• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಏಕರೂಪ ನಾಗರಿಕ ಸಂಹಿತೆ- ಸಾಮಾಜಿಕ ಸಾಂಸ್ಕೃತಿಕ ವಾಸ್ತವಗಳು-ಭಾಗ 1

ನಾ ದಿವಾಕರ by ನಾ ದಿವಾಕರ
July 3, 2023
in ಅಂಕಣ, ಅಭಿಮತ
0
ಸಮತೋಲನದ ನ್ಯಾಯಯುತ ಸಂಹಿತೆ ಜಾರಿಯಾಗಬೇಕಿದೆ
Share on WhatsAppShare on FacebookShare on Telegram

ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಉಲ್ಲಂಘಿಸುವ ಯಾವುದೇ ಕಾಯ್ದೆ ಕಾರ್ಯಸಾಧುವಾಗುವುದಿಲ್ಲ

ADVERTISEMENT

ಏಕರೂಪ ನಾಗರಿಕ ಸಂಹಿತೆ (ಏನಾಸಂ) 1998 ರಿಂದಲೂ ಬಿಜೆಪಿ ಪ್ರಣಾಳಿಕೆಯ ಭಾಗವಾಗಿದೆ. ಸುಮಾರು ಎರಡು ದಶಕಗಳ ನಂತರ ಪಕ್ಷವು ಈ ವಿವಾದಾತ್ಮಕ ಕಾರ್ಯಸೂಚಿಯನ್ನು ಜಾರಿಗೆ ತರಲು ಮುಂದಾಗಿದೆ. ಧರ್ಮವನ್ನು ಲೆಕ್ಕಿಸದೆ ಎಲ್ಲಾ ಭಾರತೀಯರಿಗೆ ಮದುವೆ, ವಿಚ್ಛೇದನ, ದತ್ತು ಮತ್ತು ಉತ್ತರಾಧಿಕಾರವನ್ನು ನಿಯಂತ್ರಿಸುವ ಸಾಮಾನ್ಯ ಕಾನೂನುಗಳನ್ನು ಹೊಂದಿರುವುದು, ಮೂಲಭೂತವಾಗಿ ಎಲ್ಲಾ ನಾಗರಿಕರಿಗೆ ಅನ್ವಯವಾಗುವ ಒಂದು ಸಮಾನ ನಾಗರಿಕ ಕಾನೂನು ಹೊಂದಿರುವುದು ನಿರ್ದೇಶಕ ತತ್ವಗಳಲ್ಲಿ ಉಲ್ಲೇಖಿಸಲಾಗಿರುವ ಆದರ್ಶವಾಗಿದ್ದು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಹ ಇದನ್ನು ಅಪೇಕ್ಷಣೀಯ ಮಾನದಂಡ ಎಂದು ಭಾವಿಸಿದ್ದರೂ ಆ ಸಂದರ್ಭದಲ್ಲಿ ಹೊಸ ಗಣರಾಜ್ಯವು ಅದಕ್ಕೆ ಸಿದ್ಧವಾಗಿಲ್ಲ ಎಂದು ಅವರು ಪ್ರತಿಪಾದಿಸಿದ್ದರು. ಏಕರೂಪ ನಾಗರಿಕ ಸಂಹಿತೆಯು ಅಪೇಕ್ಷಣೀಯ ಆದರೆ ಸಂಪೂರ್ಣವಾಗಿ ಸ್ವಯಂಪ್ರೇರಿತ ಎಂದು ಡಾ. ಬಿ.ಆರ್.ಅಂಬೇಡ್ಕರ್ ಅಭಿಪ್ರಾಯಪಟ್ಟಿದ್ದರು. 21 ನೇ ಕಾನೂನು ಆಯೋಗವು ಸಹ ತನ್ನ ಸಮಾಲೋಚನಾ ಪತ್ರದಲ್ಲಿ ಏನಾಸಂ ಜಾರಿಗೊಳಿಸುವುದಕ್ಕಿಂತಲೂ ಹೆಚ್ಚಾಗಿ ಕುಟುಂಬ ಕಾನೂನುಗಳಲ್ಲಿ ಸುಧಾರಣೆಯನ್ನು ತರುವುದರಿಂದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹಕ್ಕುಗಳನ್ನು ಪಡೆಯಲು ಉತ್ತಮ ಅವಕಾಶ ಒದಗಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿತ್ತು.

