ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವ 5 ಗ್ಯಾರಂಟಿಗಳಲ್ಲಿ ಬಹುತೇಕ ಗ್ಯಾರಂಟಿಗಳ ಬಗ್ಗೆ ಸ್ಪಷ್ಟತೆ ಇದೆ. ಪ್ರಮುಖವಾಗಿ ಕಾಂಗ್ರೆಸ್‌ಗೆ ಮತಗಳನ್ನು ತಂದುಕೊಟ್ಟಿರುವ ಗೃಹಲಕ್ಷ್ಮೀ ಯೋಜನೆಯಲ್ಲಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ ಮನೆಯ ಯಜಮಾನಿ ಯಾರು ಅನ್ನೋ ಬಗ್ಗೆಯೇ ಗೊಂದಲ ಶುರುವಾಗಿದೆ. ಮನೆಯಲ್ಲಿ ಅತ್ತೆ, ಮಾವ, ಮಗ ಸೊಸೆ ಇದ್ದರೆ ಮನೆಯ ಯಜಮಾನಿಗೆ 2 ಸಾವಿರ ಅಂದರೆ ಅತ್ತೆಯೋ..? ಸೊಸೆಯೋ..? ಅನ್ನೋ ಬಗ್ಗೆ ಸ್ಪಷ್ಟನೆ ಸಿಗಬೇಕಿದೆ. ಒಂದು ವೇಳೆ ವಯಸ್ಸಾದ ಮಹಿಳೆ ಮನೆಯಲ್ಲಿದ್ದು, ಮನೆಯ ವ್ಯವಹಾರ ಮಗ, ಸೊಸೆ ಕೈಲಿದ್ದಾಗಲೂ ಸರ್ಕಾರದ 2 ಸಾವಿರ ರೂಪಾಯಿ ಹಣ ಅತ್ತೆ ಕೈಗೆ ಹೋಗುತ್ತಾ ಅನ್ನೋ ಆತಂಕವೂ ಎಷ್ಟೋ ಮಹಿಳೆಯರಲ್ಲಿದೆ. ಆದರೆ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಸಣ್ಣದೊಂದು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.
ಅತ್ತೆ ಕೈ ಸೇರುತ್ತೆ ಕಾಂಗ್ರೆಸ್ ಸರ್ಕಾರದ 2 ಸಾವಿರ..!
ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ಯೋಜನೆಯಲ್ಲಿ ಹಣ ನೀಡುವುದು ಅತ್ತೆಗೆ ಮಾತ್ರ ಎಂದಿದ್ದಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್. ಬೆಳಗಾವಿಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅತ್ತೆ, ಸೊಸೆ ಇಬ್ಬರ ನಡುವೆ ಯಾರಿಗೆ ಯೋಜನೆ ಅನ್ವಯ ಎನ್ನುವ ಪ್ರಶ್ನೆಗೆ ನಮ್ಮ ಸಂಪ್ರದಾಯದಲ್ಲಿ ಮನೆ ಒಡತಿ ಅಂದರೆ ಅತ್ತೆ ಬರುತ್ತಾರೆ. ಹೀಗಾಗಿ ಗೃಹಲಕ್ಷ್ಮೀ ಯೋಜನೆ ಅತ್ತೆಗೆ ನೀಡುತ್ತೇವೆ. ಅತ್ತೆ ಪ್ರೀತಿಯಿಂದ ಬೇಕಾದರೇ ಸೊಸೆಗೆ ನೀಡಲಿ ಎಂದಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತಿಗೆ ಧನಿಗೂಡಿಸಿದ್ದಾರೆ ಸಚಿವ ಸತೀಶ್ ಜಾರಕಿಹೊಳಿ. ಅತ್ತೆಗೆ ಯೋಜನೆ ಅನ್ವಯ ಆಗಲಿದೆ. ನಾಳೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಯಾವ ರೀತಿ ಯೋಜನೆ ಅನುಷ್ಠಾನಕ್ಕೆ ತರಬೇಕು ಅಂತಾ ಮಾಹಿತಿ ಪಡೆಯುತ್ತೇನೆ ಎಂದಿದ್ದಾರೆ. ಒಟ್ಟಾರೆ ಸಚಿವರ ಮಾತನ್ನು ಒಂದು ಮಾತಿನಲ್ಲೇ ಹೇಳುವುದಾದರೆ ಅವಿಭಕ್ತ ಕುಟುಂಬದಲ್ಲಿ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಅತ್ತೆಗೆ ಸಿಗಲಿದೆ ಎಂದಿದ್ದಾರೆ.
ಅವಿಭಕ್ತ ಕುಟುಂಬ ಪದ್ದತಿಗೆ ಎದುರಾಗಿದೆ ಆತಂಕ..!
ಭಾರತದಲ್ಲಿ ಕುಟುಂಬ ವ್ಯವಸ್ಥೆಯಲ್ಲಿ ಬದುಕುವುದು ಸರ್ವೇ ಸಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ಒಡೆದು ವಿಭಕ್ತ ಕುಟುಂಬಗಳಾಗಿ ಬದಲಾಗುತ್ತಿವೆ ಎನ್ನುವ ವರದಿಗಳಿವೆ. ಇದೀಗ ಕಾಂಗ್ರೆಸ್ ಸರ್ಕಾರದ ನಿಯಮಗಳಿಂದ ಮುಂದಿನ ದಿನಗಳಲ್ಲಿ ಅವಿಭಕ್ತ ಕುಟುಂಬ ಪದ್ದತಿಯೇ ಕಣ್ಮರೆ ಆಗುವ ಸಾಧ್ಯತೆ ಇದೆ. ಸರ್ಕಾರ ಕೊಡುವ 2 ಸಾವಿರ ಹಣ ಕೈತಪ್ಪುವ ಭೀತಿಯಿಂದ ಒಂದೇ ಮನೆಯಲ್ಲಿ ಗೋಡೆ ಹಾಕುವ ಸನ್ನಿವೇಶ ಸೃಷ್ಟಿಯಾಗುವ ಸಾಧ್ಯತೆಯಿದೆ. ಒಂದು ವೇಳೆ ಗಂಡ ಸತ್ತ ಬಳಿಕ ಮಗ-ಸೊಸೆ ಜೊತೆಗೆ ಅತ್ತೆ ವಾಸ ಮಾಡುತ್ತಿದ್ದರೆ, ಇನ್ಮುಂದೆ ಗೃಹಲಕ್ಷ್ಮೀ ಯೋಜನೆಯಲ್ಲಿ ಸರ್ಕಾರ ಕೊಡುವ 2 ಸಾವಿರ ರೂಪಾಯಿ ಹಣ ಅತ್ತೆ ಸೊಸೆ ನಡುವೆ ಕಂದಕ ಉಂಟು ಮಾಡುವ ಸಾಧ್ಯತೆಯಿದೆ. ಒಂದು ವೇಳೆ ಅತ್ತೆ ಬಂದ ಹಣವನ್ನು ಮಗ ಸೊಸೆಗೆ ನೀಡದೆ ನನ್ನ ಖರ್ಚಿಗೆ ಬೇಕು ಎಂದು ಇಟ್ಟುಕೊಂಡರೆ ಕುಟುಂಬ ಒಡೆದು ಹೋಗುತ್ತದೆ. ಸರ್ಕಾರದ ನಿರ್ಧಾರ ಉತ್ತಮವೇ ಆಗಿದ್ದರೂ ಸರ್ಕಾರ ರೂಪಿಸುವ ನಿಯಮಗಳು ಸಮಾಜದ ಮೇಲೆ ಸಣ್ಣ ಪ್ರಮಾಣದ ದುಷ್ಪರಿಣಾಮ ಬೀರುವುದನ್ನು ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ..
ಮಹಿಳೆಯರ ಮತಗಳು ವಿಭಜನೆ ಆಗುವ ಭಯ..!
ಮಹಿಳೆಯರಿಗೆ 2 ಸಾವಿರ ಎಂದು ಘೋಷಣೆ ಮಾಡಿದ್ದಾರೆ. ಮನೆಯ ಯಜಮಾನಿಗೆ 2 ಸಾವಿರ ಎಂದಿದ್ದಾರೆ. ಆದರೆ ಇದೀಗ ಅತ್ತೆಗೆ ಹಣ ಕೊಡಲಾಗುತ್ತೆ ಎನ್ನುವ ಸುಳಿವು ಸಿಕ್ಕಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಮಾರಕ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹಿರಿಯರು ಮನೆ ಯಜಮಾನಿ ಎನ್ನುವುದು ಸರಿಯಷ್ಟೆ. ಆದರೆ ಮನೆಯಲ್ಲಿ ವಯಸ್ಸಾದ ವ್ಯಕ್ತಿಗೆ ಹಣ ಕೊಟ್ಟರೆ ಮನೆ ಮುನ್ನಡೆಸುವ ಮಹಿಳೆಯರು ಸಿಟ್ಟಿಗೇಳುವ ಸಾಧ್ಯತೆ ಇರುತ್ತದೆ, ಇನ್ನು ಒಂದು ಕುಟುಂಬದಲ್ಲಿ ಒಬ್ಬರಿಗೆ ಎಂದು ಈಗಾಗಲೇ ಹೇಳಿದಂತೆ ಮನೆಯನ್ನು ಮುನ್ನಡೆಸುವ ಜವಾಬ್ದಾರಿ ಯಾರದ್ದು ಎನ್ನುವುದನ್ನು ನೋಡಿಕೊಂಡು ಮಾಸಿಕ 2000 ನೀಡಿದರೆ ಒಳಿತು. ಇಲ್ಲದಿದ್ದರೆ ಮುಂದಿನ ಲೋಕಸಭೆಯಲ್ಲಿ ಮಹಿಳೆಯರ ಮತಗಳು ಇಬ್ಭಾಗ ಆಗಲಿವೆ. ಈ 5 ಗ್ಯಾರಂಟಿಗಳ ಬಗ್ಗೆ ಎಚ್ಚರಿಕೆ ಹೆಜ್ಜೆ ಇಡದಿದ್ದರೆ ಮತಗಳು ವಿಭಜನೆ ಆಗುವುದು ಶತಸಿದ್ಧ.
ಎಲ್ಲಾ ಸಚಿವರ ಜೊತೆಗೆ ಸಿಎಂ ಮಹತ್ವದ ಸಭೆ
ಇಂದು ಎಲ್ಲಾ ಸಚಿವರ ಸಭೆ ಕರೆದಿರುವ ಸಿದ್ದರಾಮಯ್ಯ, ಐದು ಯೋಜನೆಗಳನ್ನು ಹೇಗೆ ಜಾರಿ ಮಾಡಬೇಕು, ಅಧಿಕಾರಿಗಳು ಕೊಟ್ಟಿರುವ ಮಾಹಿತಿ ಏನು..? ಸರ್ಕಾರದ ಬೊಕ್ಕಸದಿಂದ ಎಷ್ಟು ಕೋಟಿ ಹರಿದು ಹೋಗುತ್ತದೆ. ಆ ಹಣವನ್ನು ಯಾವ ಯಾವ ಇಲಾಖೆಗಳಿಂದ ಸಂಗ್ರಹ ಮಾಡ್ಬೇಕು ಅನ್ನೋದ್ರ ಜೊತೆಗೆ ಕಂಪ್ಲೀಟ್ ಬ್ಲ್ಯೂ ಪ್ರಿಂಟ್ ಸಿದ್ಧ ಮಾಡಿದ್ದಾರೆ. ಅದನ್ನು ಸಚಿವರಿಗೆ ಮನವರಿಕೆ ಮಾಡಿ ಗುರುವಾರದ ಕ್ಯಾಬಿನೆಟ್‌ನಲ್ಲಿ ಅಧಿಕೃತವಾಗಿ ಜಾರಿ ಮಾಡಲಿದ್ದಾರೆ ಎನ್ನಲಾಗಿದೆ.