ನಾ ದಿವಾಕರ
(ಜೀವನೋಪಾಯ ಮಾರ್ಗಗಳೂ ಸರ್ಕಾರಗಳ ಉಪಾಯಗಳೂ !
ಶ್ರೀಸಾಮಾನ್ಯನ ಸ್ವಾವಲಂಬನೆಯೂ ಮಾರುಕಟ್ಟೆ ಆಧಿಪತ್ಯವೂ !
ಉಚಿತಗಳ ಔಚಿತ್ಯವೂ ಸರ್ಕಾರಗಳ ಬಾಧ್ಯತೆಗಳೂ !
ಈ ಲೇಖನಗಳ ಮುಂದುವರೆದ ಕೊನೆಯ ಭಾಗ)
2023ರ ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭೂತಪೂರ್ವ ಗೆಲುವಿಗೆ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ ಐದು ಗ್ಯಾರಂಟಿಗಳೇ ಕಾರಣ ಎಂದು ರಾಜಕೀಯ ವಿಶ್ಲೇಷಕರೂ ಒಪ್ಪಿಕೊಂಡಿದ್ದಾರೆ ಹಾಗೆಯೇ ಅರ್ಥಶಾಸ್ತ್ರಜ್ಞರೂ ಸಹ ನೂತನ ಸರ್ಕಾರ ನೀಡಲಿರುವ ಈ ಸೌಲಭ್ಯಗಳೇ ಈ ಬಾರಿಯ ಚುನಾವಣೆಯ ಫಲಿತಾಂಶಗಳಿಗೆ ಕಾರಣ ಎಂದು ಹೇಳಿದ್ದಾರೆ. ಹೊಸ ಮಂತ್ರಿಮಂಡಲ ರಚನೆಯಾಗಿರುವುದರಿಂದ ಕಾಂಗ್ರೆಸ್ ಪಕ್ಷವು ಘೋಷಿಸಿರುವ ಉಚಿತ 10 ಕಿಲೋ ಅಕ್ಕಿ, 200 ಯೂನಿಟ್ ವಿದ್ಯುತ್ ಉಚಿತ, ನಿರುದ್ಯೋಗಿ ಪದವೀಧರರಿಗೆ 3000 ರೂ, ಡಿಪ್ಲೊಮೋ ಪದವೀಧರರಿಗೆ 1500 ರೂ ನಿರುದ್ಯೋಗ ಭತ್ಯೆ, ಗೃಹಿಣಿಯರಿಗೆ ಮಾಸಿಕ 2000 ರೂ ಸಹಾಯಧನ ಮತ್ತು ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ , ಈ ಐದೂ ಗ್ಯಾರಂಟಿಗಳನ್ನು ಅಲ್ಪಸ್ವಲ್ಪ ಷರತ್ತುಗಳೊಂದಿಗೆ ಜಾರಿಗೊಳಿಸುವ ನಿರೀಕ್ಷೆ ಇದೆ. ಸರ್ಕಾರದ ಬೊಕ್ಕಸಕ್ಕೆ ಈ ಉಚಿತಗಳ ಪರಿಣಾಮವಾಗಿ 50 ರಿಂದ 60 ಕೋಟಿ ರೂ ಹೊರೆಯಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಹೊಸ ಸರ್ಕಾರವು ಈ ಮೊತ್ತದ ಹಣವನ್ನು ಹೇಗೆ ಹೊಂದಿಸುತ್ತದೆ ಎನ್ನುವುದು ಯೋಚಿಸಬೇಕಾದ ವಿಚಾರ.
ಈ ರೀತಿ ಉಚಿತಗಳನ್ನು ನೀಡುವುದರಿಂದ “ತೆರಿಗೆದಾರರ ಹಣವನ್ನು” ಪೋಲು ಮಾಡಿದಂತಾಗುತ್ತದೆ ಎಂದು ಹುಯಿಲೆಬ್ಬಿಸುತ್ತಿರುವವರು ಅರ್ಥಮಾಡಿಕೊಳ್ಳಬೇಕಾದ ವಾಸ್ತವತೆ ಎಂದರೆ ಈ ಉಚಿತಗಳನ್ನು ಪಡೆಯುವ ತಳಮಟ್ಟದ ಜನತೆಯೂ ಸಹ ತೆರಿಗೆದಾರರೇ ಆಗಿರುತ್ತಾರೆ. ಈ ಗ್ಯಾರಂಟಿಗಳ ಭರವಸೆಯೇ ಈ ಚುನಾವಣೆಗಳ ಫಲಿತಾಂಶಕ್ಕೆ ಮೂಲ ಕಾರಣ ಎಂದರೆ, ರಾಜ್ಯದಲ್ಲಿ ತಳಮಟ್ಟದ ಜನಸಾಮಾನ್ಯರು ತಮ್ಮ ನಿತ್ಯ ಜೀವನ ನಿರ್ವಹಣೆಗಾಗಿ ಪರದಾಡುತ್ತಿದ್ದಾರೆ ಎಂದೇ ಅರ್ಥ ಅಲ್ಲವೇ ? ಇದು ವಸ್ತುಸ್ಥಿತಿಯೂ ಹೌದು. ಭಾರತದ ಅರ್ಥವ್ಯವಸ್ಥೆಯಲ್ಲಿ ಬಂಡವಾಳಶಾಹಿ-ಮಾರುಕಟ್ಟೆ ಪ್ರಾಬಲ್ಯವು ಮೊದಲಿನಿಂದಲೂ ಹೆಚ್ಚಾಗಿದ್ದರೂ, ಈ ಹಿಂದೆ ಸರ್ಕಾರಗಳು ಜನಸಾಮಾನ್ಯರ ನಿತ್ಯ ಬದುಕಿನ ಮೇಲೆ ಪ್ರಭಾವ ಬೀರುವ ದಿನಬಳಕೆ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ಸ್ವಲ್ಪವಾದರೂ ಎಚ್ಚರಿಕೆ ವಹಿಸುತ್ತಿದ್ದವು. ಸಾರ್ವಜನಿಕ ವಲಯದಲ್ಲೂ ಬೆಲೆ ಏರಿಕೆಯ ವಿರುದ್ದ ನಿತ್ಯ ಹೋರಾಟಗಳು ನಡೆದ ಕಾಲಘಟ್ಟವನ್ನೂ ನಾವು ಮೀರಿ ಬಂದಿದ್ದೇವೆ. ಆದರೆ ಕಳೆದ ಒಂದು ದಶಕದಲ್ಲಿ ಬೆಲೆ ಏರಿಕೆ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗುವ ಒಂದು ಗಂಭೀರ ವಿದ್ಯಮಾನವಾಗಿ ಕಾಣುತ್ತಿಲ್ಲ. ರಾಜಕೀಯ ಪಕ್ಷಗಳೂ ಸಹ ಬೆಲೆ ಏರಿಕೆಯ ವಿರುದ್ಧ ಆಂದೋಲನಗಳನ್ನು ಹಮ್ಮಿಕೊಳ್ಳುತ್ತಿಲ್ಲ.
ಇದಕ್ಕೆ ಕಾರಣ ಸಾಮಾನ್ಯ ಜನತೆಯ ಆಕ್ರೋಶದ ದನಿಗೆ ದನಿಗೂಡಿಸಬೇಕಾದ ವಿಶಾಲ ಸಮಾಜ ತನ್ನ ಹೊಣೆಗಾರಿಕೆಯನ್ನು ಮರೆತಿದೆ. ನಾಗರಿಕ ಸಮಾಜದ ಕೆಲವು ಸಂಘಟನೆಗಳನ್ನು ಹೊರತುಪಡಿಸಿದರೆ ರಾಜಕೀಯ ಪಕ್ಷಗಳೂ ಸಹ ಬೆಲೆ ಏರಿಕೆಯ ವಿರುದ್ಧ ವ್ಯಾಪಕ ಹೋರಾಟಗಳನ್ನು ರೂಪಿಸಿರುವ ಉದಾಹರಣೆಗಳೇ ಕಂಡುಬರುತ್ತಿಲ್ಲ. ದೇಶದ ಆರ್ಥಿಕ ಅಭಿವೃದ್ಧಿಗಾಗಿ ಬೆಲೆ ಏರಿಕೆಯನ್ನು ಸಹಿಸಿಕೊಳ್ಳುವುದು ಅವಶ್ಯ ಎಂಬ ಸಾರ್ವಜನಿಕ ವಲಯದ ಒಂದು ವರ್ಗದ ಅಭಿಪ್ರಾಯವನ್ನೇ ಸಾರ್ವತ್ರೀಕರಿಸಲು ಮಾಧ್ಯಮಗಳೂ ಸೇರಿದಂತೆ ಕೆಲವು ರಾಜಕೀಯ ಗುಂಪುಗಳು ಸದಾ ಸನ್ನದ್ಧವಾಗಿರುತ್ತವೆ. ಉಕ್ರೇನ್-ರಷ್ಯಾ ಯುದ್ಧದ ಪರಿಣಾಮವಾಗಿ ಜರ್ಮನಿ, ಇಂಗ್ಲೆಂಡ್, ಫ್ರಾನ್ಸ್ ಮೊದಲಾದ ದೇಶಗಳನ್ನು ಕಾಡುತ್ತಿರುವ ಆರ್ಥಿಕ ಹಿಂಜರಿತ ಭಾರತವನ್ನೂ ಕಾಡಲಿದೆ ಎಂಬ ಭೀತಿಯ ನಡುವೆಯೇ, ವಾಸ್ತವವನ್ನು ಮರೆಮಾಚುವ ಒಂದು ಬೌದ್ಧಿಕ ವಲಯವನ್ನು ಸೃಷ್ಟಿಸಲಾಗಿದೆ. “ ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಜನಸಾಮಾನ್ಯರು ಈ ತ್ಯಾಗಕ್ಕೆ (ಬೆಲೆ ಏರಿಕೆಯನ್ನೂ ಸಹಿಸಿಕೊಳ್ಳುವ) ಸಜ್ಜಾಗಿದ್ದಾರೆ ” ಎಂಬ ವಾಟ್ಸಾಪ್ ವಿಶ್ವವಿದ್ಯಾಲಯದ ಘೋಷ ವಾಕ್ಯವನ್ನೇ ಸಾರ್ವತ್ರೀಕರಿಸಲಾಗುತ್ತಿದೆ. ಆದರೆ ಕರ್ನಾಟಕದ ಮತದಾರರು ಈ ಅಭಿಪ್ರಾಯವನ್ನು ನಿರಾಕರಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ನವ ಉದಾರವಾದ ಮತ್ತು ರಾಜಕಾರಣ
ನವ ಉದಾರವಾದ ಮತ್ತು ಕಾರ್ಪೋರೇಟ್ ಮಾರುಕಟ್ಟೆ ಬಂಡವಾಳಶಾಹಿಯನ್ನು ಅನುಮೋದಿಸುವ ಹಲವು ಅರ್ಥಶಾಸ್ತ್ರಜ್ಞರು ತಮ್ಮ ಬರಹಗಳ ಮೂಲಕ ಸರ್ಕಾರಗಳ ಮೇಲೆ ಜನಕಲ್ಯಾಣ ಆರ್ಥಿಕ ನೀತಿಗಳನ್ನು ಕೈಬಿಡುವಂತೆ ಒತ್ತಾಯಿಸುತ್ತಿರುವುದನ್ನು ಎಲ್ಲ ದೇಶಗಳಲ್ಲೂ ಕಾಣಬಹುದು. ಭಾರತವೂ ಇದಕ್ಕೆ ಹೊರತಾಗಿಲ್ಲ. ಈ ಮಾರುಕಟ್ಟೆ ಒತ್ತಡದ ಪ್ರಭಾವಕ್ಕೊಳಗಾಗಿಯೇ ಭಾರತದಲ್ಲೂ ಸಹ ಮಾರುಕಟ್ಟೆ ನಿಯಂತ್ರಿತ ಮಾಧ್ಯಮಗಳು ಮತ್ತು ಬೌದ್ಧಿಕ ವಲಯಗಳು ಸಬ್ಸಿಡಿ, ಅನುದಾನ ಮುಂತಾದ ಜನಕಲ್ಯಾಣ ಆರ್ಥಿಕ ನೀತಿಗಳನ್ನು ವಿರೋಧಿಸುತ್ತಿವೆ. ಚುನಾವಣೆಗಳ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಘೋಷಿಸುವ ಮತ್ತು ಸರ್ಕಾರಗಳು ಜಾರಿಗೊಳಿಸುವ ಉಚಿತಗಳನ್ನೂ ಸಹ ಸಂಪೂರ್ಣವಾಗಿ ಕೊನೆಗಾಣಿಸುವಂತೆ ಒತ್ತಡ ಹೇರಲಾಗುತ್ತಿದೆ. ಕರ್ನಾಟಕದ ಚುನಾವಣೆಗಳ ಸಂದರ್ಭದಲ್ಲೂ ಇದೇ ಧ್ವನಿ ಕೇಳಿಬಂದಿದೆ. ಆದರೆ ಭಾರತದ ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳು ತಳಮಟ್ಟದ ಜನಸಾಮಾನ್ಯರನ್ನು ಆಕರ್ಷಿಸಲು ಉಚಿತಗಳನ್ನು ಘೋಷಿಸುವುದು ಸಾಮಾನ್ಯವಾಗಿದೆ. ಏಕೆಂದರೆ ಆರ್ಥಿಕ ಸಮಾನತೆ, ಸಬಲೀಕರಣ ಮತ್ತು ಸಮಾನಾವಕಾಶಗಳನ್ನು ತಳಮಟ್ಟದ ಜನತೆಗೂ ತಲುಪುವಂತಹ ಆರ್ಥಿಕ ನೀತಿಗಳನ್ನು ಸರ್ಕಾರಗಳು ಅನುಸರಿಸಲು ಸರ್ಕಾರಗಳಿಗೆ ಸಾಧ್ಯವಾಗುತ್ತಿಲ್ಲ.
2022ರಲ್ಲಿ ನಡೆದ ಉತ್ತರ ಪ್ರದೇಶ ಚುನಾವಣೆಗಳಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲೂ ಈ ಉಚಿತಗಳ ಘೋಷಣೆಯೇ ಕಾರಣ ಎಂದು ವಿಶ್ಲೇಷಿಸಲಾಗಿತ್ತು. ಬಡ ಕುಟುಂಬಗಳಿಗೆ ಉಚಿತ ಪಡಿತರ ನೀಡುವ ಪಕ್ಷದ ಪ್ರಣಾಳಿಕೆ ಸಾಕಷ್ಟು ಪ್ರಭಾವ ಬೀರಿತ್ತು. ಐದು ಕಿಲೋ ಉಚಿತ ಪಡಿತರ, ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ, ಉಚಿತ ಶೌಚಾಲಯ (!) ಉಚಿತ ವಸತಿ, 60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ರಾಣಿ ಲಕ್ಷ್ಮಿ ಬಾಯಿ ಯೋಜನೆಯಡಿ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಉಚಿತ ದ್ವಿಚಕ್ರ ವಾಹನ ಈ ಉಚಿತಗಳ ಘೋಷಣೆಯೇ ಯೋಗಿ ಆದಿತ್ಯನಾಥ್ ಸರ್ಕಾರದ ಪುನರಾಯ್ಕೆಗೆ ಮೂಲ ಕಾರಣವಾಗಿತ್ತು. ಗುಜರಾತ್ ಚುನಾವಣೆಗಳಲ್ಲೂ ಸಹ ಎಲ್ಲ ಪಕ್ಷಗಳೂ ಇದೇ ರೀತಿಯ ಉಚಿತಗಳನ್ನು ಘೋಷಿಸಿದ್ದವು. ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಇದೇ ರೀತಿಯ ಜನೋಪಯೋಗಿ ಉಚಿತ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿರುವುದು ಮತ್ತು ಜನಬೆಂಬಲ ಗಳಿಸಿರುವುದು, ಇತರ ಎಲ್ಲ ರಾಜಕೀಯ ಪಕ್ಷಗಳನ್ನೂ ಆಕರ್ಷಿಸಿರುವುದು ವಾಸ್ತವ.
ಸರ್ಕಾರಗಳು ಈ ರೀತಿಯಾಗಿ ಜನಸಾಮಾನ್ಯರಿಗೆ, ಕಡುಬಡವರಿಗೆ ಮತ್ತು ಅಂಚಿಗೆ ತಳ್ಳಲ್ಪಟ್ಟ ಜನಸಮುದಾಯಗಳಿಗೆ ನೀಡುವ ಸೌಲಭ್ಯಗಳನ್ನು ಉಚಿತ ಎಂದು ವರ್ಗೀಕರಿಸುವುದೇ ತಪ್ಪು ಕಲ್ಪನೆಗಳಿಗೆ ಎಡೆಮಾಡಿಕೊಡುತ್ತದೆ. ಏಕೆಂದರೆ ಪ್ರತಿಯೊಂದು ʼಉಚಿತ ಸೌಲಭ್ಯವೂ ʼ ಸಹ ಸಾಮಾನ್ಯವಾಗಿ ವಂಚಿತರಿಗೆ ತಲುಪುತ್ತದೆ. ಮಾರುಕಟ್ಟೆಯಲ್ಲಿ, ಅರ್ಥವ್ಯವಸ್ಥೆಯಲ್ಲಿ ಉದ್ಯೋಗ ಸೃಷ್ಟಿ ಮಾಡಲಾಗದ ಸರ್ಕಾರಗಳು ನಿರುದ್ಯೋಗ ಭತ್ಯೆ ನೀಡುತ್ತವೆ, ಎಲ್ಲರಿಗೂ ವಿದ್ಯುತ್ ಸೌಕರ್ಯ ಕಲ್ಪಿಸಲಾಗದ ಸರ್ಕಾರಗಳು ಉಚಿತ ವಿದ್ಯುತ್ ನೀಡುತ್ತವೆ, ಮಹಿಳೆ ತನ್ನ ಮನೆಯಲ್ಲಿ ನಿರ್ವಹಿಸುವ ಕೆಲಸಗಳನ್ನು ಅನುತ್ಪಾದಕೀಯ ಎಂದೇ ವರ್ಗೀಕರಿಸುವ ಮೂಲಕ, ಈ ಶ್ರಮದ ಮೌಲ್ಯವನ್ನು ನಿಷ್ಕರ್ಷೆ ಮಾಡಲಿಚ್ಚಿಸದ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಮಹಿಳೆಯ ಸಬಲೀಕರಣ ಮತ್ತು ಸುಸ್ಥಿರ ಬದುಕಿನ ನೆಪದಲ್ಲಿ ಕೆಲವು ಉಚಿತ ಸವಲತ್ತುಗಳನ್ನು ಘೋಷಿಸಲಾಗುತ್ತದೆ. ಸರ್ಕಾರದ ಮಾರುಕಟ್ಟೆ ಆರ್ಥಿಕ ನೀತಿಗಳಿಂದ ಹೆಚ್ಚು ಹೆಚ್ಚು ಸಂಖ್ಯೆಯ ಜನತೆ ಕಡುಬಡತನಕ್ಕೆ ತಳ್ಳಲ್ಪಡುತ್ತಿರುವ ಸಂದರ್ಭದಲ್ಲಿ, ಈ ತಳಮಟ್ಟದ ಜನತೆಗೆ ಸುಸ್ಥಿರ ಬದುಕು ಕಲ್ಪಿಸಲಾಗದ ಸರ್ಕಾರಗಳು ಉಚಿತ ಪಡಿತರ ನೀಡಲು ಮುಂದಾಗುತ್ತವೆ.
ಏರುತ್ತಲೇ ಹೋಗುವ ದಿನಬಳಕೆ ವಸ್ತುಗಳ ಬೆಲೆಗಳು, ಕ್ಷೀಣಿಸುತ್ತಿರುವ ಉತ್ಪಾದಕೀಯತೆ, ಗ್ರಾಮೀಣ ಭಾರತದಲ್ಲಿ ಹೆಚ್ಚಾಗುತ್ತಿರುವ ಆರ್ಥಿಕ ಅಸಮಾನತೆ, ಹಿಗ್ಗುತ್ತಲೇ ಇರುವ ಬಡವ-ಶ್ರೀಮಂತರ ನಡುವಿನ ಕಂದರ, ನಗರ ಪ್ರದೇಶಗಳಲ್ಲೂ ವ್ಯಾಪಕವಾಗುತ್ತಿರುವ ನಿರ್ಗತಿಕತೆ, ಡಿಜಿಟಲ್ ಯುಗದಲ್ಲಿ ಕುಸಿಯುತ್ತಿರುವ ಉದ್ಯೋಗಾವಕಾಶಗಳು ಹಾಗೂ ವಿದ್ಯಾರ್ಜನೆಯ ನಂತರವೂ ಜನಸಾಮಾನ್ಯರಿಗೆ ಲಭ್ಯವಾಗದ ಸುಭದ್ರ ನೌಕರಿ ಹಾಗೂ ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿ ತನ್ನ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯದೆ ಕಂಗಾಲಾಗುತ್ತಿರುವ ಬೃಹತ್ ಸಂಖ್ಯೆಯ ರೈತ ಸಮುದಾಯ ಇವೆಲ್ಲವೂ ಸಹ ಡಿಜಿಟಲ್ ಯುಗದ ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯ ನೇರ ಪರಿಣಾಮವೇ ಆಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಕಲ ಪ್ರಜೆಗಳಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ಹಾಗೂ ಸಾಮಾಜಿಕ-ಆರ್ಥಿಕ ಅಸಮಾನತೆಗಳನ್ನು ಕಡಿಮೆ ಮಾಡುವ ಜವಾಬ್ದಾರಿ ಇರುವ ಸರ್ಕಾರಗಳು ತಮ್ಮ ಮಾರುಕಟ್ಟೆ ನೀತಿಯಿಂದ ತಳಮಟ್ಟದಲ್ಲಿ ಉಂಟಾಗಬಹುದಾದ ಕ್ಷೋಭೆಯನ್ನು ನಿಯಂತ್ರಿಸುವ ಮಾರ್ಗೋಪಾಯವಾಗಿ ಈ ಉಚಿತ ಸೌಲಭ್ಯಗಳನ್ನು ಬಳಸಿಕೊಳ್ಳುತ್ತವೆ.
ಉಚಿತಗಳ ಮೂಲ ಮತ್ತು ಗುರಿ
ಈ ಯಾವುದೇ ಉಚಿತಗಳೂ ಹೊರ ಜಗತ್ತಿನಿಂದ ತಂದು ಒಳಸುರಿಯುವ ಸೌಲಭ್ಯಗಳಲ್ಲ. ಈ ಉಚಿತಗಳಿಂದ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎಂದು ಗೋಳಾಡುವ ಹಿತವಲಯದ ಸಮಾಜ ಪಾವತಿಸುವ ತೆರಿಗೆಗಿಂತಲೂ ಹೆಚ್ಚಿನ ಪಾಲನ್ನು ಉಚಿತಗಳ ಫಲಾನುಭವಿಗಳು ಬೊಕ್ಕಸಕ್ಕೆ ಸಲ್ಲಿಸುತ್ತಾರೆ. ಯಾವುದೇ ರಾಜ್ಯದ ಆದಾಯದಲ್ಲಿ ಶೇ 80ಕ್ಕಿಂತಲೂ ಹೆಚ್ಚು ಪಾಲು ಸಾಮಾನ್ಯ ಜನತೆಯ ತೆರಿಗೆ ಹಣವೇ ಆಗಿರುತ್ತದೆ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕಾಣಲಾಗುವ ದುಡಿಮೆಯಿಂದ ನಗರಗಳ ಬೃಹತ್ ಕೈಗಾರಿಕೆಗಳವರೆಗೆ, ಹೊಲಗದ್ದೆಗಳಲ್ಲಿ ಬೆವರು ಸುರಿಸುವ ಕೃಷಿ ಕೂಲಿಕಾರರಿಂದ ಹಿಡಿದು ನಗರೀಕರಣದ ಮೂಲ ಸೌಕರ್ಯಗಳ ವೃದ್ಧಿಗಾಗಿ ದುಡಿಯುವ ಕಾರ್ಮಿಕರವರೆಗೆ, ಗ್ರಾಮೀಣ ಕುಶಲಕರ್ಮಿಗಳಿಂದ ಹಿಡಿದು ಮಹಾನಗರಗಳ ಉನ್ನತ ದುಡಿಮೆಯ ವಲಯದವರೆಗೂ ಈ ದುಡಿಯುವ ವರ್ಗಗಳ ಶ್ರಮ, ಉತ್ಪಾದಕತೆ, ಉತ್ಪಾದಕೀಯತೆ ಮತ್ತು ಉತ್ಪಾದಿತ ಸರಕು-ಸೇವೆಗಳಿಂದ ಒದಗುವ ಆದಾಯ ಸರ್ಕಾರದ ಬೊಕ್ಕಸಕ್ಕೆ ಸೇರುತ್ತದೆ. ವಿಪರ್ಯಾಸವೆಂದರೆ ಈ ಎರಡು ಧೃವಗಳ ದುಡಿಮೆಯ ಸ್ತರಗಳ ನಡುವೆ, ಅಸಂಖ್ಯಾತ ದುಡಿಮೆಗಾರರು ಮೂಲ ಸೌಕರ್ಯಗಳಿಂಧ ವಂಚಿತರಾಗುತ್ತಲೇ ಇರುತ್ತಾರೆ.
ಮಾರುಕಟ್ಟೆ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಶ್ರಮವನ್ನೂ ಒಂದು ಸರಕು ಎಂದೇ ಭಾವಿಸಲಾಗುವುದರಿಂದ, ಈ ಶ್ರಮದ ಮೌಲ್ಯವೂ ಸಹ ಮಾರುಕಟ್ಟೆಯ ಲಾಭ ನಷ್ಟಗಳ ನೆಲೆಯಲ್ಲೇ ನಿಷ್ಕರ್ಷೆಯಾಗುತ್ತದೆ. ಹಾಗಾಗಿಯೇ ಅತಿ ಹೆಚ್ಚು ದುಡಿಮೆ ಮಾಡುವ ಕೆಳವರ್ಗಗಳು ಅತಿ ಕಡಿಮೆ ಆದಾಯವನ್ನು ಗಳಿಸುತ್ತವೆ. ಈ ವರ್ಗಗಳ ದುಡಿಮೆಯಲ್ಲಿ ಹೆಚ್ಚಿನ ಉತ್ಪಾದಕತೆ ಮತ್ತು ಉತ್ಪಾದಕೀಯತೆ ಇದ್ದರೂ, ಕಾರ್ಪೋರೇಟ್ ಮಾರುಕಟ್ಟೆಯ ಲಾಭವನ್ನು ಮಾಪನ ಮಾಡುವಾಗ, ಈ ದುಡಿಮೆಯ ಮೂಲನೆಲೆಗಳನ್ನು ಅಲಕ್ಷಿಸಲಾಗುತ್ತದೆ. ಈ ಮಾರುಕಟ್ಟೆ ವ್ಯವಸ್ಥೆಯಲ್ಲಿ ದೈಹಿಕ ದುಡಿಮೆ ಮಾಡುವ ಪ್ರತಿಯೊಬ್ಬ ಶ್ರಮಿಕನೂ ತಾನೇ ವ್ಯಯಿಸುವ ಶ್ರಮದಿಂದ ಪ್ರತ್ಯೇಕಿಸಲ್ಪಡುತ್ತಾನೆ. ಮಾರುಕಟ್ಟೆ ಬಂಡವಾಳ ಕ್ರೋಢೀಕರಣಕ್ಕೆ ನೆರವಾಗುವ ಶ್ರಮಿಕರ ದುಡಿಮೆಯ ಫಲಾನುಭವಿಗಳು ಬಂಡವಾಳಶಾಹಿಗಳೇ ಆಗುತ್ತಾರೆ. ತನ್ನ ಶ್ರಮದ ಮೌಲ್ಯವನ್ನು ಅರಿಯದೆಯೇ ಬೆವರು ಸುರಿಸುವ ಶ್ರಮಿಕನು ತನಗೆ ನೀಡಲಾಗುವ ಕೂಲಿ ಅಥವಾ ವೇತನವನ್ನೇ ಜೀವನೋಪಾಯಕ್ಕೆ ಆಧಾರವಾಗಿ ಪರಿಗಣಿಸುತ್ತಾನೆ.
ಬಹಳಷ್ಟು ಸಂದರ್ಭಗಳಲ್ಲಿ ಈ ಜೀವನೋಪಾಯದ ಆದಾಯವು ಅನ್ನ-ಬಟ್ಟೆ-ವಸತಿಯ ಸೌಲಭ್ಯಗಳಿಗೂ ಎಟುಕದಂತಿರುತ್ತದೆ. ಶ್ರಮದ ಮೌಲ್ಯವನ್ನು ನಿಷ್ಕರ್ಷೆ ಮಾಡುವಾಗ ಶ್ರಮಿಕರ ಕುಟುಂಬ ಜೀವನ, ಮಕ್ಕಳ ಲಾಲನೆ-ಪೋಷಣೆ, ಶಿಕ್ಷಣ, ಆರೋಗ್ಯ ಮತ್ತು ಆರೋಗ್ಯಕರ ಪೌಷ್ಟಿಕ ಆಹಾರದ ಬಗ್ಗೆ ಮಾರುಕಟ್ಟೆ ಅರ್ಥಶಾಸ್ತ್ರಜ್ಞರು ಗಮನಹರಿಸುವುದಿಲ್ಲ. ತುಟ್ಟಿ ಭತ್ಯೆಯ ಸೌಲಭ್ಯ ಸರ್ಕಾರಿ-ಖಾಸಗಿ ನೌಕರಿಯಲ್ಲಿರುವವರಿಗೆ ಮಾತ್ರವೇ ಅನ್ವಯಿಸುತ್ತದೆಯೇ ಹೊರತು ದಿನಗೂಲಿಗಳಿಗೆ ಅನ್ವಯಿಸುವುದಿಲ್ಲ. ಹಾಗಾಗಿಯೇ ಇಡೀ ಕುಟುಂಬವೇ ದಿನಗೂಲಿ ಮಾಡುತ್ತಾ ತಮ್ಮ ದೈನಂದಿನ ಜೀವನ ನಡೆಸುವ ತಳಮಟ್ಟದ ಶ್ರಮಜೀವಿಗಳ ಕುಟುಂಬಗಳಲ್ಲಿ ಮಕ್ಕಳು ಶಿಕ್ಷಣ, ಆರೋಗ್ಯ, ಪೌಷ್ಟಿಕಾಂಶ ಮತ್ತು ಸಾಮಾಜಿಕ ಅನುಕೂಲತೆಗಳಿಂದ ವಂಚಿತರಾಗಿಯೇ ಬದುಕು ಸವೆಸುತ್ತಾರೆ. ಈ ತಳಮಟ್ಟದ ಶ್ರಮಿಕರ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಅವಶ್ಯಕತೆಗಳನ್ನು ಪೂರೈಸುವುದು ಪ್ರಭುತ್ವದ ಜವಾಬ್ದಾರಿ ಎಂದು ಭಾವಿಸಿದಾಗಲೇ ಪ್ರಜಾಪ್ರಭುತ್ವ ಎನ್ನುವ ಆಳ್ವಿಕೆಯ ಪರಿಕಲ್ಪನೆಯೂ ಅರ್ಥಪೂರ್ಣ ಎನಿಸುತ್ತದೆ. ತಮಗೆ ಅವಶ್ಯವಾದ, ಕೆಲವೊಮ್ಮೆ ಅವಶ್ಯಕತೆಯನ್ನೂ ಮೀರಿದ, ಸೌಲಭ್ಯ-ಸೌಕರ್ಯಗಳೆಲ್ಲವನ್ನೂ ಸರ್ಕಾರಗಳಿಂದ-ಮಾರುಕಟ್ಟೆಯ ಮೂಲಕ ಪಡೆಯುವ ಮಧ್ಯಮ ವರ್ಗಗಳು ಮತ್ತು ಸಿರಿವಂತರು ಸರ್ಕಾರಗಳ ಈ ಜವಾಬ್ದಾರಿಯನ್ನು ಮನಗಾಣದೆ ಇರುವುದರಿಂದಲೇ ಉಚಿತಗಳ ವಿರುದ್ಧ ಕೂಗುಮಾರಿಗಳಂತೆ ಹುಯಿಲೆಬ್ಬಿಸುತ್ತಿರುತ್ತಾರೆ. ನೋಟು ರದ್ಧತಿ, ಜಿಎಸ್‌ಟಿ, ಕೋವಿಡ್ ಲಾಕ್‌ಡೌನ್ ಆಘಾತ, ಆರ್ಥಿಕ ಕುಸಿತ, ನಿರುದ್ಯೋಗ, ಹಣದುಬ್ಬರ ಇವೆಲ್ಲವೂ ಹೆಚ್ಚಾಗಿ ಕಾಡುವುದು ತಳಮಟ್ಟದ ಶ್ರಮಿಕ ವರ್ಗಗಳನ್ನೇ ಹೊರತು ಹಿತವಲಯದ ಸುಖಾಸೀನ ಜನತೆಯನ್ನಲ್ಲ.
ಸಂಪತ್ತಿನ ಕ್ರೋಢೀಕರಣ ಮತ್ತು ವಿತರಣೆ
ಸಂಪತ್ತು ಸಂಪನ್ಮೂಲಗಳ ಸಮಾನ ವಿತರಣೆ, ಸಮರ್ಪಕವಾದ ಭೂ ಹಂಚಿಕೆ, ಸುಸ್ಥಿರ ಉದ್ಯೋಗಾವಕಾಶಗಳು, ಸುಭದ್ರ ಜೀವನೋಪಾಯದ ಮಾರ್ಗಗಳು, ಉತ್ಪಾದನೆ, ಉತ್ಪಾದಕತೆ ಮತ್ತು ಉತ್ಪಾದಕೀಯತೆಗೆ ಸೂಕ್ತವಾದ ಬೆಲೆ, ಉತ್ಪಾದಿತ ಸರಕುಗಳಿಂದ ಬರುವ ಲಾಭದ ಸಮಾನ ಹಂಚಿಕೆ, ದುಡಿಮೆಗೆ ತಕ್ಕಂತಹ ಕೂಲಿ ಹಾಗೂ ಮೇಲುಕೀಳುಗಳಿಲ್ಲದ ಸಮಾನ ಸಾಮಾಜಿಕ ಸ್ಥಾನಮಾನಗಳು ಇವೆಲ್ಲವೂ ಸಹ ಬಂಡವಾಳಶಾಹಿ ಅರ್ಥಶಾಸ್ತ್ರದ ಪರಿಭಾಷೆಯಲ್ಲಿ ಯುಟೋಪಿಯನ್ ಅಥವಾ ಕಾಲ್ಪನಿಕ ಎನಿಸಿಕೊಳ್ಳುತ್ತವೆ. ಆದರೆ ಭಾರತದಂತಹ ಜಾತಿ ಶ್ರೇಣೀಕೃತ ಸಮಾಜದಲ್ಲಿ, ಮನುಷ್ಯ ಸಮಾಜವನ್ನು ಶೋಷಣೆ ಮುಕ್ತವಾಗಿ ಮಾಡಬೇಕೆಂದರೆ, ಬಡವ-ಶ್ರೀಮಂತರ ನಡುವಿನ ಕಂದರವನ್ನು ಹೋಗಲಾಡಿಸಬೇಕಾದರೆ, ಮೇಲು-ಕೀಳು, ಅಬಲೆ-ಸಬಲೆಯ ಭಾವನೆಗಳನ್ನು ತೊಡೆದುಹಾಕಬೇಕಾದರೆ, ಸಮ ಸಮಾಜ ಎಂಬ ಉದಾತ್ತ ಕನಸನ್ನು ಸಾಕಾರಗೊಳಿಸಬೇಕಾದರೆ ಈ ಮೌಲ್ಯಯುತ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.
ಬಡತನ-ಸಿರಿತನವನ್ನು ಕರ್ಮಫಲದ ಚೌಕಟ್ಟಿನೊಳಗೇ ವ್ಯಾಖ್ಯಾನಿಸುವ ಸಾಂಪ್ರದಾಯಿಕ ಸಮಾಜದಲ್ಲಿ, ಸಮಕಾಲೀನ ಸಂದರ್ಭದ ತರತಮಗಳನ್ನೂ ಸಹ ಜಾತಿ-ಮತಧರ್ಮಗಳ ನೆಲೆಯಲ್ಲೇ ವ್ಯಾಖ್ಯಾನಿಸುವುದರಿಂದ ಭಾರತದಲ್ಲಿ ಬಡತನ ಅಥವಾ ಕಡುಬಡತನ ಎನ್ನುವುದು ಶ್ರೀಮಂತಿಕೆಯಷ್ಟೇ ಸ್ವಾಭಾವಿಕತೆಯನ್ನು ಪಡೆದುಕೊಳ್ಳುತ್ತದೆ. ಹಾಗಾಗಿಯೇ ಶ್ರೀಮಂತ ಉದ್ಯಮಿಗಳಿಗೆ ಬ್ಯಾಂಕ್ ಸಾಲಗಳ ಮನ್ನಾ ಮಾಡುವ ಮೂಲಕ, ಕಾರ್ಪೋರೇಟ್ ತೆರಿಗೆ ವಿನಾಯಿತಿಗಳ ಮೂಲಕ, ತೆರಿಗೆ ರಜೆ ಒದಗಿಸುವುದರ ಮೂಲಕ ಸರ್ಕಾರಗಳು ನೀಡುವ ʼ ಉಚಿತಗಳು ʼ ಸಾರ್ವಜನಿಕ ಚರ್ಚೆಯ ವಿಷಯ ಆಗುವುದೇ ಇಲ್ಲ. ಭಾರತದಲ್ಲಿ ಸಂಪತ್ತಿನ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆಯನ್ನೂ 2016ರಿಂದ ರದ್ದುಗೊಳಿಸಲಾಗಿದೆ. ವಿಪರ್ಯಾಸವೆಂದರೆ ದಾರಿದ್ರ್ಯತೆಯ ಕೂಪಕ್ಕೆ ತಳ್ಳಲ್ಪಟ್ಟವರೂ ಸಹ ಯಾವುದೋ ಒಂದು ರೀತಿಯ ತೆರಿಗೆ ಪಾವತಿಸುತ್ತಿದ್ದರೆ, ಶ್ರೀಮಂತ ಉದ್ಯಮಿಗಳ ಕ್ರೋಢೀಕೃತ ಸಂಪತ್ತು ಸಂಪೂರ್ಣ ತೆರಿಗೆ ವಿನಾಯಿತಿ ಪಡೆದಿರುತ್ತದೆ. ಇದು ಬಂಡವಾಳಶಾಹಿ ಆರ್ಥಿಕತೆಯ ಒಂದು ಕ್ರೂರ ಸ್ವರೂಪ.
ಇಂತಹ ಒಂದು ಅಸಮಾನತೆಯ ಲೋಕದಲ್ಲಿ ಜೀವನೋಪಾಯದ ಸುಗಮ ಮಾರ್ಗ ಕಾಣದೆ ಬಡತನದ ಕೂಪಕ್ಕೆ ತಳ್ಳಲ್ಪಡಬಹುದಾದ ಜನಸ್ತೋಮಕ್ಕೆ ಕೆಲವು ಉಚಿತಗಳನ್ನು ನೀಡುವುದರಲ್ಲಿ ಯಾವ ಅಪರಾಧವನ್ನು ಕಾಣಲು ಸಾಧ್ಯ ? ಈ ಜನಕಲ್ಯಾಣ ಯೋಜನೆಗಳ ಮತ್ತು ಉಚಿತ ಸವಲತ್ತುಗಳ ಫಲಾನುಭವಿಗಳನ್ನು ಗುರುತಿಸುವಲ್ಲಿ ಸರ್ಕಾರಗಳು ವೈಜ್ಞಾನಿಕ ಸಮೀಕ್ಷೆ ನಡೆಸಿದಲ್ಲಿ, ಇವರ ನಡುವೆ ನುಸುಳಿರುವ ಅಸಂಖ್ಯಾತ ಶ್ರೀಮಂತರನ್ನೂ ಗುರುತಿಸಲು ಸಾಧ್ಯ. ಈ ರೀತಿಯ ತರ್ಕಬದ್ಧ ಆಗ್ರಹಗಳನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಸರ್ಕಾರದ ಬೊಕ್ಕಸ ಬರಿದಾಗುತ್ತದೆ, ತೆರಿಗೆದಾರರ ಹಣ ಪೋಲಾಗುತ್ತಿದೆ ಎಂದು ಹುಯಿಲೆಬ್ಬಿಸುವ ಹಿತವಲಯದ ಬೌದ್ಧಿಕ ವರ್ಗಗಳು ತಮ್ಮ ನಡುವೆಯೇ ಇರುವ ಕಪ್ಪುಕುರಿಗಳನ್ನು ಗುರುತಿಸುವ ಪ್ರಯತ್ನಗಳನ್ನು ಮಾಡಿದರೆ ಸಾರ್ಥಕವಾದೀತು. ಆಡಳಿತಾರೂಢ ಸರ್ಕಾರಗಳಿಗೆ ಮತ್ತು ಅಧಿಕಾರ ಬಯಸುವ ರಾಜಕೀಯ ಪಕ್ಷಗಳಿಗೆ ಈ ಉಚಿತಗಳು ಮತಗಳಿಕೆಯ ಅಸ್ತ್ರವಾಗಿಯೇ ಕಾಣುತ್ತವೆ. ಆದರೆ ಸಮಾಜದ ನಾಡಿಮಿಡಿತವನ್ನು ಗ್ರಹಿಸುವ ಯಾವುದೇ ವ್ಯಕ್ತಿ ಅಥವಾ ಗುಂಪು ತಳಮಟ್ಟದ ವಾಸ್ತವಗಳನ್ನು ಅರಿತರೆ ಈ ಉಚಿತಗಳು ಅಸಂಖ್ಯಾತ ಬಡ ಕುಟುಂಬಗಳಿಗೆ ಸಂಜೀವಿನಿಯಾಗುತ್ತದೆ ಎಂಬ ಕಟು ಸತ್ಯವನ್ನೂ ಅರಿಯಲು ಸಾಧ್ಯವಾದೀತು. ಬಂಡವಾಳಶಾಹಿ ವ್ಯವಸ್ಥೆಗೆ ಈ ವಾಸ್ತವದ ಅರಿವು ಇರುವುದರಿಂದಲೇ ಕಠೋರ ಮಾರುಕಟ್ಟೆ ಶೋಷಣೆಯ ನಡುವೆಯೂ ಉಚಿತ ಸೌಲಭ್ಯಗಳನ್ನು ಹಂಚಲು ಸರ್ಕಾರಗಳಿಗೆ ಅವಕಾಶ ನೀಡುತ್ತದೆ.
ಕೊನೆಯ ಹನಿ :
ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಉಚಿತಗಳನ್ನು ವಿರೋಧಿಸುವ ಬೌದ್ಧಿಕ ವರ್ಗ ತಮ್ಮ ದೃಷ್ಟಿಯನ್ನು ಕೊಂಚ ಹೊರಳಿಸಿ ಕಾರ್ಪೋರೇಟ್ ಪಾಲಾಗುತ್ತಿರುವ ದೇಶದ ಸಾರ್ವಜನಿಕ ಸಂಪತ್ತಿನ ರಕ್ಷಣೆಗಾಗಿ ಮುಂದಾದರೆ ಭವಿಷ್ಯ ಭಾರತದ ಬದುಕು ಹಸನಾಗಬಹುದು.