ಸಂವಿಧಾನ ರಚನಾ ಸಭೆಯಲ್ಲಿ (ಸಂವಿಧಾನ ರಚನಾ ಸಭೆಯ ಚರ್ಚೆಗಳು ಸಂಪುಟ VII) ಡಾ. ಬಿ.ಆರ್.‌ ಅಂಬೇಡ್ಕರ್ ಏನಾಸಂ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ” ಈ ಸಂಹಿತೆಗೆ ಬದ್ಧರಾಗಿರಲು ಸಿದ್ಧರಿದ್ದೇವೆ ಎಂದು ಘೋಷಿಸುವವರಿಗೆ ಮಾತ್ರ ಸಂಹಿತೆಯು ಅನ್ವಯವಾಗುತ್ತದೆ ಎಂಬ ನಿಯಮದಡಿ ನಿಬಂಧನೆಯನ್ನು ಮಾಡುವ ಮೂಲಕ ಭವಿಷ್ಯದ ಸಂಸತ್ತು ಆರಂಭಿಕ ಹಂತದಲ್ಲಿ ಸ್ವಯಂಪ್ರೇರಿತವಾಗಿರುವಂತೆ ಏನಾಸಂ ಜಾರಿಗೊಳಿಸುವ ಸಾಧ್ಯತೆಗಳು ಇರಬಹುದು…”  ಎಂದು ಹೇಳಿದ್ದರು. ವಿವಾಹ, ವಿಚ್ಛೇದನ, ದತ್ತು, ಉತ್ತರಾಧಿಕಾರ ಮತ್ತು ವಾರಸುದಾರಿಕೆ ಸೇರಿದಂತೆ ವೈಯಕ್ತಿಕ ವಿಷಯಗಳನ್ನು ನಿಯಂತ್ರಿಸುವ ಏನಾಸಂ ಕುರಿತು ಸಂವಿಧಾನ ರಚನಾ ಸಭೆಯಲ್ಲಿನ ಭಿನ್ನಾಭಿಪ್ರಾಯಗಳ ಪರಿಣಾಮವಾಗಿ ಸಂಹಿತೆಯನ್ನು ಸಂವಿಧಾನದಲ್ಲಿ ಮೂಲಭೂತ ಹಕ್ಕು ಎಂದು ಪರಿಗಣಿಸದೆ ರಾಜ್ಯ ನೀತಿಯ ನಿರ್ದೇಶಕ ತತ್ವಗಳ ಭಾಗವಾಗಿ ಅಂಗೀಕರಿಸಲಾಯಿತು. ಹಾಗಾಗಿ ಇದು ಜಾರಿಗೊಳಿಸಬಹುದಾದ ನಿಬಂಧನೆಯಾಗಿರಲಿಲ್ಲ. ಅನುಚ್ಛೇದ 44ರಲ್ಲಿ ವ್ಯಾಖ್ಯಾನಿಸಿದಂತೆ ಏನಾಸಂ, ಕಾರ್ಮಿಕರಿಗೆ ಜೀವನ ವೇತನವನ್ನು ಪಡೆಯುವುದು, ಪೌಷ್ಠಿಕಾಂಶದ ಮಟ್ಟ ಮತ್ತು ಜೀವನ ಮಟ್ಟವನ್ನು ಹೆಚ್ಚಿಸುವುದು ಮತ್ತು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವುದು ಮುಂತಾದ ನಿರ್ದೇಶಕ ತತ್ವಗಳ ಭಾಗವಾಗಿದೆ. ಅನುಚ್ಛೇದ 37 ರ ಪ್ರಕಾರ, ಇವು ಸರ್ಕಾರದ ನೀತಿಗಳಿಗೆ ಮಾರ್ಗದರ್ಶಿ ತತ್ವಗಳಾಗಿವೆಯೇ ಹೊರತು ನ್ಯಾಯಾಲಯಗಳಿಂದ ಜಾರಿಗೊಳಿಸಲಾಗುವುದಿಲ್ಲ.

