ಗದಗ : ಸರ್ಕಾರಿ ಶಾಲೆಯ ಕಿಟಕಿ ಗಾಜುಗಳನ್ನು ಒಡೆದು ಕಿಡಿಗೇಡಿಗಳು ದುಷ್ಕೃತ್ಯ ಮೆರೆದ ಘಟನೆಯು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬಿದರಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ದುಷ್ಕೃತ್ಯ ಎಸಗಲಾಗಿದೆ.

ಪ್ರಸ್ತುತ ಬೇಸಿಗೆ ರಜೆ ನಡೆಯುತ್ತಿದ್ದು ಇದರ ಲಾಭ ಪಡೆದ ದುಷ್ಕರ್ಮಿಗಳು ಶಾಲಾ ಆವರಣದಲ್ಲಿದ್ದ ಹೂವಿನ ಕುಂಡಗಳನ್ನು ಒಡೆದು ಹಾಕಿದ್ದಾರೆ. ಮಾತ್ರವಲ್ಲದೇ ಕಲ್ಲಿನಿಂದ ಎಲ್ಲಾ ಕೊಠಡಿಗಳ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ಇದು ಸಾಲದು ಎಂಬಂತೆ ಶಾಲೆಯ ಮುಂಭಾಗದಲ್ಲಿ ಜೋಡಿಸಿ ಇಡಲಾಗಿದ್ದ ಟೈಲ್ಸ್ನ್ನೂ ಒಡೆದು ಹಾಕಿದ್ದಾರೆ.

ಶಾಲಾ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ನಿರ್ಮಾಣ ಮಾಡಿದ್ದ ಕೈ ತೋಟಕ್ಕೂ ಕಿಡಿಗೇಡಿಗಳು ಹಾನಿಯುಂಟು ಮಾಡಿದ್ದಾರೆ , ಸಂಪೂರ್ಣ ಶಾಲಾ ಆವರಣವನ್ನೇ ದುಷ್ಕರ್ಮಿಗಳು ಹಾಳುಗೆಡವಿದ್ದಾರೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.