• Home
  • About Us
  • ಕರ್ನಾಟಕ
Wednesday, December 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಶಕ್ತಿ ಯೋಜನೆ ಮತ್ತು ಮಹಿಳಾ ಶ್ರಮಶಕ್ತಿಯ ಮುಂಚಲನೆ- ಭಾಗ 1

ನಾ ದಿವಾಕರ by ನಾ ದಿವಾಕರ
July 4, 2023
in ಅಂಕಣ, ಅಭಿಮತ
0
ಶಕ್ತಿ ಯೋಜನೆ ಮತ್ತು ಮಹಿಳಾ ಶ್ರಮಶಕ್ತಿಯ ಮುಂಚಲನೆ- ಭಾಗ 1
Share on WhatsAppShare on FacebookShare on Telegram

ಪುರುಷ ಪ್ರಧಾನತೆಯ ನಡುವೆ ಮಹಿಳೆಗೆ ನೀಡುವ ಅಲ್ಪ ವಿನಾಯಿತಿಗಳೂ ಪ್ರಶ್ನಾರ್ಹವಾಗುತ್ತವೆ

ADVERTISEMENT

ಸ್ವತಂತ್ರ ಭಾರತ ಆಧುನಿಕತೆಯ ಹಾದಿಯಲ್ಲಿ ಎಷ್ಟೇ ಎತ್ತರದ ಶಿಖರಗಳನ್ನು ತಲುಪಿದ್ದರೂ ತಳಮಟ್ಟದ ಸಾಮಾಜಿಕ ಬದುಕಿನಲ್ಲಿ ಮತ್ತು ಸಾಂಸ್ಕೃತಿಕ ವಾತಾವರಣದಲ್ಲಿ ತನ್ನ ಮೂಲ ಬೇರುಗಳಲ್ಲಡಗಿರುವ ಪಿತೃಪ್ರಧಾನತೆ ಹಾಗೂ ಊಳಿಗಮಾನ್ಯ ಗುಣಲಕ್ಷಣಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಾಗಿಲ್ಲ. ಭಾರತ ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡು ಎರಡು ಶತಮಾನಗಳೇ ಕಳೆದಿವೆ, ಪಾಶ್ಚಿಮಾತ್ಯ ಜೀವನಶೈಲಿಯನ್ನು, ಬದುಕಿನ ಮಾರ್ಗಗಳನ್ನು, ಸಾಮಾಜಿಕ ಧೋರಣೆಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಅಳವಡಿಸಿಕೊಳ್ಳುತ್ತಲೇ ವಸಾಹತು ದಾಸ್ಯವನ್ನೂ ದಾಟಿ ಒಂದು ಸ್ವತಂತ್ರ ಗಣತಂತ್ರವಾಗಿ ರೂಪುಗೊಂಡಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನೂ ಒಳಗೊಂಡಂತೆ ವೈಚಾರಿಕತೆ-ವೈಜ್ಞಾನಿಕ ಮನೋಭಾವ ಮತ್ತು ಜನಸಾಮಾನ್ಯರ ನಿತ್ಯ ಬದುಕಿನ ನಡೆನುಡಿಗಳ ಮೂಲಕ ಭಾರತ ಇಂದು ಅತ್ಯಂತ ಮುಂದುವರೆದ ಪಾಶ್ಚಿಮಾತ್ಯ ರಾಷ್ಟ್ರಗಳಿಗೂ ಸೆಡ್ಡು ಹೊಡೆಯುವ ರೀತಿಯಲ್ಲಿ ಆಧುನಿಕತೆಯನ್ನು ಮೈಗೂಡಿಸಿಕೊಂಡಿದೆ. ಈ ನಮ್ಯತೆ ಇರುವುದರಿಂದಲೇ ಭಾರತೀಯ ಸಮಾಜವು ಅತ್ಯಾಧುನಿಕ ತಂತ್ರಜ್ಞಾನಗಳನ್ನೂ ಬಹುಬೇಗನೆ ತನ್ನದಾಗಿಸಿಕೊಳ್ಳುತ್ತಿದೆ.