ಸಾಂವಿಧಾನಿಕ ನಿಬಂಧನೆಗಳು

ಯಾವುದೇ ಒಂದು ರಾಜ್ಯವು ತನ್ನದೇ ಆದ ಏನಾಸಂ ರೂಪಿಸಬಹುದೇ ಎಂಬ ಚರ್ಚೆಯೂ ವ್ಯಾಪಕವಾಗಿ ನಡೆದಿದೆ. ವಿವಾಹ, ವಿಚ್ಛೇದನ, ದತ್ತು ಮತ್ತು ಉತ್ತರಾಧಿಕಾರದಂತಹ ವಿಷಯಗಳು ಸಮವರ್ತಿ ಪಟ್ಟಿಯಲ್ಲಿರುವುದರಿಂದ  ಕೇಂದ್ರ ಮತ್ತು ರಾಜ್ಯಗಳು ಅವುಗಳ ಮೇಲೆ ಶಾಸನ ಮಾಡಲು ಅವಕಾಶವಿದೆ.  ಆದರೆ ಈ ಅಧಿಕಾರವನ್ನು ನಾಗರಿಕ ಸಂಹಿತೆ ಜಾರಿಗೊಳಿಸಲು ಬಳಸಬಹುದೇ ?  ಸಂವಿಧಾನ ತಜ್ಞ ಮತ್ತು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ.ಆಚಾರ್ಯ ಅವರು ಇದನ್ನು ಅನುಮೋದಿಸಿದರೆ ಮಾಜಿ ಕೇಂದ್ರ ಕಾನೂನು ಕಾರ್ಯದರ್ಶಿ ಪಿ.ಕೆ.ಮಲ್ಹೋತ್ರಾ ಅವರು ಅಂತಹ ಕಾನೂನನ್ನು ಮಾಡಲು ಸಂಸತ್ತು ಮಾತ್ರ ಸಮರ್ಥವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಸಂಬಂಧಿತ ನಿರ್ದೇಶಕ ತತ್ವವಾದ ಅನುಚ್ಚೇದ 44 ಭಾರತದಾದ್ಯಂತದ ಎಲ್ಲಾ ನಾಗರಿಕರನ್ನು ಒಳಗೊಳ್ಳುತ್ತದೆ.  ಆದಾಗ್ಯೂ ಗೋವಾದಲ್ಲಿ ಈಗಾಗಲೇ ಸಾಮಾನ್ಯ ನಾಗರಿಕ ಸಂಹಿತೆ ಇದೆ- ಇದು 1867 ರ ಪೋರ್ಚುಗೀಸ್ ನಾಗರಿಕ ಸಂಹಿತೆಯ ಅವಶೇಷವಾಗಿದೆ. ನಿಜವಾದ ಅರ್ಥದಲ್ಲಿ ಏಕರೂಪದ ಕಾನೂನು ಅಲ್ಲ, ಇದು ನಿರ್ದಿಷ್ಟ ಸಂದರ್ಭಗಳಲ್ಲಿ ಹಿಂದೂಗಳಿಗೆ ಅವಕಾಶ ನೀಡುತ್ತದೆ. ಈ ಸಂಹಿತೆಯು ಚರ್ಚ್‌ಗಳಿಗೆ ವಿವಾಹಗಳನ್ನು ಅನುಮತಿಸಲು ಮತ್ತು ರದ್ದುಗೊಳಿಸಲು ಅಧಿಕಾರ ನೀಡುವುದೇ ಅಲ್ಲದೆ ಹಲವು ರೀತಿಯಲ್ಲಿ ಸಮಸ್ಯಾತ್ಮಕವೂ ಆಗಿದೆ.

