ಇಂದು ಭಾರತೀಯ ಚಿತ್ರರಂಗ ಕಂಡ ಅಪ್ರತಿಮ ನಟ ಡಾ.ರಾಜ್ಕುಮಾರ್ರವರ 17ನೇ ವರ್ಷದ ಪುಣ್ಯಸ್ಮರಣೆ. 1954ರಲ್ಲಿ ಬೇಡರ ಕಣ್ಣಪ್ಪ ಸಿನಿಮಾ ಮೂಲಕ ನಟನಾಗಿ ಸಿನಿರಂಗಕ್ಕೆ ಎಂಟ್ರಿಕೊಟ್ಟ ಮುತ್ತುರಾಜ್ , ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಅಪಾರ.

ಸುಮಾರು ಐದು ದಶಕಗಳಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಕೋಟ್ಯಾಂತರ ಅಭಿಮಾನಿಗಳನ್ನ ಗಳಿಸಿರುವ ಮೇರು ನಟ ಡಾ.ರಾಜ್ಕುಮಾರ್. ಕೇವಲ ನಟರಾಗಿ ಉಳಿಯದೇ ಹಿನ್ನೆಲೆ ಗಾಯಕರಾಗಿಯೂ ಡಾ.ರಾಜ್ ಅಭಿಮಾನಿಗಳ ಗಮನ ಸೆಳೆದರು.

ಇಂದಿಗೆ ಡಾ.ರಾಜ್ಕುಮಾರ್ ರವರು ಇಹಲೋಕ ತ್ಯಜಿಸಿ, 17 ವರ್ಷ. ಅವರು ಭೌತಿಕವಾಗಿ ನಮ್ಮನ್ನ ಅಗಲಿರಬಹುದು.. ಆದ್ರೆ ಸಿನಿಮಾಗಳ ಮೂಲಕ ಡಾ.ರಾಜ್ ಸದಾ ಅಭಿಮಾನಿಗಳ ಜೊತೆ ಇದ್ದಾರೆ.. ಜೀವನ ಮೌಲ್ಯಗಳ ಮೂಲಕ ಇಂದಿಗೂ ಅನೇಕರಿಗೆ ಆದರ್ಶ ವ್ಯಕ್ತಿಯಾಗಿದ್ದಾರೆ. ಅಭಿಮಾನಿಗಳ ಮನಸ್ಸಿನಲ್ಲಿ ಅಣ್ಣಾವ್ರು ಸದಾ ಜೀವಂತ.

ಇಂದು ಅಭಿಮಾನಿಗಳು ಅಣ್ಣಾವ್ರ ನೆನಪಿನಲ್ಲಿ ಸಮಾಜಮುಖಿ ಕೆಲಸಗಳನ್ನ ಮಾಡ್ತಿದ್ದಾರೆ. ಅನ್ನದಾನ, ರಕ್ತದಾನ, ಉಚಿತ ಆರೋಗ್ಯ ತಪಾಸಣೆ.. ಹೀಗೆ ಅನೇಕ ಸಮಾಜಮುಖಿ ಕಾರ್ಯಗಳು ರಾಜ್ಯಾದ್ಯಂತ ನಡೆಯುತ್ತಿವೆ.

ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಸದಾ ಚಿರಸ್ಥಾಯಿಯಾಗಿರುವ ನಾಡಿನ ಹೆಮ್ಮೆ,ಕಲಾಸರಸ್ವತಿಯ ವರಪುತ್ರ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ವರನಟ , ಡಾ.ರಾಜ್ ಕುಮಾರ್ ರವರ ಪುಣ್ಯಸ್ಮರಣೆಯಂದು ಅವರಿಗೆ ಹೃತ್ಪೂರ್ವಕ ನಮನಗಳು