ದೆಹಲಿ ಸೇವಾ ಮಸೂದೆ ಪ್ರಸ್ತಾವಿತ ಆಯ್ಕೆ ಸಮಿತಿಯಲ್ಲಿ ಒಪ್ಪಿಗೆ ಇಲ್ಲದೇ ಹೆಸರು ಸೇರ್ಪಡೆ ಮಾಡಲಾಗಿದೆ ಎಂದು ರಾಜ್ಯಸಭೆಯ ಐದು ಸದಸ್ಯರು ಆಮ್ ಆದ್ಮಿ ಪಕ್ಷದ (ಎಎಪಿ) ರಾಘವ್ ಚಡ್ಡಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿ ಸೇವೆಗಳ ಮಸೂದೆಯ ಪ್ರಸ್ತಾವಿತ ಆಯ್ಕೆ ಸಮಿತಿಯಲ್ಲಿ ತಮ್ಮ ʼನಕಲಿ ಸಹಿʼಯನ್ನು ಸೇರಿಸಲಾಗಿದೆ. ದೆಹಲಿ ಸೇವಾ ಮಸೂದೆಯ ಪ್ರಸ್ತಾವಿತ ಆಯ್ಕೆ ಸಮಿತಿಯಲ್ಲಿ ತಮ್ಮ ಒಪ್ಪಿಗೆಯಿಲ್ಲದೆ ತಮ್ಮ ಹೆಸರನ್ನು ಸೇರಿಸಲಾಗಿದೆ ಎಂದು ರಾಜ್ಯಸಭಾ ಸಂಸದರಾದ, ಬಿಜೆಪಿಯ ಎಸ್ ಫಾಂಗ್ನಾನ್ ಕೊನ್ಯಾಕ್, ನರಹರಿ ಅಮೀನ್ ಮತ್ತು ಸುಧಾಂಶು ತ್ರಿವೇದಿ, ಎಐಎಡಿಎಂಕೆ ಸಂಸದ ಎಂ ತಂಬಿದುರೈ ಮತ್ತು ಬಿಜೆಡಿಯ ಸಸ್ಮಿತ್ ಪಾತ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೆಹಲಿ ಸೇವಾ ಮಸೂದೆ ಸಂಬಂಧ ಎಎಪಿ ನಾಯಕ ರಾಘವ್ ಚಡ್ಡಾ ವಿರುದ್ಧ ಸೋಮವಾರ (ಆಗಸ್ಟ್ 7) ವಿಶೇಷ ಹಕ್ಕು ಮಂಡಿಸಲು ಒತ್ತಾಯಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಎಐಎಡಿಎಂಕೆ ಸಂಸದ ಎಂ ತಂಬಿದುರೈ ಈಗಾಗಲೇ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್‌ಕರ್ ಅವರಿಗೆ ಪತ್ರ ಬರೆದಿದ್ದು, “ಯಾವುದೇ ದಾಖಲೆಗೆ ಸಹಿ ಹಾಕದ ಕಾರಣ ನನ್ನ ಹೆಸರನ್ನು ಪ್ರಸ್ತಾವನೆಯಲ್ಲಿ ಹೇಗೆ ಸೇರಿಸಲಾಗಿದೆ ಎಂದು ವಿಶೇಷಾಧಿಕಾರ ಸಮಿತಿಗೆ ಸೂಚಿಸಿ ರಾಜ್ಯಸಭಾ ಅಧ್ಯಕ್ಷರಿಗೆ ಪತ್ರ ನೀಡಿದ್ದೇನೆ. ಯಾರೋ ನನ್ನ ಸಹಿಯನ್ನು ನಕಲಿ ಮಾಡಿರಬಹುದು” ಎಂದು ಹೇಳಿದರು.
ಬಿಜೆಪಿ ಸಂಸದ ನರಹರಿ ಅಮೀನ್, “ರಾಘವ್ ಚಡ್ಡಾ ಅವರು ನನ್ನ ಹೆಸರನ್ನು ಆಯ್ಕೆ ಸಮಿತಿಯಲ್ಲಿ ಸೇರಿಸಿದ್ದಾರೆ. ಅವರು ನನ್ನೊಂದಿಗೆ ಮಾತನಾಡಿಲ್ಲ, ನಾನು ಇದಕ್ಕೆ ಒಪ್ಪಿಗೆ ನೀಡಿಲ್ಲ. ಅವರು ತಪ್ಪು ಮಾಡಿದ್ದಾರೆ. ನಾನು ನನ್ನ ಸಹಿಯನ್ನು ನೀಡಿಲ್ಲ” ಎಂದು ಹೇಳಿದರು.
ಬಿಜೆಡಿಯ ಸಸ್ಮಿತ್ ಪಾತ್ರಾ ಅವರು ತಮ್ಮ ಒಪ್ಪಿಗೆಯಿಲ್ಲದೆ ದೆಹಲಿ ಸೇವಾ ಮಸೂದೆ ಸಮಿತಿಯಲ್ಲಿ ಅವರ ಹೆಸರನ್ನು ಸೇರಿಸಿದ್ದಾರೆ ಎಂದು ಇದೇ ರೀತಿಯ ಆರೋಪ ಮಾಡಿದ್ದಾರೆ.
“ಸದನದಲ್ಲಿ ನಿರ್ಣಯಗಳನ್ನು ಮಂಡಿಸಿದ ಸಮಯದಲ್ಲಿ (ದೆಹಲಿ ಸೇವಾ ಮಸೂದೆಯ ಮೇಲಿನ ಚರ್ಚೆಯ ಸಮಯದಲ್ಲಿ) ರಾಘವ್ ಚಡ್ಡಾ ಅವರು ಮಂಡಿಸಿದ ನಿರ್ಣಯದಲ್ಲಿ ನನ್ನ ಹೆಸರನ್ನು ಉಲ್ಲೇಖಿಸಲಾಗಿದೆ. ನನ್ನ ಪೂರ್ವಾನುಮತಿ ಪಡೆಯದೆ ನನ್ನ ಹೆಸರನ್ನು ಹೇಳಲಾಗುವುದಿಲ್ಲ. ಈ ಬಗ್ಗೆ ಸಭಾಪತಿ ಕ್ರಮ ಕೈಗೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾನು ದೂರು ನೀಡಿದ್ದೇನೆ, ನಿಸ್ಸಂಶಯವಾಗಿ, ಇದು ಹಕ್ಕುಚ್ಯುತಿ ವಿಷಯವಾಗಿದೆ, ನಾವೆಲ್ಲರೂ ನಮ್ಮ ಆಯಾ ದೂರುಗಳನ್ನು ಸಲ್ಲಿಸಿದ್ದೇವೆ” ಎಂದು ಮಾಹಿತಿ ನೀಡಿದರು.
ದೆಹಲಿ ಸೇವಾ ಮಸೂದೆಯ ಸಮಿತಿಯಲ್ಲಿ ಹೆಸರು ಸೇರ್ಪಡೆ ಬಗ್ಗೆ ರಾಘವ್ ಚಡ್ಡಾ ಪ್ರತಿಕ್ರಿಯಿಸಿದ್ದು ವಿಶೇಷಾಧಿಕಾರ ಸಮಿತಿ ನೋಟಿಸ್ ಕಳುಹಿಸಿದಾಗ ಉತ್ತರ ನೀಡುವುದಾಗಿ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ವಿವಾದಾತ್ಮಕ ‘ದೆಹಲಿ ಸೇವೆಗಳ ನಿಯಂತ್ರಣ ಮಸೂದೆ’ಯು ರಾಜ್ಯಸಭೆಯಲ್ಲಿ 131-102 ಮತಗಳಿಂದ ಸೋಮವಾರ ಅಂಗೀಕಾರಗೊಂಡಿತು.
ಈಗಾಗಲೇ ಲೋಕಸಭೆಯು ದೆಹಲಿ ಸೇವಾ ಮಸೂದೆ ಅಂಗೀಕರಿಸಿದೆ. ರಾಷ್ಟ್ರಪತಿಗಳ ಅಂಕಿತ ಬಿದ್ದ ಬಳಿಕ ಕಾಯ್ದೆಯಾಗಿ ಜಾರಿಗೆ ಬರಲಿದೆ. ಈಗಾಗಲೇ ಹೊರಡಿಸಿರುವ ಸುಗ್ರೀವಾಜ್ಞೆಗೆ ಕಾಯ್ದೆಯ ರೂಪವನ್ನು ನೀಡಲು ಸರ್ಕಾರ ಮಸೂದೆಯನ್ನು ಮಂಡಿಸಿತ್ತು.
ವಿಸ್ಕೃತ, ಬಿಸಿ ಚರ್ಚೆಯ ಬಳಿಕ ಮಸೂದೆಯನ್ನು ಮತಕ್ಕೆ ಹಾಕಲಾಯಿತು. ಮಸೂದೆಯ ಪರವಾಗಿ 131 ಮತ್ತು ವಿರುದ್ಧವಾಗಿ 102 ಸದಸ್ಯರು ಮತ ಚಲಾಯಿಸಿದರು. ಹೆಚ್ಚು ಮತ ಚಲಾವಣೆಯಾದ್ದರಿಂದ ಮಸೂದೆಯು ಅಂಗೀಕಾರಗೊಂಡಿತು.
ಇದಕ್ಕೂ ಮೊದಲು ದೆಹಲಿ ಸೇವಾ ಮಸೂದೆ ಮಂಡಿಸಿದ ಗೃಹ ಸಚಿವ ಅಮಿತ್ ಶಾ, “ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭ್ರಷ್ಟಾಚಾರ ರಹಿತ ಮತ್ತು ಪರಿಣಾಮಕಾರಿಯಾದ ಆಡಳಿತ ನೀಡುವುದು ಈ ಮಸೂದೆಯ ಉದ್ದೇಶವಾಗಿದೆ” ಎಂದು ಸಮರ್ಥಿಸಿಕೊಂಡರು.
ಈ ಸುದ್ದಿ ಓದಿದ್ದೀರಾ? Breaking: ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವ ಮರುಸ್ಥಾಪನೆ
ಟಿಎಂಸಿಯ ಸುಕೇಂದು ಶೇಖರ್ ರಾಯ್, ಡಿಎಂಕೆಯ ತಿರುಚಿ ಶಿವ ಅವರು ಮಸೂದೆ ವಿರೋಧಿಸಿ ಮಾತನಾಡಿದರು. ಬಿಜೆಡಿಯ ಸಸ್ಮಿತ್ ಪಾತ್ರಾ ಮತ್ತು ವೈಎಸ್ಆರ್ಸಿಪಿಯ ವಿ.ವಿಜಯಸಾಯಿ ರೆಡ್ಡಿ ಅವರು ಮಸೂದೆ ಬೆಂಬಲಿಸಿ ಮಾತನಾಡಿದರು.
ಇದಕ್ಕೂ ಮುನ್ನ ಚರ್ಚೆಯಲ್ಲಿ ಭಾಗವಹಿಸಿದ್ದ ಎಎಪಿ ಸದಸ್ಯ ರಾಘವ್ ಛಡ್ಡಾ ಅವರು, “ಇದು ‘ರಾಜಕೀಯ ವಂಚನೆ, ‘ಸಾಂವಿಧಾನಿಕ ಅಪರಾಧ’ವಾಗಿದೆ. ದೆಹಲಿ ಸೇವಾ ಮಸೂದೆ ಚುನಾಯಿತ ಸರ್ಕಾರಗಳ ಅಧಿಕಾರ ಕಸಿದುಕೊಳ್ಳುವ ಉದ್ದೇಶ ಹೊಂದಿದೆ” ಎಂದು ಟೀಕಿಸಿದರು.