• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಸಾಂವಿಧಾನಿಕ ಹಕ್ಕುಗಳೂ ಹಿತವಲಯದ ಆರ್ಭಟವೂ

ನಾ ದಿವಾಕರ by ನಾ ದಿವಾಕರ
June 15, 2023
in ಅಂಕಣ
0
ಸಾಂವಿಧಾನಿಕ ಹಕ್ಕುಗಳೂ ಹಿತವಲಯದ ಆರ್ಭಟವೂ
Share on WhatsAppShare on FacebookShare on Telegram

ಸರ್ಕಾರಗಳು ವಂಚಿತರಿಗೆ ನೀಡುವ ಸೌಲಭ್ಯಗಳನ್ನು ಔದಾರ್ಯದ ನೆಲೆಯಲ್ಲಿ ಕಾಣಬೇಕಿಲ್ಲ

ADVERTISEMENT

ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಮುಂದೆ ಹಲವು ಸವಾಲುಗಳು ಇರುವಂತೆಯೇ ದೊಡ್ಡ ಜವಾಬ್ದಾರಿಗಳೂ ಇವೆ. ಐದು ಗ್ಯಾರಂಟಿಗಳೇ ಪಕ್ಷವನ್ನು ಅಧಿಕಾರಕ್ಕೆ ತಂದಿವೆ ಎಂಬ ಅರ್ಧಸತ್ಯವನ್ನು ಇಡೀ ರಾಜ್ಯವೇ ಸಂಭ್ರಮಿಸುವಂತೆ ಕಾಣುತ್ತಿದೆ.  ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಉಚಿತಗಳನ್ನು ಸಮಚಿತ್ತ ಸ್ಥಿತಿಯಲ್ಲಿ ನಿಂತು ಯೋಚಿಸಿದಾಗ ಪ್ರಜ್ಞಾವಂತ ಜನತೆಗೆ ಕಾಣಬೇಕಾದ್ದು, ಈ ಉಚಿತಗಳನ್ನು ಮುಕ್ತಕಂಠದಿಂದ ಸ್ವಾಗತಿಸುತ್ತಿರುವ ತಳಮಟ್ಟದ ಅವಕಾಶವಂಚಿತ ಜನಸಮುದಾಯಗಳು ಮತ್ತು ಈ ಜನತೆಯ ವಾಸ್ತವ ಸ್ಥಿತ್ಯಂತರಗಳು. ಕಾಂಗ್ರೆಸ್‌ ಪಕ್ಷದ ಐದು ವರ್ಷಗಳ ಆಳ್ವಿಕೆಯಲ್ಲಿ ಅನುಸರಿಸಲಾಗುವ ನವ ಉದಾರವಾದಿ-ಕಾರ್ಪೋರೇಟ್‌ ಮಾರುಕಟ್ಟೆ ಪ್ರೇರಿತ ಆರ್ಥಿಕ ನೀತಿಗಳ ಫಲಾನುಭವಿಗಳ ಪಟ್ಟಿಯಲ್ಲಿ ಈ ಉಚಿತಗಳ ಫಲಾನುಭವಿಗಳನ್ನು ಕಾಣುವುದು ಸಾಧ್ಯವೇ ಇಲ್ಲ. ಆದಾಗ್ಯೂ ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿ ʼಮಹಿಳೆಯರಿಗೆʼ ಉಚಿತ ಪ್ರಯಾಣದ ಸೌಲಭ್ಯ ನೀಡಿರುವುದರ ಬಗ್ಗೆ ವಿಶಾಲ ಸಮಾಜದಲ್ಲಿ ವ್ಯಕ್ತವಾಗುತ್ತಿರುವ ವ್ಯಂಗ್ಯ, ಟೀಕೆ, ವಿಮರ್ಶೆಗಳನ್ನು ಗಮನಿಸಿದಾಗ, ನಮ್ಮ ಸಮಾಜದಲ್ಲಿ ಊಳಿಗಮಾನ್ಯ ಧೋರಣೆಯೊಂದಿಗೇ ಪಿತೃಪ್ರಧಾನತೆಯ ವ್ಯಾಧಿ ಎಷ್ಟು ಆಳವಾಗಿ ಇಳಿದಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ಹಸಿವು, ಬಡತನ ಮತ್ತು ಅದರಿಂದ ಎದುರಿಸಬೇಕಾದ ಅಪಮಾನಗಳು ಅನುಭವಜನ್ಯವಾಗಲು ಸಾಧ್ಯವೇ ಹೊರತು, ಅಧ್ಯಯನಗಳಿಂದ, ಸಂಶೋಧನೆಗಳಿಂದ ಅಭಿವ್ಯಕ್ತಗೊಳ್ಳುವುದು ಸಾಧ್ಯವೇ ಇಲ್ಲ. ನಮ್ಮ ಸಮಾಜ ಇನ್ನೂ ಸಹ ಈ ಮನಸ್ಥಿತಿಯಿಂದ ಹೊರಬಂದಿಲ್ಲ ಎನ್ನುವುದು ಈ ಕಾಲಯುಗದ ದುರಂತ ಎನ್ನಬಹುದು. ಆರಂಕಿ ಸಂಬಳ ಪಡೆಯುವ ಅಧಿಕಾರಶಾಹಿಗಳು ತಮ್ಮ ವೇತನ, ಭತ್ಯೆಗಳೊಂದಿಗೇ “ಸಿಬ್ಬಂದಿ ಕಲ್ಯಾಣ ನಿಯಮಗಳ” ಹೆಸರಿನಲ್ಲಿ ಪಡೆಯುವ ಮಾಸಿಕ, ವಾರ್ಷಿಕ, ದೈನಿಕ ಸವಲತ್ತುಗಳು, ರಿಯಾಯಿತಿಗಳು, ವಿನಾಯಿತಿಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಉಳ್ಳವರು ಹೇಗೆ ಸದಾ ಇನ್ನಷ್ಟು ಪಡೆಯಲು ಕೈಚಾಚಿರುತ್ತಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಆದರೆ ತಮ್ಮ ಜೀವನ ನಿರ್ವಹಣೆಯ ದುರ್ಗಮ ಮಾರ್ಗದಲ್ಲಿ ನಿತ್ಯ ಪರದಾಡುವ ಕೋಟ್ಯಂತರ ಜನತೆ ಎಂದಿಗೂ ತಮ್ಮ ಅವಶ್ಯಕತೆ ಮೀರಿ ಯಾವುದನ್ನೂ ಅಪೇಕ್ಷಿಸುವುದಿಲ್ಲ. ಉಚಿತ ಪ್ರಯಾಣದ ಫಲಾನುಭವಿಗಳಲ್ಲೇ ನಾವು ತಳಸಮುದಾಯಗಳ, ತಳಮಟ್ಟದ ಜನತೆಯ ಕಡುಬಡವರತ್ತ ಗಮನಹರಿಸಿದಾಗ ಕಾಲ್ನಡಿಗೆಯಿಂದ ನಾಲ್ಕು ಚಕ್ರದ ಪಯಣಕ್ಕೆ ಬಡ್ತಿ ದೊರೆತಿರುವುದನ್ನೇ ಸೌಭೌಗ್ಯ ಎಂದು ಪರಿಭಾವಿಸುವ ಮನಸ್ಥಿತಿಯನ್ನು ಕಾಣಬಹುದು. ಇನ್ನೂ ಹೆಚ್ಚಿನದಾದ ವಸತಿ-ಶಿಕ್ಷಣ ಸೌಲಭ್ಯವನ್ನು, ಅವರು ಕೇಳುವುದೇ ಇಲ್ಲ.

