ಲಿಂಗಾಯಿತ ಸಮುದಾಯದ ವಿರುದ್ಧ ಹೇಳಿಕೆ ನೀಡಿ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ತಾವು ಆ ರೀತಿ ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಅಲ್ಲದೆ, ಲಿಂಗಾಯತ ವಿರೋಧಿ ಮನೋಭಾವನೆ ಬೆಳೆಯಲು ಕಾಂಗ್ರೆಸ್ ಈ ರೀತಿ ಸುಲಳುಗಳನ್ನು ಸೃಷ್ಟಿಸುತ್ತಿದೆ ಎಂದು ರವಿ ಹೇಳಿದ್ದಾರೆ. ಇವೆಲ್ಲವೂ ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿಯ ಸೃಷ್ಟಿ, ನಾನು ಜಾತಿ ರಾಜಕಾರಣ ಮಾಡುವವನಲ್ಲ ಎಂದು ವಿಪಕ್ಷದ ಮೇಲೆ ಆರೋಪಿಸಿದ್ದಾರೆ.
ಬಿಎಸ್‌ವೈ ಹಾಗೂ ಬಿವೈ ವಿಜಯೇಂದ್ರ ವಿರುದ್ಧ ಪದೇ ಪರೋಕ್ಷ ಹೇಳಿಕೆ ನೀಡುತ್ತಾ ಬಂದಿರುವ ಸಿಟಿ ರವಿ, ಲಿಂಗಾಯತರ ವಿರೋಧಿ ಮಾತುಗಳನ್ನು ಆಡಿದ್ದಾರೆ ಎಂಬ ಊಹಾಪೋಹಗಳಿಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, ಲಿಂಗಾಯತ ಸಮುದಾಯದ ಸಂಘಟನೆಗಳು ಸಿಟಿ ರವಿಗೆ ಕಂಡಲ್ಲಿ ಮುತ್ತಿಗೆ ಹಾಕಲು ಕರೆ ನೀಡಿದ್ದವು. ಟಿಕೆಟ್ ವಿಚಾರದಲ್ಲೂ ವಿಜಯೇಂದ್ರ ಸಿಟಿ ರವಿ ವಿರುದ್ಧ ಅಲ್ಲಲ್ಲಿ ಅಸಮಾಧಾನ ಹೊರ ಹಾಕುತ್ತಿದ್ದರು. ಅಲ್ಲದೆ, ಲಿಂಗಾಯತರನ್ನು ಹಿನ್ನೆಲೆಗೆ ಸರಿಸಿ ಸಂಘ ನಿಷ್ಠರನ್ನು ಬಿಜೆಪಿ ಮುನ್ನೆಲೆಗೆ ತರಲಾಗುವುದು ಎಂಬ ಮಾತುಗಳೂ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದ್ದರಿಂದ ಲಿಂಗಾಯತರು ಮೊದಲೇ ಅಸಮಾಧಾನ ಹೊಂದಿದ್ದರು.
ಇಂತಹ ಸಮಯದಲ್ಲೇ, ಲಿಂಗಾಯತರ ಮತಗಳು ಇಲ್ಲದೆಯೂ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿಯುತ್ತೆ ಎಂದು ಸಿಟಿ ರವಿ ಹೇಳಿದ್ದಾರೆ ಎನ್ನಲಾದ ಬಗ್ಗೆ ವರದಿಗಳು ಬಿತ್ತರವಾಗಿದ್ದವು. ಈ ಹಿನ್ನೆಲೆಯಲ್ಲಿ ಬಿಎಸ್‌ವೈ ಸೇರಿದಂತೆ ಹಲವು ಲಿಂಗಾಯತ ನಾಯಕರು ಪ್ರತಿಕ್ರಿಯೆ ನೀಡಿದ್ದರು.
ಅದರ ಬೆನ್ನಲ್ಲೇ ಸ್ಪಷ್ಟೀಕರಣ ನೀಡಿದ ಸಿಟಿ ರವಿ, ತಾನು ಯಾವುದೇ ಆ ರೀತಿಯ ಹೇಳಿಕೆ ನೀಡಿಲ್ಲ, ಇದೆಲ್ಲಾ ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿ ಸೃಷ್ಟಿ ಎಂದು ವಿಪಕ್ಷದ ಮೇಲೆ ಗೂಬೆ ಕೂರಿಸಿದ್ದಾರೆ.

“ಇವುಗಳೆಲ್ಲವೂ ಸುಳ್ಳು ಸುದ್ದಿಗಳು. ನಾನು ಕನಸಿನಲ್ಲಿಯೂ ಜಾತಿ ರಾಜಕಾರಣ ಮಾಡಿಲ್ಲ. ಜಾತಿಯ ಬಗ್ಗೆ ಯೋಚನೆ ಕೂಡಾ ನಾನು ಮಾಡುವುದಿಲ್ಲ. ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿ ಲಿಂಗಾಯತ ವಿರೋಧಿ ಭಾವನೆ ಹುಟ್ಟು ಹಾಕುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಇದರ ಹಿಂದೆ ಕಾಂಗ್ರೆಸ್ ಕೈವಾಡ ಇದೆ.” ಎಂದು ಸಿಟಿ ರವಿ ಹೇಳಿದ್ದಾರೆ.
ಈ ಹಿಂದೆಯೂ ನನ್ನ ವಿರುದ್ಧ ಇಂತಹ ಪ್ರಯತ್ನವನ್ನು ಮಾಡಿ ವಿಫಲರಾಗಿದ್ದರು. ಅದೇ ರೀತಿ ಈಗಲೂ ಒಂದು ಗೊಂದಲ, ಸುಳ್ಳು ಸುದ್ದಿಯನ್ನು ಸೃಷ್ಟಿ ಮಾಡಿ ಹಬ್ಬಿಸಿದ್ದಾರೆ. ನಾನು ಆ ರೀತಿ ಹೇಳಿಕೆ ನೀಡಿದ್ದರೆ ಕ್ಷಮೆಯಾಚನೆ ಮಾಡುತ್ತಿದ್ದೆ. ಜನರು ಜಾತಿಮೀರಿ ಮತನೀಡಿ ನನ್ನನ್ನು ಗೆಲ್ಲಿಸಿದ್ದಾರೆ. ಅಭಿವೃದ್ಧಿ ಕೆಲಸದ ವಿಚಾರಕ್ಕೆ ಸಂಬಂಧಿಸಿ ಚರ್ಚೆ ಮಾಡಲಾಗುವುದಿಲ್ಲ ಎಂದು ಜಾತಿ ಹೆಸರಿನಲ್ಲಿ ಒಡಕು ಮೂಡಿಸಲು ಸುಳ್ಳಿನ ಫ್ಯಾಕ್ಟರಿ ಮೂಲಕ ದಾಳ ಉರುಳಿಸಿದ್ದಾರೆ. ಸುಳ್ಳು ಸುದ್ದಿಯನ್ನು ಯಾರು ಹಬ್ಬಿಸಿದ್ದಾರೋ ಅವರ ವಿರುದ್ಧ ದೂರು ನೀಡಲಾಗಿದೆ. ಷಡ್ಯಂತರದ ಭಾಗವಾಗಿ ಇದನ್ನು ಮಾಡಿದ್ದಾರೆ ಎಂದು ಸಿಟಿ ರವಿ ಆರೋಪಿಸಿದ್ದಾರೆ.