~ಡಾ. ಜೆ ಎಸ್ ಪಾಟೀಲ.
ಅಂದು ಇಡೀ ಭಾರತೀಯರು ವಸಾಹತುಶಾಹಿ ಆಡಳಿತದಿಂದ ಮುಕ್ತಿಹೊಂದಿ ದೇಶವನ್ನು ಬ್ರಿಟಷರಿಂದ ಸ್ವಾತಂತ್ರಗೊಳಿಸಲು ಹೋರಾಡುತ್ತಿದ್ದ ಸಂದರ್ಭದಲ್ಲಿ ಭಾರತದ ಧಾರ್ಮಿಕ ಮೂಲಭೂತವಾದಿಗಳು ತಮ್ಮ ಅಸ್ತಿತ್ವ ಮತ್ತು ಸ್ವಹಿತಾಸಕ್ತಿಗಾಗಿ ಕಾರ್ಯತಂತ್ರ ರೂಪಿಸುವಲ್ಲಿ ನಿರತರಾಗಿದ್ದರು. ಸ್ವಾತಂತ್ರ ಹೋರಾಟವು ಗಾಂಧೀಜಿಯವರ ನೇತೃತ್ವದಲ್ಲಿ ಜನಪ್ರೀಯವಾಗುತ್ತಿದ್ದಂತೆ ಮೂಲಭೂತವಾದಿಗಳು ಗಾಂಧಿ ಹತ್ಯೆ ಮತ್ತು ಅವರ ಚಾರಿತ್ಯಹರಣದ ಕೆಲಸಕ್ಕೆ ಕೈಹಾಕಿದರು.

ಸಂಘ ಪರಿವಾರದ ಸಂಸ್ಥಾಪಕ ಸದಸ್ಯರು ಸ್ವತಂತ್ರ ಚಳುವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಲಿಲ್ಲ ಅಷ್ಟೇ ಅಲ್ಲದೆ ಅವರು ಕೆಲವೊಂದು ಸಂದರ್ಭಗಳಲ್ಲಿ ಬ್ರಿಟೀಷ್ ಆಡಳಿತವನ್ನು ಬೆಂಬಲಿಸಿದರು. ಗಾಂಧೀಜಿ ಮೇಲೆ ದೇಶ ವಿಭಜನೆಯ ಆರೋಪ ಮಾಡುವ ಸಂಘ ಪರಿವಾರದ ಅಂದಿನ ಪ್ರಮುಖ ಸದಸ್ಯರು ಮುಸ್ಲಿಮ್ ಲೀಗ್ ನಾಯಕ ಮೊಹಮದ್ ಅಲಿ ಜಿನ್ನಾರ ದ್ವಿರಾಷ್ಟ್ರ ಸಿದ್ಧಾಂತವನ್ನು ಬೆಂಬಲಿಸಿದ್ದರು.
ಸ್ವತಂತ್ರ ಚಳುವಳಿ ತೀವ್ರತೆ ಪಡೆಯುತ್ತಿದ್ದಂತೆ ಜನತಂತ್ರ ರಾಷ್ಟ್ರದ ಬದಲಿಗೆ ಧರ್ಮಾಧಾರಿತ ರಾಷ್ಟ್ರ ಆಗಬೇಕು ಎನ್ನುವ ಉಗ್ರ ನಿಲುವನ್ನು ಹೊಂದಿದ್ದ ಮೂಲಭೂತವಾದಿಗಳು ಸ್ವತಂತ್ರ ಚಳುವಳಿಯನ್ನು ದಿಕ್ಕು ತಪ್ಪಿಸಲೆಂದೇ ೧೯೨೫ ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ೧೯೩೩ ರಲ್ಲಿ ಹಿಂದೂ ಮಹಾಸಭಾಗಳನ್ನು ಸ್ಥಾಪಿಸಿದರು. ಸಂಘವು ಮೇಲ್ನೋಟಕ್ಕೆ ಸಾಂಸ್ಕ್ರತಿಕ ಮುಖವಾಡ ಹೊಂದಿದ್ದರೆˌ

ಹಿಂದೂ ಮಹಾಸಭಾ ಒಂದು ರಾಜಕೀಯ ಪಕ್ಷವಾಗಿ ಕೆಲಸ ಮಾಡಿತು. ಈ ಎರಡೂ ಸಂಘಟನೆಗಳು ಸ್ವತಂತ್ರ ಹೋರಾಟವನ್ನು ಯಾವ ರೀತಿಯಲ್ಲೂ ಬೆಂಬಲಿಸಲಿಲ್ಲ. ಇಂದಿನ ಬಿಜೆಪಿ ಹಾಗು ಅಂದಿನ ಜನಸಂಘದ ಸಂಸ್ಥಾಪಕ ಶ್ಯಾಮಾಪ್ರಸಾದ ಮುಖರ್ಜಿ ಮೊದಲು ಹಿಂದೂ ಮಹಾಸಭಾದಲ್ಲಿ ಸಕ್ರೀಯವಾಗಿದ್ದು ಆನಂತರ ಅವರು ಸಂಘದ ಬೆಂಬಲ ಪಡೆದು ಹಿಂದೂ ಮಹಾಸಭೆಯನ್ನು ತೊರೆದರು. ೧೯೫೧ ರಲ್ಲಿ ಶ್ಯಾಮಾಪ್ರಸಾದ್ ಮುಖರ್ಜಿಯವರು ತಮ್ಮದೇ ಆದ ರಾಜಕೀಯ ಪಕ್ಷ ಭಾರತೀಯ ಜನ ಸಂಘವನ್ನು ಸ್ಥಾಪಿಸಿದರು.

೧೯೮೦ ರಲ್ಲಿ ಸ್ಥಾಪನೆಯಾದ ಭಾರತೀಯ ಜನತಾ ಪಕ್ಷವು ಅಂದಿನ ಜನ ಸಂಘದ ಮರು ಅವತರಣಿಕೆ ಮತ್ತು ಸಂಘ ಪರಿವಾರದ ರಾಜಕೀಯ ವೇದಿಕೆ ಎನ್ನುವುದು ನಮಗೆಲ್ಲರಿಗೂ ಗೊತ್ತಿರುವ ಸಂಗತಿ. ನೆಹರೂರವರ ಜನಪರ ನಿಲುವುˌ ಸಮಾಜವಾದಿ ಚಿಂತನೆˌ ಪಾಶ್ಚಿಮಾತ್ಯ ಮಾದರಿ ಅಭಿವೃದ್ಧಿಯ ಧೋರಣೆಗಳುˌ ಬಹುತ್ವದಲ್ಲಿ ನಂಬಿಕೆˌ ಹಾಗೂ ಅವರ ಸಹಿಷ್ಣು ಮತ್ತು ಜಾತ್ಯಾತೀತ ನೀತಿಗಳು ದೇಶವನ್ನು ಒಂದು ಅಧುನಿಕ ರಾಷ್ಟ್ರವಾಗಿ ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸಿದವು.
ನೆಹರೂರವರ ಜನಪ್ರೀಯತೆಯ ಎದುರಿಗೆ ಜನಸಂಘದ ಸೀಮಿತ ಮತ್ತು ಅಸಹಿಷ್ಣು ಸಿದ್ಧಾಂತವು ವಿಕಸಿತಗೊಳ್ಳಲಿಲ್ಲ. ಹಾಗಾಗಿ ಜನಸಂಘವು ತನ್ನ ಸ್ವಂತ ಬಲದಿಂದ ಭಾರತ ದೇಶದ ಅಧಿಕಾರ ಚುಕ್ಕಾಣಿ ಹಿಡಿಯಲು ಸಾಧ್ಯವಾಗಲೇಯಿಲ್ಲ. ಇಂದಿರಾರ ತುರ್ತು ಪರಿಸ್ಥಿತಿಯ ಕಾಲಾವಧಿಯ ನಂತರ ಇಂದಿರಾ ವಿರೋಧಿ ಜನಾಭಿಪ್ರಾಯ ಕ್ರೂಡೀಕರಿಸುವಲ್ಲಿ ಜಯಪ್ರಕಾಶ್ ನಾರಾಯಣ ಅವರ ಸಮಗ್ರ ಕ್ರಾಂತಿ ಕೆಲಸ ಮಾಡಿತು. ಆಗ ಕೋಮುವಾದಿಗಳು ಮುನ್ನೆಲೆಗೆ ಬರಲು ಹಾದಿಯಾಯಿತು.

ಇಂದಿರಾ ವಿರೋಧಿ ಒಕ್ಕೂಟಕ್ಕೆ ಜಯಪ್ರಕಾಶ್ ನಾರಾಯಣ ಅವರು ಕೋಮುವಾದಿ ಸಿದ್ಧಾಂತದ ಜನಸಂಘವನ್ನೂ ಸೇರಿಸಿಕೊಳ್ಳುವ ಮೂಲಕ ಅದರ ಬೆಳವಣಿಗೆಗೆ ಪರೋಕ್ಷವಾಗಿ ಸಹಾಯ ಮಾಡಿದರು. ಆ ಪರಿಸ್ಥಿತಿಯಿಂದ ರಚನೆಯಾದ ಮುರಾರ್ಜಿ ದೇಸಾಯಿ ನೇತೃತ್ವದ ಪ್ರಥಮ ಕಾಂಗ್ರೆಸ್ಸೇತರ ಸರಕಾರದಲ್ಲಿ ಜನಸಂಘವು ಅಧಿಕಾರದ ರುಚಿ ಅನುಭವಿಸಿತು.
ಜನಸಂಘವು ತನ್ನ ಹೊಸ ಅವತರಣಿಕೆಯಾದ ಬಿಜೆಪಿ ನೇತೃತ್ವದಲ್ಲಿ ಆನಂತರ ವಾಜಪೇಯಿಯವರನ್ನು ಪ್ರಧಾನಿಯಾಗಿ ಮಾಡಿ ಸಮ್ಮಿಶ್ರ ಸರಕಾರ ರಚಿಸಿ ಆರು ವರ್ಷಗಳ ಅವಧಿಗೆ ಅಧಿಕಾರ ಅನುಭವಿಸಿತು. ೨೦೧೪ ರಲ್ಲಿ ಎರಡನೇ ಬಾರಿಗೆ ಬಿಜೆಪಿ ನೇತ್ರತ್ವದ ಎನ್ ಡಿ ಎ ಒಕ್ಕೂಟ ಅಧಿಕಾರಕ್ಕೇರಿ ಈಗ ಎರಡನೇ ಅವಧಿಗೆ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಲೋಕಸಭೆಯಲ್ಲಿ ಪೂರ್ಣ ಪ್ರಮಾಣದ ಬಹುಮತದಿಂದ ಅಧಿಕಾರ ಹಿಡಿದಿದೆ. ಮೋದಿ ನೇತೃತ್ವದ ಇಂದಿನ ಬಿಜೆಪಿ ಸರಕಾರ ಸಂಘ ಪರಿವಾರದ ಗುಪ್ತ ಅಜೆಂಡಾಗಳನ್ನು ಯಾರಿಗೂ ಗೊತ್ತಾಗದಂತೆ ಒಂದೊದಾಗಿ ಅನುಷ್ಠಾನಗೊಳಿಸುತ್ತಾ ಸಾಗುತ್ತಿದೆ.
ಬಿಜೆಪಿ ತನ್ನ ಸಂಸ್ಥಾಪಕರಾದ ಮುಖರ್ಜಿಯವರ ಮೂಲ ಪರಂಪರೆಯನ್ನು ಇನ್ನಷ್ಟು ಬೆಳಕಿಗೆ ತರಲು ಪ್ರಯತ್ನಿಸುತ್ತಿರುವು ಸಹಜ. ಬಿಜೆಪಿಯು ಶ್ಯಾಮಾ ಪ್ರಸಾದ್ ಮುಖರ್ಜಿಯವರ ಬಲಪಂಥೀಯ ಸಿದ್ಧಾಂತಗಳನ್ನು
ಇನ್ನಷ್ಟು ಜನಪ್ರಿಯಗೊಳಿಸಲು ಪ್ರಯತ್ನಿಸುವ ನಿಟ್ಟಿನಲ್ಲಿ ತನ್ನ ಯೋಜನೆಗಳನ್ನು ರೂಪಿಸುತ್ತಿದೆ. ಸಂಘ ಪರಿವಾರವು ಮೋದಿಯನ್ನು ನಿಯಂತ್ರಿಸುತ್ತ ನೆಹರೂರವರ ಜಾತ್ಯಾತೀತ ಮತ್ತು ಸಹಿಷ್ಣು ಪರಂಪರೆಯನ್ನು ಅಳಿಸಿ ಹಾಕಿˌ ಅದಕ್ಕೆ ಪರ್ಯಾಯವಾಗಿ ಧರ್ಮಾಧಾರಿತˌ ಅಸಹಿಷ್ಣು ಪರಂಪರೆ ಜನಪ್ರೀಯಗೊಳಿಸಲು ಹಗಲಿರುಳು ಶ್ರಮಿಸುತ್ತಿದೆ. ಅವಕಾಶ ಸಿಕ್ಕಾಗಲೆಲ್ಲ ಅಥವ ಅವಕಾಶಗಳನ್ನು ಸೃಷ್ಠಿಸಿಕೊಂಡು ಬಿಜೆಪಿಯು ನೆಹರೂರವರ ಪ್ರತಿಯೊಂದು ಆಡಳಿತಾತ್ಮಕ ನಿರ್ಧಾರಗಳನ್ನು ಟೀಕಿಸುವುದು ರೂಢಿಸಿಕೊಂಡಿದೆ. ೧೯೪೮ ರ ಇಂಡೋ-ಪಾಕಿಸ್ತಾನ ಯುದ್ಧದಲ್ಲಿ ಕದನ ವಿರಾಮಕ್ಕೆ ಒತ್ತಾಯಿಸಿದ್ದ ನೆಹರೂ ಅವರ ನಿರ್ಧಾರ “ಐತಿಹಾಸಿಕ ಪ್ರಮಾದ” ಎಂದು ಬಿಜೆಪಿ ಬಿಂಬಿಸುತ್ತಿದೆ.

ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿಸುವಲ್ಲಿ ಶ್ಯಾಮಾಪ್ರಸಾದ್ ಮುಖರ್ಜಿಯವರ ಪ್ರಯತ್ನ ನೆಹರೂಗಿಂತ ಹೆಚ್ಚಿನದ್ದು ಎಂದು ನಮ್ಮ ಯುವ ಜನತೆಯ ತಲೆಯಲ್ಲಿ ತುಂಬುವ ಕೆಲಸ ಬಿಜೆಪಿ ವ್ಯವಸ್ಥಿತವಾಗಿ ಮಾಡುತ್ತಿದೆ. ಬಿಜೆಪಿ ಒಂದು ಪಕ್ಷವಾಗಿ ತನ್ನ ಸಂಸ್ಥಾಪಕನ ಸಿದ್ಧಾಂತಗಳು ಎತ್ತಿ ಹಿಡಿಯುವುತ್ತಿರುವುದು ಸಹಜ ಪ್ರಕ್ರೀಯೆ. ಆದರೆ ಮುಖರ್ಜಿಯವರ ದ್ವಿರಾಷ್ಟ್ರ ಸಿದ್ದಾಂತದ ಪ್ರತಿಪಾದನೆ ಹಾಗು ಬಂಗಾಳ ವಿಭಜನೆಯ ಬಗೆಗಿನ ಒಲವುˌ ಮತ್ತು ಜಾತ್ಯಾತೀತ ನಿಲುಗಳ ಬಗೆಗಿನ ನಕಾರಾತ್ಮಕ ದೋರಣೆಗಳ ಕುರಿತು ಬಿಜೆಪಿ ಪ್ರಜ್ಞಾಪೂರ್ವಕವಾಗಿ ಮೌನ ವಹಿಸುತ್ತಿದೆ. ಶ್ಯಾಮಾಪ್ರಸಾದ್ ಮುಖರ್ಜಿಯವರ ತಣ್ಣನೆಯ ಕೋಮುವಾದ, ಧರ್ಮಾಂಧತೆ ಮತ್ತು ಎಲ್ಲಕ್ಕೂ ಹೆಚ್ಚಾಗಿ ಅವರ ಬ್ರಿಟೀಷ್ ಪರ ಮನೋಭಾವಗಳ ಬಗ್ಗೆ ಬಿಜೆಪಿ ತುಟಿ ಬಿಚ್ಚುತ್ತಿಲ್ಲ. ಶಾಮಾಪ್ರಸಾದ ಮುಖರ್ಜಿಯವರನ್ನು ದೇಶಭಕ್ತರಂತೆ ಬಿಜೆಪಿ ಬಿಂಬಿಸುತ್ತಿದೆ. ಆದರೆ ಇಂದಿನ ತಲೆಮಾರಿನ ಯುವಕರಿಗೆ ಮುಖರ್ಜಿಯವರ ಅಸಲಿ ವ್ಯಕ್ತಿತ್ವವನ್ನು ನಾವು ತಿಳಿಸುವ ಅಗತ್ಯವಿದೆ.
*ಶ್ಯಾಮಾಪ್ರಸಾದ್ ಮುಖರ್ಜಿಯವರು ದ್ವಿರಾಷ್ಟ್ರ ಸಿಂದ್ಧಾಂತ ಬೆಂಬಲಿಸಿದ್ದರು:*

ಶ್ಯಾಮಾಪ್ರಸಾದ್ ಮುಖರ್ಜಿಯವರು ರಾಜಕಾರಣಿಗಿಂತ ಹೆಚ್ಚಾಗಿ ಅವರೊಬ್ಬ ಹಿಂದೂ ಮೂಲಭೂತವಾದಿ ಮುಖಂಡರಾಗಿದ್ದರು ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ. ಸ್ವಾತಂತ್ರ ಪೂರ್ವದಲ್ಲಿ ಮುಖರ್ಜಿಯವರು ಧಾರ್ಮಿಕ ಮತ್ತು ರಾಜಕೀಯ ಸಂಘಟನೆ ಹಿಂದೂ ಮಹಾಸಭೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಮುಖರ್ಜಿಯವರು ಅಂದು ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾಸಿದ್ದರು ಮತ್ತು ಬಂಗಾಳ ವಿಭಜನೆಯನ್ನು ಬಲವಾಗಿ ಬೆಂಬಲಿಸಿದ್ದರು. ಬಂಗಾಳದ ರಾಜಕೀಯ ಕ್ಷೇತ್ರದಲ್ಲಿ ಮುಖರ್ಜಿಯವರು ಸಕ್ರೀಯವಾಗಿದ್ದರು. ಅವಿಭಜಿತ ಬಂಗಾಳವು ಮುಸ್ಲಿಮ್ ಬಾಹುಳ್ಯವಿರುವ ಪ್ರಾಂತವಾಗಿತ್ತು. ಮುಸ್ಲಿಮ್ ರ ಪ್ರಾಬಲ್ಯವಿರುವ ಪ್ರದೇಶ ವಿಭಜನೆಯಾಗಬೇಕು ಎನ್ನುವುದು ಮುಖರ್ಜಿಯ ನಿಲುವಾಗಿತ್ತು. ೧೯೩೨ – ೩೪ ರಲ್ಲಿ ಬಂಗಾಳ ಶಾಸನ ಸಭೆಯಲ್ಲಿ ಶಾಸಕಾಂಗದ ಸ್ಥಾನ ಹಂಚಿಕೆ ಒಪ್ಪಂದವು ಬಂಗಾಳಿ ಸ್ಥಳೀಯ ರಾಜಕಾರಣದಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದಿತು.

ಅದುವರೆಗೆ ಬಂಗಾಳವು ಮುಸ್ಲಿಂ ಬಾಹುಳ್ಯದ ಪ್ರದೇಶವಾಗಿದ್ದರೂ ಪರಿಷತ್ತಿನಲ್ಲಿ ಹಿಂದುಗಳು ಹೆಚ್ಚು ಸ್ಥಾನಗಳನ್ನು ಪ್ರತಿನಿಧಿಸುತ್ತಿತ್ತು. ಆಗ ನಡೆದ ಸ್ಥಾನ ಹೊಂದಾಣಿಕೆಯಿಂದ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಸ್ಥಾನಗಳು ಲಭಿಸುವಂತಾಯಿತು. ಈ ಹೊಂದಾಣಿಕೆಯು ತುಳಿತಕ್ಕೊಳಗಾದ ದಲಿತ ವರ್ಗವನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಿತು ಮತ್ತು ಅವರಿಗಾಗಿ ಪ್ರತ್ಯೇಕ ಎಲೆಕ್ಟೊರೇಟನ್ನು ರಚಿಸಿತು. ಪುಣೆಯಲ್ಲಿ ನಡೆದ ಬಾಬಾ ಸಾಹೇಬ್ ಮತ್ತು ಗಾಂಧೀಜಿ ನಡುವಿನ ಮಾತುಕತೆ ಮತ್ತು ಒಪ್ಪಂದದಂತೆ ಹಿಂದೂ-ದಲಿತ ಜಂಟಿ ಎಲೆಕ್ಟೊರೇಟ್ ಒಪ್ಪಂದವು ಭಾರತದ ಬಹುತೇಕ ಭಾಗಗಳಲ್ಲಿ ದಲಿತರಿಗೆ ಹೆಚ್ಚಿನ ಸ್ಥಾನಗಳು ನೀಡಲು ನಿರ್ಧರಿಸಿತ್ತು. ಇದು ಕೋಮುವಾದಿಗಳಲ್ಲಿ ಇನ್ನಷ್ಟು ಅಭದ್ರತೆಯನ್ನು ಸೃಷ್ಟಿಸಿತು. ಬಂಗಾಳದ ಶಾಸಕಾಂಗ ಸ್ಥಾನಗಳ ಒಪ್ಪಂದದ ಬೆಳವಣಿಗೆಯು ಬಲಪಂಥೀಯರ ಮನದಲ್ಲಿ ತಮ್ಮ ಭದ್ರಕೋಟೆ ಶಿಥಿಲಗೊಂಡು, ತಮ್ಮ ಪರಂಪರಾಗತ ಅಧಿಕಾರವು ಕಳೆದುಹೋಗುವ ಭಯ ಅವರನ್ನು ಕಾಡಿತು.

ಇದು ಹಿಂದೂ ಕೋಮುವಾದದ ಹುಟ್ಟಿಗೆ ವಾತಾವರಣವನ್ನು ಪಕ್ವಗೊಳಿಸಿತು. ಇದರಿಂದ ಅಸಮಾಧಾನಗೊಂಡ ಮುಖರ್ಜಿಯವರು ೧೯೩೯ ರಲ್ಲಿ ಸಾವರ್ಕರ್ ನೇತ್ರತ್ವದ ಹಿಂದೂ ಮಹಾಸಭೆಗೆ ಸೇರಿ ಪರಿಸ್ಥಿತಿಯ ದುರ್ಲಾಭ ಪಡೆದು ಬಂಗಾಳದಾದ್ಯಂತ ಕೋಮುವಾದಿ ಅಭಿಯಾನಕ್ಕೆ ಮುನ್ನುಡಿ ಬರೆದರುˌ ಮತ್ತು ಮುಸ್ಲಿಂ ತುಷ್ಟಿಕರಣದ ಕಾರಣಕ್ಕೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಆರಂಭಿಸಿದರು. ಹಿಂದೂ ಮಹಾಸಭಾ ಪಕ್ಷವು ಎಂದಿಗೂ ಜನರ ಬೆಂಬಲ ಗಳಿಸಲು ಸಾಧ್ಯವಾಗಲಿಲ್ಲ. ಬಂಗಾಲದ ಮೇಲ್ವರ್ಗದ ಜಮೀನ್ದಾರರು ಮತ್ತು ಕೋಲ್ಕತ್ತಾದ ವೈಶ್ಯ-ಮಾರ್ವಾಡಿ ಕೈಗಾರಿಕೋದ್ಯಮಿಗಳ ಗಮನಾರ್ಹ ಬೆಂಬಲವನ್ನು ಗಳಿಸಿಕೊಂಡು ಬಂಗಾಳ ಪ್ರದೇಶದಲ್ಲಿ ಕಾಂಗ್ರೆಸ್ಸನ್ನು ಸೋಲಿಸುವಲ್ಲಿ ಹಿಂದೂ ಮಹಾಸಭಾ ನಿರ್ಣಾಯಕ ಪಾತ್ರ ವಹಿಸಿತು. ಅಂದಿನ ಬಂಗಾಳ ವಿಭಜನೆಯ ನಿರ್ಧಾರಿತ ಯೋಜನೆಯನ್ನು ಬೆಂಬಲಿಸಿದವರಲ್ಲಿ ಮುಖರ್ಜಿ ಪ್ರಮುಖರಾಗಿದ್ದರು. ಅವರ ಈ ನಿಲುವು ಬಲಪಂಥೀಯರ ಪರವಾದ ಭದ್ರಕೋಟೆ ಸೃಷ್ಟಿಸುವ ಅಭಿಪ್ರಾಯಕ್ಕೆ ಮನ್ನಣೆ ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.

ಬಂಗಾಳ ವಿಭಜನೆಯು ಒಂದು ಭಾವನಾತ್ಮಕ ವಿಷಯವಾಗಿತ್ತು ಮತ್ತು ೧೯೦೫ ರ ಹೊತ್ತಿಗೆ, ಸ್ಥಳೀಯ ಗಣ್ಯ ವ್ಯಕ್ತಿಗಳು ಬಂಗಾಳವನ್ನು ವಿಭಜಿಸಬೇಕೆನ್ನುವ ವಸಾಹತುಶಾಹಿ ಶಕ್ತಿಗಳ ವಿರುದ್ಧ ಹೋರಾಡಿದರು. ಆದರೆ ೧೯೪೬-೪೭ ರ ಹೊತ್ತಿಗೆ ಕೋಮು ಸಂಘರ್ಷದ ಪರಿಸ್ಥಿತಿ ಉಲ್ಬಣಗೊಂಡು ಬಂಗಾಳದಲ್ಲಿ ಹಿಂದೂ ಅಲ್ಪಸಂಖ್ಯಾತರ ಅಭದ್ರತೆಯನ್ನು ಹೆಚ್ಚಿಸಿತು. ಆಧುನಿಕ ಭಾರತಕ್ಕೆ ಇದೊಂದು ಅಹಿತಕರ ಸಂಗತಿಯೆನ್ನಿಸಿದರೂ ಕೂಡ ಬಂಗಾಲ ವಿಭಜನೆಗೆ ಹೆಚ್ಚಿನ ಬೆಂಬಲ ಇರಲಿಲ್ಲ. ಈಗಿನ ಬಿಜೆಪಿ ಸರಕಾರದ ಪ್ರತಿನಿಧಿಗಳು ಬಂಗಾಳದ ಬಹು ಮುಖ್ಯ ಭಾಗˌ ಐತಿಹಾಸಿಕ ಮತ್ತು ಆಯಕಟ್ಟಿನ ಪ್ರಮುಖ ನಗರವಾದ ಕಲ್ಕತ್ತಾವು ಪೂರ್ವ ಪಾಕಿಸ್ತಾನದ ಭಾಗವಾಗದಂತೆ ಉಳಿಸಿದರು ಶ್ಯಾಮಾಪ್ರಸಾದ್ ಮುಖರ್ಜಿ ಎಂದು ಸುಳ್ಳು ಹೇಳುತ್ತ ನೆಹರೂರವರನ್ನು ಖಳನಾಯರನ್ನಾಗಿಸುತ್ತಿದ್ದಾರೆ. ಆದರೆ ಶ್ಯಾಮಾಪ್ರಸಾದ್ ಮುಖರ್ಜಿ ಬಂಗಾಳ ವಿಭಜನೆಯನ್ನು ಸ್ವತಂತ್ರಪೂರ್ವದಿಂದಲೂ ಬೆಂಬಲಿಸಿದ್ದನ್ನು ಬಿಜೆಪಿ ಪ್ರಜ್ಞಾಪೂರ್ವಕವಾಗಿ ಮರೆಮಾಚುತ್ತಿದೆ.
ಮುಂದುವರೆಯುವುದು….