ಏತನ್ಮಧ್ಯೆ, ಏಕರೂಪ ನಾಗರಿಕ ಸಂಹಿತೆಯು ಸಂವಿಧಾನದ ಅನುಚ್ಛೇದ 25 ಮತ್ತು 26 ರ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಹಲವರು ವಾದಿಸುತ್ತಾರೆ. “ಭಾರತವು ಬಹುಧರ್ಮೀಯ ದೇಶವಾಗಿದೆ, ಮತ್ತು ಪ್ರತಿಯೊಬ್ಬ ನಾಗರಿಕನು ತಮ್ಮ ನಂಬಿಕೆ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಚರಿಸಲು ಮತ್ತು ಘೋಷಿಸಲು ಮತ್ತು ಅದರ ಮೇಲೆ ಕಾರ್ಯನಿರ್ವಹಿಸಲು ಮತ್ತು ಬೋಧಿಸಲು ಹಕ್ಕು  ನೀಡಲಾಗಿದೆ” ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪ್ರತಿಪಾದಿಸುತ್ತದೆ.  ಸ್ವಾತಂತ್ರ್ಯಾದನಂತರದ ಆರಂಭದ ದಿನಗಳಲ್ಲಿ ಕುಟುಂಬ ಕಾನೂನನ್ನು ಸುಧಾರಿಸುವ ಪ್ರಯತ್ನಗಳು ನಡೆದವು, 1950 ರ ದಶಕದಲ್ಲಿ ಹಿಂದೂ ಸಂಹಿತೆ ಮಸೂದೆಗಳು ಹಿಂದೂ ವಿವಾಹ ಕಾಯ್ದೆ, ಹಿಂದೂ ಉತ್ತರಾಧಿಕಾರ ಕಾಯ್ದೆ, ಹಿಂದೂ ಅಲ್ಪಸಂಖ್ಯಾತ ಮತ್ತು ರಕ್ಷಕತ್ವ ಕಾಯ್ದೆ ಮತ್ತು ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆಗಳಾಗಿ ಅಂಗೀಕರಿಸಲ್ಪಟ್ಟವು.

ಮೊಹಮ್ಮದ್ ಅಹ್ಮದ್ ಖಾನ್ Vs ಷಾ ಬಾನು ಬೇಗಂ, ಜೋರ್ಡಾನ್ ಡಿಯೆಂಗ್ಡೆ Vs ಎಸ್ಎಸ್ ಚೋಪ್ರಾ, ಸರಳಾ ಮುದ್ಗಲ್ Vs ಯೂನಿಯನ್ ಆಫ್ ಇಂಡಿಯಾ ಪ್ರಕರಣಗಳಲ್ಲಿ ನ್ಯಾಯಾಂಗ ಹಸ್ತಕ್ಷೇಪವೂ ನಡೆದಿದ್ದು, ನ್ಯಾಯಾಲಯಗಳು ವೈಯಕ್ತಿಕ ಕಾನೂನುಗಳನ್ನು ತಿದ್ದುಪಡಿ ಮಾಡಲು ಮತ್ತು ಏಕರೂಪ ನಾಗರಿಕ ಸಂಹಿತೆಯ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದವು. ಷಾ ಬಾನು ಪ್ರಕರಣದಲ್ಲಿ‌ ವಿಚ್ಛೇದಿತ ಪತ್ನಿಗೆ ಇದ್ದತ್ ಅವಧಿಯನ್ನು ಮೀರಿ ಪತಿಯಿಂದ ಜೀವನಾಂಶವನ್ನು ನೀಡಲಾಯಿತು, ನ್ಯಾಯಾಲಯವು ಸಮಾನ ನಾಗರಿಕ ಸಂಹಿತೆಯನ್ನು ಪ್ರತಿಪಾದಿಸಿತು.  ಇದು ವಿರೋಧಾಭಾಸ ಸಿದ್ಧಾಂತಗಳನ್ನು ಹೊಂದಿರುವ ಕಾನೂನುಗಳಿಗೆ ಪ್ರತ್ಯೇಕ ನಿಷ್ಠೆ ಹೊಂದಿರುವುದನ್ನು ತೊಡೆದುಹಾಕುವ ಮೂಲಕ ರಾಷ್ಟ್ರೀಯ ಏಕೀಕರಣದ ಉದ್ದೇಶಕ್ಕೆ ಸಹಾಯ ಮಾಡುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.  ಶಯಾರಾ ಬಾನೋ Vs ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ನ್ಯಾಯಾಲಯವು ತ್ರಿವಳಿ ತಲಾಖ್ ಪದ್ಧತಿಯನ್ನು ಅಸಾಂವಿಧಾನಿಕ ಎಂದು ಪರಿಗಣಿಸಿತ್ತು.

ಕಾನೂನು ಆಯೋಗ ಮತ್ತು ನ್ಯಾಯಾಂಗ

ನ್ಯಾಯಾಂಗ ಮಧ್ಯಪ್ರವೇಶಗಳು ನಡೆಯುತ್ತಲೇ ಇದ್ದರೂ , ಸ್ವಾಯತ್ತ ಜಿಲ್ಲೆಗಳು ಮತ್ತು ಪ್ರದೇಶಗಳಿಗೆ ಅವಕಾಶ ನೀಡುವ ಆರನೇ ಅನುಸೂಚಿಯನ್ನು ಅಂಗೀಕರಿಸುವುದರ ಪರಿಣಾಮ ಸ್ಪಷ್ಟವಾದ ಸಾಮಾಜಿಕ-ಸಾಂಸ್ಕೃತಿಕ ಆಚರಣೆಗಳ ವೈವಿಧ್ಯತೆಗಳ ಬಗ್ಗೆ ಶಾಸಕಾಂಗವು ಹಲವು ವರ್ಷಗಳಿಂದ ಸೂಕ್ಷ್ಮ ನಡೆಯನ್ನು ಅನುಸರಿಸುತ್ತಿದೆ.  ಜಿಲ್ಲಾ ಪರಿಷತ್ತುಗಳು ಉತ್ತರಾಧಿಕಾರ, ವಾರಸುದಾರಿಕೆ , ವಿವಾಹ ಮತ್ತು ವಿಚ್ಛೇದನವನ್ನು ವ್ಯವಹರಿಸಲು ಶಾಸನಾತ್ಮಕ ಹಕ್ಕುಗಳನ್ನು, ಅಧಿಕಾರವನ್ನು ಹೊಂದಿರುತ್ತವೆ. ಸಂವಿಧಾನ ಅನುಚ್ಚೇದ 371ಎ ಅನ್ನು ಸಂವಿಧಾನ (13 ನೇ ತಿದ್ದುಪಡಿ) ಕಾಯ್ದೆ, 1962 ರಲ್ಲಿ ಸೇರಿಸಲಾಗಿದ್ದು, ನಾಗಾಗಳ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳು, ಸಾಂಪ್ರದಾಯಿಕ ಕಾನೂನು ಮತ್ತು ಕಾರ್ಯವಿಧಾನಗಳಿಗೆ ಸಂಬಂಧಿಸಿದಂತೆ ನಾಗಾಲ್ಯಾಂಡ್ ವಿಧಾನಸಭೆ ನಿರ್ಣಯದಿಂದ ನಿರ್ಧರಿಸದ ಹೊರತು ನಾಗಾಲ್ಯಾಂಡ್ ರಾಜ್ಯಕ್ಕೆ ಸಂಸತ್ತಿನ ಯಾವುದೇ ಕಾಯ್ದೆಗಳು ಅನ್ವಯಿಸುವುದಿಲ್ಲ. ಅನುಚ್ಛೇದ 371 ಎ ನಾಗಾಲ್ಯಾಂಡ್ ಅನ್ನು ವಿಭಿನ್ನವಾಗಿ ಪರಿಗಣಿಸುವ ಬಗ್ಗೆ ಯೋಚಿಸಿದರೆ, ಅನುಚ್ಛೇದ 371 ಬಿ – 371 ಈ ಭಾಗಗಳಲ್ಲಿ ಚಾಲ್ತಿಯಲ್ಲಿರುವ ವಿಭಿನ್ನ ಸಾಮಾಜಿಕ ಪರಿಸ್ಥಿತಿಗಳಿಂದಾಗಿ ಈಶಾನ್ಯದ ಇತರ ರಾಜ್ಯಗಳಿಗೆ ಇದೇ ರೀತಿಯ ವಿನಾಯಿತಿಗಳನ್ನು ನೀಡುತ್ತದೆ.

ಈ ವಿಷಯದ ಬಗ್ಗೆ 2018ರ 21 ನೇ ಕಾನೂನು ಆಯೋಗವು ಕುಟುಂಬ ಕಾನೂನಿನ ವಿಚಾರದಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ಗಮನಿಸಿ ಕಾನೂನಿನ ಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಸಂಕೀರ್ಣ ವಿಷಯಗಳನ್ನು ಪರಾಮರ್ಶಿಸುವುದು ಫಲಪ್ರದವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಕಾನೂನು ಆಯೋಗವು 2016 ರಲ್ಲಿ ತನ್ನ ಪ್ರಶ್ನಾವಳಿಯನ್ನು ಸಾರ್ವಜನಿಕ ವಲಯದಲ್ಲಿ ಮಂಡಿಸಿತ್ತು. ಈ ಸಂದರ್ಭದಲ್ಲಿ  ವೈಯುಕ್ತಿಕ ಕಾನೂನುಗಳಲ್ಲಿ ಸುಧಾರಣೆಗಳನ್ನು ಕಾರ್ಯಗತಗೊಳಿಸುವ ವಿವಿಧ ಮಾರ್ಗಗಳನ್ನು ಸೂಚಿಸುವ 75 ಸಾವಿರಕ್ಕೂ  ಹೆಚ್ಚು ಪ್ರತಿಕ್ರಿಯೆಗಳನ್ನು ಪಡೆದಿತ್ತು.  ಆಯೋಗವು ತನ್ನ 185 ಪುಟಗಳ ಸುದೀರ್ಘ ಸಮಾಲೋಚನಾ ಪತ್ರದಲ್ಲಿ, ಸಂಸ್ಕೃತಿಯ ವೈವಿಧ್ಯತೆಯನ್ನು ಆಚರಿಸುತ್ತಲೇ ಏಕಕಾಲದಲ್ಲಿ ದುರ್ಬಲ ವರ್ಗಗಳಾದ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ಖಾತರಿಗೊಳಿಸಿ  ಸಮತೋಲನವನ್ನು ಕಾಪಾಡಿಕೊಳ್ಳುವ  ನಿಟ್ಟಿನಲ್ಲಿ ಏಕರೂಪ ನಾಗರಿಕ ಸಂಹಿತೆಯು ಅಪೇಕ್ಷಣೀಯ ಎನಿಸುವುದಿಲ್ಲ ಎಂದು ಹೇಳಿತ್ತು.  ಏಕರೂಪ ನಾಗರಿಕ ಸಂಹಿತೆಗಿಂತಲೂ ಆಯೋಗವು ವಿವಿಧ ಧರ್ಮಗಳ ಕುಟುಂಬ ಕಾನೂನುಗಳಲ್ಲಿ ಸುಧಾರಣೆಗಳಿಗೆ ಉತ್ತೇಜನ ನೀಡಲು ಸೂಚಿಸಿದ್ದು ಸಂಹಿತೆಯು ಅಪೇಕ್ಷಣೀಯವೂ ಅಲ್ಲ ಅಥವಾ  ಅದರ ಅಗತ್ಯವೂ ಅಲ್ಲ ಎಂದು ಅದು ಹೇಳಿತ್ತು.

” ಕಾನೂನು ಆಯೋಗವು ಈ ಹಂತದಲ್ಲಿ ಅಗತ್ಯವಿಲ್ಲದ ಅಥವಾ ಅಪೇಕ್ಷಣೀಯವಲ್ಲದ ಏಕರೂಪ ನಾಗರಿಕ ಸಂಹಿತೆಯನ್ನು  ಒದಗಿಸುವ ಬದಲು ತಾರತಮ್ಯದ ಕಾನೂನುಗಳೊಂದಿಗೆ ವ್ಯವಹರಿಸಲು ಇಚ್ಚಿಸುತ್ತದೆ,  ಬಹುಪಾಲು ದೇಶಗಳು ಈಗ ಭಿನ್ನತೆಯನ್ನು ಗುರುತಿಸುವತ್ತ ಸಾಗುತ್ತಿದ್ದು ವೈವಿಧ್ಯತೆಗಳು ಮತ್ತು ವ್ಯತ್ಯಾಸಗಳು ಇರುವುದು ತಾರತಮ್ಯವನ್ನು ಸೂಚಿಸುವುದಕ್ಕಿಂತಲೂ ಹೆಚ್ಚಾಗಿ ದೃಢವಾದ ಪ್ರಜಾಪ್ರಭುತ್ವದ ಸೂಚಕವಾಗಿರುತ್ತದೆ, ಹಾಗೆಯೇ ಏಕರೂಪತೆಗಾಗಿ ನಮ್ಮ ಹಂಬಲವು ದೇಶದ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಸಾಂಸ್ಕೃತಿಕ ವೈವಿಧ್ಯತೆಯೊಂದಿಗೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದು 2018ರ ಕಾನೂನು ಆಯೋಗದ ಸಮಗ್ರ ವರದಿಯಲ್ಲಿ ಹೇಳಲಾಗಿದೆ.

ಆದಾಗ್ಯೂ, ಈ ವಿಷಯವನ್ನು ಮತ್ತೆ 22 ನೇ ಕಾನೂನು ಆಯೋಗದ ಮುಂದೆ ಪ್ರಸ್ತಾಪಿಸಲಾಗಿದೆ. ಆಯೋಗವು ಜೂನ್ 14 ರಂದು ತನ್ನ ಆದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಕುರಿತು ಧಾರ್ಮಿಕ ಸಂಸ್ಥೆಗಳು ಮತ್ತು ಸಾರ್ವಜನಿಕರ ಅಭಿಪ್ರಾಯಗಳನ್ನು ಕೋರಿದೆ. ಈ ಆದೇಶದ ಹಿನ್ನೆಲೆಯಲ್ಲೇ  ಪ್ರಧಾನಿ ನರೇಂದ್ರ ಮೋದಿ ಕಳೆದ ವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆಗಾಗಿ  ಒತ್ತಾಯಿಸಿದ್ದಾರೆ.  “ಇಂದು ನಾಗರಿಕ ಸಂಹಿತೆಯ ಹೆಸರಿನಲ್ಲಿ ಜನರನ್ನು ಪ್ರಚೋದಿಸುವ ಪ್ರಯತ್ನಗಳು ಹೇಗೆ ನಡೆಯುತ್ತಿವೆ ಎಂಬುದಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಒಂದು ಮನೆಯಲ್ಲಿ, ಕುಟುಂಬದ ಒಬ್ಬ ಸದಸ್ಯನಿಗೆ ಒಂದು ಕಾನೂನು ಮತ್ತು ಇನ್ನೊಬ್ಬ ಸದಸ್ಯರಿಗೆ ಮತ್ತೊಂದು ಕಾನೂನು ಇದ್ದರೆ, ಆ ಮನೆ ಕಾರ್ಯನಿರ್ವಹಿಸಬಹುದೇ?… ಇಂತಹ ದ್ವಂದ್ವ ವ್ಯವಸ್ಥೆಯೊಂದಿಗೆ ದೇಶವು ಹೇಗೆ ಕಾರ್ಯನಿರ್ವಹಿಸಲು ಸಾಧ್ಯ? ” ಎಂದು ಕೇಳುವ ಮೂಲಕ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದರ ಬಗ್ಗೆ ಒಲವು ತೋರಿದ್ದಾರೆ.

Tags: Amit ShahBJPJP NaddaNarendra ModiPMOIndiaRSS
Previous Post

ಏಕರೂಪ ನಾಗರಿಕ ಸಂಹಿತೆ: ಹಿಂದೂ ಅವಿಭಜಿತ ಕುಟುಂಬಗಳ ಮೇಲೆ ಆದಾಯ ತೆರಿಗೆಯ ಪರಿಣಾಮಗಳು

Next Post

“ನಮೋ ಭೂತಾತ್ಮ 2” ಚಿತ್ರದ ಟೀಸರ್ ಬಿಡುಗಡೆ ಮಾಡಿದ ನಟ ಧ್ರುವ ಸರ್ಜಾ

Related Posts

ಅಹಿಂದ ಚಳುವಳಿಯ ಐತಿಹಾಸಿಕ ಪಯಣ, ರಜತ ಸಂಭ್ರಮ ಮತ್ತು ಭವಿಷ್ಯದ ಪಥ
ಅಂಕಣ

ಅಹಿಂದ ಚಳುವಳಿಯ ಐತಿಹಾಸಿಕ ಪಯಣ, ರಜತ ಸಂಭ್ರಮ ಮತ್ತು ಭವಿಷ್ಯದ ಪಥ

by ಪ್ರತಿಧ್ವನಿ
April 30, 2026
0

ಭಾರತದ ಸಾಮಾಜಿಕ ಮತ್ತು ರಾಜಕೀಯ ಭೂಪಟದಲ್ಲಿ ಕರ್ನಾಟಕವು ಸಾಮಾಜಿಕ ನ್ಯಾಯದ ಪ್ರಯೋಗಶಾಲೆ ಎಂದು ಗುರುತಿಸಲ್ಪಟ್ಟಿದೆ. ಸಹಸ್ರಾರು ವರ್ಷಗಳ ಕಾಲ ಶ್ರೇಣೀಕೃತ ಜಾತಿ ವ್ಯವಸ್ಥೆಯಿಂದ ತುಳಿತಕ್ಕೊಳಗಾದ ಸಮುದಾಯಗಳಿಗೆ ಸಮಾನ...

Read moreDetails
ದುಡಿಯುವ ವರ್ಗಗಳ ಅನಿಶ್ಚಿತ ಬದುಕು ಮತ್ತು ಮಾರುಕಟ್ಟೆ

ದುಡಿಯುವ ವರ್ಗಗಳ ಅನಿಶ್ಚಿತ ಬದುಕು ಮತ್ತು ಮಾರುಕಟ್ಟೆ

April 30, 2026
ಸಾಮಾಜಿಕ ವ್ಯಸನದ ಸಾಂಸ್ಕೃತಿಕ ಆಯಾಮ

ಸಾಮಾಜಿಕ ವ್ಯಸನದ ಸಾಂಸ್ಕೃತಿಕ ಆಯಾಮ

April 29, 2026
ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ

ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ

April 28, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
Next Post
“ನಮೋ ಭೂತಾತ್ಮ 2” ಚಿತ್ರದ ಟೀಸರ್ ಬಿಡುಗಡೆ ಮಾಡಿದ ನಟ ಧ್ರುವ ಸರ್ಜಾ

"ನಮೋ ಭೂತಾತ್ಮ 2" ಚಿತ್ರದ ಟೀಸರ್ ಬಿಡುಗಡೆ ಮಾಡಿದ ನಟ ಧ್ರುವ ಸರ್ಜಾ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada