• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಪ್ರಜಾಪ್ರಭುತ್ವದ ಪಾಠಗಳೂ ಹೊಸ ಆಳ್ವಿಕೆಯ ಆದ್ಯತೆಗಳೂ..ಮೇ 10ರ ಜನಾದೇಶವನ್ನು ಬಹಳ ಜಾಗ್ರತೆಯಿಂದಲೇ ಹೊಸ ಸರ್ಕಾರ ಪಾಲಿಸಬೇಕಿದೆ

ನಾ ದಿವಾಕರ by ನಾ ದಿವಾಕರ
May 16, 2023
in ಅಂಕಣ
0
ಪ್ರಜಾಪ್ರಭುತ್ವದ ಪಾಠಗಳೂ ಹೊಸ ಆಳ್ವಿಕೆಯ ಆದ್ಯತೆಗಳೂ..ಮೇ 10ರ ಜನಾದೇಶವನ್ನು ಬಹಳ ಜಾಗ್ರತೆಯಿಂದಲೇ ಹೊಸ ಸರ್ಕಾರ ಪಾಲಿಸಬೇಕಿದೆ
Share on WhatsAppShare on FacebookShare on Telegram

(“ ಪ್ರಜಾಪ್ರಭುತ್ವದ ಪಾಠಗಳೂ ಶ್ರೀಸಾಮಾನ್ಯನ ಆಶಯಗಳೂ “ ಲೇಖನದ ಮುಂದುವರೆದ ಭಾಗ)

ADVERTISEMENT

ನಾ ದಿವಾಕರ

ಮೇ 10ರ ಚುನಾವಣೆಗಳಲ್ಲಿ ಕರ್ನಾಟಕದ ಜನತೆ ತಿರಸ್ಕರಿಸಿರುವುದು ಕೇವಲ ಬಿಜೆಪಿಯ ದುರಾಡಳಿತವನ್ನು ಮಾತ್ರವಲ್ಲ. ರಾಜ್ಯ ರಾಜಕಾರಣದಲ್ಲಿ, ಸಾಮಾಜಿಕ-ಸಾಂಸ್ಕೃತಿಕ ಜೀವನದಲ್ಲಿ ಸಾಂಸ್ಥಿಕ ರೂಪದಲ್ಲೇ ಬೇರೂರಿರುವ ದ್ವೇಷಾಸೂಯೆಗಳ ವಿರುದ್ಧ ಕರ್ನಾಟಕದ ಮತದಾರರು ತಮ್ಮ ತೀರ್ಪು ನೀಡಿದ್ದಾರೆ. ಆಡಳಿತ ವ್ಯವಸ್ಥೆಯ ವ್ಯಾಪಕ ಭ್ರಷ್ಟಾಚಾರ ಮತ್ತು ರಾಜಕೀಯ ವಲಯದಲ್ಲಿದ್ದ ಅತಿರೇಕಕ್ಕೆ ಹೋಗಿದ್ದ ನಿರಂಕುಶಾಧಿಕಾರದ ಲಕ್ಷಣಗಳ ವಿರುದ್ಧ ಜನರು ಮತ ಚಲಾಯಿಸಿದ್ದಾರೆ. ಮೀಸಲಾತಿಯೇ ಮುಂತಾದ ಸಾಂವಿಧಾನಿಕ ಸೌಲಭ್ಯಗಳನ್ನು ಶೋಷಿತ ಹಾಗೂ ಅವಕಾಶವಂಚಿತ ಸಮುದಾಯಗಳ ಹಕ್ಕು ಎಂದು ಭಾವಿಸದೆ ಅದನ್ನು ಪ್ರಲೋಭನೆಯ ಸಾಧನವಾಗಿ ಬಳಸುವ ಅಸಾಂವಿಧಾನಿಕ ಪ್ರವೃತ್ತಿಯ ವಿರುದ್ಧ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ನಿತ್ಯ ಜೀವನ ಹಾಗೂ ಜೀವನೋಪಾಯದ ಹಾದಿಯಲ್ಲಿ ಯಾವುದೇ ರೀತಿಯಲ್ಲೂ ಪ್ರಸ್ತುತವಾಗದ ಧಾರ್ಮಿಕ ನಂಬಿಕೆ-ಆಚರಣೆಗಳು ಹಾಗೂ ಅನುಸರಣೆಗಳನ್ನು ಬಳಸಿಕೊಂಡು ತಳಮಟ್ಟದ ಸಮಾಜವನ್ನು ಅಡ್ಡಡ್ಡಲಾಗಿ ವಿಭಜಿಸುವ ಸ್ವಾರ್ಥ ರಾಜಕಾರಣದ ವಿರುದ್ಧ ರಾಜ್ಯದ ಜನತೆ ಮತ ಚಲಾಯಿಸಿದ್ದಾರೆ. ಮತದಾರರ ಹಾಗೂ ಸಾಮಾನ್ಯ ಜನತೆಯ ಈ ಸಾಂವಿಧಾನಿಕ ಅಭಿವ್ಯಕ್ತಿಯ ಫಲಾನುಭವಿ ಕಾಂಗ್ರೆಸ್‌ ಪಕ್ಷವಾಗಿದೆಯೇ ಹೊರತು, ಬಿಜೆಪಿ ಸರ್ಕಾರದ ಪರಾಭವವನ್ನು ಕಾಂಗ್ರೆಸ್‌ ಪಕ್ಷದ ದಿಗ್ವಿಜಯ ಎಂಬ ಸಂಕುಚಿತ ಬ್ರಾಕೆಟ್ಟಿನೊಳಗೆ ಬಂಧಿಸಿ ನೋಡಲಾಗುವುದಿಲ್ಲ.

