ಇನ್ನೇನು ಕೆಲವೇ ದಿನಗಲ್ಲಿ 2023ರ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ಪಕ್ಷದ ನಾಯಕರು, ಮುಖಂಡರು ಆಯಾ ಪಕ್ಷಗಳ ಮತ ಪ್ರಚಾರವನ್ನ ಭರ್ಜರಿಯಾಗಿ ಮಾಡ್ತಿದ್ದಾರೆ. ಈ ನಡುವೆ ರಾಜಕೀಯ ಜಟಾಪಟಿ ಶುರುವಾಗಿದೆ. ಇಂದು ಮಂಗಳೂರಿನಲ್ಲಿ ಮಾತ್ನಾಡಿದ ಎಐಸಿಸಿ(AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ʻಬಿಜೆಪಿಯವರು ಎಲ್ಲಾ ಕಡೆ ಎಟಿಎಂ ಇಟ್ಟಿದ್ದಾರೆ. ದುಡ್ಡಿನ ಮೇಲೆ ಬಿಜೆಪಿ ಚುನಾವಣೆ ನಡೆಸುತ್ತಿದೆ. ಅಲ್ಲದೇ ಮನಿ ಮತ್ತು ಮಸಲ್ ಪವರ್ ಬಳಸುತ್ತಿದ್ದಾರೆ. ರಾಜ್ಯದ ಬಜೆಟ್ನಲ್ಲಿ 3 ಲಕ್ಷ ಕೋಟಿ ಹಣ ಇದೆ. ಅದರಲ್ಲಿ 40 ಪರ್ಸೆಂಟ್ ಕಮಿಷನ್ ಹೋಗುತ್ತದೆ. ಅನೇಕ ಎಂಎಲ್ಎಗಳು ಹಾಗೂ ಅವರ ಸಂಬಂಧಿಗಳು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಈಗ ಅವರ ಬಗಲಲ್ಲೇ ಭ್ರಷ್ಟಾಚಾರ ನಡೆಯುತ್ತಿದ್ದರೂ ಅವರು ಮಾತನಾಡುವುದಿಲ್ಲ. ಒಂಭತ್ತು ವರ್ಷಗಳಲ್ಲಿ ಅವರ ಕೊಡುಗೆ ಏನಿದೆ? ಪ್ರಜಾಪ್ರಭುತ್ವದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಬೇರೆ ಬೇರೆ ರಾಜ್ಯದಲ್ಲಿ ನಮ್ಮವರ ಕಳ್ಳತನ ಆಗಿದೆ.
ಇಡಿ, ಐಟಿ ಎಲ್ಲವೂ ಬಿಜೆಪಿಯವರ (BJP) ಕೈಯಲ್ಲಿದೆ. ಹಾಗಾಗಿ ಕಳ್ಳತನ ಆಗ್ತಿದೆ ಅಂತ ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬಿಜೆಪಿ ವಿರುದ್ಧ ಕಿಡಿಕಾರಿದರು. ʻ40% ಕಮಿಷನ್ ಕೊಟ್ಟರೆ ಎಲ್ಲಾ ಕೆಲಸ ಆಗುತ್ತೆ ಅನ್ನೋದು ಜಗತ್ತಿಗೇ ಗೊತ್ತಾಗಿದೆ. ಇದಕ್ಕೆ ನಾವು ಸಾಕ್ಷಿ ಕೊಡಬೇಕಾಗಿಲ್ಲ. ಕರ್ನಾಟಕದಲ್ಲಿದ್ದ ಕಾಂಟ್ರಾಕ್ಟರ್ ಸೇರಿದಂತೆ ಎಲ್ಲರೂ ಬರವಣಿಗೆಯ ರೂಪದಲ್ಲಿ ಪ್ರಧಾನಿ, ರಾಷ್ಟ್ರಪತಿ, ರಾಜ್ಯಪಾಲ ಹಾಗೂ ಲೋಕಾಯುಕ್ತರಿಗೆ ಕಳುಹಿಸಿದ್ದಾರೆ. ಇಂತಹ ಭ್ರಷ್ಟಾಚಾರದ ಸರ್ಕಾರ ಇರೋದ್ರಿಂದ ಇದನ್ನು ತೆಗೆದು ಹಾಕಲು ಜನರು ನಿರ್ಧರಿಸಿದ್ದಾರೆ ಅಂತ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.