ಬಂಡವಾಳಶಾಹಿಯ ಅನಿವಾರ್ಯತೆಗಳು

ಸರ್ಕಾರ ಈ ಉಚಿತಗಳನ್ನು ನೀಡುತ್ತಿರುವುದನ್ನು ಸ್ವಾಗತಿಸುತ್ತಲೇ, ಕಾಂಗ್ರೆಸ್‌ ಸರ್ಕಾರ ಮುಂದಿನ ಐದು ವರ್ಷಗಳಲ್ಲಿ ಅನುಸರಿಬಹುದಾದ ಸಂಭಾವ್ಯ ಆರ್ಥಿಕ ನೀತಿಗಳತ್ತ ಗಮನಹರಿಸುವುದು ಪ್ರಗತಿಶೀಲ ಸಮಾಜದ ಆದ್ಯತೆಯಾಗಬೇಕಿದೆ. ಏಕೆಂದರೆ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಸಾಂಸ್ಕೃತಿಕ ಕೋಮುವಾದಿ ನೀತಿಗಳನ್ನು, ಮತೀಯವಾದವನ್ನು ಪೋಷಿಸುವಂತಹ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಹೇಳಿದೆಯೇ ಹೊರತು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ಮಾರುಕಟ್ಟೆ ಆರ್ಥಿಕ ನೀತಿಗಳನ್ನು ವರ್ಜಿಸುವುದಾಗಿ ಆಶ್ವಾಸನೆ ನೀಡಿಲ್ಲ. ಹಿಂದಿನ ಸರ್ಕಾರ ಜಾರಿಗೊಳಿಸಿದ ಹೊಸ ಶಿಕ್ಷಣ ನೀತಿ ಹಾಗೂ ಕಾರ್ಮಿಕ ಸಂಹಿತೆಗಳ ಮೂಲ ಧಾತು ಇರುವುದು ಈ ನವ ಉದಾರವಾದದ ಆರ್ಥಿಕತೆಯಲ್ಲಿ. ಈ ನವ ಉದಾರವಾದಿ ಮಾರುಕಟ್ಟೆ ಆರ್ಥಿಕತೆಯ ಫಲಾನುಭವಿ ಸಮೂಹಗಳೇ ಮುದ್ರಣ-ದೃಶ್ಯ ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಲ್ಲಿ, ಸಾರ್ವಜನಿಕ ವಲಯಗಳಲ್ಲಿ, ಹೊಸ ಕಾಂಗ್ರೆಸ್‌ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳನ್ನು ಲೇವಡಿ ಮಾಡುತ್ತಾ ಬಡತನವನ್ನು ಅಣಕಿಸುತ್ತಿರುವುದು ಶತಮಾನದ ದುರಂತ ಎನ್ನಬಹುದು. ಶ್ರೇಷ್ಠತೆ ಹಾಗೂ ಪಾರಮ್ಯದ ಪರಂಪರೆಯನ್ನು ಶತಮಾನಗಳಿಂದ ಪೋಷಿಸಿಕೊಂಡು ಬಂದಿರುವ ಭಾರತೀಯ ಸಮಾಜದಲ್ಲಿ  ಇದು ಅತಿರೇಕ ಎನಿಸಿದರೂ ಅತಿಶಯ ಎನಿಸುವುದಿಲ್ಲ.

ಆದರೆ ಈ ಲೇವಡಿ-ವ್ಯಂಗ್ಯಗಳನ್ನು ಮೀರಿ ನಾವು ಯೋಚಿಸಬೇಕಿರುವುದು ಹೊಸ ಸರ್ಕಾರದ ಆರ್ಥಿಕ ನಿಲುವುಗಳ ಬಗ್ಗೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ, ಡಿಜಿಟಲ್‌ ಯುಗದ ಉತ್ಕಟ ಉತ್ಸಾಹದೊಂದಿಗೆ ಭಾರತದ ಆರ್ಥಿಕತೆ ದಾಪುಗಾಲು ಹಾಕುತ್ತಿರುವ ಈ ಹೊತ್ತಿನಲ್ಲಿ ನವ ಉದಾರವಾದಿ ಆರ್ಥಿಕ ನೀತಿಗಳನ್ನು ಅನುಸರಿಸಲೇಬೇಕಾದ ಒತ್ತಡಗಳನ್ನು ಕಾಂಗ್ರೆಸ್‌ ಸೇರಿದಂತೆ ಎಲ್ಲ ಬಂಡವಾಳಿಗ ಪಕ್ಷಗಳೂ ಎದುರಿಸುತ್ತವೆ.   ಈ ನೀತಿಗಳಿಂದ ಸೃಷ್ಟಿಯಾಗುವಂತಹ ಅಸಮಾನತೆಗಳನ್ನು ಹಾಗೂ ತಳಮಟ್ಟದ ಸಾಮಾಜಿಕ ಅಸಮಾಧಾನಗಳನ್ನು ತಣಿಸುವ ಅಥವಾ ಮಣಿಸುವ ಒಂದು ಸಾಧನವಾಗಿ ʼ ಕಲ್ಯಾಣ ರಾಜ್ಯ ಆರ್ಥಿಕತೆ ʼಯ ಕೆಲವು ನೀತಿಗಳನ್ನು ಆಯಾ ಕಾಲಕ್ಕೆ ತಕ್ಕಂತೆ ಅಳವಡಿಸುತ್ತಿರುತ್ತವೆ. ಸರ್ಕಾರ ತನ್ನ ರಾಜಕೀಯ ಅನುಕೂಲತೆಗಾಗಿ ಅಥವಾ ಅಸ್ತಿತ್ವದ ರಕ್ಷಣೆಗಾಗಿ                       ʼ ದಯಪಾಲಿಸಿರುವ ʼ ಉಚಿತಗಳನ್ನು ʼಕಲ್ಯಾಣ ರಾಜ್ಯʼದ ಪರಿಕಲ್ಪನೆಯ ಚೌಕಟ್ಟಿನಲ್ಲಿಟ್ಟು ನೋಡಲಾಗುವುದಿಲ್ಲ. ಸಮರ್ಪಕವಾದ ಜೀವನೋಪಾಯದ ಆದಾಯ ಇಲ್ಲದ ತಳಸ್ತರದ ದುಡಿಮೆಯ ವರ್ಗಗಳು ಮತ್ತು ಅಂಚಿನಲ್ಲಿರುವ ಅವಕಾಶವಂಚಿತರಿಗೆ, ಇಂತಹ ಉಚಿತಗಳು ನಿತ್ಯ ಜೀವನ ನಿರ್ವಹಣೆಯ ಹಾದಿಯನ್ನು ನಿರಾತಂಕಗೊಳಿಸುತ್ತವೆಯಷ್ಟೆ. ಇದರಿಂದ ಅವರ ಬದುಕು ಸುಸ್ಥಿರವಾಗುವುದಿಲ್ಲ.

ಏಕೆಂದರೆ ಸುಸ್ಥಿರ ಬದುಕು ಎಂದಾಕ್ಷಣ ಉತ್ತಮ ಶಿಕ್ಷಣ ಸೌಲಭ್ಯ, ಆರೋಗ್ಯ ಸೇವೆ, ಯೋಗಕ್ಷೇಮ, ಪೌಷ್ಟಿಕ ಆಹಾರ, ಸುಭದ್ರ ವಸತಿ ಇವೆಲ್ಲವೂ ಗಣನೆಗೆ ಬರುತ್ತವೆ. ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ತಳಮಟ್ಟದ ಸಾಮಾಜಿಕ ವಲಯಗಳಲ್ಲಿ, ತಳಸಮುದಾಯಗಳ ನಡುವೆ ಈ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ಯಾವುದೇ ಕಾರ್ಯಯೋಜನೆಗಳು ಇರುವುದಿಲ್ಲ. 75 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರವೂ ಭಾರತದಲ್ಲಿ “14 ವರ್ಷದವರೆಗಿನ ಉಚಿತ ಸಾರ್ವತ್ರಿಕ ಶಿಕ್ಷಣ” ಎಂಬ ಉದಾತ್ತ ಸಾಂವಿಧಾನಿಕ ನೀತಿ ಸಮರ್ಪಕವಾಗಿ ಜಾರಿಯಾಗದಿರುವುದೇ ಇದಕ್ಕೆ ಸಾಕ್ಷಿ. ಈಗ ಭಾರತ ಔದ್ಯೋಗಿಕ ಬಂಡವಾಳಶಾಹಿಯಿಂದ ಆಪ್ತಬಂಡವಾಳಶಾಹಿ ಡಿಜಿಟಲ್‌ ಯುಗವನ್ನು ಪ್ರವೇಶಿಸಿದ್ದು, ಭವಿಷ್ಯದ ಭಾರತದಲ್ಲಿ ಇದನ್ನು ಊಹಿಸುವುದೂ ಕಷ್ಟವಾದೀತು. ನವ ಉದಾರವಾದಿ ಆರ್ಥಿಕತೆಯ ಕಾರ್ಪೋರೇಟ್‌ ಮಾರುಕಟ್ಟೆ ನೀತಿಗಳಿಗೆ ಪೂರಕವಾಗಿಯೇ ಜಾರಿಮಾಡಲಾಗುವ ಕೃಷಿ ಕಾಯ್ದೆಗಳು, ಭೂ ಸ್ವಾಧೀನ ತಿದ್ದುಪಡಿ ಕಾಯ್ದೆಗಳು, ಅರಣ್ಯ ಕಾಯ್ದೆಯ ತಿದ್ದುಪಡಿಗಳು ಹಾಗೂ ಶೈಕ್ಷಣಿಕ ನೀತಿಗಳು ತಳಮಟ್ಟದ ಸಾಮಾಜಿಕ ಬದುಕು ಮತ್ತು ಜೀವನೋಪಾಯವನ್ನು ಮತ್ತಷ್ಟು ಅಂಚಿಗೆ ದೂಡುವಂತೆಯೇ ಇರುತ್ತವೆ. ಈ ನೀತಿಗಳ ವಿರುದ್ಧ ಅವಕಾಶವಂಚಿತರಲ್ಲಿ ಕಾಣಬಹುದಾದ ಅಸಮಾಧಾನದ ಹೊಗೆಯನ್ನು ಶಮನ ಮಾಡುವ ಒಂದು ಕಾರ್ಯತಂತ್ರವಾಗಿಯೇ ಕಾಂಗ್ರೆಸ್‌ ಸರ್ಕಾರದ ಉಚಿತ ಗ್ಯಾರಂಟಿಗಳನ್ನು ನೋಡಬೇಕಾಗಿದೆ.

ಉಳ್ಳವರ ಆಷಾಢಭೂತಿತನ

ಉಚಿತಗಳಿಂದ ರಾಜ್ಯದ ಬೊಕ್ಕಸ ದೀವಾಳಿಯಾಗುತ್ತದೆ ಎಂದು ಹುಯಿಲೆಬ್ಬಿಸುವ ಒಂದು ಸುಶಿಕ್ಷಿತ-ಹಿತವಲಯದ ವರ್ಗ, ಡಿಜಿಟಲ್‌ ಯುಗದ ಮಾರುಕಟ್ಟೆ ಆರ್ಥಿಕತೆಯಲ್ಲಿ ನಗದೀಕರಣಕ್ಕೊಳಗಾಗುತ್ತಿರುವ  ಸಾರ್ವಜನಿಕ ಉದ್ದಿಮೆಗಳ ಅವಸಾನದತ್ತ ಕಣ್ಣೆತ್ತಿಯೂ ನೋಡದಿರುವುದು ಈ ವರ್ಗದೊಳಗಿನ ಅಸೂಕ್ಷ್ಮತೆ ಮತ್ತು ಸ್ವಾರ್ಥತೆಯ ಲಕ್ಷಣವಾಗಿಯೇ ಕಾಣುತ್ತದೆ. ಕಳೆದ ಏಳು ದಶಕಗಳಲ್ಲಿ ಎರಡು ತಲೆಮಾರಿನ ದುಡಿಯುವ ವರ್ಗಗಳು ದೇಶಾದ್ಯಂತ ತಮ್ಮ ಬೆವರಿನ ದುಡಿಮೆಯಿಂದ ಸೃಷ್ಟಿಸಿರುವ ಅಗಾಧ ಸಂಪತ್ತು ನಮ್ಮ ಸಾರ್ವಜನಿಕ ಉದ್ದಿಮೆಗಳಲ್ಲಿದೆ. ಉತ್ಪಾದನಾ ವಲಯ, ಸೇವಾವಲಯ, ನಾಗರಿಕ ಸಾರಿಗೆ, ಶಿಕ್ಷಣ ಮತ್ತು ಆರೋಗ್ಯ ವಲಯದ ಈ ಸಾರ್ವಜನಿಕ ಉದ್ದಿಮೆಗಳೇ ಇಂದಿಗೂ ಸಹ ಭಾರತದ ಆರ್ಥಿಕ ಸದೃಢತೆಯ ತಳಪಾಯವೂ ಆಗಿದೆ. ಆದರೆ ಕಳೆದ ಒಂದೆರಡು ದಶಕಗಳಿಂದ ಈ ಸಾರ್ವಜನಿಕ ಉದ್ದಿಮೆಗಳು ಒಂದೊಂದಾಗಿ ತಮ್ಮ ಮೂಲ ನೆಲೆಯನ್ನು ಕಳೆದುಕೊಳ್ಳುತ್ತಿದ್ದು, ಕಾರ್ಪೋರೇಟ್‌ ಮಾರುಕಟ್ಟೆ ಪಾಲಾಗುತ್ತಿದೆ. ಇದನ್ನು ಜಾಗತೀಕರಣದ ಅನಿವಾರ್ಯತೆ ಎನ್ನಲಾಗುತ್ತದೆ.