ತಮ್ಮ ಅಭೂತಪೂರ್ವ ವಿಜಯೋತ್ಸವದಲ್ಲಿ ಮಿಂದೆದ್ದಿರುವ ಕಾಂಗ್ರೆಸ್‌ ನಾಯಕರು ಅರ್ಥ ಮಾಡಿಕೊಳ್ಳಬೇಕಾದ ವಾಸ್ತವ ಎಂದರೆ ಪಕ್ಷದ ಈ ವಿಜಯದ ರೂವಾರಿಗಳು ಈ ರಾಜ್ಯದ ನಾಗರಿಕ ಸಮಾಜದ ಹತ್ತು ಹಲವಾರು ಗುಂಪುಗಳು ಮತ್ತು ಪ್ರಜಾಪ್ರಭುತ್ವವನ್ನು ಪ್ರೀತಿಸುವ ಮನಸುಗಳು. ಮತ್ತು ಈ ಮನಸುಗಳಿಗೆ ಬೌದ್ಧಿಕವಾಗಿ ಶಕ್ತಿ ನೀಡಿದ ಸಾಹಿತಿಗಳು, ಕಲಾವಿದರು ಬಿಜೆಪಿಯ ಪರಿಭಾಷೆಯಲ್ಲಿ ಅರ್ಬನ್‌ ನಕ್ಸಲರು ಎನಿಸಿಕೊಂಡ ಬುದ್ಧಿಜೀವಿಗಳು ಹಾಗೂ ಬೌದ್ಧಿಕ ವಲಯದ ವಿದ್ವಾಂಸರು. ಇವರೊಟ್ಟಿಗೆ ಹೆಗಲಿಗೆ ಹೆಗಲಾಗಿ ನಿಂತ ದಲಿತ ಸಂಘರ್ಷ ಸಮಿತಿ, ರೈತ ಸಂಘ , ವಿದ್ಯಾರ್ಥಿ ಯುವ ಸಂಘಟನೆಗಳು ಹಾಗೂ ಮತ್ತಿತರ ಸಾಂಘಿಕ ಶಕ್ತಿಗಳ ಸಹಭಾಗಿತ್ವವನ್ನೂ ಒಟ್ಟಾರೆಯಾಗಿ ನೋಡಿದಾಗ, ಈ ಚುನಾವಣೆಗಳಲ್ಲಿ ಗೆಲುವು ಸಾಧಿಸಿರುವುದು ಒಂದು ಪಕ್ಷ ಎನ್ನುವುದಕ್ಕಿಂತಲೂ, ಅಪಾಯದ ಅಂಚಿಗೆ ಸಿಲುಕಿದ್ದ ಪ್ರಜಾಪ್ರಭುತ್ವದ ಆಶಯಗಳು ಮತ್ತು ಸಂವಿಧಾನದ ಧ್ಯೇಯಗಳು ಎಂದು ನಿಸ್ಸಂದೇಹವಾಗಿ ಹೇಳಬಹುದು. ಹೊಸ ಸರ್ಕಾರ ರಚಿಸಲಿರುವ ಕಾಂಗ್ರೆಸ್‌ ಪಕ್ಷಕ್ಕೆ ನಾಗರಿಕ ಸಮಾಜದ ಈ ಶಕ್ತಿಗಳ ಬಗ್ಗೆ ಗೌರವಾದರಗಳು ಇರುವುದಷ್ಟೇ ಅಲ್ಲದೆ, ರಾಜ್ಯದ ಅಭಿವೃದ್ಧಿ ಪಥದಲ್ಲಿ, ಸಾಮಾಜಿಕ ನ್ಯಾಯ ಮತ್ತು ಸಾಂಸ್ಕೃತಿಕ ಸೌಹಾರ್ದತೆ ಸಾಧಿಸುವ ಹಾದಿಯಲ್ಲಿ ಇದೇ ನಾಗರಿಕ ಸಮಾಜದ ಬೌದ್ಧಿಕ ವಲಯವನ್ನು ಸಹಭಾಗಿಯಾಗಿ ಪರಿಗಣಿಸಿ ಮುನ್ನಡೆಯುವ ಅನಿವಾರ್ಯತೆ ಇದೆ.

ಫಲಿತಾಂಶದ ಕಾರಣಗಳು ಮತ್ತು ಇಂಗಿತಗಳು

ಮೇ 10ರ ಚುನಾವಣೆಗಳು ನಿರ್ಣಾಯಕವಾಗಿ ಕಾಣಲು ಹಲವು ಕಾರಣಗಳಿವೆ. ಮೊದಲನೆಯದಾಗಿ ಕಳೆದ ಮೂರು ವರ್ಷಗಳಿಂದ ರಾಜ್ಯದ ವಿವಿಧ ಮೂಲೆಗಳಲ್ಲಿ ಅಭಿವ್ಯಕ್ತಗೊಳ್ಳುತ್ತಿದ್ದ ತಳಸಮುದಾಯಗಳ ಹತಾಶೆ, ತಲ್ಲಣ ಮತ್ತು ಆಕ್ರೋಶಗಳನ್ನು ಹೊರಹಾಕಲು ಒಂದು ಕಿಟಕಿಯ ಅವಶ್ಯಕತೆ ಇತ್ತು. ಕೋವಿದ್‌ ಪೂರ್ವದಲ್ಲಿ ಹಾಗೂ ನಂತರದಲ್ಲಿ ಈ ಶೋಷಿತ ಸಮುದಾಯಗಳು ತಮ್ಮ ಬದುಕು ಕಟ್ಟಿಕೊಳ್ಳುವಲ್ಲಿ ಎದುರಿಸಿದ ಸಂಕೀರ್ಣ ಸವಾಲುಗಳಿಗೆ ಸ್ಪಂದಿಸುವಂತಹ ಒಂದು ಆಳ್ವಿಕೆ ಅತ್ಯವಶ್ಯವಾಗಿತ್ತು. ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರಗಳಂತಹ ಅಮಾನುಷ ಚಟುವಟಿಕೆಗಳಷ್ಟೇ ಅಲ್ಲದೆ, ಉದ್ಯೋಗ ಸೃಷ್ಟಿ ಇಲ್ಲದೆ ಮೀಸಲಾತಿ ಸೌಲಭ್ಯಗಳೂ ಕೇವಲ ಕೈಗೆಟುಕದ ಸಿಹಿದ್ರಾಕ್ಷಿಯ ಹಾಗಾಗಿದ್ದು ಯುವ ಸಮೂಹದ ಆಕ್ರೋಶಕ್ಕೆ ಕಾರಣವಾಗಿತ್ತು. ಹಾಗಾಗಿಯೇ ಬಿಜೆಪಿ ಸರ್ಕಾರದ ಕೊನೆಯ ಕ್ಷಣದ ಮೀಸಲಾತಿ ನಾಟಕವೂ ಸಹ ಫಲ ನೀಡಲಿಲ್ಲ.

ಇದರೊಂದಿಗೆ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದ ಜಾತಿ ದೌರ್ಜನ್ಯಗಳು ಮತ್ತು ಅಸ್ಪೃಶ್ಯತೆಯ ಘಟನೆಗಳೂ ಸಹ ಜನತೆಯ ಭ್ರಮನಿರಸನಕ್ಕೆ ಕಾರಣವಾಗಿತ್ತು. ಅಸ್ಪೃಶ್ಯತೆ ಮತ್ತು ಸಾಮಾಜಿಕ ಬಹಿಷ್ಕಾರದ ಘಟನೆಗಳನ್ನು ಕೇವಲ ಕಾನೂನು ಸುವ್ಯವಸ್ಥೆಯ ಸಮಸ್ಯೆಯಂತೆ ಭಾವಿಸಿ, ಆರೊಪಿಗಳನ್ನು ಶಿಕ್ಷಿಸುವುದರಲ್ಲಿ ವಿಫಲವಾಗಿರುವುದು, ನ್ಯಾಯ ವಿತರಣೆಯಲ್ಲಿ ವಿಳಂಬ ಮಾಡಿರುವುದು ಬಿಜೆಪಿ ಸರ್ಕಾರದ ಘೋರ ಅಪರಾಧವೇ ಸರಿ. ಹಾಗಾಗಿಯೇ ಮೀಸಲಾತಿ ಎಂಬ ಲಾಲಿಪಪ್‌ನ ಪ್ರಲೋಭನೆ ಒಳಗಾಗದೆ ದಲಿತ ಸಮುದಾಯದ ಮತದಾರರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಸದಾಶಿವ ಆಯೋಗದ ಜಾರಿ ಹಾಗೂ ಒಳಮೀಸಲಾತಿಯ ವೈಜ್ಞಾನಿಕ ಅನುಷ್ಟಾನದ ಹಕ್ಕೊತ್ತಾಯಗಳನ್ನು ಕಾಂಗ್ರೆಸ್‌ ಪಕ್ಷ ಗಂಭೀರವಾಗಿ ಪರಿಗಣಿಸದೆ ಇದ್ದರೆ ಇದೇ ಆಕ್ರೋಶ ಕಾಂಗ್ರೆಸ್‌ ಪಕ್ಷದತ್ತಲೂ ತಿರುಗಬಹುದು. ಈ ಜಾಗ್ರತೆ ಕಾಂಗ್ರೆಸ್‌ ನಾಯಕರಿಗೆ ಇರಬೇಕಿದೆ.

ಎರಡನೆಯ ಕಾರಣ ಎಂದರೆ ರಾಜ್ಯದ ಮಹಿಳೆಯರು ಎದುರಿಸುತ್ತಿದ್ದ ಸವಾಲುಗಳು ಮತ್ತು ಅವುಗಳಿಗೆ ಸರ್ಕಾರದ ಸ್ಪಂದನೆ. ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೋ ಇಲ್ಲವೋ ಎಂಬ ಪ್ರಶ್ನೆಗೆ ಉತ್ತರ ಶೋಧಿಸುವಾಗ, ಈ ಸುರಕ್ಷತೆಯನ್ನು ವಿವಿಧ ಆಯಾಮಗಳಲ್ಲಿ ಪರಿಶೀಲಿಸಬೇಕಾಗುತ್ತದೆ. ಪೋಕ್ಸೋ ಕಾಯ್ದೆಯಡಿ ದಂಡಿಸಲಾಗುವ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ಕಿರುಕುಳ, ದೌರ್ಜನ್ಯ, ಅತ್ಯಾಚಾರ ಮುಂತಾದ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗುತ್ತಲೇ ಇದೆ.  ರಾಜ್ಯ ಪೊಲೀಸ್‌ ಇಲಾಖೆ ಒದಗಸಿರುವ ದತ್ತಾಂಶದ ಅನುಸಾರವೇ ರಾಜ್ಯದಲ್ಲಿ 2013-17ರ ನಡುವೆ ಅತ್ಯಾಚಾರ 5144 ಪ್ರಕರಣಗಳು ನಡೆದಿದ್ದರೆ, 2018-23ರ ಅವಧಿಯಲ್ಲಿ 2551 ಪ್ರಕರಣಗಳು ದಾಖಲಾಗಿವೆ.

ಕಳೆದ ಐದು ವರ್ಷಗಳಲ್ಲಿ ಅತ್ಯಾಚಾರಕ್ಕೊಳಗಾದವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬೆನ್ನುತಟ್ಟಿಕೊಳ್ಳುವುದು ಆತ್ಮದ್ರೋಹವಾಗುತ್ತದೆ. ಏಕೆಂದರೆ ಈಗಲೂ ವರ್ಷಕ್ಕೆ ಸರಾಸರಿ 500 ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ. ಇದಲ್ಲದೆ ಲೈಂಗಿಕ ಕಿರುಕುಳ, ಚಿತ್ರಹಿಂಸೆ ಮತ್ತು ದಾಖಲಾಗದ ದೌರ್ಜನ್ಯದ ಪ್ರಕರಣಗಳು ವ್ಯಾಪಕವಾಗಿ ದಾಖಲಾಗುತ್ತಿವೆ. ಆಡಳಿತ ವ್ಯವಸ್ಥೆ ಈ ಮಹಿಳಾ ದೌರ್ಜನ್ಯಗಳನ್ನು ನಿಯಂತ್ರಿಸಲು ವಿಫಲವಾಗಿದ್ದು ಹಾಗೂ ಮುರುಘಾ ಮಠ ಮುಂತಾದ ಪ್ರಕರಣಗಳಲ್ಲಿ ಕ್ರಿಯಾಶೀಲ ನಿರ್ಧಾರ ಕೈಗೊಳ್ಳದಿರುವುದು ರಾಜ್ಯ ಮಹಿಳಾ ಸಮೂಹದ ಆಕ್ರೋಶಕ್ಕೆ ಕಾರಣವಾಗಿದೆ. ಈ ಜಟಿಲ ಹಾಗೂ ಸಂಕೀರ್ಣ ಸಮಸ್ಯೆಯನ್ನು ಬಗೆಹರಿಸುವುದೇ ಅಲ್ಲದೆ, ಮಹಿಳಾ ಸಮುದಾಯಕ್ಕೆ ಸುರಕ್ಷಿತ ವಾತಾವರಣ ಸೃಷ್ಟಿಸುವ ಹೊಣೆ ಹೊಸ ಸರ್ಕಾರದ ಮೇಲಿರುತ್ತದೆ. ಜಾತಿ ಹಾಗೂ ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ತ್ವರಿತ ವಿಚಾರಣೆ ಮತ್ತು ದಂಡನೆಯ ಪ್ರಕ್ರಿಯೆಗೆ ಹೊಸ ಸರ್ಕಾರ ಆದ್ಯತೆ ನೀಡುವುದು ಅತ್ಯವಶ್ಯ.

ಮೂರನೆಯದಾಗಿ ರಾಜ್ಯದ ಶ್ರಮಿಕ ವರ್ಗ, ವಿಶೇಷವಾಗಿ ದಿನಗೂಲಿ ಮತ್ತು ವಲಸೆ ಕಾರ್ಮಿಕರು  ಎದುರಿಸುತ್ತಿರುವ ಜ್ವಲಂತ ಸವಾಲುಗಳು ನಿರ್ಣಾಯಕವಾಗುತ್ತವೆ. ಕೋವಿದ್‌ ನಂತರದ ವಾತಾವರಣದಲ್ಲಿ ದುಡಿಯುವ ವರ್ಗಗಳು ಎದುರಿಸುತ್ತಿರುವ ಕೊರತೆಗಳಲ್ಲಿ ಪ್ರಧಾನವಾಗಿ ಕಾಣುವುದು ಕುಟುಂಬ ನಿರ್ವಹಣೆಗೆ ಪೂರಕವಾದ ಆದಾಯ ಇಲ್ಲದಿರುವುದು. ಈ ವರ್ಗಗಳಿಗೆ ಅನುಕೂಲವಾಗಲೆಂದೇ ಜಾರಿಯಲ್ಲಿದ್ದ ಇಂದಿರಾ ಕ್ಯಾಂಟೀನ್‌ ಮತ್ತು ಅನ್ನ ಭಾಗ್ಯದಂತಹ ಉದಾತ್ತ ಯೋಜನೆಗಳನ್ನು ನಿರ್ಲಕ್ಷಿಸಿರುವುದು ಅಕ್ಷಮ್ಯ. ಶ್ರಮಿಕ ವರ್ಗದ ಕೌಟುಂಬಿಕ ಬದುಕಿನಲ್ಲಿ ಬಹುಮುಖ್ಯವಾದ ಪೌಷ್ಟಿಕತೆ, ಮಕ್ಕಳ ವಿದ್ಯಾಭ್ಯಾಸ ಹಾಗೂ ಆರೋಗ್ಯ ಪಾಲನೆಯ ವಿಚಾರದಲ್ಲಿ ಸರ್ಕಾರ ಸಂಪೂರ್ಣನ ನಿರ್ಲಕ್ಷ್ಯ ವಹಿಸಿತ್ತು.

ಧಾರ್ಮಿಕ ಭಾವನೆಗಳನ್ನಾಧರಿಸಿ ಶ್ರಮಿಕ ವರ್ಗವನ್ನು ವಿಭಜಿಸುವ ಕೋಮುವಾದಿ ಕಾರ್ಯಾಚರಣೆಗಳಿಗೂ ಸರ್ಕಾರ ಕಣ್ಮುಚ್ಚಿ ಕುಳಿತಿತ್ತು. ಇತ್ತ ಉದ್ಯೋಗ ಭದ್ರತೆಯೂ ಇಲ್ಲದೆ, ಕೂಲಿ/ವೇತನ ಹೆಚ್ಚಳವೂ ಇಲ್ಲದೆ, ಗಗನಕ್ಕೇರುತ್ತಿದ್ದ ದಿನಬಳಕೆ ಪದಾರ್ಥಗಳ ಬೆಲೆಗಳ ಪ್ರಹಾರಕ್ಕೆ ಸಿಲುಕಿದ ಶ್ರಮಿಕ ವರ್ಗ ತತ್ತರಿಸಿಹೋಗಿತ್ತು. ಹಾಗಾಗಿಯೇ ಕಾಂಗ್ರೆಸ್‌ ಪ್ರಣಾಳಿಕೆಯ ಹತ್ತು ಕಿಲೋ ಅಕ್ಕಿ ಮತ್ತು ಕಡಿಮೆ ಬೆಲೆಯ ಅಡುಗೆ ಅನಿಲ ಜನಸಾಮಾನ್ಯರಿಗೆ ಆಕರ್ಷಕವಾಗಿ ಕಂಡಿದೆ. ಹಲಾಲ್‌, ಜಟ್ಕಾ, ವ್ಯಾಪಾರ ನಿಷೇಧ ಮುಂತಾದ ಮತಾಂಧ ಕಾರ್ಯಾಚರಣೆಗಳ ಮೂಲಕ ದುಡಿಮೆಯ ಮಾರ್ಗಗಳಿಗೇ ಸಂಚಕಾರ ತಂದಿದ್ದ ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸುವುದೇ ಅಲ್ಲದೆ, ಈಗಾಗಲೇ ಆಳದಲ್ಲಿ ಬಿತ್ತಲಾಗಿರುವ ಮತದ್ವೇಷದ ವಿಷಬೀಜಗಳನ್ನು ಕಿತ್ತೊಗೆಯುವ ಸಂಕಲ್ಪದೊಂದಿಗೆ ಹೊಸ ಸರ್ಕಾರ ಮುನ್ನಡೆಯಬೇಕಿದೆ.

ಜವಾಬ್ದಾರಿಯುತ ಆಳ್ವಿಕೆಯ ನಿರೀಕ್ಷೆಯಲ್ಲಿ

ಕರ್ನಾಟಕದ ಜನತೆ ಕಾಂಗ್ರೆಸ್‌ ಪಕ್ಷದ ಕೈಗೆ ಅಧಿಕಾರದ ಚುಕ್ಕಾಣಿ ನೀಡಿರುವುದು ಕೇವಲ ವಿಧಾನಸೌಧದಲ್ಲಿ ಕುಳಿತು ತನ್ನ ಅವಧಿಯನ್ನು ಪೂರ್ಣಗೊಳಿಸಿ ಮುಂದಿನ ಚುನಾವಣೆಗಾಗಿ ತನ್ನ ಖಾಸಗಿ ಬೊಕ್ಕಸವನ್ನು ತುಂಬಿಸಿಕೊಳ್ಳಲಿಕ್ಕಾಗಿ ಅಲ್ಲ. ಕೆಲವೊಮ್ಮೆ ಅನಿವಾರ್ಯವಾಗಿ, ಅನ್ಯಮಾರ್ಗವಿಲ್ಲದೆ ಇನ್ನು ಕೆಲವೆಡೆ ಸ್ವ-ಇಚ್ಚೆಯಿಂದ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ಬರಲು ಅಥವಾ ಬಿಜೆಪಿ ಸರ್ಕಾರವನ್ನು ಪದಚ್ಯುತಗೊಳಿಸಲು ಹಗಲಿರುಳು ದುಡಿದ ಹತ್ತಾರು ನಾಗರಿಕ ಸಮಾಜದ ಗುಂಪುಗಳು ಯಾವುದೇ ನಿರ್ದಿಷ್ಟ ಗ್ರಾಂಥಿಕ ತತ್ವ ಸಿದ್ಧಾಂತಗಳಿಂದ ಪ್ರೇರಿತವಾಗಿರುವುದಿಲ್ಲ. ಬದಲಾಗಿ ರಾಜ್ಯದಲ್ಲಿ ಸತತವಾಗಿ ಕುಸಿಯುತ್ತಲೇ ಇದ್ದ ಸಾಂವಿಧಾನಿಕ ಮೌಲ್ಯಗಳು, ಶಿಥಿಲವಾಗುತ್ತಲೇ ಇದ್ದ ಸಾಂವಿಧಾನಿಕ-ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ಬಹುಮಟ್ಟಿಗೆ ನಾಶವಾಗುತ್ತಿದ್ದ ಮಾನವೀಯ ನೆಲೆಗಳನ್ನು ಕಾಪಾಡುವ ಮೂಲಕ ಭಾರತದ ಪ್ರಜಾಪ್ರಭುತ್ವದ ಉಳಿವಿಗೆ ಕರ್ನಾಟಕವನ್ನು ಚಿಮ್ಮುಹಲಗೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಗುಂಪುಗಳು ಕೆಲಸ ಮಾಡಿವೆ. ಯಾವುದೇ ಹುದ್ದೆ, ಸ್ಥಾನಮಾನ, ಗೌರವ ಅಥವಾ ರಾಜಕೀಯ ಪ್ರಲೋಭನೆಗಳ ಹಿತಾಸಕ್ತಿಯಿಲ್ಲದೆ ಈ ಗುಂಪುಗಳ ಸಹಸ್ರಾರು ಯುವಕರು, ಯುವತಿಯರು, ಹಿರಿಯ ನಾಗರಿಕರು ಪ್ರಜಾಸತ್ತೆಯ ರಕ್ಷಣೆಗಾಗಿ ಟೊಂಕಕಟ್ಟಿ ನಿಂತು, ಆಳ್ವಿಕೆಯಲ್ಲಿದ್ದ ದ್ವೇಷ ರಾಜಕಾರಣದ ಚೌಕಟ್ಟುಗಳನ್ನು ಭಂಗಗೊಳಿಸಿದ್ದಾರೆ. ಈ ಪರಿಶ್ರಮದ ಫಲಾನುಭವಿ ಅನಿವಾರ್ಯವಾಗಿ ಕಾಂಗ್ರೆಸ್‌ ಪಕ್ಷವೇ ಆಗಿದೆ. ನೂತನ ಸರ್ಕಾರಕ್ಕೆ ಈ ವಾಸ್ತವದ ಗ್ರಹಿಕೆ ಮತ್ತು ವಿವೇಚನೆ ಇದ್ದರೆ ರಾಜ್ಯದ ಭವಿಷ್ಯ ಉಜ್ವಲವಾಗುವ ಸಾಧ್ಯತೆಗಳು ಹೆಚ್ಚು.

ಫಲಿತಾಂಶ ಹೊರಬಿದ್ದ ಮರುಕ್ಷಣದಿಂದಲೇ ಕುರ್ಚಿಗಾಗಿ ಕಾದಾಟ ಆರಂಭವಾಗಿರುವುದು ಸಹಜವೇ ಆದರೂ, ಕಾಂಗ್ರೆಸ್‌ ನಾಯಕರು ತಮ್ಮ ಪಕ್ಷಕ್ಕೆ ಜನಸಾಮಾನ್ಯರು ಒದಗಿಸಿರುವ ಅವಕಾಶವನ್ನು ಕೈಚೆಲ್ಲದ ರೀತಿಯಲ್ಲಿ ಪ್ರಬುದ್ಧತೆಯಿಂದ ವರ್ತಿಸಬೇಕಾಗುತ್ತದೆ. ಸಾಮಾನ್ಯ ಜನತೆ ಕೆಲವು ನಾಯಕರ ಪ್ರಭಾವಕ್ಕೊಳಗಾಗಿ ಹಾಗೂ ಪಕ್ಷ ನಿಷ್ಠೆಯೊಂದಿಗೆ ಮತ ಚಲಾವಣೆ ಮಾಡಿದ್ದರೂ, ಒಂದು ಪ್ರಬಲವಾದ ಪರ್ಯಾಯ ರಾಜಕೀಯ ಶಕ್ತಿಯ ಕೊರತೆ ಇದ್ದುದರಿಂದ ಕಾಂಗ್ರೆಸ್‌ ಪಕ್ಷವನ್ನು ಆಯ್ಕೆ ಮಾಡಿದ್ದಾರೆ ಎಂಬ ವಿವೇಕ ಹೊಸ ಸರ್ಕಾರದ ನಿರ್ವಾಹಕರಿಗೆ ಮತ್ತು ನಿರೂಪಕರಿಗೆ ಇರಲೇಬೇಕು. ಈ ಆತ್ಮವಿಮರ್ಶಾತ್ಮಕ ನೆಲೆಯಲ್ಲಿ ನಿಂತು ಕಾಂಗ್ರೆಸ್‌ ನಾಯಕರು ತಮ್ಮ ಸಾಂವಿಧಾನಿಕ ಕರ್ತವ್ಯವನ್ನು, ಸಾಮಾಜಿಕ ಭಾದ್ಯತೆಯನ್ನು ಹಾಗೂ ವ್ಯಕ್ತಿಗತ ಪ್ರಾಮಾಣಿಕತೆಯನ್ನು ಪ್ರದರ್ಶಿಸಬೇಕಿದೆ. ಪ್ರಬಲ ಜಾತಿಗಳ ಹಿತಾಸಕ್ತಿಗಳಿಗಷ್ಟೇ ಪ್ರಾಧಾನ್ಯತೆ ನೀಡುವುದು, ಈ ಜಾತಿಯನ್ನು ಹಿಡಿತದಲ್ಲಿಟ್ಟುಕೊಂಡಿರುವ ಮಠಮಾನ್ಯಗಳ ಅಣತಿಯಂತೆ ನಡೆದುಕೊಳ್ಳುವುದು ಅಥವಾ ಈ ಪ್ರಬಲ ಜಾತಿಗಳನ್ನು ತುಷ್ಟೀಕರಿಸಲು ಮುಂದಾಗಿ ಮತ್ತೊಮ್ಮೆ ಶೋಷಿತ ಸಮುದಾಯಗಳ ಹಿತಾಸಕ್ತಿಗಳನ್ನು ನಿರ್ಲಕ್ಷಿಸುವುದು ಆತ್ಮಹತ್ಯಾಕಾರಕವಾಗುತ್ತದೆ ಎಂಬ ಎಚ್ಚರಿಕೆ ನೂತನ ಸರ್ಕಾರದಲ್ಲಿರಬೇಕಿದೆ.

ಹೊಸ ಸರ್ಕಾರದ ಆಯ್ಕೆ ಆದ್ಯತೆಗಳು

ಈ ದೃಷ್ಟಿಯಿಂದ ನೂತನ ಸರ್ಕಾರದ ಮುಂದೆ ಇರಬೇಕಾದ ಕೆಲವು ಆಯ್ಕೆ ಆದ್ಯತೆಗಳನ್ನು ಸೂಚಿಸಬಹುದು. ಮೊದಲನೆಯದಾಗಿ ರಾಜ್ಯ ರಾಜಕಾರಣದಲ್ಲಿ ಇನ್ನೂ ಬೇರೂರದಿದ್ದರೂ, ಆಳಕ್ಕೆ ಇಳಿದಿರುವ ದ್ವೇಷ ರಾಜಕಾರಣವನ್ನು ನಿರ್ಮೂಲ ಮಾಡುವುದು ಮೊದಲ ಆದ್ಯತೆಯಾಗಬೇಕು. ವಿರೋಧ ಪಕ್ಷಗಳನ್ನು ಗೌರವಿಸುವ ಹಾಗೂ ಪಕ್ಷಗಳ ರಾಜಕೀಯ ಪ್ರತಿರೋಧವನ್ನು ಸಹಿಸಿಕೊಂಡು ಪರಸ್ಪರ ಸಮಾಲೋಚನೆಯ ಮೂಲಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವುದು ಜವಾಬ್ದಾರಿಯುತ ಸರ್ಕಾರದ ಆದ್ಯತೆಯಾಗಬೇಕು.

ಎರಡನೆಯದಾಗಿ ಕರಾವಳಿ-ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಾಗೂ ರಾಜ್ಯದೆಲ್ಲೆಡೆ ಹರಡಿರುವ, ಆಳವಾಗಿ ಬೇರೂರಿರುವ ಕೋಮುದ್ವೇಷ, ಮತದ್ವೇಷದ ಬೇರುಗಳನ್ನು ಕಿತ್ತೊಗೆಯುವ ಸಂಕಲ್ಪದೊಂದಿಗೆ ಸರ್ಕಾರ ಕಾರ್ಯೋನ್ಮುಖವಾಗಬೇಕು. ಯಾವುದೇ ಸಂಘಟನೆಗಳನ್ನು ನಿಷೇಧಿಸುವುದು ಇದಕ್ಕೆ ಪರಿಹಾರವಲ್ಲ. ಕರಾವಳಿಯಲ್ಲಿ ಭಿನ್ನ  ಕೋಮಿನ ಯುವಕ-ಯುವತಿಯರು ದಾಳಿಗೊಳಗಾಗುತ್ತಿದ್ದರೆ ಈ ದಾಳಿ ನಡೆಸುವ ಮತಾಂಧ ಪಡೆಗಳು ಎರಡೂ ಕೋಮುಗಳಲ್ಲಿ ಸಕ್ರಿಯವಾಗಿವೆ. ಮತಾಂಧತೆಯನ್ನು ಸಾಪೇಕ್ಷವಾಗಿ ನೋಡದೆ, ಒಂದು ಸಾಮಾಜಿಕ-ಸಾಂಸ್ಕೃತಿಕ ವಿದ್ಯಮಾನವಾಗಿ ನೋಡಬೇಕಿದೆ. ಸಾಂಘಿಕವಾಗಿ ನಿಷೇಧಿತವಾದರೂ, ಮತಾಂಧತೆಯ ಮನಸ್ಸುಗಳನ್ನು ಉದ್ಧೀಪನಗೊಳಿಸುವ ಶಕ್ತಿಗಳು ಸಮಾಜದ ಗರ್ಭದಲ್ಲೇ ಅಡಗಿರುತ್ತವೆ. ದಿಕ್ಕು ತಪ್ಪಿ ಕವಲು ಹಾದಿಯಲ್ಲಿರುವ ಈ ಯುವ ಮನಸುಗಳಲ್ಲಿ ಸ್ನೇಹ ಬಾಂಧವ್ಯ ಮತ್ತು ಸೌಹಾರ್ದತೆ-ಸೋದರತ್ವದ ಸದ್ಭಾವನೆಗಳನ್ನು ಬಿತ್ತಲು ಸರ್ಕಾರ ನಾಗರಿಕ ಸಮಾಜದ ಸಂಸ್ಥೆಗಳನ್ನು, ಚಿಂತಕರನ್ನು ಧಾರಾಳವಾಗಿ ಬಳಸಿಕೊಳ್ಳಬಹುದು. ಬಲಪಂಥೀಯರ ನಡುವೆಯೂ ಇಂತಹ ಮನಸ್ಸುಗಳು ಇರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ.

ಮೂರನೆಯದಾಗಿ ಹಿಂದಿನ ಸರ್ಕಾರದಲ್ಲಿ ಕೈಗೊಳ್ಳಲಾಗಿದ್ದ ಕೆಲವು ಅವೈಚಾರಿಕ ಹಾಗೂ ಅವೈಜ್ಞಾನಿಕ ನಿರ್ಧಾರಗಳನ್ನು ಹೊಸ ಸರ್ಕಾರ ಹಿಂಪಡೆಯಬೇಕಿದೆ. ನಿರ್ದಿಷ್ಟವಾಗಿ ಹೇಳುವುದಾದರೆ ಪಠ್ಯಕ್ರಮ ಪರಿಷ್ಕರಣೆಯ ವಿಚಾರದಲ್ಲಿ ಇದನ್ನು ಗುರುತಿಸಬಹುದು. ಶಾಲಾ ವ್ಯಾಸಂಗ ವಯೋಮಾನದ ಮಕ್ಕಳಿಗೆ ನಾವು ತತ್ವ ಸಿದ್ಧಾಂತಗಳ ಬೋಧನೆ ಮಾಡುವುದಕ್ಕಿಂತಲೂ ಹೆಚ್ಚಾಗಿ, ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮತ್ತು ಸಮಾಜಮುಖಿ ಚಿಂತನೆಗಳನ್ನು ಬೋಧಿಸಬೇಕಿದೆ. ಪಠ್ಯಕ್ರಮದಲ್ಲಿ ಅಳವಡಿಸಬೇಕಾದ ಗದ್ಯ ಪದ್ಯಗಳ ನಿಷ್ಕರ್ಷೆ ಮಾಡುವ ಜವಾಬ್ದಾರಿ ಇರುವುದು ನಾಗರಿಕ ಸಮಾಜವನ್ನು ಪ್ರತಿನಿಧಿಸುವ ವಿದ್ವಾಂಸರ ಮೇಲೆ. ಎಡ-ಬಲ ಎಂಬ ಜಿಜ್ಞಾಸೆಗಳಲ್ಲಿ ಸಿಲುಕದೆ, ಮಕ್ಕಳಿಗೆ ಜ್ಞಾನ ಸಂಪನ್ಮೂಲಗಳನ್ನು ಒದಗಿಸುವುದು ಶಾಲಾ ಶಿಕ್ಷಣದ ಆದ್ಯತೆಯಾಗಿರಬೇಕು. ಈ ಹಂತದಲ್ಲಿ ನಾವು ಮಕ್ಕಳಿಗೆ ಪ್ರಪಂಚವನ್ನು ಪರಿಚಯಿಸುತ್ತೇವೆಯೇ ಹೊರತು, ಅವರ ಗ್ರಹೀತಗಳನ್ನು ಪ್ರಭಾವಿಸುವಂತಹ ಜ್ಞಾನ ಸರಕುಗಳನ್ನು ತುಂಬಲಾಗುವುದಿಲ್ಲ. ಹಾಗಾಗಿ ಶಾಲಾ ಪಠ್ಯಗಳು ವೈಜ್ಞಾನಿಕ ಧೋರಣೆಯೊಂದಿಗೆ, ವೈಚಾರಿಕತೆಯ ನೆಲೆಯಲ್ಲಿ, ವಾಸ್ತವ ಚರಿತ್ರೆಯನ್ನು ಮಕ್ಕಳಿಗೆ ಪರಿಚಯಿಸುವಂತಿರಬೇಕು. ಶಾಲಾ ಶಿಕ್ಷಣದಿಂದ ಹೊರಬರುವ ವೇಳೆಗೆ ಮಕ್ಕಳು ವಿಶ್ವಮಾನವತೆಯ ಕಾಲಾಳುಗಳಾಗಿರಬೇಕೇ ಹೊರತು, ಯಾವುದೋ ಒಂದು ಸೈದ್ಧಾಂತಿಕ ಭದ್ರಕೋಟೆಯ ಕಾವಲುಭಟರಾಗಿರಬಾರದು. ಈ ವಿವೇಚನೆಯೊಂದಿಗೆ ನೂತನ ಸರ್ಕಾರ ಪಠ್ಯ ಪರಿಷ್ಕರಣೆಗೆ ಹೊಸ ಆಯಾಮ ನೀಡಬೇಕಿದೆ.

ಮೂರನೆಯದಾಗಿ ಕರ್ನಾಟಕವನ್ನು ನಿಜವಾಗಿಯೂ “ ಸರ್ವಜನಾಂಗದ ಶಾಂತಿಯ ತೋಟ ”ವನ್ನಾಗಿ ಪರಿವರ್ತಿಸುವ ಮನೋಬಲ ಇದ್ದರೆ ನೂತನ ಸರ್ಕಾರವು ಈ ಹೂದೋಟದಲ್ಲಿರುವ ಮುಳ್ಳಿನ ಗಿಡಗಳನ್ನು ಕಿತ್ತೆಸೆಯಬೇಕು. ಜಾತಿ, ಮತ , ಭಾಷೆ ಮತ್ತು ವರ್ಗ ಹಿತಾಸಕ್ತಿಗಳೆಂಬ ಕಂಟಕಗಳನ್ನು ನಿವಾರಿಸದೆ ಹೋದರೆ ಭವಿಷ್ಯದ ತಲೆಮಾರಿನ ಮಕ್ಕಳು “ ಮನುಷ್ಯಜಾತಿ ತಾನೊಂದೇ ವಲಂ ” ಎಂಬ ಪಂಪ ವಾಕ್ಯವನ್ನು ಮರೆತೇಬಿಡುತ್ತಾರೆ. ಪಂಪನ ಸಂದೇಶವನ್ನು ಸಾಕಾರಗೊಳಿಸದೆಯೇ ರಾಜ್ಯವನ್ನು ಕುವೆಂಪು ಪರಿಕಲ್ಪನೆಯ ಸರ್ವ ಜನಾಂಗದ ಶಾಂತಿಯ ತೋಟದಂತೆ ರೂಪಿಸಲು ಸಾಧ್ಯವಾಗುವುದಿಲ್ಲ. ಅನ್ನ, ಆಹಾರ, ಉಡುಪು ಮತ್ತು ಚಿಹ್ನೆಗಳ ಹಿಂದೆ ಅಡಗಿರುವ ಧಾರ್ಮಿಕ, ಜಾತೀಯ ಚಿಹ್ನೆಗಳನ್ನು ಅಳಿಸಿ ಹಾಕುವ ಸಪ್ರಯತ್ನ ಸರ್ಕಾರದಿಂದಲೇ ನಡೆಯಬೇಕು. ಇಲ್ಲಿಯೂ ಸಹ ನಾಗರಿಕ ಸಮಾಜದ ಆರೋಗ್ಯವಂತ ಮನಸುಗಳು ಸರ್ಕಾರಕ್ಕೆ ಹೆಗಲು ನೀಡಲು ಸಿದ್ಧವಾಗಿರುತ್ತವೆ. ಗತ ಚರಿತ್ರೆಯ ಸಮಾಧಿಗಳನ್ನು ಅಗೆಯುವ ಪ್ರಯತ್ನಗಳಿಗೆ ತಡೆಯೊಡ್ಡಿ ಭವಿಷ್ಯದ ಪೀಳಿಗೆಗೆ ಒಂದು ಉತ್ತಮ ಸಮಾಜವನ್ನು ನಿರ್ಮಿಸಲು ಪಣತೊಟ್ಟ ನೂರಾರು ಸಂಘಟನೆಗಳು, ಸಾವಿರಾರು ಮನಸುಗಳು ರಾಜ್ಯದಲ್ಲಿ ಇನ್ನೂ ಜೀವಂತಿಕೆಯಿಂದಿವೆ. ಕರ್ನಾಟಕದ ವಿದ್ವತ್‌ ವಲಯದ ಶ್ರೀಮಂತಿಕೆ ಇನ್ನೂ ಸಮೃದ್ಧವಾಗಿದೆ. ಆಡಳಿತ ವ್ಯವಸ್ಥೆಯಲ್ಲಿ ಈ ಮನಸ್ಸುಗಳಿಗೆ ನೀಡುವ ಸಹಭಾಗಿತ್ವ ಮತ್ತು ಸಹಭಾದ್ಯತೆಗಳು ಭವಿಷ್ಯದ ಹಾದಿಯ ಗುಣಮಟ್ಟವನ್ನೂ ನಿರ್ಧರಿಸುತ್ತವೆ. ಹೊಸ ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸುವಷ್ಟು ಪ್ರಬುದ್ಧತೆ ಹೊಂದಿರಬೇಕು.

ನಾಲ್ಕನೆಯದಾಗಿ ನವ ಉದಾರವಾದ ಮತ್ತು ಕಾರ್ಪೋರೇಟ್‌ ಮಾರುಕಟ್ಟೆ ನೀತಿಗಳು ರಾಜ್ಯದ ರೈತಾಪಿ ಸಮುದಾಯದ ಮುಂದೆ, ತಳಮಟ್ಟದ ಸಾಮಾನ್ಯ ಜನತೆಯ ಮುಂದೆ ತಂದೊಡ್ಡಿರುವ ಅನೇಕ ಜಟಿಲ ಸಮಸ್ಯೆಗಳಿಗೆ ಹೊಸ ಸರ್ಕಾರ ಪರಿಹಾರ ಮಾರ್ಗಗಳನ್ನು ಗುರುತಿಸಬೇಕಿದೆ. ಬೆಂಬಲ ಬೆಲೆ, ಬೆಳೆಗಳ ದಾಸ್ತಾನು ಸೌಕರ್ಯ, ಫಸಲುಗಳ ರಕ್ಷಣೆ, ನೀರಾವರಿ ಸೌಲಭ್ಯ, ವಿಮಾ ಸೌಲಭ್ಯ ಮತ್ತು ಸುಲಭ ಸಾಲಗಳ ಸೌಕರ್ಯಗಳನ್ನು ಒದಗಿಸುವುದಷ್ಟೇ ಅಲ್ಲದೆ, ರೈತಾಪಿ ಸಮುದಾಯದ ಬದುಕಿನಲ್ಲಿ ಎದುರಾಗುವ ದೈನಂದಿನ ಅಥವಾ ಆಯಾ ಕಾಲದ ಸಂಕೀರ್ಣ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವಂತಹ ಒಂದು ಸೂಕ್ಷ್ಮಗ್ರಾಹಿ ಆಡಳಿತ ಯಂತ್ರವನ್ನು ನೂತನ ಸರ್ಕಾರ ರಚಿಸಬೇಕಿದೆ. ಅಭಿವೃದ್ಧಿಯ ಮಾರುಕಟ್ಟೆಯ ಪರಿಕಲ್ಪನೆಯಿಂದ ಹೊರಬಂದು ಸಾಮಾನ್ಯ ದುಡಿಯುವ ಜೀವಗಳ ಜೀವನ ಮತ್ತು ಜೀವನೋಪಾಯದ ಕಡೆಗೆ ಹೆಚ್ಚು ಗಮನಹರಿಸಿದರೆ ಸಹಜವಾಗಿ ರೈತರ ಸಮಸ್ಯೆಗಳಿಗೂ ಸ್ಪಂದಿಸುವುದು ಸುಲಭವಾಗುತ್ತದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟುವುದು, ಸಾಮಾನ್ಯ ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುವುದು ಸರ್ಕಾರದ ಪ್ರಥಮ ಆದ್ಯತೆಯಾಗಬೇಕಿದೆ.  ಹೊಸ ಕಾಂಗ್ರೆಸ್‌ ಸರ್ಕಾರ ಈ ಮಾರುಕಟ್ಟೆ ಐಷಾರಾಮಿ ಜಗುಲಿಯಿಂದ ಕೆಳಗಿಳಿದು, ನೆಲದ ಗುಣವನ್ನು ಅರಿಯಲು ಯತ್ನಿಸುವುದು ಅನಿವಾರ್ಯ.

ಐದನೆಯದಾಗಿ ಚುನಾಯಿತ ಸರ್ಕಾರ ಸಂವಿಧಾನಕ್ಕೆ ಬದ್ಧವಾಗಿರುವುದು ಮುಖ್ಯ. ಭ್ರಷ್ಟಾಚಾರ ನಿವಾರಣೆಯಲ್ಲಿ, ಕೋಮುವಾದವನ್ನು ನಿಯಂತ್ರಿಸುವಲ್ಲಿ, ಮತಾಂಧತೆ ಮತ್ತು ಭಯೋತ್ಪಾದಕ ಸಮಾಜಘಾತುಕ ಚಟುವಟಿಕೆಗಳನ್ನು ನಿಗ್ರಹಿಸುವಲ್ಲಿ ನಿಷ್ಪಕ್ಷಪಾತತೆಯಿಂದ ಜಾತಿ-ಮತ-ಅಂತಸ್ತು ಮತ್ತು ರಾಜಕೀಯ ಪ್ರಭಾವಗಳ ಹಂಗಿಗೆ ಒಳಗಾಗದೆ ಕ್ರಮ ಕೈಗೊಳ್ಳುವಂತಹ ಒಂದು ಪ್ರಾಮಾಣಿಕ ಆಡಳಿತ ವ್ಯವಸ್ಥೆಯನ್ನು ರೂಪಿಸಬೇಕಿದೆ. ಸಮಾಜದಲ್ಲಿ ಹೆಚ್ಚಾಗುತ್ತಿರುವ ಅಪರಾಧಗಳೇ ರಾಜಕೀಯ ವಲಯದಲ್ಲೂ ಬಿಂಬಿತವಾಗುವುದರಿಂದ ಸಾಮಾಜಿಕ-ರಾಜಕೀಯ ಅಪರಾಧೀಕರಣದ ಬಗ್ಗೆ ಹೆಚ್ಚಿನ ಗಮನ ನೀಡಿ ಸಣ್ಣ ಪ್ರಮಾಣದ ಲಂಚ ಪ್ರಕರಣದಿಂದ ಹಿಡಿದು ಅತ್ಯಾಚಾರ-ಹತ್ಯೆಯವರೆಗೆ ಯಾವುದೇ ಅಪರಾಧವಾದರೂ, ಜಾತಿ ಮತಗಳ ಅಸ್ಮಿತೆಗಳನ್ನು ದಾಟಿ ದಂಡನೆಯ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಆದ್ಯತೆಯಾಗಬೇಕಿದೆ. ಸಮಾಜದ ಸೌಹಾರ್ದತೆಯನ್ನು ಕದಡುವ ಶಕ್ತಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದೇ ಅಲ್ಲದೆ ಅಂತಹ ಶಕ್ತಿಗಳಿಗೆ ಸುಲಭ ತುತ್ತಾಗಬಹುದಾದ ಯುವ ಮನಸುಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಜವಾಬ್ದಾರಿ ಸರ್ಕಾರದ ಮೇಲಿರುತ್ತದೆ. ಇಲ್ಲಿಯೂ ಸಹ ನಾಗರಿಕ ಸಮಾಜದ ಸ್ವಸ್ಥ ಮನಸುಗಳು ಸರ್ಕಾರಕ್ಕೆ ನೆರವಾಗುತ್ತವೆ. ಆದರೆ ಸರ್ಕಾರ ಅಹಮಿಕೆಯನ್ನು ತೋರದೆ ನೆರವಿಗಾಗಿ ಕೈಚಾಚುವುದು ಮುಖ್ಯ.

ಈ ಹಲವು ಆದ್ಯತೆ ಮತ್ತು ಆಯ್ಕೆಗಳ ನಿರೀಕ್ಷೆಯನ್ನು ಹೊತ್ತುಕೊಂಡು ಕಾಂಗ್ರೆಸ್‌ ಸರ್ಕಾರ ಇನ್ನು ಐದು ವರ್ಷಗಳ ಕಾಲ ಆಳ್ವಿಕೆಯನ್ನು ನಡೆಸಲಿದೆ. ತನ್ನ ಗೆಲುವಿಗೆ ಕಾರಣವಾದ ನಾಗರಿಕ ಸಮಾಜದ ಮನಸುಗಳೇ ಸರ್ಕಾರದ ಮುನ್ನಡೆಯ ಚಕ್ರಗಳಿಗೂ ಕೀಲೆಣ್ಣೆಯಂತೆ ಕಾರ್ಯನಿರ್ವಹಿಸುವ ಭರವಸೆಯೊಂದಿಗೆ ಹೊಸ ಸರ್ಕಾರ ಚಲಿಸಬೇಕಿದೆ. ಅಧಿಕಾರದ ಅಮಲು ನೆತ್ತಿಗೇರುವ ಮುನ್ನವೇ ಕಾಂಗ್ರೆಸ್‌ ಪಕ್ಷದ ಧುರೀಣರು ಯುವ ಕಾರ್ಯಕರ್ತರಲ್ಲಿ ಮತ್ತು ರಾಜಕೀಯ ಹಿಂಬಾಲಕರ ಮನಸುಗಳಲ್ಲಿ ಒಂದು ಮಾನವೀಯ ಸಮಾಜವನ್ನು ನಿರ್ಮಿಸಲು ಬೇಕಾದ ಅರಿವು ಮತ್ತು ಗ್ರಹೀತಗಳನ್ನು ತುಂಬುವ ಕೆಲಸ ನಡೆಯಬೇಕಿದೆ. ಯಾವುದೇ ಪಕ್ಷವಾದರೂ ಇದನ್ನು ಅನುಸರಿಸಬಹುದು. ಆದರೆ ಅಂತಿಮ ಧ್ಯೇಯ ಮಾತ್ರ “ ಪ್ರಜಾಪ್ರಭುತ್ವದ ರಕ್ಷಣೆ ” ಮತ್ತು                                    “ ಸಂವಿಧಾನದ ಆಶಯಗಳ ಪೂರೈಕೆ ” ಆಗಿರಬೇಕು. ಮುಖ್ಯಮಂತ್ರಿಯಾಗಿ ಯಾರೇ ಆಯ್ಕೆಯಾಗಲೀ, ಈ ಧ್ಯೇಯವಾಕ್ಯವನ್ನು ಘೋಷವಾಕ್ಯವನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಲು ಸಾಧ್ಯವಾಗುವುದಾದರೆ, ಮೇ 10ರ ಕರ್ನಾಟಕದ ಮತದಾರರ ತೀರ್ಪು ಸಹ ಸಾರ್ಥಕವಾಗುತ್ತದೆ.

Tags: BJPBJP GovernmentbjpvscongressCongress PartyDKShivakumarKPCClatestnewsmallikarjunkhargePMModisiddaramaiahಎಚ್ ಡಿ ಕುಮಾರಸ್ವಾಮಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಸೋಲು ಸ್ವೀಕರಿಸಿದ್ದೇವೆ, ಉತ್ತಮ ವಿರೋಧ ಪಕ್ಷವಾಗಿ ಹೊರಹೊಮ್ಮುತ್ತೇವೆ : ಶೋಭಾ ಕರಂದ್ಲಾಜೆ

Next Post

Basavaraja Bommai Meeting | ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ಜತೆ ಅನೌಪಚಾರಿಕ ಮಾತುಕತೆ ನಡೆಸಿದ ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ‌

Related Posts

ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ
ಅಂಕಣ

ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

by ಪ್ರತಿಧ್ವನಿ
May 13, 2026
0

ಮೂಲ : ಝಿಯಾ ಉಸ್‌ ಸಲಾಂ ಕನ್ನಡಕ್ಕೆ : ನಾ ದಿವಾಕರ (ಆಧಾರ The insidious return of separate electorates Zia us Salam ದ...

Read moreDetails
ಸಂದಿಗ್ಧ ಮತದಾರ ನಿರ್ದೇಶಿತ ಮತದಾನ

ಸಂದಿಗ್ಧ ಮತದಾರ ನಿರ್ದೇಶಿತ ಮತದಾನ

May 11, 2026
ಜನಮತ – ಆಯ್ಕೆ ಆದ್ಯತೆ ಮತ್ತು ಪರ್ಯಾಯ

ಜನಮತ – ಆಯ್ಕೆ ಆದ್ಯತೆ ಮತ್ತು ಪರ್ಯಾಯ

May 9, 2026
ಚುನಾವಣೆ ಪ್ರಜಾಪ್ರಭುತ್ವ ಮತ್ತು ಜನ

ಚುನಾವಣೆ ಪ್ರಜಾಪ್ರಭುತ್ವ ಮತ್ತು ಜನ

May 7, 2026
ಕುಸಿದ ಭೂಮಿಕೆಯ ಮೇಲೆ  ಶ್ರಮಿಕರ ಮೇ ದಿನಾಚರಣೆ

ಕುಸಿದ ಭೂಮಿಕೆಯ ಮೇಲೆ  ಶ್ರಮಿಕರ ಮೇ ದಿನಾಚರಣೆ

May 4, 2026
Next Post
Basavaraja Bommai Meeting | ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ಜತೆ ಅನೌಪಚಾರಿಕ ಮಾತುಕತೆ ನಡೆಸಿದ ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ‌

Basavaraja Bommai Meeting | ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ಜತೆ ಅನೌಪಚಾರಿಕ ಮಾತುಕತೆ ನಡೆಸಿದ ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ‌

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada