ಬೆಂಗಳೂರು : ರಾಜ್ಯದಲ್ಲಿ ಅಮುಲ್ ಹಾಗೂ ನಂದಿನಿ ಉತ್ಪನ್ನಗಳ ನಡುವಿನ ಪೈಪೋಟಿ ಜೋರಾಗ್ತಿದೆ. ನಂದಿನಿ ಉತ್ಪನ್ನಗಳ ಜಾಗವನ್ನು ಅಮುಲ್ ಆವರಿಸಿಕೊಳ್ತಿದೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿರುವ ಬೆನ್ನಲ್ಲೇ ಇದೀಗ ಮುಂದಿನ ವಾರದಿಂದ ಅಮುಲ್ ಹಾಲು ಆನ್ಲೈನ್ನಲ್ಲಿ ಮುಕ್ತವಾಗಿ ರಾಜ್ಯದಲ್ಲಿ ಮಾರಾಟವಾಗಲಿದೆ.
ಇನ್ನು ಅಮುಲ್ ರಾಜ್ಯಕ್ಕೆ ಎಂಟ್ರಿ ನೀಡಿದ ವಿಚಾರವಾಗಿ ಮಾತನಾಡಿದ ಸಹಕಾರ ಸಚಿವ ಎಸ್.ಟಿ ಸೋಮಶೇಖರ್, ಕೋವಿಡ್ ಸಂದರ್ಭದಲ್ಲಿ ಕೆಎಂಎಫ್ ನಷ್ಟದಲ್ಲಿದ್ದಾಗ ರಾಜ್ಯ ಸರ್ಕಾರ ಕೆಎಂಎಫ್ಗೆ ಬೆನ್ನೆಲುಬಾಗಿ ನಿಂತಿದೆ. ಈಗ ಅಮುಲ್ ರಾಜ್ಯದಲ್ಲಿ ನಂದಿನಿ ಉತ್ಪನ್ನಗಳಿಗೆ ಸ್ಪರ್ಧೆ ಒಡ್ಡಿದರೂ ಸಹ ಕೆಎಂಎಫ್ ಅಲ್ಲಾಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಅಮುಲ್ ಹಾಲು ಲೀಟರ್ಗೆ 59 ರೂಪಾಯಿ ಇದೆ. ನಂದಿನಿ ಹಾಲು 39 ರೂಪಾಯಿ ಇದೆ. ಹೀಗಾಗಿ ರಾಜ್ಯದಲ್ಲಿ ಆನ್ಲೈನ್ನಲ್ಲಿ ಅಮುಲ್ ಹಾಲು ಮಾರಾಟವಾದರೂ ಸಹ ಅದನ್ನು ಯಾರೂ ಖರೀದಿ ಮಾಡೋದಿಲ್ಲ. ಅಮುಲ್ ಅಲ್ಲ ಇನ್ಯಾರೇ ರಾಜ್ಯಕ್ಕೆ ಬಂದರೂ ನಂದಿನಿ ಉತ್ಪನ್ನಗಳನ್ನು ಅಳಿಸೋಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.