ನಾಳೆಯಿಂದ ರಾಜ್ಯ ವಿಧಾನಸಭಾ ಅಧಿವೇಶನ ಆರಂಭ ಆಗುತ್ತಿದ್ದು, ವಿಪಕ್ಷ ನಾಯಕನ ಆಯ್ಕೆ ಮಾಡಲೇಬೇಕಾದ ಅನಿವಾರ್ಯತೆಗೆ ಬಿಜೆಪಿ ಹೈಕಮಾಂಡ್ ಸಿಲುಕಿಕೊಂಡಿದೆ. ಸರ್ಕಾರ ರಚನೆಯಾಗಿ ಒಂದೂವರೆ ತಿಂಗಳಾದರೂ ವಿಪಕ್ಷ ನಾಯಕನ ಆಯ್ಕೆ ಮಾಡಲು ಸಾಧ್ಯವಾಗದ ಸ್ಥಿತಿಗೆ ತಲುಪಿರುವ ಭಾರತೀಯ ಜನತಾ ಪಾರ್ಟಿ, ಬಹುದಿನಗಳ ನಂತರ ಇಂದು ವಿಪಕ್ಷ ನಾಯಕನ ಆಯ್ಕೆ ಕಸರತ್ತು ಮಾಡಲಿದೆ. BJP ಹೈಕಮಾಂಡ್ ವಿಪಕ್ಷ ನಾಯಕನ ಆಯ್ಕೆ ಮಾಡುವ ಮುನ್ನ ಬಳಸಿ ಬಿಸಾಡಿದ್ದ ಅದೇ 75 ವರ್ಷ ತುಂಬಿದ ವಯೋ ವೃದ್ಧ ಮಾಜಿ ಮುಖ್ಯಮಂತ್ರಿ ಅವರ ಪಾದವೇ ಗತಿ ಎಂದು ದೆಹಲಿಗೆ ಬರುವಂತೆ ಆಹ್ವಾನ ನೀಡಿದೆ. ಇಂದು ದೆಹಲಿಯಲ್ಲಿ ವಿಧಾನಸಭೆ ವಿಪಕ್ಷ ನಾಯಕನ ಸ್ಥಾನ ಹಾಗೂ ವಿಧಾನಸಭೆ ಉಪ ನಾಯಕ ಸ್ಥಾನಕ್ಕೆ ಆಯ್ಕೆ ನಡೆಯಲಿದೆ ಎನ್ನಲಾಗಿದೆ.

ಸಿಎಂ ಆದಾಗ ಬೇಡವಾದ ಯಡಿಯೂರಪ್ಪನೇ ಆಸರೆ..!
ಮಾಜಿ ಸಿಎಂ B.S ಯಡಿಯೂರಪ್ಪ ಸಿಎಂ ಆಗಿದ್ದಾಗ 75 ವರ್ಷ ಆಗಿದೆ ಎನ್ನುವ ಕಾರಣಕ್ಕೆ ಒತ್ತಡ ಹೇರಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿಸಲಾಗಿತ್ತು. ಇದೀಗ ಅದೇ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಬಿಟ್ಟು ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ಬಿಜೆಪಿ ಹೈಕಮಾಂಡ್ ಇಲ್ಲ. ಇದೇ ಕಾರಣಕ್ಕೆ ಬಿ.ಎಸ್ ಯಡಿಯೂರಪ್ಪಗೆ ಆಹ್ವಾನ ಕೊಟ್ಟಿದ್ದು, ಬಿ.ಎಸ್ ಯಡಿಯೂರಪ್ಪ ಜೊತೆ ಚರ್ಚೆ ಬಳಿಕ ನಿರ್ಧಾರ ಹೊರ ಬೀಳಲಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಮೊದಲ ಬಾರಿಗೆ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆ ಬಿ.ಎಸ್ ಯಡಿಯೂರಪ್ಪ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ವಿಪಕ್ಷ ನಾಯಕನಾಗಿ ಬಹುತೇಕ ಬಸವರಾಜ್ ಬೊಮ್ಮಾಯಿ ಹೆಸರು ಅಂತಿಮ ಆಗಲಿದ್ದು, ಉಪ ನಾಯಕನಾಗಿ ಆರ್ ಅಶೋಕ್ ಆಯ್ಕೆ ಆಗುವ ಸಾಧ್ಯತೆ ಇದೆ. ಇವರ ಹೆಸರನ್ನೇ ಯಡಿಯೂರಪ್ಪ ಸೂಚಿಸಲಿದ್ದಾರೆ ಎನ್ನುವ ಮಾತುಗಳಿವೆ.
ಬಿಜೆಪಿಯಲ್ಲಿ ಬೆಂಕಿ ಹಚ್ಚುತ್ತಾ ವಿಪಕ್ಷ ನಾಯಕ ಸ್ಥಾನ..?
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗು ಆರ್ ಅಶೋಕ್ ಹೆಸರನ್ನು ಬಿ.ಎಸ್ ಯಡಿಯೂರಪ್ಪ ಸೂಚಿಸುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಪ್ರತಿಧ್ವನಿಗೆ ಬಿಜೆಪಿ ಆಪ್ತ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಆದರೆ ಪ್ರತಿಪಕ್ಷ ನಾಯಕ ಸ್ಥಾನದ ರೇಸ್‌ನಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್ ಹಾಗು ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ್ ಕೂಡ ಇದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಬಸವರಾಜ ಬೊಮ್ಮಾಯಿ ಹೊಂದಾಣೀಕೆ ರಾಜಕೀಯ ಮಾಡಿದ್ರು ಎಂದು ವಿವಾದದ ಕಿಡಿ ಹೊತ್ತಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಈಗ ಅದೇ ಬಸವರಾಜ ಬೊಮ್ಮಾಯಿ ವಿಪಕ್ಷ ಸ್ಥಾನ ನೀಡಿದರೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಯಡಿಯೂರಪ್ಪ ಬಳಗ ಎನ್ನುವ ಕಾರಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ಮತ್ತೆ ಯಡಿಯೂರಪ್ಪ ಬಣಕ್ಕೇ ಮಹತ್ವ ಕೊಡುತ್ತಾ ಕಾದು ನೋಡ್ಬೇಕು.

ಪರಿಷತ್ ವಿಪಕ್ಷ ನಾಯಕನ ಸ್ಥಾನಕ್ಕೂ ಇಂದೇ ಆಯ್ಕೆ..!
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗು ಬಿ.ಎಸ್ ಯಡಿಯೂರಪ್ಪ ಮಾತುಕತೆ ಬಳಿಕ ವಿಧಾನ ಪರಿಷತ್ ವಿಪಕ್ಷ ಸ್ಥಾನಕ್ಕೂ ಇಂದೇ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಮೇಲ್ಮನೆ ವಿಪಕ್ಷ ನಾಯಕ ಸ್ಥಾನಕ್ಕೆ ಕುರುಬ ಸಮುದಾಯಕ್ಕೆ ಸೇರಿದ ರಘುನಾಥ್ ಮಲ್ಕಾಪುರೇ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಹಿರಿಯ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಕೂಡ ರೇಸ್‌ನಲ್ಲಿದ್ದು, ಮತ್ತೋರ್ವ ಕ್ರಿಯಾಶೀಲ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೆಸರು ಕೂಡ ಚರ್ಚೆಯಲ್ಲಿದೆ. ಇತ್ತೀಚೆಗೆ ಪಕ್ಷದಲ್ಲಿ ಉಂಟಾಗಿರುವ ಗೊಂದಲಗಳ ಬಗ್ಗೆಯೂ ಉಭಯ ನಾಯಕರು ಚರ್ಚೆ ನಡೆಸಲಿದ್ದು, ಲೋಕಸಭಾ ಚುನಾವಣೆಗೆ ಪೂರಕ ಆಗುವಂತೆ ವಿಪಕ್ಷ ನಾಯಕನ ಆಯ್ಕೆ ನಡೆಯಲಿದೆ ಎನ್ನಲಾಗಿದೆ. ಯಡಿಯೂರಪ್ಪ ಅವರಿಂದ ಮಾಹಿತಿ ಸಂಗ್ರಹ ಮಾಡಿದ ಬಳಿಕ ಮತ್ತೊಮ್ಮೆ ದೆಹಲಿ ನಾಯಕರ ಜೊತೆಗೆ ಚರ್ಚೆ ಮಾಡಿ ಸೋಮವಾರ ಘೋಷಣೆ ಮಾಡಿದರೂ ಅಚ್ಚರಿಯಿಲ್ಲ ಎನ್ನುತ್ತಿದೆ ಬಿಜೆಪಿಯ ಮತ್ತೊಂದು ಬಣ.
ಕೃಷ್ಣಮಣಿ