ಈ ಸಂಪತ್ತನ್ನು ಸೃಷ್ಟಿಸಿದ ದುಡಿಯುವ ಜನಸಂಖ್ಯೆಯ ಮುಂದಿನ ತಲೆಮಾರು, ಅಂದರೆ ವರ್ತಮಾನದ ವಿದ್ಯಾರ್ಥಿ ಯುವ ಜನತೆ, ಈ ನವ ಉದಾರವಾದ ಮತ್ತು ಡಿಜಿಟಲ್‌ ಯುಗದ ಫಲಾನುಭವಿಗಳಾಗಿದ್ದು ಸಹಜವಾಗಿಯೇ ಜಾಗತೀಕರಣಗೊಂಡ ರಮ್ಯಲೋಕದ ವಿಹಾರಿಗಳಾಗಿದ್ದಾರೆ. ಈ ಯುವ ತಲೆಮಾರಿಗಿಂತಲೂ ಹೆಚ್ಚು ಉತ್ಸುಕತೆಯಿಂದ ಸಾರ್ವಜನಿಕ ಉದ್ದಿಮೆಗಳ ʼನಗದೀಕರಣʼವನ್ನು ( ನಗದೀಕರಣ ಎನ್ನುವ ತಾಂತ್ರಿಕ ಪದದ ಅರ್ಥ ನಾವೇ ಬೆಳೆಸಿದ ಸಂಪತ್ತನ್ನು ಖಾಸಗೀಕರಣದ ಹೆಸರಿನಲ್ಲಿ ಕಾರ್ಪೋರೇಟ್‌ಗಳಿಗೆ ಮಾರಾಟ ಮಾಡುವುದು ಅಥವಾ ಹರಾಜು ಹಾಕುವುದು ಎಂದಷ್ಟೇ) ಸ್ವಾಗತಿಸುತ್ತಿರುವುದು ಭಾರತ 60 ವರ್ಷಗಳ ಕಾಲ ಅನುಸರಿಸಿದ ಅರೆ ಸಮಾಜವಾದಿ-ಕಲ್ಯಾಣರಾಜ್ಯ ಆರ್ಥಿಕತೆಯ ಫಲಾನುಭವಿಗಳು. ತಮ್ಮ ನಂತರದ ತಲೆಮಾರಿನ ಮಕ್ಕಳಿಗಾಗಿ ಭವಿಷ್ಯದ ಸುಸ್ಥಿರ ಬದುಕು ರೂಪಿಸಲು ನೆರವಾದ ʼ ಕಲ್ಯಾಣರಾಜ್ಯದ ʼ ಆರ್ಥಿಕ ನೀತಿಗಳು ಇಂದು ಹಿತವಲಯದಲ್ಲಿರುವ ಈ ವರ್ಗದ ದೃಷ್ಟಿಯಲ್ಲಿ ʼಅಭಿವೃದ್ಧಿ ವಿರೋಧಿʼಯಾಗಿ ಕಾಣುವುದು ವಿಡಂಬನೆಯೇ ಸರಿ. ಈ ಹಿತವಲಯವೇ ಇಂದು ಕಾಂಗ್ರೆಸ್‌ ಸರ್ಕಾರದ ಉಚಿತಗಳನ್ನೂ ಲೇವಡಿ ಮಾಡುತ್ತಿದೆ.

ಉಚಿತ ಬಸ್‌ ಪ್ರಯಾಣದ, ಪಡಿತರ ಇತ್ಯಾದಿಗಳ ನೈಜ ಫಲಾನುಭವಿಗಳನ್ನು ಗ್ರಾಮೀಣ ಸಣ್ಣ ವ್ಯಾಪಾರಿಗಳಲ್ಲಿ, ತಳ್ಳುಗಾಡಿ-ಬೀದಿಬದಿ ವ್ಯಾಪಾರಿಗಳಲ್ಲಿ, ಪೌರಕಾರ್ಮಿಕರಲ್ಲಿ, ಆಶಾ-ಅಂಗನವಾಡಿ ಕಾರ್ಯಕರ್ತೆಯರಲ್ಲಿ, ಸ್ವಚ್ಚತಾ ಕಾರ್ಮಿಕರ ನಡುವೆ, ಗಾರ್ಮೆಂಟ್‌ ಕಾರ್ಮಿಕರಲ್ಲಿ, ಕಟ್ಟಡ ಕಾರ್ಮಿಕರು ಮತ್ತಿತರ ವಲಸೆ ಕಾರ್ಮಿಕರಲ್ಲಿ ಗುರುತಿಸಲು ಯತ್ನಿಸಿದಾಗ ನಮಗೆ ಈವರೆಗೂ ಕಾಣದಂತ್ತಿದ್ದ ಮತ್ತೊಂದು  ʼ ಭಾರತದ ʼ ದರ್ಶನವಾಗುತ್ತದೆ. ಆದರೆ ಸರ್ಕಾರದ ಈ ಕ್ರಮಗಳನ್ನೇ ಕ್ರಾಂತಿಕಾರಿ ನಡೆ ಎಂದು ವೈಭವೀಕರಿಸುವುದು ಆತ್ಮವಂಚನೆಯಾಗುತ್ತದೆ. ಸಮಾಜದ ಉನ್ನತಿಗಾಗಿ, ತಳಸಮುದಾಯಗಳ ಸುಸ್ಥಿರ ಬದುಕಿಗಾಗಿ ಹಾಗೂ ಸಮ ಸಮಾಜದ ಕನಸನ್ನು ಹೊತ್ತು ಪ್ರಗತಿಯತ್ತ ನಡೆಯುವವರಿಗೆ ಸರ್ಕಾರ ನೀಡಿರುವ ಈ ಉಚಿತಗಳು ನಿದ್ರೆಗುಳಿಗೆಗಳಾಗಬಾರದು. ಬದಲಾಗಿ, ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಆಡಳಿತ ನೀತಿಗಳನ್ನು ರೂಪಿಸಬೇಕಾದ ನೈತಿಕ ಜವಾಬ್ದಾರಿ ಹೊತ್ತಿರುವ ಸರ್ಕಾರಗಳು, ಮೂಲ ಸಾಂವಿಧಾನಿಕ ತತ್ವಗಳಿಗೆ ತದ್ವಿರುದ್ಧ ದಿಕ್ಕಿನಲ್ಲಿ ತಮ್ಮ ಆರ್ಥಿಕ ನೀತಿಗಳನ್ನು ಜಾರಿಗೊಳಿಸುತ್ತಿರುವುದನ್ನು ಗಮನಿಸುತ್ತಲೇ, ಸಮ ಸಮಾಜದ ನಿರ್ಮಾಣಕ್ಕೆ ಅಗತ್ಯವಾದ ಜನಾಗ್ರಹಗಳನ್ನು ರೂಪಿಸಬೇಕಿದೆ.

ವಾಸ್ತವ ಸ್ಥಿತಿಗತಿಗಳತ್ತ ಗಮನ

ವರ್ತಮಾನದ ಕರ್ನಾಟಕದ ಸಂದರ್ಭದಲ್ಲಿ ನಮಗೆ ಢಾಳಾಗಿ ಕಾಣುತ್ತಿರುವುದು ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯಗಳ ನಡುವಿನ ಭೂಮಿ ಸಮಸ್ಯೆ, ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿನ ವಸತಿ ಸಮಸ್ಯೆ ಹಾಗೂ ಸಾರ್ವತ್ರಿಕ ಶಿಕ್ಷಣ-ಆರೋಗ್ಯ-ಪೌಷ್ಟಿಕತೆಯ ಕೊರತೆ. ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಒದಗಿಸುವ ಸರ್ಕಾರಕ್ಕೆ ರಾಜ್ಯದ 3000 ಹಳ್ಳಿಗಳಿಗೆ ಸಾರಿಗೆ ಸೌಲಭ್ಯವೇ ಇಲ್ಲದಿರುವುದು ಗಂಭೀರವಾಗಿ ಕಾಡಬೇಕಾಗಿರುವ ವಿಚಾರ. ಹಾಗೆಯೇ ಶಾಲೆಗಳಿಲ್ಲದ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲದ ಹಳ್ಳಿಗಳೂ ಸಹ ಸರ್ಕಾರದ ಗಮನ ಸೆಳೆಯಬೇಕಿದೆ. ನಗರ ಪ್ರದೇಶಗಳಲ್ಲೂ ಸಹ ಶಿಕ್ಷಣದ ಖಾಸಗೀಕರಣ ಪರಾಕಾಷ್ಠೆ ತಲುಪಿದ್ದು, ಕೆಳಮಧ್ಯಮ ಹಾಗೂ ಬಡ ಕುಟುಂಬಗಳಿಗೆ ಹೈಸ್ಕೂಲ್‌ ನಂತರದ ಶಿಕ್ಷಣ ಮರೀಚಿಕೆಯಾಗುತ್ತಿದೆ. ನಗರವಾಸಿ ವಲಸೆ ಕಾರ್ಮಿಕರಿಗೆ ಪ್ರಾಥಮಿಕ ಶಿಕ್ಷಣವೇ ಗಗನ ಕುಸುಮವಾಗುತ್ತಿದೆ. ಬುಡಕಟ್ಟು-ಆದಿವಾಸಿ ಸಮುದಾಯಗಳು ತಮ್ಮ ಪಾರಂಪರಿಕ ಅರಣ್ಯ ಹಕ್ಕುಗಳನ್ನು ನಿರಂತರವಾಗಿ ಕಳೆದುಕೊಳ್ಳುತ್ತಲೇ ಇದ್ದು, ತಾವು ಶತಮಾನಗಳ ಕಾಲ ಬದುಕಿದ ನೆಲವನ್ನೂ ತೊರೆಯುವ ಪರಿಸ್ಥಿತಿ ಎದುರಾಗಿದೆ. ಭೂಮಿಯ ಹಕ್ಕುಗಳಿಗಾಗಿ ಸಾವಿರಾರು ಕುಟುಂಬಗಳು ಹೋರಾಡುತ್ತಿವೆ.

ಈ ವಂಚಿತ ಜನಸ್ತೋಮದ ಜೀವನ ನಿರ್ವಹಣೆಯ ಮಾರ್ಗಗಳನ್ನು ಸುಗಮಗೊಳಿಸುವುದರೊಂದಿಗೇ ಈ ಕೋಟ್ಯಂತರ ಜನತೆಗೆ ಸುಸ್ಥಿರ ಬದುಕನ್ನು ಒದಗಿಸುವ ಸಾಂವಿಧಾನಿಕ ಜವಾಬ್ದಾರಿ ಚುನಾಯಿತ ಸರ್ಕಾರಗಳ ಮೇಲಿರುತ್ತದೆ. ಇದು ಕಾನೂನು ಗ್ರಂಥಗಳಲ್ಲಿ ಅಥವಾ ನ್ಯಾಯ ವ್ಯವಸ್ಥೆಯ ಕಟ್ಟಳೆಗಳಲ್ಲಿ ನಿಷ್ಕರ್ಷೆಯಾಗುವ ವಿಚಾರವಲ್ಲ. ಜನರಿಂದಲೇ ಚುನಾಯಿತರಾಗಿ, ಜನರಿಗಾಗಿಯೇ ಆಡಳಿತ ನಡೆಸುವ, ಜನತೆಯ ಸರ್ಕಾರದ ನೈತಿಕ ಜವಾಬ್ದಾರಿಯನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಸಹಜವಾಗಿಯೇ ಅಪೇಕ್ಷಿಸುತ್ತದೆ. ಸಮ ಸಮಾಜವನ್ನು ಬಯಸುವ ʼ ಪ್ರಗತಿಪರ ʼ ಮನಸುಗಳು ಈ ಅಪೇಕ್ಷೆಗಳನ್ನು ಈಡೇರಿಸಲು ಸರ್ಕಾರಗಳ ಮೇಲೆ ನಿರಂತರ ಒತ್ತಡ ಹೇರಬೇಕಾಗುತ್ತದೆ. ಸರ್ಕಾರಗಳು ನೀಡುವ ಉಚಿತಗಳು ಈ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ತಂತ್ರಗಾರಿಕೆಯಾಗಿ ಕಾಣುತ್ತದೆ.

ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ಬಹುಸಂಖ್ಯಾತ ಜನತೆ ತಮ್ಮ ಜೀವನಮಟ್ಟವನ್ನು ʼ ಪೂರ್ವಜನ್ಮದ ಕರ್ಮಫಲ ʼ ಎಂದೇ ಭಾವಿಸುವುದರಿಂದ, ಕಡುಬಡತನದಲ್ಲಿ ಜೀವನ ಸವೆಸುವವರೂ ಸಹ ಸಾಂವಿಧಾನಿಕ ಸೌಲಭ್ಯ-ಸವಲತ್ತುಗಳನ್ನು ತಮ್ಮ ಹಕ್ಕು ಎಂದು ಭಾವಿಸುವುದಿಲ್ಲ. ಬದಲಾಗಿ ಸರ್ಕಾರಗಳ ಔದಾರ್ಯ ಎಂದೇ ಪರಿಗಣಿಸುತ್ತಾರೆ. ಈ ಜನಸಮುದಾಯಗಳಲ್ಲಿ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಸಂವಿಧಾನ ಪ್ರಜ್ಞೆಯುಳ್ಳ ಪ್ರಜ್ಞಾವಂತ ಸಮಾಜದ ನೈತಿಕ ಆದ್ಯತೆ ಮತ್ತು ಕರ್ತವ್ಯವೂ ಆಗಬೇಕಿದೆ. ಹಾಗಾಗಿ ಸಮಾಜದ ಉನ್ನತಿ, ತಳಸಮುದಾಯಗಳ ಸುಸ್ಥಿರ ಬದುಕು ಹಾಗೂ ಸಮ ಸಮಾಜದ ಕನಸನ್ನು ಹೊತ್ತ ಪ್ರಜ್ಞಾವಂತ ನಾಗರಿಕ ಸಮಾಜದ ಸಂಘಟನೆಗಳಿಗೆ ಉಚಿತಗಳು ನಿದ್ರೆಗುಳಿಗೆಗಳಾಗದಂತೆ ಎಚ್ಚರ ವಹಿಸಬೇಕಿದೆ.

ಕರ್ನಾಟಕದ ಜನತೆ ನೀಡಿರುವ ಚಾರಿತ್ರಿಕ ಚುನಾವಣಾ ಫಲಿತಾಂಶದ ಹಿಂದೆ ಈ ಧ್ವನಿ ಅಡಗಿದೆಯೇ ? ಈ ಪ್ರಶ್ನೆಗೆ ಉತ್ತರ ಶೋಧಿಸಬೇಕಿದೆ.

(ಮುಂದಿನ ಭಾಗದಲ್ಲಿ)

Tags: AnnabhagyaCM SiddaramaiahCongress GovernmentGrahajyotiGralahakshmiguarantee cardShakti Yojana
Previous Post

ಮೈಸೂರು ಅಮಿಟಿ ಲೇಡಿಸ್​ ಸರ್ಕಲ್​ ವತಿಯಿಂದ ಮೈಸೂರು ಝೂಗೆ ಶಿಶುಪಾಲನಾ ಕೊಠಡಿ ಕೊಡುಗೆ

Next Post

ದುಬೈನಲ್ಲಿ ಮಾರಾಟಕ್ಕಿದೆ ಬರೋಬ್ಬರಿ 1675 ಕೋಟಿ ರೂ. ಮೌಲ್ಯದ ಮನೆ : ಇದರ ವಿಶೇಷತೆಯೇನು ಗೊತ್ತೇ?

Related Posts

Top Story

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

by ಪ್ರತಿಧ್ವನಿ
July 3, 2025
0

ದೇವನಹಳ್ಳಿಯ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ 080 ಲಾಂಜ್ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆತಿಥ್ಯ ಕ್ಷೇತ್ರದಲ್ಲಿ ಒಟ್ಟು ಹತ್ತು ಜಾಗತಿಕ ಪ್ರಶಸ್ತಿ ದೊರೆತಿವೆ. ಸ್ಪೇನ್‌ನ...

Read moreDetails

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

July 3, 2025

Capital City: ಈ ವಾರ ತೆರೆಗೆ ಆರ್ ಅನಂತರಾಜು ನಿರ್ದೇಶನದ ಹಾಗೂ ರಾಜೀವ್ ರೆಡ್ಡಿ ಅಭಿನಯದ “ಕ್ಯಾಪಿಟಲ್ ಸಿಟಿ” . .

July 3, 2025

S/o Muttanna Kannada Movi: ಅಪ್ಪ-ಮಗನ ಬಾಂಧವ್ಯಧ ಬಹು ನಿರೀಕ್ಷಿತ “S\O ಮುತ್ತಣ್ಣ” ಚಿತ್ರ ಆಗಸ್ಟ್ 22 ತೆರೆಗೆ.

July 3, 2025

DCM DK Shivakumar: ಸಿಎಂ ಕುರ್ಚಿ ಖಾಲಿ ಇಲ್ಲ..!!

July 3, 2025
Next Post
ದುಬೈನಲ್ಲಿ ಮಾರಾಟಕ್ಕಿದೆ ಬರೋಬ್ಬರಿ 1675 ಕೋಟಿ ರೂ. ಮೌಲ್ಯದ ಮನೆ : ಇದರ ವಿಶೇಷತೆಯೇನು ಗೊತ್ತೇ?

ದುಬೈನಲ್ಲಿ ಮಾರಾಟಕ್ಕಿದೆ ಬರೋಬ್ಬರಿ 1675 ಕೋಟಿ ರೂ. ಮೌಲ್ಯದ ಮನೆ : ಇದರ ವಿಶೇಷತೆಯೇನು ಗೊತ್ತೇ?

Please login to join discussion

Recent News

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R
Top Story

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

by Chetan
July 4, 2025
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!
Top Story

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

by Chetan
July 4, 2025
Top Story

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

by ಪ್ರತಿಧ್ವನಿ
July 3, 2025
Top Story

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

by ಪ್ರತಿಧ್ವನಿ
July 3, 2025
Top Story

Capital City: ಈ ವಾರ ತೆರೆಗೆ ಆರ್ ಅನಂತರಾಜು ನಿರ್ದೇಶನದ ಹಾಗೂ ರಾಜೀವ್ ರೆಡ್ಡಿ ಅಭಿನಯದ “ಕ್ಯಾಪಿಟಲ್ ಸಿಟಿ” . .

by ಪ್ರತಿಧ್ವನಿ
July 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

July 4, 2025
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada