ಮೇ 13 ರಂದು ಮತ ಎಣಿಕೆ ಮುಗಿದ ಕೂಡಲೇ ಬಿಜೆಪಿ ಸರ್ಕಾರ (BJP) ಅಸ್ತಿತ್ವ ಕಳೆದುಕೊಂಡಿತ್ತು. ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ (Basavaraja Bommai) ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಕೆ ಮಾಡಿದ್ದರು. ಆದರೆ ನಾನು ಜನಸಾಮಾನ್ಯರ ಸಿಎಂ, ಕಾಮನ್ ಮ್ಯಾನ್ ಸಿಎಂ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದ ಬಸವರಾಜ್ ಬೊಮ್ಮಾಯಿ (Basavaraja Bommai) ಜನಸಾಮಾನ್ಯರ ತೆರಿಗೆ ಹಣವನ್ನು ದುಂದುವೆಚ್ಚ ಮಾಡಿರುವುದು ಬಯಲಾಗಿದೆ. ಕೇವಲ ತಿಂಗಳ ಅವಧಿಯಲ್ಲಿ ಪ್ರಚಾರಕ್ಕಾಗಿ 44 ಕೋಟಿ ರೂಪಾಯಿ ಹಣವನ್ನು ವೆಚ್ಚ ಮಾಡಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯ ಅರ್ಜಿಗೆ ರಾಜ್ಯ ಸರ್ಕಾರವೇ ಅಧಿಕೃತವಾಗಿ ಕೊಟ್ಟಿರುವ ಮಾಹಿತಿ ಜನಸಾಮಾನ್ಯರ ಸಿಎಂ ಜಾಹೀರಾತು ಪ್ರೇಮವನ್ನು ಬಯಲು ಮಾಡಿದೆ.
ಬಸವರಾಜ ಬೊಮ್ಮಾಯಿ 4 ತಿಂಗಳ ಜಾಹೀರಾತು ಲೆಕ್ಕ
ಬಸವರಾಜ ಬೊಮ್ಮಾಯಿ ಹಾಗು ಬಿಎಸ್ ಯಡಿಯೂರಪ್ಪ ಸರ್ಕಾರ ಇಡೀ ಮೂರೂವರೆ ವರ್ಷದಲ್ಲಿ ಎಷ್ಟು ಜಾಹೀರಾತು ನೀಡಿದೆ ಎನ್ನುವ ಸಂಪೂರ್ಣ ಲೆಕ್ಕ ಇಲ್ಲದೆ ಇದ್ದರೂ ಕಳೆದ ನಾಲ್ಕು ತಿಂಗಳಲ್ಲಿ ಜಾಹಿರಾತಿಗೆ ಎಷ್ಟು ವೆಚ್ಚ ಮಾಡಿದೆ ಅನ್ನೋ ಮಾಹಿತಿ ಪ್ರತಿಧ್ವನಿಗೆ ಲಭ್ಯವಾಗಿದೆ. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸರ್ಕಾರವೇ ಕೊಟ್ಟಿರುವ ಮಾಹಿತಿಯಂತೆ ಡಿಸೆಂಬರ್ 1, 2022ರಿಂದ ಮಾರ್ಚ್ 29, 2023ರ ಅವಧಿಯಲ್ಲಿ ಬರೋಬ್ಬರಿ 44 ಕೋಟಿ 42 ಲಕ್ಷ ರೂಪಾಯಿ ಹಣವನ್ನು ಜಾಹೀರಾತಿಗೆ ವಿನಿಯೋಗಿಸಿದೆ. ಅದರಲ್ಲಿ ಪತ್ರಿಕಾ ಮಾಧ್ಯಮಕ್ಕೆ 27 ಕೋಟಿ 46 ಲಕ್ಷ ರೂಪಾಯಿ ಹಾಗು ಇನ್ನುಳಿದ 16 ಕೋಟಿ 96 ಲಕ್ಷ ಹಣ ದೃಶ್ಯ ಮಾಧ್ಯಮಗಳಿಗೆ ಸೇರಿಕೊಂಡಿದೆ. ಮಾಧ್ಯಮಗಳಿಗೆ ಜಾಹೀರಾತು ನೀಡುವುದು ಅಪರಾಧವಲ್ಲ, ಸರ್ಕಾರ ತನ್ನ ದುರಾಡಳಿತವನ್ನು ಮುಚ್ಚಿಟ್ಟು ಜನರಿಗೆ ಉತ್ತಮ ರೀತಿಯಲ್ಲಿ ತೋರಿಸುವ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿರುವುದು ಅಕ್ಷಮ್ಯ ಅಪರಾಧ ಎನ್ನಲಾಗ್ತಿದೆ.
ಮಾಧ್ಯಮಗಳು ಪೇಯ್ಡ್ ನ್ಯೂಸ್ ಮಾಡಿದ್ದು ಸರೀನಾ..?
ಮಾಧ್ಯಮಗಳಲ್ಲಿ ಜಾಹೀರಾತನ್ನು ಜಾಹೀರಾತು ಅಂತಾನೇ ತೋರಿಸಬೇಕು. ಒಂದು ವೇಳೆ ಪ್ರಾಯೋಜಿತ ಕಾರ್ಯಕ್ರಮ ಆಗಿದ್ದರೆ, ಜಾಹೀರಾತು ಅಥವಾ ಪ್ರಾಯೋಜಿತ ಕಾರ್ಯಕ್ರಮ ಎಂದು ಪ್ರದರ್ಶನ ಮಾಡಬೇಕು ಎನ್ನುವ ನಿಯಮವಿದೆ. ಆದರೆ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರ ಬಳಿಕ ಕೋಟಿ ಕೋಟಿ ಜಾಹೀರಾತು ಪಡೆದು, ಹೋದಲ್ಲಿ ಬಂದಲ್ಲಿ ಎಲ್ಲಾ ಕಡೆಯಲ್ಲೂ ಬಸವರಾಜ ಬೊಮ್ಮಾಯಿ ಅವರನ್ನೇ ತೋರಿಸುತ್ತಾ, ವೀಕ್ಷಕರಿಗೂ ವಂಚಿಸಿ ಪತ್ರಿಕಾ ಧರ್ಮವನ್ನು ಮಣ್ಣು ಪಾಲು ಮಾಡಿದ್ದಾರೆ. ಕಾಸಿಗಾಗಿ ಸುದ್ದಿ ಅನ್ನೋದು ಈ ಹಿಂದೆ ಭಾರೀ ಚರ್ಚೆಯನ್ನ ಹುಟ್ಟು ಹಾಕಿತ್ತು. ಈ ಹಿಂದೆ ಕಾಸಿಗಾಗಿ ಸುದ್ದಿ ಪ್ರಸಾರ ಮಾಡುವುದನ್ನು ತಡೆಯುವ ಉದ್ದೇಶದಿಂದಲೇ ಮಾಧ್ಯಮ ಪ್ರಮಾಣೀಕರಣ ಮತ್ತು ನಿಯಂತ್ರಣ ಸಮಿತಿ ಅಸ್ತಿತ್ವಕ್ಕೆ ಬಂದಿತ್ತು. ಸರ್ಕಾರದ ಖಜಾನೆಯಿಂದಲೇ ಹಣದ ಹೊಳೆ ಹರಿಸಿ ಪ್ರಚಾರ ತೆಗೆದುಕೊಂಡಿರುವ ಜನಸಾಮಾನ್ಯರಿಗೆ ಮಾಡಿದ ದ್ರೋಹ ಎನ್ನಬಹುದು.
ಬಿಜೆಪಿಯಲ್ಲಿ ಯಥಾ ರಾಜ ತಥಾ ಪ್ರಜಾ ಎನ್ನುವಂತಾಗಿದೆ..
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಚಾರ ಪ್ರಿಯರಾಗಿದ್ದು, ಪ್ರವಾಸ ಮತ್ತು ಪ್ರಚಾರಕ್ಕೆ ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತದೆ. ಕಳೆದ ವರ್ಷ 2022ರ ಡಿಸೆಂಬರ್ ವರದಿಯ ಪ್ರಕಾರ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ₹6491 ಕೋಟಿ ರೂಪಾಯಿ ಹಣವನ್ನು ಕೇವಲ ಜಾಹೀರಾತು ನೀಡುವ ಉದ್ದೇಶಕ್ಕೆ ಬಳಸಲಾಗಿದೆ ಎನ್ನುವ ವರದಿ ಬಂದಿತ್ತು. ಅದರಲ್ಲಿ ₹3260.79 ಕೋಟಿ ರೂಪಾಯಿ ಹಣವನ್ನು ದೃಶ್ಯ ಮಾಧ್ಯಮಗಳಿಗೂ ₹3230.70 ಕೋಟಿ ಹಣವನ್ನು ಪತ್ರಿಕಾ ಮಾಧ್ಯಮಗಳಿಗೂ ನೀಡಲಾಗಿದೆ ಎನ್ನುವುದು ವರದಿಯಲ್ಲಿ ಉಲ್ಲೇಖವಾಗಿದ್ದ ಅಂಶ. ಈ ಮಾಹಿತಿಯನ್ನು ಸ್ವತಃ ಕೇಂದ್ರ ಸಚಿವ ಅನುರಾಗ್ ಠಾಕೂರ್ ಲೋಕಸಭೆಗೆ ಅಧಿಕೃತ ಮಾಹಿತಿ ನೀಡಿದ್ದರು. ಇದೀಗ ಕೇಂದ್ರದ ಹಾದಿಯಲ್ಲೇ ಸಾಗಿರುವ ಬಸವರಾಜ ಬೊಮ್ಮಾಯಿ ಕೇವಲ 4 ತಿಂಗಳಲ್ಲಿ ₹44 ಕೋಟಿ ಹಣವನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಮೂಲಕ ಜನಸಾಮಾನ್ಯರ ಸಿಎಂ ಎನ್ನುವುದಕ್ಕೆ ಅಪವಾದ ಎನ್ನುವಂತೆ ಮಾಡಿದ್ದಾರೆ ಎನ್ನಬಹುದು.
ಕೃಷ್ಣಮಣಿ