ಯಾವುದೇ ಸಂಪರ್ಕವಿಲ್ಲದೆ ಜನರು ಸಾಯುವಂತಾಗಿದೆ. ಇನ್ನೂ ಇಸ್ರೇಲ್ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿರುವ ಕಾರಣಕ್ಕೆ ಆಸ್ಪತ್ರೆಗಳೇ ಶವಾಗಾರ ಆಗುವ ಸನ್ನಿವೇಶ ನಿರ್ಮಾಣ ಆಗಿದೆ. ಈಜಿಪ್ಟ್ ಹಾಗು ಸಿರಿಯಾ ಮೂಲಕ ಯಾವುದೇ ಸಹಾಯ ಸಿಗಬಾರದು ಅನ್ನೋ ಕಾರಣಕ್ಕೆ ಇಸ್ರೇಲ್ ಏರ್‌ಬೇಸ್ ರನ್‌ವೇ ಮೇಲೆ ದಾಳಿ ನಡೆಸಿ ಹಾಳು ಮಾಡಿದೆ. ಇನ್ನು ಮುಸ್ಲಿಂ ರಾಷ್ಟ್ರಗಳು ಹಾಗು ಸಂಘಟನೆಗಳು ಪ್ಯಾಲೆಸ್ಟೀನ್ ಪರವಾಗಿ ನಿಂತಿದ್ದು, ವಿಶ್ವದಲ್ಲಿ ಶಕ್ತಿಗಳು ಇಬ್ಭಾಗ ಆಗುವ ಸಾಧ್ಯತೆಯಿದೆ.

ಯುದ್ಧದ ಪರಿಣಾಮ ಕಂಡಿರುವ ಜಪಾನ್ ಮೌನವಾಗಿದೆ..
ಈಗಾಗಲೇ 2ನೇ ಮಹಾಯುದ್ಧದಲ್ಲಿ ಬಾಂಬ್ ದಾಳಿಯಿಂದ ತತ್ತರಿಸಿದ್ದ ಜಪಾನ್ ಕೆಲವೇ ವರ್ಷಗಳಲ್ಲಿ ಸಿಡಿದು ನಿಂತಿದೆ. ವಿಶ್ವದ ಶಕ್ತಿಶಾಲಿ ರಾಷ್ಟ್ರಗಳಲ್ಲಿ ತಾನು ಕೂಡ ಇದ್ದೇನೆ ಎಂದು ಸಾರಿ ಸಾರಿ ಹೇಳುತ್ತಿದೆ. ಆದರೂ ಈಗ ಶುರುವಾಗುತ್ತಿರುವ ಯುದ್ಧದಲ್ಲಿ ಯಾವುದೇ ದೇಶದ ಪಕ್ಷಪಾತ ವಹಿಸುವ ಕೆಲಸ ಮಾಡುತ್ತಿಲ್ಲ. ತಾನು ತನ್ನ ದೇಶ ಎನ್ನುತ್ತ ಸುಮ್ಮನಿದೆ. ಯುದ್ಧದ ಬಗ್ಗೆ ಪುಂಕಾನು ಪುಂಕವಾಗಿ ಭಾಷಣ ಮಾಡುವ ನಾಯಕರು, ಯುದ್ಧದ ಪರಿಣಾಮದ ಬಗ್ಗೆ ಕೊಂಚ ಯೋಚಿಸಬೇಕಾಗಿದೆ. ಏಕಾಏಕಿ ಒಂದು ದೇಶದ ಪರವಾಗಿ ಬೆಂಬಲ ಘೋಷಣೆ ಮಾಡುವ ಮುನ್ನ ಎಲ್ಲಾ ಆಯಾಮದಿಂದ ಯೋಚಿಸಬೇಕಿದೆ. ಭಾರತ ಇಷ್ಟು ವರ್ಷಗಳ ಕಾಲ ತೆಗೆದುಕೊಂಡಿದ್ದು ತಟಸ್ಥ ನಿಲುವು. ಯಾವುದೇ ದೇಶದ ಪರವಾಗಿ ಯಾವುದೇ ನಿಲುವು ಪ್ರಕಟ ಮಾಡಿರಲಿಲ್ಲ. ಶಾಂತಿ, ಸಾಮರಸ್ಯ ಕಾಪಾಡುವ ಕಡೆಗಷ್ಟೇ ನಿರ್ಧಾರ ತೆಗೆದುಕೊಂಡಿತ್ತು. ಆದರೆ ಇದೀಗ ಸರ್ಕಾರ ದಿಟ್ಟ ನಿಲುವು ತೆಗೆದುಕೊಂಡಿದೆ.
ವಿಶ್ವಸಂಸ್ಥೆ ಕೂಡ ಯುದ್ಧ ತಡೆಯುವ ಕೆಲಸ ಮಾಡ್ತಿಲ್ಲ..
ಎರಡನೇ ಮಹಾಯುದ್ಧದ ಬಳಿಕ ವಿಶ್ವದಲ್ಲಿ ಶಾಂತಿ ನೆಲೆಸುವ ಉದ್ದೇಶದಿಂದ ಲೀಗ್ ಆಫ್ ನೇಷನ್ ಬದಲು ವಿಶ್ವಸಂಸ್ಥೆ ಸ್ಥಾಪನೆ ಮಾಡಲಾಯ್ತು. ಆದರೆ ಇದೀಗ ವಿಶ್ವಸಂಸ್ಥೆ ಕೂಡ ವಿಶ್ವದಲ್ಲಿ ಶಾಂತಿಸ್ಥಾಪನೆ ಮಾಡುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ ಇಸ್ರೇಲ್ ಮಾಡುತ್ತಿರುವ ಅಮಾನವೀಯ ಕೃತ್ಯಗಳ ಬಗ್ಗೆ ಮಾತನಾಡಿದಾಗ ಖಂಡಿಸುವ ಕೆಲಸ ಆಯ್ತು. ಆದರೆ ಇದೀಗ ಸ್ವತಃ ರೆಡ್ ಕ್ರಾಸ್ ಸಂಸ್ಥೆ ಕುಡಿಯುವ ನೀರು ಸೇರಿದಂತೆ ವಿದ್ಯುತ್ ಹಾಗು ಮೂಲಭೂತ ಸೌಕರ್ಯ ನೀಡಲು ಅವಕಾಶ ಕೊಡುವಂತೆ ಇಸ್ರೇಲ್ ಹಾಗು ವಿಶ್ವದ ಎದುರು ಬೇಡಿಕೊಳ್ತಿದೆ. ಆದರೆ ಇಸ್ರೇಲ್ ಪರವಾಗಿ ನಿಂತಿರುವ ದೊಡ್ಡ ದೊಡ್ಡ ರಾಷ್ಟ್ರಗಳೂ ಕೂಡ ಮಾನವೀಯತೆ ಬಗ್ಗೆ ಕಿಂಚಿತ್ತು ಮಾತನಾಡ್ತಿಲ್ಲ ಅನ್ನೋದು ವಿಷಾದದ ಸಂಗತಿ. ಯುದ್ಧಕ್ಕೆ ಕಾರಣ ಏನು..? ಯಾರು ಸರಿ ಯಾರು ತಪ್ಪು ಅನ್ನೋದಕ್ಕಿಂತಲೂ ಯುದ್ಧದಲ್ಲಿ ಸಿಲುಕಿ ಸಾಯುತ್ತಿರುವ ಅಮಾಯಕರ ಬಗ್ಗೆ ಚಿಂತಿಸಬೇಕಿದೆ. ಯುದ್ಧದಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಪರಿಜ್ಞಾನ ಇರಬೇಕಾದ ಅನಿವಾರ್ಯತೆ ಇದೆ ಅಲ್ಲವೇ..?
ಕೃಷ್ಣಮಣಿ