ಬೆಂಗಳೂರು :ಮಾ.25: ಸಾರ್ವತ್ರಿಕ ಚುನಾವಣೆ ಕೆಲದಿನಗಳಲ್ಲಿ ಘೋಷಣೆ ಆಗಲಿದೆ. ಮತದಾರರ ಮನವೊಲಿಕೆಗೆ ಭರ್ಜರಿ ಸರ್ಕಸ್ ನಡೀತಿದ್ದು, ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದು ಕೊನೆಗೂ ಮಾಜಿ ಸಿಎಂ ಸಿದ್ಧರಾಮಯ್ಯ ಅದೃಷ್ಟದ ಕ್ಷೇತ್ರದಿಂದಲೇ ಸ್ಪರ್ಧೆಗಿಳಿಯುತ್ತಿದ್ದಾರೆ. ವರುಣಾ ಕ್ಷೇತ್ರದಿಂದಲೇ ಸಿದ್ದರಾಮಯ್ಯ ಸ್ಪರ್ಧೆಗೆ ಮುಂದಾಗಿದ್ದು, ಒಂದೇ ಕ್ಷೇತ್ರದಿಂದ ಮೊದಲ ಹಂತದಲ್ಲಿ ಟಿಕೆಟ್ ಘೋಷಣೆಯಾಗಿದೆ. ಇನ್ನು ತಿ.ನರಸೀಪುರದಲ್ಲಿ ಮಗನಿಗೆ ಕೊಕ್ ನೀಡಿ ಅಪ್ಪನಿಗೆ ಟಿಕೆಟ್ ನೀಡಲಾಗಿದ್ದು, ಸುನೀಲ್ ಬೋಸ್ ಬದಲಿಗೆ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಹೆಸರು ಫೈನಲ್ ಆಗಿದೆ. ಈ ಮೂಲಕ ಪುತ್ರ ಸುನೀಲ್ ಬೋಸ್ ಗೆ ಸ್ಥಾನ ಬಿಟ್ಟುಕೊಡಲು ಮುಂದಾಗಿದ್ದ ಹೆಚ್.ಸಿ ಮಹದೇವಪ್ಪ ಕೊನೆ ಕ್ಷಣದಲ್ಲಿ ತಾವೇ ಸ್ಪರ್ಧೆಗೆ ಮುಂದಾಗಿದ್ದಾರೆ. ಹೀಗಾಗಿ ಸಿದ್ದರಾಮಯ್ಯ- ಮಹದೇವಪ್ಪ ಸ್ಪರ್ಧೆಯಿಂದ ಕ್ಷೇತ್ರದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಪ್ಲಾನ್ ಮಾಡಲಾಗಿದ್ದು ಮೈಸೂರು ಜಿಲ್ಲೆಯಲ್ಲಿ ಹಳೆ ಜೋಡಿ ಮತ್ತೆ ಮೋಡಿ ಮಾಡುತ್ತಾ ಕಾದುನೋಡಬೇಕಿದೆ.
ಯತೀಂದ್ರ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧೆ ?
ಸಿದ್ದರಾಮಯ್ಯ ಏನೋ ವರುಣದಿಂದ ಕಣಕ್ಕಿಳಿಯಲು ತೀರ್ಮಾನ ಮಾಡಿದ್ದಾರೆ. ಆದ್ರೆ , ಪುತ್ರ ಯತೀಂದ್ರ ಎಲ್ಲಿಂದ ಸ್ಪರ್ಧೆ ಮಾಡ್ತಾರೆ ಅನ್ನೋದು ಇನ್ನೂ ಕೂಡ ಗೌಪ್ಯವಾಗಿ ಉಳಿದಿದೆ. ಕಾಂಗ್ರೆಸ್ ಮೂಲಗಳ ಪ್ರಕಾರ ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಜಿಟಿಡಿ ಎದುರಿಸಲು ಯತೀಂದ್ರ ಸಮರ್ಥ ಅಭ್ಯರ್ಥಿ ಅಂತ ಹೇಳಲಾಗುತ್ತಿದೆ.

3 ಕ್ಷೇತಗಳಲ್ಲಿ ಟಿಕೆಟ್ ಕಗ್ಗಂಟು..
ಮೈಸೂರಿನ ಕೃಷ್ಣರಾಜ , ಚಾಮರಾಜ ಹಾಗೂ ಚಾಮುಂಡೇಶ್ವರಿ ಟಿಕೆಟ್ ಕಗ್ಗಂಟು ಹಾಗೆ ಮುಂದುವರಿದಿದೆ. ಕೆಆರ್ ಕ್ಷೇತ್ರದಲ್ಲಿ ಸಿದ್ದು ಆಪ್ತ ಸೋಮಶೇಖರ್ , ಲಿಂಗಾಯತ ಮುಖಂಡ ಪ್ರದೀಪ್ ಕುಮಾರ್ , ಚಾಮರಾಜ ಕ್ಷೇತ್ರದಲ್ಲಿ ಸಿದ್ದು ಬೆಂಬಲಿಗ ಹರೀಶ್ ಗೌಡ ಹಾಗೂ ಡಿಕೆ ಬಣದ ವಾಸು ಹಾಗೆಯೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದು ಶಿಷ್ಯರೇ ಟಿಕೆಟ್ ಗೆ ಪೈಪೋಟಿ ನಡೆಸ್ತಿದ್ದಾರೆ. ಹೀಗಾಗಿಯೇ ಹೈ ಕಮಾಂಡ್ ಭಿನ್ನಮತ ಭುಗಿಲೇಳುವ ಭಯದಿಂದ ಟಿಕೆಟ್ ಘೋಷಣೆ ಮಾಡಿಲ್ಲ.
ಯಾರು ಎಲ್ಲಿಂದ ? ಪಿರಿಯಾಪಟ್ಟಣದಿಂದ ಕೆ.ವೆಂಕಟೇಶ್, ಕೃಷ್ಣರಾಜನಗರದಿಂದ ಡಿ.ರವಿಶಂಕರ್‌ಗೆ, ಹುಣಸೂರು ಕ್ಷೇತ್ರದಿಂದ ಹಾಲಿ ಶಾಸಕ ಎಚ್.ಪಿ.ಮಂಜುನಾಥ್ ಟಿಕೆಟ್ ನೀಡಲಾಗಿದೆ. ಹೆಗ್ಗಡದೇವನಕೋಟೆಯಿಂದ ಅನಿಲ್ ಗೆ ಟಿಕೆಟ್ ಖಾತ್ರಿಯಾಗಿದೆ. ತಿ.ನರಸೀಪುರದಿಂದ ಹೆಚ್.ಸಿ. ಮಹದೇವಪ್ಪ , ನಂಜನಗೂಡು ದರ್ಶನ್ ಧ್ರುವನಾರಾಯಣ , ವರುಣಾದಿಂದ ಸಿದ್ದರಾಮಯ್ಯ ಮತ್ತು NR ಕ್ಷೇತ್ರದಿಂದ ತನ್ವಿರ್ ಸೇಠ್ ಕಣಕ್ಕಿಳಿಯಲಿದ್ದಾರೆ. ಒಟ್ಟಾರೆ ಮೈಸೂರು ರಾಜಕೀಯ ರಂಗೇರಿದ್ದು ,ಬಿಜೆಪಿ ಹಾಗೂ ಕೆಲ ಕ್ಷೇತ್ರಗಳ ಜೆಡಿಎಸ್ ಟಿಕೆಟ್ ಘೋಷಣೆಯಾಗಬೇಕಿದ್ದು , ಚುನಾವಣಾ ಕಣ ರಂಗೇರಿದೆ.