ಶಿವಮೊಗ್ಗ : ರಾಜ್ಯ ವಿಧಾನಸಭಾ ಚುನಾವಣೆಗೆ ಯಾವುದೇ ಹಂತದಲ್ಲಿ ಬೇಕಿದ್ದರೂ ದಿನಾಂಕ ಘೋಷಣೆಯಾಗಬಹುದು. ಹೀಗಾಗಿ ರಾಜಕೀಯ ನಾಯಕರು ತಮ್ಮ ಕ್ಷೇತ್ರಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟವಾಗಿದ್ದು ಅನೇಕರಿಗೆ ತಮ್ಮ ಕ್ಷೇತ್ರ ಯಾವುದು ಅನ್ನೋದರ ಬಗ್ಗೆ ಸ್ಪಷ್ಟನೆ ಸಿಕ್ಕಂತಾಗಿದೆ. ಯಾವ್ಯಾವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಗೊಂದಲ ಅನಿಸುತ್ತೋ ಅಲ್ಲೆಲ್ಲ ಕಾಂಗ್ರೆಸ್ ಅಭ್ಯರ್ಥಿಗಳನ್ನು ತನ್ನ ಅಂತಿಮ ಪಟ್ಟಿಯಲ್ಲಿ ಪ್ರಕಟಿಸಲು ನಿರ್ಧರಿಸಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಿದ್ದು ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ ಈಗಾಗಲೇ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬೇಳೂರು ಗೋಪಾಲಕೃಷ್ಣ, ಸೊರಬದಲ್ಲಿ ಮಧು ಬಂಗಾರಪ್ಪ ಹಾಗೂ ಭದ್ರಾವತಿಯಲ್ಲಿ ಬಿ.ಕೆ ಸಂಗಮೇಶ್ವರ್ರನ್ನು ಕಣಕ್ಕಿಳಿಸಿದೆ. ಉಳಿದ ನಾಲ್ಕು ಕ್ಷೇತ್ರಗಳಿಗೆ ಕಾಂಗ್ರೆಸ್ ಇನ್ನೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಹೇಗೆ ಆಯ್ಕೆ ಮಾಡುತ್ತೆ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ. ತೀರ್ಥಹಳ್ಳಿಯ ಕಾಂಗ್ರೆಸ್ ಟಿಕೆಟ್ಗಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಆರ್.ಎಂ ಮಂಜುನಾಥ ಗೌಡ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಡಿಕೆಶಿ ಆಪ್ತರಾಗಿರುವ ಆರ್.ಎಂ ಮಂಜುನಾಥ್ ಗೌಡ ಡಿ.ಕೆ ಶಿವಕುಮಾರ್ ಮೂಲಕ ಟಿಕೆಟ್ಗಾಗಿ ಒತ್ತಡ ಹೇರುತ್ತಿದ್ದಾರೆ. ಇತ್ತ ಕಿಮ್ಮನೆ ರತ್ನಾಕರ್ ಸಿದ್ದರಾಮಯ್ಯ ಆಪ್ತರಾಗಿದ್ದು ಸಿದ್ದು ಮೂಲಕ ಟಿಕೆಟ್ಗಾಗಿ ಲಾಬಿ ನಡೆಸಿದ್ದಾರೆ.
ಹೀಗಾಗಿ ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸಿದ್ದು ಮತ್ತು ಡಿಕೆಶಿ ಆಪ್ತರ ನಡುವಿನ ಕಾಳಗಕ್ಕೆ ವೇದಿಕೆಯಾಗಿದೆ. ಒಂದು ವೇಳೆ ಕಿಮ್ಮನೆ ರತ್ನಾಕರ್ಗೆ ಟಿಕೆಟ್ ಕೈತಪ್ಪಿದರೆ ಕ್ಷೇತ್ರದಲ್ಲಿ ಬಂಡಾಯವೇಳುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ತೀರ್ಥಹಳ್ಳಿ ಟಿಕೆಟ್ ಹಂಚಿಕೆ ಎಐಸಿಸಿಗೆ ದೊಡ್ಡ ಮಟ್ಟದ ತಲೆನೋವಾಗಿ ಪರಿಣಮಿಸಿದೆ. ತೀರ್ಥಹಳ್ಳಿಯಲ್ಲಿ ಗೃಹ ಸಚಿವರ ವಿರುದ್ಧ ಗೆಲ್ಲುವ ಕುದುರೆಗಾಗಿ ಕಾಂಗ್ರೆಸ್ ಲೆಕ್ಕಾಚಾರ ಹಾಕ್ತಿದೆ.