ಸಾಂಸ್ಕೃತಿಕವಾಗಿ ಹಾಗೂ ಸಾಮಾಜಿಕ ವಾತಾವರಣದಲ್ಲಿ ಪ್ರಾಚೀನ ಸಂಪ್ರದಾಯಗಳೊಂದಿಗೆ ಮುಖಾಮುಖಿಯಾಗುತ್ತಲೇ ಮುನ್ನಡೆಯುತ್ತಿರುವ ಮೇಲ್ವರ್ಗದ-ಮೇಲ್ಪದರದ ಸಮಾಜದ ನಡುವೆಯೇ, ಭಾರತದ ಭವಿಷ್ಯವು ತಿರಸ್ಕರಿಸಲ್ಪಟ್ಟ ಪ್ರಾಚೀನ ಪರಂಪರೆ-ಸಂಪ್ರದಾಯಗಳ ಪುನರುತ್ಥಾನದಲ್ಲೇ ಅಡಗಿದೆ ಎಂಬ ಒಂದು ವಾದವೂ ಸಹ ದೇಶದ ಪ್ರತಿಷ್ಠಿತ ಬೌದ್ಧಿಕ ವಲಯಗಳಲ್ಲಿ ವ್ಯಾಪಕ ಚರ್ಚೆಗೊಳಗಾಗುತ್ತಿದೆ. ಆಧುನಿಕ ವಿಜ್ಞಾನದ ಅವಿಷ್ಕಾರಗಳಾದ ಉಪಗ್ರಹಗಳು ಮತ್ತು ಈ ಉಪಗ್ರಹಗಳನ್ನಾಧರಿಸಿದ ತಂತ್ರಜ್ಞಾನದ ಸಾಧನಗಳನ್ನು ಬಳಸಿಕೊಳ್ಳುತ್ತಲೇ, ಈ ವೈಜ್ಞಾನಿಕ ಅವಿಷ್ಕಾರಗಳು ತಿರಸ್ಕರಿಸುವ ಅವೈಜ್ಞಾನಿಕ ತತ್ವ ಮೀಮಾಂಸೆಗಳನ್ನು ಮತ್ತೊಮ್ಮೆ ಸಮಾಜಕ್ಕೆ ತಲುಪಿಸುವ ಪ್ರಯತ್ನಗಳಲ್ಲಿ ಈ ದ್ವಂದ್ವವನ್ನು ಸ್ಪಷ್ಟವಾಗಿ ಗಮನಿಸಬಹುದು. ಅತ್ಯಾಧುನಿಕ ವಿಜ್ಞಾನ-ಶಿಕ್ಷಣ (ವೈಜ್ಞಾನಿಕತೆ ಅಲ್ಲ) ಪಡೆದ ಆಧುನಿಕ ಸಮಾಜವೂ ಸಹ ಇದೇ ಉಪಗ್ರಹಗಳು ಒದಗಿಸುವ ಜ್ಞಾನಕ್ಕೆ ವ್ಯತಿರಿಕ್ತವಾದ ಪ್ರಾಚೀನ ನಂಬಿಕೆಗಳತ್ತ ವಾಲುತ್ತಿರುವುದನ್ನು ಈ ದ್ವಂದ್ವದ ನಡುವೆ ಗುರುತಿಸಬಹುದು. ಇದಕ್ಕೆ ಸ್ಪಷ್ಟ ಉದಾಹರಣೆ ಫಲಜೋತಿಷ್ಯದ ಪ್ರಸರಣದಲ್ಲಿ ಗುರುತಿಸಬಹುದು.

ಆಧುನಿಕತೆ ಮತ್ತು ಸ್ತ್ರೀ ಸಂವೇದನೆ

ಈ ವಾಲುವಿಕೆಯ ಒಂದು ಆಯಾಮವನ್ನು ಮಹಿಳಾ ಸಂವೇದನೆ ಮತ್ತು ಲಿಂಗ ಭೇದಗಳ ವಿಚಾರದಲ್ಲೂ ಸ್ಪಷ್ಟವಾಗಿ ಗಮನಿಸಲು ಸಾಧ್ಯ. ಭವ್ಯ ಭಾರತದ ಪರಂಪರೆಯ ಬಗ್ಗೆ ವ್ಯಾಖ್ಯಾನಿಸುವ ಬೌದ್ಧಿಕ ವಲಯವು ಲಿಂಗ ಸೂಕ್ಷ್ಮತೆಯ ಸುಳಿವೂ ದೊರೆಯದ ರೀತಿಯಲ್ಲಿ ಪ್ರಾಚೀನ ಪರಂಪರೆಯ ಪಿತೃಪ್ರಧಾನತೆಯನ್ನು ವೈಭವೀಕರಿಸುವುದನ್ನು ಭಾರತದ ಉದ್ದಗಲಕ್ಕೂ, ಜಾತಿ-ಧರ್ಮಗಳ ಗೆರೆಗಳನ್ನು ದಾಟಿ ಗಮನಿಸಬಹುದು. ಹಾಗಾಗಿಯೇ ಮಹಿಳಾ ಸಮಾನತೆಯನ್ನು ಪ್ರತಿಪಾದಿಸುವ ಯಾವುದೇ ಪ್ರಯತ್ನಗಳು ಸಮಾಜದ ಮೇಲ್ವರ್ಗ-ಮೇಲ್ಪದರದಿಂದ ವಿರೋಧ ಎದುರಿಸುತ್ತವೆ. ಈ ಮೇಲ್ಪದರವು ಅತ್ಯಾಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಇತ್ತೀಚಿನ ಅವಿಷ್ಕಾರಗಳ ಫಲಾನುಭವಿಗಳೂ, ಆರಾಧಕರೂ ಆಗಿದ್ದರೆ ಅದು ಕಾಕತಾಳೀಯ ವಿಡಂಬನೆ ಎನ್ನಬಹುದು. ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವುದರಿಂದ ಹಿಡಿದು ಸಾರಿಗೆ ಬಸ್ಸು-ರೈಲುಗಳಲ್ಲಿ ಶೇ 50ರಷ್ಟು ಆಸನಗಳನ್ನು ಮಹಿಳೆಯರಿಗೆ ಮೀಸಲಿಡುವ ದೈನಂದಿನ ವಿಚಾರದವರೆಗೂ ಈ ವಿರೋಧ ವಿಭಿನ್ನ ನೆಲೆಗಳಲ್ಲಿ ವ್ಯಕ್ತವಾಗುತ್ತಲೇ ಇರುತ್ತದೆ. ಪಿತೃಪ್ರಧಾನ ವ್ಯವಸ್ಥೆಯ ನೆಲೆಯಲ್ಲಿ ಈ ವಿದ್ಯಮಾನವನ್ನು ಗಮನಿಸಿದಾಗ, ಭಾರತದ ಶ್ರೇಣೀಕೃತ ಸಮಾಜವೇ ಇಂದಿಗೂ ಇಲ್ಲಿನ ಪ್ರಜಾಪ್ರಭುತ್ವದ ನೆಲೆಗಳಲ್ಲೂ ಆಧಿಪತ್ಯ ಸಾಧಿಸಿರುವುದು ಸ್ಪಷ್ಟವಾಗುತ್ತದೆ. ಹಾಗೆಯೇ ಈ ಸಮಾಜದ ಗರ್ಭದಲ್ಲೇ ಅಡಗಿರುವ ಪುರುಷಾಧಿಪತ್ಯ ಮತ್ತು ವಾರಸುದಾರಿಕೆಯ ಮೇಲರಿಮೆಗಳು ಸರ್ಕಾರದ ಆಡಳಿತ ನೀತಿಗಳನ್ನೂ ಆವರಿಸಿರುತ್ತದೆ.

ಈ ವ್ಯೂಹವನ್ನು ದಾಟಿ ಪ್ರತಿಪಾದಿಸಲಾಗುವ ಮಹಿಳಾ ಸಮಾನತೆ ಅಥವಾ ಮಹಿಳಾ ಸಂವೇದನೆಯ ಆಡಳಿತಾತ್ಮಕ ಕ್ರಮಗಳು ವಿಶಾಲ ಸಮಾಜದಲ್ಲಿ ವಿರೋಧಿ ಅಲೆಗಳನ್ನು ಸೃಷ್ಟಿಸುತ್ತವೆ. ಲಿಂಗ ಸೂಕ್ಷ್ಮತೆಯ ಕೊರತೆ ಮತ್ತು ಪಿತೃಪ್ರಧಾನತೆಯ ಅಸ್ಮಿತೆಗಳು ಈ ವಿರೋಧಗಳಿಗೆ ಮೂಲ ಕಾರಣವಾಗಿರುತ್ತವೆ. ಹಾಗಾಗಿಯೇ ಮಹಿಳಾ ಸಂಕುಲದ ಸಾಂವಿಧಾನಿಕ ಹಕ್ಕುಗಳೂ ಸಹ ಆಡಳಿತ ವ್ಯವಸ್ಥೆಯಿಂದ ಅಥವಾ ಸರ್ಕಾರದ ವತಿಯಿಂದ ಕೊಡಮಾಡುವ ಒಂದು ವಿನಾಯಿತಿ/ರಿಯಾಯಿತಿ/ಸೌಲಭ್ಯ/ಸವಲತ್ತು ಎನಿಸಿಕೊಳ್ಳುತ್ತದೆ. ತಮಗೆ ನ್ಯಾಯಯುತವಾಗಿ ಬರಬೇಕಾದ ಪ್ರತಿಯೊಂದನ್ನೂ ಕೇಳಿಪಡೆಯಬೇಕಾದ ವಾತಾವರಣದಲ್ಲಿ ಬದುಕುತ್ತಿರುವ ತಳಮಟ್ಟದ ಸಮಾಜ ಮತ್ತು ಮಹಿಳಾ ಸಂಕುಲ ಹೀಗೆ ಪಡೆದುಕೊಂಡಿದ್ದನ್ನೂ ʼಉಚಿತʼ ಎಂದು (Freebies) ಬಣ್ಣಿಸುವ ಮೂಲಕ ಆಳುವ ವ್ಯವಸ್ಥೆಯು ತನ್ನ ಪಿತೃಪ್ರಧಾನ-ಊಳಿಗಮಾನ್ಯ ಧೋರಣೆಯನ್ನು ಮತ್ತೆ ಮತ್ತೆ ದೃಢೀಕರಿಸುತ್ತಲೇ ಬಂದಿದೆ.

ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ/ಜಾರಿಗೊಳಿಸಲಿರುವ ಹಲವು ಯೋಜನೆಗಳನ್ನು ವ್ಯಾಖ್ಯಾನಿಸುವ ಸಂದರ್ಭದಲ್ಲಿ ವ್ಯಕ್ತವಾಗುತ್ತಿರುವ ಸಾರ್ವಜನಿಕ ವ್ಯಂಗ್ಯ, ಆಕ್ರೋಶ ಹಾಗೂ ವಿರೋಧಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಇದೊಂದು ಸಾಮಾಜಿಕ ವ್ಯಾಧಿ, ಸಾಂಸ್ಕೃತಿಕ ವ್ಯಸನದಂತೆಯೇ ಕಾಣುತ್ತದೆ. ಈ ವಿರೋಧ ಹಾಗೂ ಅಪಹಾಸ್ಯಗಳನ್ನು ರಾಜಕೀಯ ನೆಲೆಯ ಬದಲು ಸಾಮಾಜಿಕ ನೆಲೆಯಲ್ಲಿ ನಿಂತು ನೋಡಿದಾಗ ಸಮಾಜದೊಳಗಿನ ಊಳಿಗಮಾನ್ಯ ಆಧಿಪತ್ಯದ ಧೋರಣೆಗಳೂ ಸ್ಪಷ್ಟವಾಗಿ ಕಾಣುತ್ತದೆ. ಪುರುಷಾಹಮಿಕೆಗೆ ದೃಢ ಬುನಾದಿ ಹಾಕುವ ಈ ಧೋರಣೆಗಳ ಒಂದು ಒಳಸುಳಿಯಾಗಿ ಮಹಿಳೆಯರಿಗಾಗಿ ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆಯ ಸುತ್ತ ವ್ಯಂಗ್ಯೋಕ್ತಿಗಳೂ ಕಂಡುಬರುತ್ತವೆ. ಪುರುಷಾಧಿಪತ್ಯದ ಅಧೀನತೆಯಲ್ಲೇ ಮಹಿಳಾ ಶಕ್ತಿಯನ್ನೂ ನಿಯಂತ್ರಿಸುವ ಊಳಿಗಮಾನ್ಯ ಧೋರಣೆಯ ಪರಿಣಾಮವೇ, ನಮಗೆ ಮಹಿಳಾ ಮೀಸಲಾತಿಯನ್ನೂ ಸೇರಿದಂತೆ ಎಲ್ಲ ಸಾಂವಿಧಾನಿಕ ಹಕ್ಕುಗಳೂ ಸಹ  ಸರ್ಕಾರ ಅಥವಾ ಪ್ರಭುತ್ವ ʼ ಕೊಡಮಾಡುವ ʼ ಬಳುವಳಿಯಂತೆ ಕಾಣುತ್ತದೆ. Freebies ಅಥವಾ ಅದರ ಸಂವಾದಿಯಾಗಿ ಬಳಕೆಯಾಗುತ್ತಿರುವ ʼಉಚಿತʼ ಎಂಬ ಪದದ ಮೂಲ ಧಾತುವನ್ನು ಇಲ್ಲಿ ಗುರುತಿಸಬೇಕು.

ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆ ಎರಡೂ ಸಹ ನೇರವಾಗಿ ಮಹಿಳಾ ಕೇಂದ್ರಿತ ಯೋಜನೆಗಳಾಗಿರುವುದರಿಂದ ಬಾಹ್ಯ ಸಮಾಜದಲ್ಲಿ ಈ ಎರಡೂ ಯೋಜನೆಗಳು ಅವಹೇಳನಕ್ಕೆ ಗುರಿಯಾಗುತ್ತಿವೆ. ರಾಜ್ಯ ಸಾರಿಗೆ ಬಸ್ಸುಗಳಲ್ಲಿ (ಹವಾನಿಯಂತ್ರಿತ-ಐಷಾರಾಮಿ ಬಸ್ಸುಗಳನ್ನು ಹೊರತುಪಡಿಸಿ) ರಾಜ್ಯದ ಸಮಸ್ತ ಮಹಿಳೆಯರಿಗೆ ಟಿಕೆಟ್‌ ರಹಿತ ಪ್ರಯಾಣದ ಸವಲತ್ತನ್ನು ಒದಗಿಸುವ ಶಕ್ತಿ ಯೋಜನೆ, ರಾಜ್ಯದ ಫಲಾನುಭವಿ ಮಹಿಳೆಯರಿಗೆ ಎಷ್ಟು ಉಪಯುಕ್ತವಾಗಲಿದೆ ಎಂಬ ಬೌದ್ಧಿಕ ಚರ್ಚೆಗೆ ಸಮಾನಾಂತರವಾಗಿ ಈ ಯೋಜನೆಯಿಂದ ಮಹಿಳಾ ಸಬಲೀಕರಣ, ಮಹಿಳೆಯ ಭೌತಿಕ ಚಲನೆ ಹಾಗೂ ಮಹಿಳಾ ಶ್ರಮ ಮತ್ತು ಶ್ರಮಶಕ್ತಿಯ ಚಲನೆಗೆ ಎಷ್ಟರ ಮಟ್ಟಿಗೆ ಫಲಕಾರಿಯಾಗಲಿದೆ ಎಂಬ ಚರ್ಚೆಗಳೂ ನಡೆಯುತ್ತಿವೆ. ಸಮಾಜದ ಪ್ರಜ್ಞಾವಂತ ವಲಯದ ಈ ಚರ್ಚೆಗಳ ಮತ್ತೊಂದು ಬದಿಯಲ್ಲಿ ಈ ಯೋಜನೆಯು ನಮ್ಮ ಸಮಾಜದೊಳಗಿನ ಪುರುಷಾಧಿಪತ್ಯದ ಕೊಳಚೆಯನ್ನೂ ಒಮ್ಮೆಲೆ ಹೊರಹಾಕಿರುವುದು ಸ್ವಾಗತಾರ್ಹವೇ ಎನ್ನಬಹುದು. ಸಮಾಜಮುಖಿಯಾಗಿರಬೇಕಾದ ಕೆಲವು ಮಾಧ್ಯಮ ವಾಹಿನಿಗಳು ಈ ಕೊಳಚೆಯ ಸಂಗ್ರಹಾಗಾರಗಳಾಗಿರುವುದು ಮಾತ್ರ ದುರಂತ.

ಮುಂದುವರೆಯುತ್ತದೆ ,,,,,,,

Tags: BJPCMSiddaramaiahCongress PartyDKShivakumarshakti scheme
Previous Post

ಬಿಜೆಪಿಗೆ ಬಿಗ್​ ಸ್ಟ್ರೋಕ್​ ಕೊಟ್ಟ ಸಿದ್ದರಾಮಯ್ಯ ಸರ್ಕಾರ

Next Post

“ಯಲಾಕುನ್ನಿ” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ವೈರಲ್

Related Posts

Top Story

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

by ಪ್ರತಿಧ್ವನಿ
December 23, 2025
0

ಹವಾಮಾನ ವೈಪರೀತ್ಯಗಳು, ಮಾರುಕಟ್ಟೆ ಸಮಸ್ಯೆ ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಕೃಷಿಕರು ಸಮಸ್ಯೆ ಎದುರಿಸುತ್ತಿದ್ದು, ಇಂತಹ ವ್ಯತ್ಯಾಸಗಳ ನಡುವೆಯೂ ಕೆಲವು ಕೃಷಿಕರು ಯಶ್ವಸಿಯಾಗಿದ್ದಾರೆ ಎಂದು ಕೃಷಿ ಸಚಿವ...

Read moreDetails

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

December 23, 2025
ಗ್ರಾಮ ಭಾರತದ ಜೀವನಾಡಿಗೆ ಅರಿವಳಿಕೆ ಮದ್ದು

ಗ್ರಾಮ ಭಾರತದ ಜೀವನಾಡಿಗೆ ಅರಿವಳಿಕೆ ಮದ್ದು

December 23, 2025

ತಂದೆಯಿಂದಲೇ ಗರ್ಭಿಣಿ ಮಗಳ ಹತ್ಯೆ: ಜಿಲ್ಲಾ ಉಸ್ತುವಾರಿ ಸಚಿವ ಖಂಡನೆ

December 22, 2025

ದ್ವೇಷ ಬಿತ್ತುವ ಶಕ್ತಿಗಳ ವಿರುದ್ಧ ಹೋರಾಟ ನಮ್ಮೆಲ್ಲರ ಕರ್ತವ್ಯ- ಮುಖ್ಯಮಂತ್ರಿ ಸಿದ್ದರಾಮಯ್ಯ

December 22, 2025
Next Post
“ಯಲಾಕುನ್ನಿ” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ವೈರಲ್

"ಯಲಾಕುನ್ನಿ" ಚಿತ್ರದ ಫಸ್ಟ್ ಲುಕ್ ಪೋಸ್ಟರ್ ವೈರಲ್

Please login to join discussion

Recent News

Daily Horoscope: ಇಂದು ಅತಿ ಹೆಚ್ಚು ಆರ್ಥಿಕ ಲಾಭ ಪಡೆಯುವ ರಾಶಿಗಳಿವು..!
Top Story

Daily Horoscope: ಇಂದು ಅತಿ ಹೆಚ್ಚು ಆರ್ಥಿಕ ಲಾಭ ಪಡೆಯುವ ರಾಶಿಗಳಿವು..!

by ಪ್ರತಿಧ್ವನಿ
December 24, 2025
ಬೇರುಬಿಟ್ಟ ಚಿಂತನೆಗಳೂ ಸುಡುವ ಹಾಳೆಗಳೂ
Top Story

ಬೇರುಬಿಟ್ಟ ಚಿಂತನೆಗಳೂ ಸುಡುವ ಹಾಳೆಗಳೂ

by ಪ್ರತಿಧ್ವನಿ
December 24, 2025
Top Story

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
December 23, 2025
Top Story

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

by ಪ್ರತಿಧ್ವನಿ
December 23, 2025
Top Story

ಜಾಮೀನು ಅರ್ಜಿ ವಜಾ: ಭೈರತಿ ಬಸವರಾಜುಗೆ ಬಂಧನದ ಭೀತಿ ಶುರು..

by ಪ್ರತಿಧ್ವನಿ
December 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Daily Horoscope: ಇಂದು ಅತಿ ಹೆಚ್ಚು ಆರ್ಥಿಕ ಲಾಭ ಪಡೆಯುವ ರಾಶಿಗಳಿವು..!

Daily Horoscope: ಇಂದು ಅತಿ ಹೆಚ್ಚು ಆರ್ಥಿಕ ಲಾಭ ಪಡೆಯುವ ರಾಶಿಗಳಿವು..!

December 24, 2025
ಬೇರುಬಿಟ್ಟ ಚಿಂತನೆಗಳೂ ಸುಡುವ ಹಾಳೆಗಳೂ

ಬೇರುಬಿಟ್ಟ ಚಿಂತನೆಗಳೂ ಸುಡುವ ಹಾಳೆಗಳೂ

December 24, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada