ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ, ವೀಕೆಂಡ್ ವಿತ್ ರಮೇಶ್ ಸೀಸನ್ 5 ಈಗಾಗಲೇ ಶುರುವಾಗಿದ್ದು, ಕಳೆದ ವಾರವಷ್ಟೇ ಕಾರ್ಯಕ್ರಮದ ಮೊದಲ ಎಪಿಸೋಡ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಈ ಶೋನ ಮೊದಲ ಅತಿಥಿಯಾಗಿ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಭಾಗಿಯಾಗಿದ್ರು. ಆದಾದ ಬಳಿಕ ವೀಕೆಂಡ್ ವಿತ್ ರಮೇಶ್ನ ಈ ವಾರದ ಅತಿಥಿ ಯಾರು ಅನ್ನೋ ಕುತೂಹಲ ಕಿರುತೆರೆ ವೀಕ್ಷಕರಲ್ಲಿತ್ತು. ಇದೀಗ ಆ ಕುತೂಹಲಕ್ಕೆ ಉತ್ತರ ಸಿಕ್ಕಿದೆ.
ಇಂಡಿಯನ್ ಮೈಕಲ್ ಜಾಕ್ಸನ್ ಅಂತಾನೇ ಖ್ಯಾತಿ ಪಡೆದಿರೋ ಪ್ರಭುದೇವ, ಈ ವಾರ ಸಾಧಕರ ಸೀಟನ್ನ ಅಲಂಕರಿಸಲಿದ್ದಾರೆ. 2ನೇ ಅತಿಥಿಯಾಗಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಪ್ರಭುದೇವ, ತಾವು ಬೆಳೆದು ಬಂದ ಹಾದಿ, ತಮ್ಮ ಬದುಕಿನ ಹಲವು ವಿಚಾರಗಳನ್ನ ಹಂಚಿಕೊಳ್ಳಲಿದ್ದಾರೆ. ಈ ವಾರದ ಕೊನೆಯಲ್ಲಿ ಅಂದ್ರೆ ಏಪ್ರಿಲ್ 1 ಮತ್ತು 2ರಂದು ರಾತ್ರಿ 9ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಭುದೇವ ಅವರ ಸಂಚಿಕೆ ಪ್ರಸಾರವಾಗಲಿದೆ.
ಸದ್ಯ ಪ್ರಭುದೇವ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿರೋ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಭುದೇವ ಅವರ ಪ್ರೋಮೋ ವಿಡಿಯೋ ವೈರಲ್ ಆಗ್ತಿದ್ದಂತೆ, ಹಿಂದಿನ ಎಪಿಸೋಡ್ನಲ್ಲಿ ರಮ್ಯಾ ಹೆಚ್ಚಾಗಿ ಇಂಗ್ಲೀಷ್ನಲ್ಲೇ ಮಾತ್ನಾಡಿದ್ದಕ್ಕೆ ಬೇಸರಗೊಂಡಿದ್ದ ನೆಟ್ಟಿಗರು, ʼಪ್ರಭುದೇವ ಕನ್ನಡದಲ್ಲಿ ಮಾತಾಡ್ತಾರಾ..? ನನ್ನಜ್ಜಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲʼ. ʻರಾಘವೇಂದ್ರ ಹುಣಸೂರಿಗೆ ಕನ್ನಡದ ಸಾಧಕರು ಇರಲಿಲ್ವೇ.?ʼ ʼಪ್ರಭುದೇವ ಅವ್ರಿಗೂ ರಮೇಶ್ ಅರವಿಂದ್ ಕನ್ನಡ ಪಾಠ ಮಾಡ್ಬೇಕು ಅನಿಸುತ್ತೆʼ.. ಹೀಗೆ ಬಗೆ ಬಗೆಯ ಕಮೆಂಟ್ಸ್ಗಳನ್ನ ಮಾಡ್ತಿದ್ಧಾರೆ.
ಒಟ್ನಲ್ಲಿ ರಮ್ಯಾ ಎಪಿಸೋಡ್ನಿಂದ ಕಿರಿಕಿರಿ ಅನುಭವಿಸಿದ್ದ ಕಿರುತೆರೆ ವೀಕ್ಷಕರು, ಈ ಬಾರಿಯಾದ್ರೂ ಪ್ರಭುದೇವ ಅವರ ಸಂಚಿಕೆಯನ್ನ ಮೆಚ್ಚಿಕೊಳ್ತಾರಾ ಅಂತ ಕಾದುನೋಡ್ಬೇಕಿದೆ.