ಕರ್ನಾಟಕ, ಭಾರತ ಮಾತ್ರವಲ್ಲ.. ಇಡೀ ವಿಶ್ವವೇ ಕೊರೊನಾ ಸಂಕಷ್ಟದಿಂದ ನಲುಗಿತ್ತು. ಕೋವಿಡ್ 19 ಸೋಂಕನ್ನು ನಿಯಂತ್ರಣ ಮಾಡಲು ಇನ್ನಿಲ್ಲದ ಶ್ರಮ ಹಾಕುವಂತೆ ಆಗಿತ್ತು. ಅದರಲ್ಲೂ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಮೂಲಸೌಕರ್ಯ, ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ಜನರ ಸಂಖ್ಯೆ ಲೆಕ್ಕವಿಲ್ಲದಷ್ಟು. ಪ್ರಾಣ ಉಳಿಸಿಕೊಳ್ಳಲು ಜನರು ಪರದಾಡುವಾಗ ಕೆಲವು ರಾಜಕಾರಣಿಗಳು ಹಣವನ್ನು ಲೂಟಿ ಮಾಡಿದರು ಅನ್ನೋ ಗಂಭೀರ ಆರೋಪ ಕರ್ನಾಟಕ ಸೇರಿದಂತೆ ಇಡಿ ದೇಶಾದ್ಯಂತ ಕೇಳಿ ಬಂತು. ಅಂದಿನ ದಿನಮಾನಗಳಲ್ಲೇ ವಿರೋಧ ಪಕ್ಷದ ನಾಯಕನಾಗಿದ್ದ ಹಾಲಿ ಸಿಎಂ ಸಿದ್ದರಾಮಯ್ಯ, ಕೋವಿಡ್ ಖರ್ಚು ವೆಚ್ಚದಲ್ಲಿ ಭಾರೀ ವ್ಯತ್ಯಾಸ ಕಂಡು ಬಂದಿದೆ. ಮಾರುಕಟ್ಟೆಯಲ್ಲಿ ಇರುವ ದರಕ್ಕೂ ಖರೀದಿ ದರಕ್ಕೂ ಅಜಗಜಾಂತರ ವ್ಯತ್ಯಾಸ ಕಾಣಿಸುತ್ತಿದೆ ಎಂದು ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ್ದರು. ಮುಂದಿನ ಬಾರಿ ನಮ್ಮ ಸರ್ಕಾರ ಬಂದಾಯ ಕೋವಿಡ್ ಹಗರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗೆ ಅಟ್ಟುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಅಂದು ಹೇಳಿದ್ದ ಮಾತನ್ನು ಸಿದ್ದರಾಮಯ್ಯ ಉಳಿಸಿಕೊಳ್ಳುವ ಕೆಲಸ ಮಾಡಿದ್ದಾರೆ.

ಕೋವಿಡ್ ಅಕ್ರಮಕ್ಕೆ ತನಿಖಾ ಆಯೋಗ ರಚನೆ ಮಾಡಿದ ಸರ್ಕಾರ..
ಸಿದ್ದರಾಮಯ್ಯ ಹೇಳಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 100 ದಿನಗಳು ಕಳೆದಿವೆ. ಇದೀಗ ಒಂದೊಂದೇ ಭರವಸೆಗಳನ್ನು ಜಾರಿಗೆ ತರುತ್ತಿರುವ ಸಿದ್ದರಾಮಯ್ಯ, ಕೋವಿಡ್ ಹಗರಣದ ಬಗ್ಗೆ ತನಿಖೆ ನಡೆಸುವಂತೆ ನಿವೃತ್ತ ನ್ಯಾಯಮೂರ್ತಿಗಳ ಆಯೋಗ ರಚನೆ ಮಾಡಲಾಗಿದೆ. ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ನೇತೃತ್ವದಲ್ಲಿ ತನಿಖೆ ನಡೆಸಿ ಮುಂದಿನ 3 ತಿಂಗಳ ಒಳಗಾಗಿ ವರದಿ ಸಲ್ಲಿಕೆ ಮಾಡುವಂತೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕೋವಿಡ್ ನಿಯಂತ್ರಣ ಹಾಗು ನಿರ್ವಹಣೆಯಲ್ಲಿ ಅಕ್ರಮ ಆಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ನೀಡಿದ ವರದಿ ಆಧಾರದ ಮೇಲೆ ತನಿಖೆಗೆ ರಾಜ್ಯ ಸರ್ಕಾರ ಸಮಿತಿ ರಚನೆ ಮಾಡಿದೆ. ಕಾಂಗ್ರೆಸ್ ಈ ಹಿಂದೆ ತನಿಖೆ ಮಾಡುವುದಾಗಿ ಹೇಳಿದ್ದನ್ನು ಸರ್ಕಾರ ಪಾಲನೆ ಮಾಡಿದೆ. ಆದರೆ ಇದು ದ್ವೇಷ ಸಾಧನೆ ಎಂದು ಬಿಜೆಪಿ ಕೆಂಡಕಾರುತ್ತಿದೆ.

ತನಿಖೆಯಿಂದ ಸತ್ಯಾಂಶ ಹೊರ ಬರುವ ನಿರೀಕ್ಷೆ ಇದೆ..!
ಕೋವಿಡ್ ಅಕ್ರಮಗಳ ತನಿಖೆಗೆ ಆಯೋಗ ರಚನೆ ತೀರ್ಮಾನದ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದ್ದು, ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸುವ ಸಲುವಾಗಿ ಆಯೋಗ ರಚನೆ ಆಗಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕೊಟ್ಟ ವರದಿ ಆಧಾರದ ಮೇಲೆ ತನಿಖೆ ನಡೆಯಲಿದೆ. ಚಾಮರಾಜನಗರ ಆಕ್ಸಿಜನ್ ದುರಂತದ ಬಗ್ಗೆ ಈ ಆಯೋಗ ತನಿಖೆ ನಡೆಸಲ್ಲ, ಅದಕ್ಕೆ ಪ್ರತ್ಯೇಕವಾದ ತನಿಖೆ ನಡೆಯುತ್ತದೆ ಎಂದಿದ್ದಾರೆ. ಸಾರ್ವಜನಿಕವಾಗಿ ಕೇಳಿಬಂದ ಆರೋಪಗಳು ಇದೆಲ್ಲದರ ಬಗ್ಗೆ ತನಿಖೆ ನಡೆಯಲಿದೆ. ತನಿಖೆಯಿಂದ ಸ್ಪಷ್ಟವಾದ ಮಾಹಿತಿ ಹೊರ ಬರುವ ವಿಶ್ವಾಸ ಇದೆ. ಕೋವಿಡ್ ನಿರ್ವಹಣೆಯಲ್ಲಿ ಏನೇನಾಗಿದೆ ಅಂತ ನಾನು ಮಂತ್ರಿಯಾಗಿ ಹೇಳುವುದು ಸೂಕ್ತವಲ್ಲ, ತನಿಖೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದು. ಅನಾವಶ್ಯಕವಾಗಿ ನಾನು ಮಾತನಾಡಲ್ಲ ಎಂದಿದ್ದಾರೆ ದಿನೇಶ್ ಗುಂಡೂರಾವ್..

ಕೋವಿಡ್ ತನಿಖೆ ಬಗ್ಗೆ ಮಾಜಿ ಆರೋಗ್ಯ ಸಚಿವರು ಏನಂತಾರೆ..?
ಕೋವಿಡ್ ಹಗರಣ ತನಿಖೆ ವಿಚಾರವಾಗಿ ಮಾಜಿ ಆರೋಗ್ಯ ಸಚಿವ ಸುಧಾಕರ್ ಮಾತನಾಡಿದ್ದು, ಹಿಂದಿನ ಸರ್ಕಾರ ಕೊರೋನ ನಿಯಂತ್ರಣ ಮಾಡಿತ್ತು. ಇದರ ಉಪಕರಣ ಖರೀದಿಯಲ್ಲಿ ಅಕ್ರಮ ಆಗಿದೆ ಅಂತ, ಕಾಂಗ್ರೆಸ್ ಸರ್ಕಾರ ತನಿಖೆಗೆ ವಹಿಸಿದೆ. ಇದನ್ನು ನಾನು ಸ್ವಾಗತ ಮಾಡುತ್ತೇನೆ. ಯಡಿಯೂರಪ್ಪ ನೇತೃತ್ವದಲ್ಲಿ ಕೊರೊನಾ ನಿಯಂತ್ರಣ ಮಾಡಿದ್ದೆವು. ಯಾರಿಗೂ ಕೂಡ ಈ ರೋಗದ ಬಗ್ಗೆ ಅರಿವು ಇರಲಿಲ್ಲ. ಈಗ ತನಿಖೆಗೆ ಕೊಟ್ಟಿದ್ದಾರೆ, ಇದರ ಹಿಂದೆ ರಾಜಕೀಯ ದುರುದ್ದೇಶ ಎದ್ದು ಕಾಣಿಸ್ತಿದೆ. ರಾಜಕೀಯ ದ್ವೇಷಕ್ಕಾಗಿ ಈಗ ತನಿಖೆಗೆ ನೀಡಿದ್ದಾರೆ. ಮೋದಿ ನೇತೃತ್ವದಲ್ಲಿ ಹಲವು ಸಭೆ ಆಗಿದ್ದು, ಅವರ ನಿರ್ದೇಶನ ಮೇರೆಗೆ ಹಲವು ಕ್ರಮಗಳನ್ನು ನಾವು ತೆಗೆದುಕೊಂಡಿದ್ದೇವೆ. ಕಾಂಗ್ರೆಸ್ ಕೊರೊನಾ ಸಂದರ್ಭದಲ್ಲಿ ಪಾದಯಾತ್ರೆ ಮಾಡಿತ್ತು. ಅಂದು ಹಾಕಿದ್ದ ಕೇಸ್ ವಾಪಸ್ ಪಡೆದಿದ್ದಾರೆ. ತನಿಖೆಯಿಂದ ಸತ್ಯ ಹೊರಗೆ ಬರಬೇಕು ಅಂದಿದ್ರೆ, ಲೋಕಾಯುಕ್ತ ಸಂಸ್ಥೆಗೆ ತನಿಖೆಗೆ ಕೋಡಬೇಕಿತ್ತು. ಅದನ್ನು ಬಿಟ್ಟು ನಿವೃತ್ತ ಜಡ್ಜ್ ನೇತೃತ್ವದಲ್ಲಿ ಆಯೋಗ ರಚನೆ ಮಾಡಿದ್ದಾರೆ. ನಿವೃತ್ತ ಜಡ್ಜ್ ಎದುರು ಮಾತನಾಡುತ್ತೇನೆ ಎಂದಿದ್ದಾರೆ.

ತನಿಖೆ ಮಾಡಿಸುತ್ತಿರುವುದು ಸೂಕ್ತ, ಆದರೆ ಬೆದರಿಕೆ ತಂತ್ರ ಆಗಬಾರದು..!
ಕೋವಿಡ್ ಸಮಯದಲ್ಲಿ ಅಕ್ರಮ ನಡೆದಿದೆ ಎಂದಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ತನಿಖೆ ಮಾಡಿಸುತ್ತೇವೆ ಎಂದು ಅಂದೇ ಭರವಸೆ ನೀಡಿದ್ದರು. ಅದರಂತೆ ತನಿಖೆಗೆ ಆದೇಶ ಮಾಡಿರುವುದು ಸರಿಯಷ್ಟೆ. ಇದು ರಾಜ್ಯದ ಬೊಕ್ಕಸವನ್ನು ಲೂಟಿ ಮಾಡಿವರನ್ನು ಬೆತ್ತಲು ಮಾಡಬೇಕೇ ಹೊರತು, ತನಿಖೆ ಹೆಸರಿನಲ್ಲಿ ಬೆದರಿಸುವ ಕೆಲಸ ಆಗಬಾರದು. ಆ ಬಳಿಕ ಬೆದರಿಸಿ ಪಕ್ಷಕ್ಕೆ ವಾಪಸ್ ಬರುವಂತೆ ಮಾಡಿಯೋ ಅಥವಾ ಪರೋಕ್ಷವಾಗಿ ಲೋಕಸಭಾ ಚುನಾವಣೆಗೆ ಬೆಂಬಲ ಪಡೆದುಕೊಳ್ಳುವ ಒಳಸಂಚೋ ಆಗಬಾರದು. ಹಾಗೊಂದು ವೇಳೆ ತನಿಖೆಯಿಂದ ಸ್ಪಷ್ಟ ಮಾಹಿತಿ ಹೊರಬಾರದೆ ತೇಪೆ ಸಾರಿಸುವ ಕೆಲಸ ಮಾಡಿದರೆ ಜನರು ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುವುದು ನಿಶ್ಚಿತ. ಈ ವಿಚಾರದಲ್ಲಿ ಕಾಂಗ್ರೆಸ್ ಎಚ್ಚರಿಕೆಯ ಹೆಜ್ಜೆ ಇಡುವುದು ಒಳಿತು.
ಕೃಷ್ಣಮಣಿ











